ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೀಶ್ ಪಾಂಡೆ ಅಜೇಯ ಅರ್ಧಶತಕ; ಕರ್ನಾಟಕಕ್ಕೆ 1 ವಿಕೆಟ್ ರೋಚಕ ಗೆಲುವು

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮನೀಷ್, ಸೊನ್ನೆ ಸುತ್ತಿದ ನಿಕಿನ್ ಜೋಸ್, ಆಕಾಶ್ ಪಾಂಡೆಗೆ ಐದು ವಿಕೆಟ್
Published 4 ಫೆಬ್ರುವರಿ 2024, 13:18 IST
Last Updated 4 ಫೆಬ್ರುವರಿ 2024, 13:18 IST
ಅಕ್ಷರ ಗಾತ್ರ

ಸೂರತ್: ತಮ್ಮ ಅನುಭವಕ್ಕೆ ತಕ್ಕ ಆಟವಾಡಿದ ಮನೀಷ್ ಪಾಂಡೆ ಬಲದಿಂದ ಕರ್ನಾಟಕ ತಂಡವು ಇಲ್ಲಿ ರೈಲ್ವೆಸ್ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ 1 ವಿಕೆಟ್ ಅಂತರದ ರೋಚಕ ಜಯ ಸಾಧಿಸಿತು.

ಪಂದ್ಯದ ಮೂರನೇ ದಿನವಾದ ಭಾನುವಾರ ಗೆಲುವಿಗಾಗಿ 226 ರನ್‌ಗಳ ಬೆನ್ನಟ್ಟಿದ್ದ ಕರ್ನಾಟಕ ತಂಡವು 99 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಮನೀಷ್ (ಅಜೇಯ 67; 121ಎ, 4X6, 6X1) ಅವರು ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದರು. ಇದರಿಂದಾಗಿ ತಂಡವು 82.4 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 229 ರನ್ ಗಳಿಸಿ ಗೆದ್ದಿತು. ಇದರೊಂದಿಗೆ ಸಿ ಗುಂಪಿನಲ್ಲಿ ಒಟ್ಟು 21 ಅಂಕಗಳನ್ನು ಗಳಿಸಿದೆ.

ಲಾಲ್‌ಭಾಯಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಮನೀಷ್ ಪಾಂಡೆ ಮತ್ತು ರೈಲ್ವೆ ಸ್ಪಿನ್ನರ್ ಆಕಾಶ್ ಪಾಂಡೆಯ ( 94ಕ್ಕೆ5) ನಡುವಣ ಜಿದ್ದಾಜಿದ್ದಿಗೆ ವೇದಿಕೆಯಾಯಿತು. ಇದರಿಂದಾಗಿ ಪಂದ್ಯವು ಕುತೂಹಲ ಘಟ್ಟ ತಲುಪಿತ್ತು. ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಕರ್ನಾಟಕದ ಪಾಂಡೆ ಮೇಲುಗೈ ಸಾಧಿಸಿದರು. ಅವರಿಗೆ ಕೆಳಕ್ರಮಾಂಕದ ಬ್ಯಾಟರ್‌ಗಳೂ ಉತ್ತಮ ಜೊತೆ ನೀಡಿದರು.

ಮನೀಷ್ ಅವರೊಂದಿಗೆ 7ನೇ ವಿಕೆಟ್ ಜೊತೆಯಾಟದಲ್ಲಿ ಶರತ್ ಶ್ರೀನಿವಾಸ್ 34 ರನ್ ಸೇರಿಸಿದರು. ಎಂಟನೇ ವಿಕೆಟ್ ಜೊತೆಯಾಟದಲ್ಲಿ ವೈಶಾಖ 64 ರನ್‌ಗಳೂ ಗೆಲುವಿಗೆ ಮಹತ್ವದ್ದಾದವು. ಅಷ್ಟೇ ಅಲ್ಲ ರೈಲ್ವೆಸ್ ಬೌಲರ್‌ಗಳ ದಾಳಿಯನ್ನು ತಾಳಿಕೊಂಡ ವಿದ್ವತ್ ಕಾವೇರಪ್ಪ (8; 24ಎ, 6X1) ಮನೀಷ್‌ಗೆ ಜೊತೆ ನೀಡಿದರು. ಆದರೆ, ತಂಡದ ಗೆಲುವಿಗೆ 12 ರನ್‌ಗಳ ಅವಶ್ಯಕತೆ ಇದ್ದಾಗ ವಿದ್ವತ್ ಔಟಾಗಿದ್ದರಿಂದ ಆತಂಕ ಎದುರಾಯಿತು.

ಕೊನೆಯ ಕ್ರಮಾಂಕದ ಬ್ಯಾಟರ್ ಕೌಶಿಕ್ (ಔಟಾಗದೆ 1) ಮನೀಷ್‌ಗೆ ಜೊತೆ ನೀಡಿದರು. ಕೊನೆಯ 12 ರನ್‌ ಗಳಿಸಲು ಇಬ್ಬರೂ ಸೇರಿ ಒಟ್ಟು 17 ಎಸೆತಗಳನ್ನು ಎದುರಿಸಿದರು.

ತಂಡವು ಗೆಲುವಿನ ಗುರಿ ಮುಟ್ಟಿದಾಗ ಪೆವಿಲಿಯನ್‌ನಲ್ಲಿದ್ದ ಸಹ ಆಟಗಾರರು, ನೆರವು ಸಿಬ್ಬಂದಿ ಪಿಚ್‌ನತ್ತ ಓಡಿ ಬಂದು ಪಾಂಡೆ ಅವರನ್ನು ಅಭಿನಂದಿಸಿ ಕುಣಿದಾಡಿದರು.

ಆದರೆ ರೈಲ್ವೆಸ್ ತಂಡದ ಸ್ಪಿನ್ನರ್ ಆಕಾಶ್ ಪಾಂಡೆ (94ಕ್ಕೆ5) ಮತ್ತು ಉಳಿದ ಸಹ ಆಟಗಾರರು ನಿರಾಶೆಯಿಂದ ಕುಸಿದರು.

ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು. ಎರಡನೇ ಓವರ್‌ನಲ್ಲಿಯೇ ನಿಶ್ವಲ್ ಅವರನ್ನು ಹಿಮಾಂಶು ಸಂಗ್ವಾನ್ ಪೆವಿಲಿಯನ್‌ಗೆ ಕಳಿಸಿದರು.

ಆರ್. ಸಮರ್ಥ್ (35; 104ಎ) ಮತ್ತು ಕೆ.ವಿ. ಅನಿಶ್ (34; 88ಎ) ಅವರಿಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಸೇರಿಸಿ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಅನೀಶ್ ಅವರನ್ನು ಔಟ್ ಮಾಡಿದ ಮೊಹಮ್ಮದ್ ಸೈಫ್ ಅವರು ಜೊತೆಯಾಟ ಮುರಿದರು.

ನಂತರದ ಓವರ್‌ನಲ್ಲಿ ಆಕಾಶ್ ಪಾಂಡೆ ಮಿಂಚಿದರು. ಸಮರ್ಥ್ ವಿಕೆಟ್ ಗಳಿಸಿದ ಪಾಂಡೆ, ತಮ್ಮ ಇನ್ನೊಂದು ಓವರ್‌ನಲ್ಲಿ ನಿಕಿನ್ ಜೋಸ್‌ ಅವರನ್ನೂ ಪೆವಿಲಿಯನ್‌ಗೆ ಕಳಿಸಿದರು. ಮಯಂಕ್ ಅಗರವಾಲ್ ಗೈರುಹಾಜರಿಯಲ್ಲಿ ತಂಡವನ್ನು ಮುನ್ನಡೆಸಿದ ನಿಕಿನ್ 12 ಎಸೆತ ಎದುರಿಸಿದರೂ ಖಾತೆ ತೆರೆಯಲಿಲ್ಲ.

ವೈಶಾಖಗೆ ಐದು ವಿಕೆಟ್

ಪಂದ್ಯದ ಎರಡನೇ ದಿನವಾದ ಶನಿವಾರದ ಆಟದ ಮುಕ್ತಾಯಕ್ಕೆ ರೈಲ್ವೆಸ್ ತಂಡವು 8 ವಿಕೆಟ್‌ಗಳಿಗೆ 209 ರನ್ ಗಳಿಸಿತ್ತು. ಈ ಮೊತ್ತಕ್ಕೆ ರೈಲ್ವೆಸ್ ತಂಡದ ಆಟಗಾರರು ಮತ್ತೆ 35 ರನ್‌ ಸೇರಿಸಿದರು. ಉಳಿದೆರಡೂ ವಿಕೆಟ್‌ಗಳನ್ನು ಗಳಿಸಿದ ವೈಶಾಖ ಐದರ ಗೊಂಚಲು ಪೂರ್ಣಗೊಳಿಸಿದರು. ಎರಡನೇ ದಿನದಾಟದಲ್ಲಿ ಮೂರು ವಿಕೆಟ್ ಗಳಿಸಿದ್ದರು. ರೈಲ್ವೆಸ್ ತಂಡವು 244 ರನ್‌ಗಳಿಗೆ ಇನಿಂಗ್ಸ್ ಮುಗಿಸಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ರೈಲ್ವೆಸ್: 155. ಕರ್ನಾಟಕ: 174. ಎರಡನೇ ಇನಿಂಗ್ಸ್: ರೈಲ್ವೆಸ್ 72 ಓವರ್‌ಗಳಲ್ಲಿ 244 (ಯುವರಾಜ್ ಸಿಂಗ್ ಸಾಹೇಬ್ 28 ಎಸ್‌.ಎ. ಅಹುಜಾ 48 ವೈಶಾಖ ವಿಜಯಕುಮಾರ್ 67ಕ್ಕೆ5 ವಿದ್ವತ್ ಕಾವೇರಪ್ಪ 46ಕ್ಕೆ2) ಕರ್ನಾಟಕ:82.4 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 229 (ಆರ್. ಸಮರ್ಥ್ 35 ಕೆ.ವಿ. ಅನೀಶ್ 34 ಮನೀಷ್ ಪಾಂಡೆ ಔಟಾಗದೆ 67 ಶರತ್ ಶ್ರೀನಿವಾಸ್ 23 ವೈಶಾಖ ವಿಜಯಕುಮಾರ್ 38 ಹಿಮಾಂಶು ಸಂಗ್ವಾನ್ 24ಕ್ಕೆ2 ಆಕಾಶ್ ಪಾಂಡೆ 94ಕ್ಕೆ5 ಮೊಹಮ್ಮದ್ ಸೈಫ್ 43ಕ್ಕೆ2) ಫಲಿತಾಂಶ: ಕರ್ನಾಟಕ ತಂಡಕ್ಕೆ 1 ವಿಕೆಟ್ ಜಯ. ಮಾಹಿತಿ: ಬಿಸಿಸಿಐ ಡಾಟ್ ಟಿವಿ ವೆಬ್‌ಸೈಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT