ಭಾನುವಾರ, ಜನವರಿ 19, 2020
28 °C
‘ಸೂರ್ಯ’ನ ಬೆಳಕಿಗೆ ತಡೆಯೊಡ್ಡುವ ಛಲದಲ್ಲಿ ಕರುಣ್ ನಾಯರ್ ಬಳಗ

ರಣಜಿ ಕ್ರಿಕೆಟ್: ಕರ್ನಾಟಕ–ಮುಂಬೈ ಜಿದ್ದಾಜಿದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯ ಲೀಗ್ ಹಂತದಲ್ಲಿ ಕರ್ನಾಟಕ ತಂಡದ ಹಾದಿಯು ಕಲ್ಲು–ಮುಳ್ಳುಗಳಿಂದ ಕೂಡಿದ್ದಾಗಿದೆ. ಇಲ್ಲಿಯವರೆಗೂ ಆಡಿದ ಯಾವ ಪಂದ್ಯದಲ್ಲಿಯೂ ಕರ್ನಾಟಕ ಸೋತಿಲ್ಲ. ಆದರೆ, ಜಯ ಮತ್ತು ಸಮಬಲ ಸಾಧಿಸುವುದಕ್ಕೂ ತೀವ್ರ ಹೋರಾಟ ಮಾಡಿದೆ.

ಇದೀಗ ಹಿಂದಿನ ಮೂರು ಪಂದ್ಯಗಳಿಗಿಂತಲೂ ಕಠಿಣವಾದ ಸವಾಲು ಎದುರಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕದ ಬದ್ಧ ಎದುರಾಳಿಯಾಗಿರುವ ಮುಂಬೈಯನ್ನು ಅದರ ನೆಲದಲ್ಲಿಯೇ ಕರುಣ್ ನಾಯರ್ ಬಳಗವು ಶುಕ್ರವಾರದಿಂದ ನಡೆಯುವ ಪಂದ್ಯದಲ್ಲಿ ಎದುರಿಸಲಿದೆ. 

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಮೈದಾನದಲ್ಲಿ ನಡೆಯುವ ಪಂದ್ಯವನ್ನು ಶತಾಯಗತಾಯ ಜಯಿಸುವ ಛಲದಲ್ಲಿ ಆತಿಥೇಯರಿದ್ದಾರೆ.

ಏಕೆಂದರೆ, ತನ್ನ ಮೊದಲ ಪಂದ್ಯದಲ್ಲಿ ಬರೋಡಾ ವಿರುದ್ಧ ಅಮೋಘ ಜಯ ಸಾಧಿಸಿದ್ದ ಮುಂಬೈ ತಂಡವು ಎರಡನೇಯದ್ದರಲ್ಲಿ ರೈಲ್ವೆಸ್‌ ಎದುರು ಶರಣಾಗಿತ್ತು. ಕನ್ನಡಿಗ, ಮಧ್ಯಮವೇಗಿ ಟಿ. ಪ್ರದೀಪ್ ರೈಲ್ವೆ ತಂಡದ ಜಯದ ರೂವಾರಿಯಾಗಿದ್ದರು. ಇದರಿಂದಾಗಿ ತನ್ನ ಖಾತೆಯಲ್ಲಿ ಕೇವಲ ಆರು ಅಂಕಗಳನ್ನಷ್ಟೇ ಮುಂಬೈ ಹೊಂದಿದೆ ಮತ್ತು 12ನೇ ಸ್ಥಾನದಲ್ಲಿದೆ. ಅಗ್ರ ಐದರಲ್ಲಿ ಬರಬೇಕಾದರೆ ಬಹಳಷ್ಟು ಶ್ರಮಿಸಬೇಕಾದ ಅವಶ್ಯಕತೆ ಸೂರ್ಯಕುಮಾರ್ ಬಳಗಕ್ಕೆ ಇದೆ.

ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ರೋಚಕ ಜಯ ಸಾಧಿಸಿತ್ತು. ಹುಬ್ಬಳ್ಳಿಯಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಮೂರು ಅಂಕ ಗಳಿಸಿತ್ತು. ಆದರೆ, ಮೈಸೂರಿನಲ್ಲಿ ಹಿಮಾಚಲ ಪ್ರದೇಶದ  ‘ಚಳಿಗಾಳಿ’ಗೆ ಕರ್ನಾಟಕ ನಡುಗಿತ್ತು. ಹರಸಾಹಸಪಟ್ಟು ಸೋಲು ತಪ್ಪಿಸಿಕೊಂಡು ಒಂದು ಪಾಯಿಂಟ್ ಪಡೆದು ನಿಟ್ಟುಸಿರು ಬಿಟ್ಟಿತ್ತು. ಆದರೆ, ಆ ಪಂದ್ಯದಲ್ಲಿ ನಾಯಕ ಕರುಣ್ ನಾಯರ್ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು ದಾಖಲಿಸಿದ್ದರು. ಅವರು ಲಯಕ್ಕೆ ಮರಳಿರುವುದು ತಂಡದ ಬಲ ಹೆಚ್ಚಿಸಿದೆ.

ಅಗ್ರಕ್ರಮಾಂಕದಲ್ಲಿ ದೇವದತ್ತ ಪಡಿಕ್ಕಲ್ ಬಿಟ್ಟರೆ ಉಳಿದವರು ಗಮನ ಸೆಳೆದಿಲ್ಲ. ಈ ಪಂದ್ಯದಲ್ಲಿ ಮಯಂಕ್ ಅಗರವಾಲ್ ಇಲ್ಲ. ಭಾರತ ಎ ತಂಡದಲ್ಲಿ ಆಡಲಿರುವ ಅವರಿಗೆ ವಿಶ್ರಾಂತಿ ಪಡೆಯುವಂತೆ ಬಿಸಿಸಿಐ ಸೂಚಿಸಿತ್ತು. ಅವರ ಬದಲಿಗೆ ಆರ್‌. ಸಮರ್ಥ್ ‘ಮರುಪ್ರವೇಶ’ ಮಾಡಿದ್ದಾರೆ. ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸಮರ್ಥ್‌ ಅವರನ್ನು ಈ ಮೊದಲು ಕೈಬಿಡಲಾಗಿತ್ತು. ಅವರ ಸ್ಥಾನಕ್ಕೆ ಅಭಿಷೇಕ್ ರೆಡ್ಡಿ ಬಂದಿದ್ದಾರೆ. ಆದರೆ ಪರಿಷ್ಕೃತ ಪಟ್ಟಿಯಲ್ಲಿ ಮಯಂಕ್ ಇರದ ಕಾರಣ ಲಭಿಸಿರುವ ಅವಕಾಶವನ್ನು ಸಮರ್ಥ್ ಹೇಗೆ ಬಳಸಿಕೊಳ್ಳುತ್ತಾರೆಂದು ಕಾದು ನೋಡಬೇಕು.

ತಾಂತ್ರಿಕವಾಗಿ ನೈಪುಣ್ಯತೆ ಇರುವ ಬ್ಯಾಟ್ಸ್‌ಮನ್ ಸಮರ್ಥ್ ಲಯಕ್ಕೆ ಮರಳಿದರೆ ಮುಂಬೈನ ದಾಳಿಯನ್ನು ಮೆಟ್ಟಿ ನಿಲ್ಲುವುದು ತಂಡಕ್ಕೆ ಸುಲಭವಾಗುತ್ತದೆ. ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಮಯಂಕ್ ಅವರ ಅನುಪಸ್ಥಿತಿಯಲ್ಲಿ ಸಮರ್ಥ್ ಆಟದ ಅಗತ್ಯ ತಂಡಕ್ಕಿದೆ. ತಾಳ್ಮೆಯ ಬ್ಯಾಟ್ಸ್‌ಮನ್ ನಿಶ್ಚಲ್ ಕೂಡ ಈ ಸಲ ರನ್‌ ಗಳಿಸುವಲ್ಲಿ ಸಫಲರಾಗಿಲ್ಲ.

ಬೌಲಿಂಗ್‌ನಲ್ಲಿ ಹಳೆ ಬೇರು ಅಭಿಮನ್ಯು ಮಿಥುನ್, ಹೊಸ ಚಿಗುರು ವಿ. ಕೌಶಿಕ್ ಹಾಗೂ ಪ್ರತೀಕ್ ಜೈನ್ ಅವರ ಸಮ್ಮಿಶ್ರಣವು ತಂಡಕ್ಕೆ ಫಲಪ್ರದವಾಗಿದೆ. ಸ್ಪಿನ್ ವಿಭಾಗದಲ್ಲಿ ಕೃಷ್ಣಪ್ಪ ಗೌತಮ್ ಕೊರತೆ ಕಾಡುತ್ತಿದೆ. ಶ್ರೇಯಸ್ ಗೋಪಾಲ್ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಆಡಿದರೂ, ಬೌಲಿಂಗ್‌ನಲ್ಲಿ ಸ್ಥಿರವಾಗಿಲ್ಲ. ಜೆ. ಸುಚಿತ್‌ ಕೂಡ ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಮತ್ತಷ್ಟು ಹರಿತಗೊಳಿಸಿಕೊಳ್ಳುವ ಅಗತ್ಯವಂತೂ ಇದೆ. ಏಕೆಂದರೆ ಮುಂಬೈ ತಂಡದಲ್ಲಿರುವ ಅಜಿಂಕ್ಯ ರಹಾನೆ, ಸೂರ್ಯಕುಮಾರ್, ಪೃಥ್ವಿ ಶಾ, ಸಿದ್ಧೇಶ್ ಲಾಡ್  ಅವರ ಬ್ಯಾಟಿಂಗ್‌ಗೆ ತಡೆಯೊಡ್ಡಲು ಬೌಲರ್‌ಗಳು ವಿಶೇಷ ತಂತ್ರ ಹೆಣೆಯಲೇಬೇಕು.

*
ಮಯಂಕ್ ಅಗರವಾಲ್ ಕಠಿಣ ಪರಿಶ್ರಮಪಟ್ಟಿದ್ದರಿಂದ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ಧಾರೆ. ಇಲ್ಲಿ ಅವರ ಸ್ಥಾನ ತುಂಬಲು ಯುವ ಆಟಗಾರರು ಪ್ರಯತ್ನಿಸಬೇಕು.
-ಕರುಣ್ ನಾಯರ್, ಕರ್ನಾಟಕದ ನಾಯಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು