ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕ್ರಿಕೆಟ್‌ ಅಂಗಳದ ಜಿಗರಿ ದೋಸ್ತ್‌ಗಳು..

Last Updated 30 ನವೆಂಬರ್ 2020, 11:13 IST
ಅಕ್ಷರ ಗಾತ್ರ
ADVERTISEMENT
""
""
""
""
""
""

ಸ್ನೇಹ ಅಂದಾಕ್ಷಣವೇ ಕೃಷ್ಣ–ಕುಚೇಲಾ, ಕರ್ಣ–ದುರ್ಯೋಧನ, ಕಾಳಿದಾಸ–ಭೋಜ ರಾಜ...ಹೀಗೆ ಅನೇಕರ ಕಥೆಗಳು ನೆನಪಿನಂಗಳದಲ್ಲಿ ಹಾದು ಹೋಗುತ್ತವೆ. ಗೆಳೆತನ ಎನ್ನುವುದು ರಕ್ತ ಸಂಬಂಧಗಳನ್ನು ಮೀರಿದ ಬಂಧ. ಜಾತಿ, ಧರ್ಮ, ಅಂತಸ್ತಿನ ಗಡಿಯಾಚೆಗಿನ ಅನುಬಂಧ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದ ಮನಸ್ಸುಗಳನ್ನು ಬೆಸೆಯುವ ಸೇತುವೆ. ಎಲ್ಲರ ಬದುಕಿನಲ್ಲೂ ನೂರಾರು ಮಂದಿ ಬಂದು ಹೋಗುತ್ತಾರೆ. ಆ ಪೈಕಿ ಮನಸ್ಸಿಗೆ ಹತ್ತಿರವಾಗುವವರು ತೀರಾ ವಿರಳ. ಕಷ್ಟ ಅಂದಾಗ ನೆರವಿನ ಹಸ್ತ ಚಾಚುವ, ಗೆದ್ದಾಗ ಬೆನ್ನು ತಟ್ಟುವ, ಬಿದ್ದಾಗ ಕೈಹಿಡಿದು ಮೇಲಕ್ಕೆತ್ತುವ, ನಮ್ಮ ಗೆಲುವನ್ನು ಅವರ ಗೆಲುವೆಂದೇ ಭಾವಿಸಿ ಸಂಭ್ರಮಿಸುವವರೇ ನಿಜವಾದ ಗೆಳೆಯರು.

****

ಸ್ನೇಹ ಅಂದಾಕ್ಷಣವೇ ಕೃಷ್ಣ–ಕುಚೇಲಾ, ಕರ್ಣ–ದುರ್ಯೋಧನ, ಕಾಳಿದಾಸ–ಭೋಜರಾಜ–ಹೀಗೆ ಅನೇಕರ ಕಥೆಗಳು ನೆನಪಿನಂಗಳದಲ್ಲಿ ಹಾದು ಹೋಗುತ್ತವೆ.

ಗೆಳೆತನ ಎನ್ನುವುದು ರಕ್ತ ಸಂಬಂಧವನ್ನು ಮೀರಿದ ಬಂಧ. ಜಾತಿ, ಧರ್ಮ, ಅಂತಸ್ತು ಹಾಗೂ ವಯಸ್ಸಿನಾಚೆಗಿನ ಅನುಬಂಧ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದ ಮನಸ್ಸುಗಳನ್ನು ಬೆಸೆಯುವ ಸೇತುವೆ.

ಎಲ್ಲರ ಬದುಕಿನಲ್ಲೂ ನೂರಾರು ಮಂದಿ ಬಂದು ಹೋಗುತ್ತಾರೆ. ಆ ಪೈಕಿ ಮನಸ್ಸಿಗೆ ಹತ್ತಿರವಾಗುವವರು ತೀರಾ ವಿರಳ. ಕಷ್ಟ ಅಂದಾಗ ನೆರವಿನ ಹಸ್ತ ಚಾಚುವ, ಗೆದ್ದಾಗ ಬೆನ್ನು ತಟ್ಟುವ, ಬಿದ್ದಾಗ ಕೈಹಿಡಿದು ಮೇಲಕ್ಕೆತ್ತುವ, ನಮ್ಮ ಗೆಲುವನ್ನು ಅವರ ಗೆಲುವೆಂದೇ ಭಾವಿಸಿ ಗರ್ವದಿಂದ ಬೀಗುವವರೇ ನಿಜವಾದ ಗೆಳೆಯರು.

ಸಿನಿಮಾ, ಸಂಗೀತ, ನಾಟಕ–ಹೀಗೆ ವಿವಿಧ ರಂಗಗಳಲ್ಲಿ ಛಾಪು ಮೂಡಿಸಿದ ಸ್ನೇಹಿತರ ಪಟ್ಟಿ ದೊಡ್ಡದಿದೆ. ಕ್ರಿಕೆಟ್ ಕೂಡ ಇದರಿಂದ ಹೊರತಾಗಿಲ್ಲ.

1) ಕೊಹ್ಲಿ–ಎಬಿಡಿ

‘ಮಿಲಿಯನ್‌ ಡಾಲರ್‌ ಬೇಬಿ’ ಎಂದೇ ಕರೆಯಲ್ಪಡುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ನಿಂದಾಗಿ ಆಟಗಾರರು ಕೋಟ್ಯಧಿಪತಿಗಳಾಗಿದ್ದಾರೆ. ಅವರಿಗೆ ತಾರಾ ವರ್ಚಸ್ಸೂ ಲಭಿಸಿದೆ. ಈ ಲೀಗ್‌ ಹಲವರ ಪಾಲಿಗೆ ‘ಸ್ನೇಹ ಸೇತುವೆ’ಯೂ ಆಗಿದೆ. ಅದಕ್ಕೆ ಉತ್ತಮ ಉದಾಹರಣೆ ಭಾರತದ ವಿರಾಟ್‌ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌.

36 ವರ್ಷ ವಯಸ್ಸಿನ ಎಬಿಡಿ ಹಾಗೂ 32ರ ಹರೆಯದ ಕೊಹ್ಲಿ, ಹಲವು ವರ್ಷಗಳಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಪರ ಆಡುತ್ತಿದ್ದಾರೆ. ಅಂಗಳದಲ್ಲಿ ಅಬ್ಬರಿಸಿ ರನ್‌ ಮಳೆ ಸುರಿಸುವ ಇವರು, ಪಂದ್ಯದ ಬಳಿಕ ಜೊತೆಯಾಗಿಯೇ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಿದೆ.

ಈ ಜೋಡಿ ನೊಂದವರ ನೋವಿಗೂ ಮಿಡಿದು ಎಲ್ಲರಿಗೂ ಮಾದರಿಯಾಗಿದೆ. ತಾವು ಬಳಸಿದ್ದ ಬ್ಯಾಟ್‌, ಕೈಗವಸು, ಜೆರ್ಸಿಯನ್ನು ಹರಾಜಿಗಿಟ್ಟು ಅದರಿಂದ ಬಂದ ಹಣವನ್ನು ಕೋವಿಡ್‌–19 ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೀಡಿದ್ದರು. ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.

‘ವಿರಾಟ್‌ ಉತ್ತಮ ಚಿಂತಕ. ಜೊತೆಗೆ ಪ್ರಯೋಗಶೀಲ ಆಟಗಾರ. ಎಲ್ಲದಕ್ಕಿಂತಲೂ ಮುಖ್ಯವಾಗಿ ನನ್ನ ಆತ್ಮೀಯ ಸ್ನೇಹಿತ. ಪ್ರತಿ ಬಾರಿಯೂ ಕರೆ ಮಾಡಿದಾಗ ಅಥವಾ ಭೇಟಿಯಾದಾಗ ಕುಟುಂಬ ಹಾಗೂ ಮಕ್ಕಳ ಬಗ್ಗೆ ವಿಚಾರಿಸುತ್ತಾರೆ. ನಾವೀಗ ಪುಟಾಣಿ ಕೊಹ್ಲಿಯ ಬರುವಿಕೆಯನ್ನು ಎದುರು ನೋಡುತ್ತಿದ್ದೇವೆ’ ಎಂದು ಡಿವಿಲಿಯರ್ಸ್‌ ಹಿಂದೊಮ್ಮೆ ಹೇಳಿದ್ದರು.

ಧೋನಿ–ರೈನಾ

2) ಧೋನಿ–ರೈನಾ

ಕ್ರಿಕೆಟ್‌ ಲೋಕ ಕಂಡ ಸರ್ವಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರೂ ಎದ್ದುಕಾಣುತ್ತದೆ. ಜಾರ್ಖಂಡ್‌ನ ಧೋನಿ ಹಲವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಆದರೆ ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುವುದು ಒಬ್ಬರಲ್ಲಿ ಮಾತ್ರ. ಆ ಆಟಗಾರ ಉತ್ತರ ಪ್ರದೇಶದ ಸುರೇಶ್‌ ರೈನಾ.

ರೈನಾ, ಧೋನಿಯ ಪರಮಾಪ್ತ. ಇಬ್ಬರೂ ರಾಷ್ಟ್ರೀಯ ತಂಡದಲ್ಲಿ ಜೊತೆಯಾಗಿ ಆಡಿದವರು. ಐಪಿಎಲ್‌ ಶುರುವಾದಾಗಿನಿಂದಲೂ ಒಂದೇ ತಂಡದಲ್ಲಿದ್ದವರು. ಧೋನಿ ಅವರನ್ನು ‘ಥಲಾ’ ಎಂದೇ ಸಂಬೋಧಿಸುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಆಟಗಾರರು ರೈನಾಗೆ ‘ಚಿನ್ನ ಥಲಾ’ ಎಂದೇ ಕರೆಯುವುದುಂಟು.

2015ರ ಮಾತು. ಸಾಕ್ಷಿ ಸಿಂಗ್‌ ಧೋನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷಯವನ್ನು ಪತಿಗೆ ತಿಳಿಸಲು ಹಾತೊರೆದಿದ್ದ ಅವರು ಧೋನಿಗೆ ಹಲವು ಬಾರಿ ಕರೆ ಮಾಡಿದ್ದರಂತೆ. ಆದರೆ ಮಹಿ, ಪತ್ನಿಯ ಕರೆ ಸ್ವೀಕರಿಸಿರಲಿಲ್ಲ. ಆಗ ರೈನಾ ಅವರ ಮೊಬೈಲ್‌ ರಿಂಗಣಿಸಿತ್ತಂತೆ. ತಾನು ತಾಯಿಯಾಗಿರುವ ಖುಷಿಯನ್ನು ರೈನಾ ಜೊತೆ ಹಂಚಿಕೊಂಡಿದ್ದ ಸಾಕ್ಷಿ, ಈ ವಿಷಯವನ್ನು ಧೋನಿಗೂ ತಿಳಿಸಿ ಎಂದಿದ್ದರಂತೆ.

ಈ ವರ್ಷದ ಆಗಸ್ಟ್‌ 15, ಕ್ರಿಕೆಟ್‌ ಪ‍್ರೇಮಿಗಳ ಪಾಲಿಗೆ ನೋವಿನ ದಿನವಾಗಿತ್ತು. ಅಭಿಮಾನಿಗಳ ಆರಾಧ್ಯ ದೈವ ಧೋನಿ, ಅಂದು ಕ್ರಿಕೆಟ್‌ ಬದುಕಿಗೆ ವಿದಾಯ ಪ್ರಕಟಿಸಿದ್ದರು. ಧೋನಿ ನಿವೃತ್ತಿಯ ಕೆಲ ಗಂಟೆಗಳ ಬಳಿಕ ರೈನಾ ಕೂಡ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ‘ಗುಡ್‌ ಬೈ’ ಹೇಳಿದ್ದರು. ಇದು ಅವರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ.

ಸಂಗಕ್ಕಾರ–ಜಯವರ್ಧನೆ

3) ಸಂಗಕ್ಕಾರ–ಜಯವರ್ಧನೆ

ದ್ವೀಪ ರಾಷ್ಟ್ರ ಶ್ರೀಲಂಕಾದ ಕ್ರಿಕೆಟ್‌ಗೆ ಹೊಸ ಮೆರುಗು ನೀಡಿದವರು ಕುಮಾರ ಸಂಗಕ್ಕಾರ ಮತ್ತು ಮಾಹೇಲ ಜಯವರ್ಧನೆ. ಇವರಿಬ್ಬರ ನಡುವಣ ಬಾಂಧವ್ಯ ಕ್ರಿಕೆಟ್‌ಗಿಂತಲೂ ಮಿಗಿಲಾದದ್ದು.

15ರ ಹರೆಯದಲ್ಲಿ ಇವರು ಮೊದಲು ಭೇಟಿಯಾಗಿದ್ದರು. ಇಬ್ಬರಿಗೂ ಈಗ 43 ವರ್ಷ ವಯಸ್ಸು. ಆದರೆ ಕ್ರಿಕೆಟ್‌ನಲ್ಲಿ ಸಂಗಕ್ಕಾರ ಅವರಿಗಿಂತಲೂ ಜಯವರ್ಧನೆ ‘ಸೀನಿಯರ್‌’. ಅವರು 1998ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರೆ, ಸಂಗಕ್ಕಾರ ರಾಷ್ಟ್ರೀಯ ತಂಡಕ್ಕೆ ಅಡಿ ಇಟ್ಟಿದ್ದು 2000ನೇ ಇಸವಿಯಲ್ಲಿ.

ರಾಷ್ಟ್ರೀಯ ತಂಡದಲ್ಲಿ ಆಡಲು ಶುರು ಮಾಡಿದ ಮೇಲೆ ಇವರ ನಡುವಣ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರವೂ ಇವರು ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆ.

ಸಚಿನ್–ಲಾರಾ

4) ಸಚಿನ್–ಲಾರಾ

ಸಚಿನ್ ಮತ್ತು ವಿನೋದ್‌ ಕಾಂಬ್ಳಿ ಅವರು ಬಾಲ್ಯದ ಗೆಳೆಯರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಚಿನ್‌ಗೆ ಕಾಂಬ್ಳಿ ಅಷ್ಟೇ ಆಪ್ತ ಗೆಳೆಯ ಮತ್ತೊಬ್ಬರಿದ್ದಾರೆ. ಅವರು ಬ್ರಯಾನ್ ಲಾರಾ.

ವೆಸ್ಟ್‌ ಇಂಡೀಸ್‌ನ ಲಾರಾ ಮತ್ತು ಸಚಿನ್‌ ಅವರು ಕ್ರಿಕೆಟ್‌ ಲೋಕದ ದಿಗ್ಗಜರು. ಕಲಾತ್ಮಕ ಆಟದ ಮೂಲಕ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವವರು. ಇವರಿಬ್ಬರ ಪೈಕಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಯಾರೂ ಎಂಬ ಚರ್ಚೆ ಈಗಲೂ ನಡೆಯುತ್ತಲೇ ಇದೆ. ಇದ್ಯಾವುದಕ್ಕೂ ಇವರು ತಲೆಕೆಡಿಸಿಕೊಂಡವರೇ ಅಲ್ಲ. ಅಹಂ ಅನ್ನು ಬದಿಗೊತ್ತಿ ಮುಂದೆ ಸಾಗಿದವರು. ಅಕ್ಕಪಕ್ಕದಲ್ಲಿ ಕುಳಿತು ವಿಂಬಲ್ಡನ್‌ ಟೆನಿಸ್‌ ಪಂದ್ಯ (2010ರಲ್ಲಿ) ನೋಡಿದವರು. ಭಾರತಕ್ಕೆ ಬಂದಾಗಲೆಲ್ಲಾ ಲಾರಾ, ಸಚಿನ್‌ ಅವರನ್ನು ಭೇಟಿಯಾಗದೇ ಹೋಗಲ್ಲ. ಲಾರಾ ಅವರಿಗಾಗಿ ಸ್ವತಃ ಸಚಿನ್‌ ಬಾಣಸಿಗನಾದದ್ದುಂಟು. ತಮ್ಮ ಮನೆಯಲ್ಲಿ ಕೋಳಿ ಮಾಂಸದ ಖಾದ್ಯ ತಯಾರಿಸಿ ಲಾರಾಗೆ ಬಡಿಸಿದ್ದೂ ಇದೆ.

‘ಕ್ರಿಕೆಟ್‌ ಆಡುತ್ತಿದ್ದ ದಿನಗಳಲ್ಲಿ ನಾನು ಸಚಿನ್‌ ಆಡಿದ್ದ ಪಂದ್ಯಗಳ ಡಿವಿಡಿಗಳನ್ನು ತರಿಸಿಕೊಂಡು ಅವರ ಬ್ಯಾಟಿಂಗ್‌ ವೀಕ್ಷಿಸುತ್ತಿದ್ದೆ. ನನಗೇನಾದರೂ ಗಂಡು ಮಗು ಹುಟ್ಟಿದರೆ ಆತ ಸಚಿನ್‌ ಅವರಂತಾಗಬೇಕು ಎಂದು ಬಯಸುತ್ತೇನೆ’ ಎಂದು 2010ರಲ್ಲಿ ನಡೆದಿದ್ದ ಕಾರ್ಯಕ್ರಮವೊಂದರ ವೇಳೆ ಲಾರಾ ಹೇಳಿದ್ದರು.

ಯುವಿ–ಭಜ್ಜಿ

5) ಯುವಿ–ಭಜ್ಜಿ

‘ಸಿಕ್ಸರ್‌ ಕಿಂಗ್‌’ ಯುವರಾಜ್‌ ಸಿಂಗ್‌ ಹಾಗೂ ‘ಟರ್ಬನೇಟರ್‌’ ಹರಭಜನ್‌ ಸಿಂಗ್‌ ಅವರು ‘ಚಡ್ಡಿ ದೋಸ್ತ್‌’ಗಳು. ಪಂಜಾಬ್‌ನಲ್ಲಿ ಹುಟ್ಟಿ ಬೆಳೆದ ಈ ತಾರೆಯರು ಒಟ್ಟಿಗೆ ಕ್ರಿಕೆಟ್‌ ಪಯಣ ಶುರುಮಾಡಿದವರು. 2007ರ ಟ್ವೆಂಟಿ–20 ಹಾಗೂ 2011ರ ಏಕದಿನ ವಿಶ್ವಕಪ್‌ಗಳಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುವಲ್ಲಿ ‘ಪಂಜಾಬ್‌ ಪುತ್ರರ’ ಪಾತ್ರ ಮಹತ್ವದ್ದಾಗಿತ್ತು.

ಭಾರತ ತಂಡವು ಪಂದ್ಯ ಗೆದ್ದಾಗ, ಇಲ್ಲವೇ ಎದುರಾಳಿ ತಂಡದ ವಿಕೆಟ್‌ ಉರುಳಿದಾಗ ಈ ಜೋಡಿ ಮೈದಾನದಲ್ಲೇ ‘ಭಾಂಗ್ರಾ’ ನೃತ್ಯ ಮಾಡಿ ಸಂಭ್ರಮಿಸುತ್ತಿದ್ದ ದೃಶ್ಯಗಳು ಅಭಿಮಾನಿಗಳ ಮನದಲ್ಲಿ ಇನ್ನೂ ಹಸಿರಾಗಿವೆ.

ರಾಹುಲ್‌–ಮಯಂಕ್‌–ಹಾರ್ದಿಕ್‌

6) ರಾಹುಲ್‌–ಮಯಂಕ್‌–ಹಾರ್ದಿಕ್‌

ಕನ್ನಡಿಗರಾದ ಕೆ.ಎಲ್‌.ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಹಾಗೂ ಬರೋಡಾದ ಪ್ರತಿಭೆ ಹಾರ್ದಿಕ್‌ ಪಾಂಡ್ಯ ಅವರೂ ಕುಚಿಕು ಗೆಳೆಯರು.

19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಿದ್ದ ಮಯಂಕ್‌ ಮತ್ತು ರಾಹುಲ್‌, ಈಗ ಸೀನಿಯರ್‌ ತಂಡದಲ್ಲೂ ಜೊತೆಯಾಗಿದ್ದಾರೆ. ಭಾರತ ಟೆಸ್ಟ್‌ ತಂಡದಲ್ಲಿ ಇನಿಂಗ್ಸ್‌ ಆರಂಭಿಸುವ ಜವಾಬ್ದಾರಿಯೂ ಈ ಜೋಡಿಯ ಹೆಗಲೇರಿದೆ. ಇತ್ತೀಚೆಗೆ ಮುಗಿದ ಐಪಿಎಲ್‌ನಲ್ಲೂ ಇವರು ಒಂದೇ ತಂಡದಲ್ಲಿ ಆಡಿದ್ದರು.

ಮಯಂಕ್‌ ಮತ್ತು ರಾಹುಲ್‌ಗೆ ಹಾರ್ದಿಕ್‌ ಪಾಂಡ್ಯ ಕೂಡ ತುಂಬಾ ಆತ್ಮೀಯರು. ಆಸ್ಟ್ರೇಲಿಯಾ ವಿರುದ್ಧ ಕ್ರಿಕೆಟ್‌ ಸರಣಿಗಳನ್ನು ಆಡಲು ಹೋಗಿರುವ ಈ ತ್ರಿವಳಿಗಳು ಕಾಂಗರೂ ನಾಡಿನಲ್ಲಿ ಜೊತೆಯಾಗಿಯೇ ಸುತ್ತಾಡುತ್ತಿದ್ದಾರೆ.

ಹಾರ್ದಿಕ್‌ ಮತ್ತು ರಾಹುಲ್‌ ಅವರು ‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದನ್ನೂ ಅಭಿಮಾನಿಗಳು ಮರೆತಿಲ್ಲ.

ಕ್ಲಾರ್ಕ್‌–ಹ್ಯೂಸ್‌

7) ಕ್ಲಾರ್ಕ್‌–ಹ್ಯೂಸ್‌

ಆಸ್ಟ್ರೇಲಿಯಾಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ಆಟಗಾರ ಮೈಕಲ್‌ ಕ್ಲಾರ್ಕ್‌ ಮತ್ತು ಫಿಲಿಪ್‌ ಹ್ಯೂಸ್‌ ಅವರೂ ‘ಜಿಗರಿ ದೋಸ್ತ್‌’ಗಳು.

ಹ್ಯೂಸ್‌ ಇಹಲೋಕ ತ್ಯಜಿಸಿ ಆರು ವರ್ಷಗಳು ಉರುಳಿವೆ. ಹೀಗಿದ್ದರೂ ಕ್ಲಾರ್ಕ್‌, ಹ್ಯೂಸ್‌ ಅವರನ್ನು ಮರೆತಿಲ್ಲ.

ಇದೇ ತಿಂಗಳ 27ರಂದು ಕ್ಲಾರ್ಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಫೋಟೊ ಇಬ್ಬರ ನಡುವಣ ಗಾಢ ಸ್ನೇಹಕ್ಕೆ ಸಾಕ್ಷಿಯಂತಿತ್ತು.

ಹ್ಯೂಸ್‌ ಅವರೊಂದಿಗೆ ಕಪ್ಪು ಟೋಪಿ ಧರಿಸಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದ ಅವರು ‘ನಾನು ಈಗಲೂ ಈ ಟೋಪಿಯನ್ನು ಹಾಕಿಕೊಳ್ಳುತ್ತೇನೆ. ನಿನ್ನ ನೆನಪಿನಲ್ಲೇ ದಿನ ದೂಡುತ್ತಿದ್ದೇನೆ ಗೆಳೆಯ’ ಎಂದು ಭಾವುಕವಾಗಿ ಬರೆದಿದ್ದರು.

2014ರಲ್ಲಿ ನಡೆದಿದ್ದ ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯ ಪಂದ್ಯದ ವೇಳೆ ಸೀನ್‌ ಅಬಾಟ್‌ ಎಸೆದ ಬೌನ್ಸರ್‌ನಲ್ಲಿ ಚೆಂಡು ಹ್ಯೂಸ್‌ ಅವರ ತಲೆಗೆ ಬಡಿದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಎರಡು ದಿನಗಳ ನಂತರ (ನ.27) ಮೃತಪಟ್ಟಿದ್ದರು. ಗೆಳೆಯನ ಅಗಲಿಕೆಯ ಸುದ್ದಿ ತಿಳಿದು ದಿಗ್ಭ್ರಾಂತರಾಗಿದ್ದ ಕ್ಲಾರ್ಕ್‌, ಆತನ ಒಡನಾಟವನ್ನು ನೆನೆದು ಎಳೆಯ ಮಗುವಿನಂತೆ ಅತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT