ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಗಲ್ಲಿ ಕ್ರಿಕೆಟ್‌ನಿಂದ ಐಪಿಎಲ್‌ಗೆ, ಕಾಶ್ಮೀರದ ಹುಡುಗನ ಕಥೆ

Last Updated 19 ಅಕ್ಟೋಬರ್ 2020, 8:30 IST
ಅಕ್ಷರ ಗಾತ್ರ
ADVERTISEMENT
""
""

ಗಾಂಧಿ ಜಯಂತಿಯಂದು (ಅಕ್ಟೋಬರ್‌ 2) ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್‌ ಪಂದ್ಯವದು. ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಆ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್ ಕೈಗೊಂಡ ನಿರ್ಧಾರ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು.

ಆ ಪಂದ್ಯದ ಅಂತಿಮ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ ಬೇಕಿದ್ದದ್ದು 28ರನ್‌. ಕ್ರೀಸ್‌ನಲ್ಲಿ ಇದ್ದವರು ವಿಶ್ವಶ್ರೇಷ್ಠ ‘ಫಿನಿಷರ್‌’ ಮಹೇಂದ್ರ ಸಿಂಗ್‌ ಧೋನಿ. ಅದರ ಅರಿವಿದ್ದರೂ ವಾರ್ನರ್‌, ತಂಡದಲ್ಲಿದ್ದ ಚಿಗುರು ಮೀಸೆಯ ಹುಡುಗನ ಕೈಗೆ ಚೆಂಡು ಕೊಟ್ಟಿದ್ದರು.

18 ವರ್ಷ ವಯಸ್ಸಿನ ಆ ಲೆಗ್‌ ಸ್ಪಿನ್ನರ್‌ ಹಾಕಿದ ಮೊದಲ ಎಸೆತವೇ ವೈಡ್‌ ಆಗಿತ್ತು. ಆ ಚೆಂಡು ವಿಕೆಟ್‌ ಕೀಪರ್‌ ಕೈಗೂ ಸಿಗದಷ್ಟು ದೂರದಿಂದ ಹಾದು ಹೋಗಿ ಬೌಂಡರಿ ಗೆರೆ ದಾಟಿತ್ತು. ಹೀಗಾಗಿ ಸೂಪರ್‌ ಕಿಂಗ್ಸ್‌ ಖಾತೆಗೆ ‘ಉಚಿತವಾಗಿ’ ಐದು ರನ್‌ಗಳು ಸೇರ್ಪಡೆಗೊಂಡಿದ್ದವು. ನಂತರ ಅಲ್ಲಿ ನಡೆದಿದ್ದೇ ಬೇರೆ. ಧೋನಿಯಂತಹ ದಿಗ್ಗಜನಿಗೇ ‘ಚಳ್ಳೆ ಹಣ್ಣು’ ತಿನ್ನಿಸಿದ್ದ ಆ ಯುವ ಬೌಲರ್‌, ಸನ್‌ರೈಸರ್ಸ್‌ ಪಾಲಿನ ‘ಹೀರೊ’ ಆಗಿ ಮೆರೆದಿದ್ದ.

ತಂಡದ ಸದಸ್ಯರೊಂದಿಗೆ ಖುಷಿಯ ಕ್ಷಣ

ಅಂದ ಹಾಗೆ ಆ ಹುಡುಗನ ಹೆಸರು ಅಬ್ದುಲ್‌ ಸಮದ್‌ ಫಾರೂಕ್‌. ಭಾರತದ ಮುಕುಟದಂತಿರುವ ಜಮ್ಮು ಮತ್ತು ಕಾಶ್ಮೀರದ ಪ‍್ರತಿಭೆ.

ರಜೌರಿ ಜಿಲ್ಲೆಯ ಕಾಲಾಕೋಟ್‌ನಲ್ಲಿ ಹುಟ್ಟಿ ಬೆಳೆದ ಸಮದ್‌, ಐಪಿಎಲ್‌ಗೆ ಅಡಿ ಇಟ್ಟ ಜಮ್ಮು ಮತ್ತು ಕಾಶ್ಮೀರದ ಮೂರನೇ ಕ್ರಿಕೆಟಿಗ ಎಂಬ ಹಿರಿಮೆ ಹೊಂದಿದ್ದಾರೆ. ಇದಕ್ಕೂ ಮುನ್ನ ಪರ್ವೇಜ್‌ ರಸೂಲ್‌ ಮತ್ತು ರಶಿಕ್‌ ಸಲಾಂ ಈ ಸಾಧನೆ ಮಾಡಿದ್ದರು. ಈ ಬಾರಿಯ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯ ಅವರ ಪಾಲಿಗೆ ಮೊದಲನೆಯದ್ದಾಗಿತ್ತು. ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಹೋರಾಟದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅವರು ಏಳು ಎಸೆತಗಳಲ್ಲಿ ಅಜೇಯ 12ರನ್‌ ಗಳಿಸಿದ್ದರು. ಇದರಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್‌ ಸೇರಿದ್ದವು. ಮುಂಬೈ ಇಂಡಿಯನ್ಸ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧದ ಪಂದ್ಯಗಳಲ್ಲೂ ಸಮದ್‌, ತೋಳರಳಿಸಿ ಆಡಿದ್ದರು.

ಇದುವರೆಗೂ (ಅಕ್ಟೋಬರ್‌ 19ರ ಅಂತ್ಯಕ್ಕೆ) ಒಟ್ಟು ಐದು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 71ರನ್‌ಗಳನ್ನು ದಾಖಲಿಸಿದ್ದಾರೆ. ವಿರಾಟ್‌ ಕೊಹ್ಲಿ, ಡೇವಿಡ್‌ ವಾರ್ನರ್‌, ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ ಅವರಿಗಿಂತಲೂ ಸಮದ್‌ ಸ್ಟ್ರೈಕ್‌ರೇಟ್‌‌ (161.36) ಹೆಚ್ಚು!

ಪಠಾಣ್‌ ಗರಡಿಯ ಪ್ರತಿಭೆ..

ಬಿರುಗಾಳಿ ವೇಗದ ಬೌಲರ್‌ಗಳ ಎಸೆತಗಳನ್ನು ಲೀಲಾಜಾಲವಾಗಿ ಬೌಂಡರಿಗೆರೆ ದಾಟಿಸಬಲ್ಲ ಸಾಮರ್ಥ್ಯ ಹೊಂದಿರುವ ಸಮದ್‌, ಭಾರತದ ಅನುಭವಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರ ಗರಡಿಯಲ್ಲಿ ಅರಳಿದ ಪ್ರತಿಭೆ.

2018ರಲ್ಲಿ ನಡೆದಿದ್ದ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಸಮದ್‌ ಪಾಲ್ಗೊಂಡಿದ್ದರು. ಹದಿನಾರರ ಹರೆಯದ ಹುಡುಗ ನಿರ್ಭೀತಿಯಿಂದ ಬ್ಯಾಟ್‌ ಬೀಸುತ್ತಿದ್ದುದ್ದನ್ನು ಕಂಡೊಡನೆಯೇ ಪಠಾಣ್‌ ಹಾಗೂ ಕಾಶ್ಮೀರ ತಂಡದ ಮುಖ್ಯ ಕೋಚ್‌ ಮಿಲಾಪ್‌ ಮೆವಾಡ ಅವರಲ್ಲಿ ಭರವಸೆಯೊಂದು ಚಿಗುರೊಡೆದಿತ್ತು. ಅವರು ಅರೆ ಕ್ಷಣವೂ ಯೋಚಿಸದೆಯೇ ಆತನನ್ನು ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡಿದ್ದರು.

ಇರ್ಫಾನ್‌ ಪಠಾಣ್‌ ಜೊತೆಗೆ ಮಾತುಕತೆ

‘ಸಮದ್‌ ಆಟ ನೋಡಿದಾಕ್ಷಣವೇ ಆತನಲ್ಲಿ ವಿಶೇಷ ಪ್ರತಿಭೆ ಇದೆ ಅನಿಸಿತು. ಹೀಗಾಗಿ ಆತನನ್ನು ಕರೆದು ಮಾತನಾಡಿಸಿದೆ. ನಿನ್ನನ್ನು ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡುತ್ತೇವೆ. ಕ್ರೀಸ್‌ ಕಾಯ್ದುಕೊಂಡು ಆಡುವ ಗುಣ ಮೈಗೂಡಿಸಿಕೊಳ್ಳುವತ್ತ ಚಿತ್ತ ಹರಿಸು. ಇದರಿಂದ ನಿನ್ನ ಭವಿಷ್ಯವೂ ಉಜ್ವಲವಾಗಲಿದೆ ಎಂದು ಆತನಿಗೆ ತಿಳಿಸಿದ್ದೆ. ನನ್ನ ಸಲಹೆಯನ್ನು ಸ್ವೀಕರಿಸಿದ್ದ ಆತ ಆಟದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದ’ ಎಂದು ಹಿಂದೊಮ್ಮೆ ಇರ್ಫಾನ್‌ ಪಠಾಣ್‌ ಹೇಳಿದ್ದರು.

‘ಕೊರೊನಾಕ್ಕೆ ಕಡಿವಾಣ ಹಾಕುವ ಸಲುವಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಮನೆಯ ತಾರಸಿಯ ಮೇಲೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದೆ. ತಾಲೀಮಿನ ವಿಡಿಯೊ ಕ್ಲಿಪ್‌ಗಳನ್ನು ಇರ್ಫಾನ್‌ ಭಾಯ್‌ಗೆ ಕಳಿಸುತ್ತಿದ್ದೆ. ಅವರು ನನ್ನ ತಪ್ಪುಗಳನ್ನು ಗುರುತಿಸಿ ಅದನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಅದರಿಂದ ನನಗೆ ತುಂಬಾ ಅನುಕೂಲವಾಯಿತು’ ಎಂದು ಹೇಳುವ ಮೂಲಕ ಸಮದ್‌, ಇರ್ಫಾನ್‌ ಸಹಕಾರವನ್ನು ಸ್ಮರಿಸಿದ್ದರು.

ಸನ್‌ರೈಸರ್ಸ್‌ ಸೇರಿದ್ದು ಹೇಗೆ..

ಒಮ್ಮೆ ಜಮ್ಮು ಮತ್ತು ಕಾಶ್ಮೀರ ತಂಡದ ಕೋಚ್‌ ಮೆವಾಡ ಅವರನ್ನು ಭೇಟಿಯಾಗಿದ್ದಸನ್‌ರೈಸರ್ಸ್‌ ಸಲಹೆಗಾರ ವಿವಿಎಸ್‌ ಲಕ್ಷ್ಮಣ್‌, ತಾವು ಸಮರ್ಥ ಯುವ ಆಲ್‌ರೌಂಡರ್‌ನ ಹುಡುಕಾಟದಲ್ಲಿರುವುದಾಗಿ ತಿಳಿಸಿದ್ದರು. ತಕ್ಷಣವೇ ಮೆವಾಡ ಅವರು ಸಮದ್‌ ಹೆಸರನ್ನು ಪ್ರಸ್ತಾಪಿಸಿದ್ದರು. ಇರ್ಫಾನ್‌ ಕೂಡ ಸಮದ್‌ ಹೆಸರನ್ನೇ ಸೂಚಿಸಿದ್ದರು. ನಂತರ ಸಮದ್‌ ಅವರ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದ್ದ ಲಕ್ಷ್ಮಣ್‌, 2019ರ ಐಪಿಎಲ್‌ ಹರಾಜಿನಲ್ಲಿ ಆತನನ್ನು ಮೂಲ ಬೆಲೆಗೆ (₹20 ಲಕ್ಷ) ಸೆಳೆದುಕೊಂಡಿದ್ದರು.

ದೇಶಿ ಕ್ರಿಕೆಟ್‌ನಲ್ಲಿ ಮಿಂಚು..

ಹೋದ ವರ್ಷ ಪ್ರಥಮ ದರ್ಜೆ ಹಾಗೂ ಲಿಸ್ಟ್‌ ‘ಎ’ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಮದ್‌, 2019–20ನೇ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿದ್ದರು. ಜೈಪುರದಲ್ಲಿ ನಡೆದಿದ್ದ ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಿಯೂಷ್‌ ಚಾವ್ಲಾ ಅವರ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಸೈಯದ್‌ ಮುಷ್ತಾಕ್‌ ಅಲಿ ಟಿ–20 ಟ್ರೋಫಿಯಲ್ಲೂ ಅಬ್ಬರಿಸಿದ್ದರು.

ರಣಜಿ ಟ್ರೋಫಿಯಲ್ಲೂ ಮಿಂಚಿದ್ದ ಸಮದ್‌, ಜಮ್ಮು ಮತ್ತು ಕಾಶ್ಮೀರ ತಂಡವು ಕ್ವಾರ್ಟರ್ ಫೈನಲ್‌ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.

ಪುಣೆಯಲ್ಲಿ ನಡೆದಿದ್ದ ಮಹಾರಾಷ್ಟ್ರ ಎದುರಿನ ರಣಜಿ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಮ್ಮು–ಕಾಶ್ಮೀರ ತಂಡವು 131ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ತಂಡಕ್ಕೆ ಆಸರೆಯಾಗಿದ್ದು ಸಮದ್‌. ಒತ್ತಡದ ಸನ್ನಿವೇಶದಲ್ಲೂ ದಿಟ್ಟತನದಿಂದ ಹೋರಾಡಿದ್ದ ಅವರು 89 ಎಸೆತಗಳಲ್ಲಿ 78ರನ್‌ಗಳನ್ನು ಕಲೆಹಾಕಿ ತಂಡದ ಮುನ್ನಡೆಯನ್ನು ಹೆಚ್ಚಿಸಿದ್ದರು. ಕರ್ನಾಟಕದ ಎದುರಿನ ಕ್ವಾರ್ಟರ್‌ ಫೈನಲ್‌ನಲ್ಲಿ 50 ಎಸೆತಗಳಲ್ಲಿ 43ರನ್‌ ಬಾರಿಸಿದ್ದರು.

ರಣಜಿಯಲ್ಲಿ ಅವರು ಒಟ್ಟು 17 ಇನಿಂಗ್ಸ್‌ಗಳಿಂದ 592ರನ್‌ಗಳನ್ನು ಪೇರಿಸಿದ್ದರು. 36 ಸಿಕ್ಸರ್‌ಗಳನ್ನೂ ದಾಖಲಿಸಿದ್ದರು.

ಕಣಿವೆ ನಾಡಿನ ಹುಡುಗರಿಗೆ ಸ್ಫೂರ್ತಿ..

ನಿತ್ಯವೂ ಮದ್ದು ಗುಂಡುಗಳ ಸದ್ದು ಕೇಳಿ ಬೆಚ್ಚಿ ಬೀಳುವ ಕಣಿವೆ ನಾಡಿನ ಹುಡುಗರಿಗೆ ಸಮದ್‌ ಸಾಧನೆಯು ಸ್ಫೂರ್ತಿಯ ಸೆಲೆಯಾಗಿ ಪರಿಣಮಿಸಿದೆ.

‘ಕಾಲಾಕೋಟ್‌ ಎಂಬ ಕುಗ್ರಾಮದಲ್ಲಿ ಜನಿಸಿ, ನಮ್ಮ ಜೊತೆಯಲ್ಲಿ ಗಲ್ಲಿ ಕ್ರಿಕೆಟ್‌ ಆಡುತ್ತ ಬೆಳೆದ ಹುಡುಗ ಈಗ ಐಪಿಎಲ್‌ನಲ್ಲಿ ಮಿಂಚುತ್ತಿರುವುದನ್ನು ಕಂಡು ಅತೀವ ಖುಷಿಯಾಗಿದೆ. ಅವನ ಸಾಧನೆ ನಮ್ಮೂರಿನ ಹುಡುಗರ ಜೊತೆ ಇತರರಿಗೂ ಸ್ಫೂರ್ತಿಯಾಗಿದೆ’ ಎಂದು ಸಮದ್‌ ಅವರ ಬಾಲ್ಯ ಸ್ನೇಹಿತ ನರುಪಮ್‌ ಸಿಂಗ್‌ ಹೇಳುತ್ತಾರೆ.

ನರುಪಮ್‌ ಅವರಂತೆ ಇತರರೂ ಕೂಡ ಸಮದ್‌ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಸಮದ್‌, ಮುಂದೊಂದು ದಿನ ಭಾರತ ತಂಡದಲ್ಲೂ ಆಡಲಿ ಎಂದು ಹಾರೈಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT