ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy: ಡ್ರಾನಲ್ಲಿ ಅಂತ್ಯ ಕಂಡ ಕರ್ನಾಟಕ–ತಮಿಳುನಾಡು ಪಂದ್ಯ

Published 12 ಫೆಬ್ರುವರಿ 2024, 13:13 IST
Last Updated 12 ಫೆಬ್ರುವರಿ 2024, 13:13 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ತಂಡದ ಪ್ರಮುಖ ಬ್ಯಾಟರ್‌ಗಳಾದ ಬಾಬಾ ಇಂದ್ರಜಿತ್ ಮತ್ತು ವಿಜಯ್ ಶಂಕರ್ ಅವರು ಕರ್ನಾಟಕ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ರೋಚಕ ಅಂತ್ಯ ತಂದುಕೊಟ್ಟರು. ಅಂತಿಮವಾಗಿ, ನಾಲ್ಕನೇ ದಿನವಾದ ಸೋಮವಾರ ಪಂದ್ಯ ‘ಡ್ರಾ’ದಲ್ಲಿ ಕೊನೆಗೊಂಡು ಕರ್ನಾಟಕ ಮೊದಲ ಇನಿಂಗ್ಸ್‌ ಮುನ್ನಡೆಗಾಗಿ ಮೂರು ಪಾಯಿಂಟ್ ಪಡೆದು ನಿಟ್ಟುಸಿರುಬಿಟ್ಟಿತು. ಗೆಲುವಿನ ದಾರಿಯಲ್ಲಿ ಸಾಗಿದ್ದ ಆತಿಥೇಯ ತಂಡ ಅಂತಿಮವಾಗಿ ಒಂದು ಪಾಯಿಂಟ್ ಪಡೆಯಿತು.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ 355 ರನ್‌ಗಳ ದೊಡ್ಡ ಗುರಿಯ ಬೆನ್ನತ್ತಿದ್ದ ತಮಿಳುನಾಡು ನಿರೀಕ್ಷೆಗೆ ಮಿಗಿಲಾದ ಹೋರಾಟ ನಡೆಸಿತು. ಮೊದಲ ಇನಿಂಗ್ಸ್‌ನಲ್ಲಿ 155ಕ್ಕೆ ಉರುಳಿದ್ದ ತಮಿಳುನಾಡು ಒಂದು ಹಂತದಲ್ಲಿ ಗೆಲುವಿಗೆ 21 ಎಸೆತಗಳಲ್ಲಿ 31 ರನ್ ಗಳಿಸುವ ಸ್ಥಿತಿಗೆ ತಲುಪಿತ್ತು.

ಕ್ರೀಸ್‌ನಲ್ಲಿ ಬೇರೂರಿದ್ದ ಅನುಭವಿಗಳಾದ ಬಾಬಾ ಇಂದ್ರಜಿತ್ (98, 194 ಎಸೆತ) ಮತ್ತು ವಿಜಯ್ ಶಂಕರ್ (60, 107ಎ, 4x4, 6x1) ಅವರು ಗೆಲುವಿಗೆ ಯತ್ನಿಸುವಂತೆ ಕಂಡಿತ್ತು. ಆದರೆ 5 ವಿಕೆಟ್‌ಗೆ 324 ರನ್‌ಗಳಾಗಿದ್ದ ಈ ವೇಳೆ ನಾನ್‌ ಸ್ಟ್ರೈಕರ್‌ನಲ್ಲಿದ್ದ ಇಂದ್ರಜಿತ್‌, ವಿದ್ವತ್ ಕಾವೇರಪ್ಪ ಬೌಲಿಂಗ್‌ನಲ್ಲಿ ದುರದೃಷ್ಟಕರ ರೀತಿ ರನೌಟ್ ಆದರು. ಐದು ರನ್‌ಗಳ ತರುವಾಯ ವಿಜಯಶಂಕರ್, ವೈಶಾಖ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಲಾಂಗ್‌ಆನ್‌ನಲ್ಲಿದ್ದ ಮಯಂಕ್ ಅಗರವಾಲ್‌ಗೆ ಕ್ಯಾಚಿತ್ತರು. ಮರು ಓವರ್‌ನಲ್ಲಿ ಲೋಕೇಶ್ವರ್ ನಿರ್ಗಮಿಸಿದಾಗ ಪಂದ್ಯದಲ್ಲಿ ಕರ್ನಾಟಕಕ್ಕೂ ಪೂರ್ಣ ಪಾಯಿಂಟ್ ಪಡೆಯುವ ಆಸೆ ಚಿಗುರಿತು. ಅಂತಿಮವಾಗಿ ಕೊನೆಯ ‘ಕಡ್ಡಾಯ ಓವರ್‌’ ಮುಗಿದಾಗ ಆತಿಥೇಯ ತಂಡ 8 ವಿಕೆಟ್‌ಗೆ 338 ರನ್ ಹೊಡೆಯಿತು. ಗುರಿಗಿಂತ 17 ರನ್ ಹಿಂದೆಬಿದ್ದಿತ್ತು.

ಕರ್ನಾಟಕ ಈ ಪಂದ್ಯದ ಮೂರು ಪಾಯಿಂಟ್‌ಗಳೊಡನೆ ಒಟ್ಟು 24 ಪಾಯಿಂಟ್ಸ್ ಕಲೆಹಾಕಿ ‘ಸಿ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ತಮಿಳುನಾಡು 22 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಸರಿಯಿತು. ಈ ಪಂದ್ಯಕ್ಕೆ ಮೊದಲು ಎರಡೂ ತಂಡಗಳು ತಲಾ 21 ಪಾಯಿಂಟ್ಸ್ ಗಳಿಸಿದ್ದವು. ಗುಜರಾತ್‌ (19 ಪಾಯಿಂಟ್ಸ್‌) ಮೂರನೇ ಸ್ಥಾನಕ್ಕೇರಿತು.

1 ವಿಕೆಟ್‌ಗೆ 36 ರನ್‌ಗಳೊಡನೆ ಅಂತಿಮ ದಿನದಾಟ ಮುಂದುವರಿಸಿದ ತಮಿಳುನಾಡು, ಇನ್ನೊಬ್ಬ ಆರಂಭ ಆಟಗಾರ ವಿಮಲ್ ಕುಮಾರ್ ಅವರನ್ನು ಕಳೆದುಕೊಂಡಾಗ ಮೊತ್ತ 75. ಈ ಹಂತದಲ್ಲಿ ಪ್ರದೋಷ್ ರಂಜನ್ ಪಾಲ್ (74) ಮತ್ತು ಇಂದ್ರಜಿತ್ ಮೂರನೇ ವಿಕೆಟ್‌ಗೆ 67 ರನ್ ಸೇರಿಸಿ ತಂಡ ಕುಸಿಯದಂತೆ ನೋಡಿಕೊಂಡರು. ಭೂಪತಿ ಕುಮಾರ್ ಮತ್ತು ಮೊಹಮ್ಮದ್ ನಿರ್ಗಮಿಸಿದಾಗ ತಂಡದ ಮೊತ್ತ 199. ಈ ಹಂತದಲ್ಲಿ ಇಂದ್ರಜಿತ್ ಜೊತೆಗೂಡಿದ ವಿಜಯಶಂಕರ್ ತಂಡವನ್ನು ಆತ್ಮವಿಶ್ವಾಸದಿಂದ ಆಡಿ ಮೊತ್ತ ಹೆಚ್ಚಿಸಿದರಲ್ಲದೇ ತಂಡವನ್ನು ಸೋಲಿನಿಂದ ಪಾರು ಮಾಡುವಂತೆ ಕಂಡಿತು. ಮಾತ್ರವಲ್ಲ, ಆರನೇ ವಿಕೆಟ್‌ಗೆ 125 ರನ್ ಸೇರಿಸಿ ಗೆಲುವಿನ ಆಸೆ ಚಿಗುರಿಸಿದರು.

ಈ ಜೊತೆಯಾಟದಿಂದ ಆತಂಕಗೊಂಡಿದ್ದ ಕರ್ನಾಟಕ ಕೆಲ ನಕಾರಾತ್ಮಕ ತಂತ್ರಗಳಿಗೆ ಮೊರೆಹೋಯಿತು. ಏಳು ಫೀಲ್ಡರ್‌ಗಳನ್ನು ಬೌಂಡರಿ ರೇಖೆ ಬಳಿ ನಿಯೋಜಿಸಿತು. ಹೊಸ ಚೆಂಡಿನಲ್ಲಿ ಹೆಚ್ಚಿನ ರನ್ ಬರಬಹುದೆಂಬ ಲೆಕ್ಕಾಚಾರದಲ್ಲಿ ಅದನ್ನು ಪಡೆಯಲು ಹೋಗಲಿಲ್ಲ. ಓವರುಗಳನ್ನು ವೇಗವಾಗಿ ಮಾಡಲಿಲ್ಲ. ಆಗಾಗ ಆಟಗಾರರ ನಡುವೆ ಚರ್ಚೆ ನಡೆಯಿತು.

ಕರ್ನಾಟಕ ಕಡೆ ವೇಗದ ಬೌಲರ್ ವೈಶಾಖ ವಿಜಯಕುಮಾರ್ ಮೂರು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT