ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy | KAR vs VID: ಅಥರ್ವ ಶತಕ, ಯಶ್ ಅರ್ಧಶತಕ; ವಿದರ್ಭ 261/3

ರಣಜಿ ಕ್ವಾರ್ಟರ್‌ಫೈನಲ್: ಕರ್ನಾಟಕದ ಬೌಲರ್‌ಗಳ ಶ್ರಮಕ್ಕೆ ಸಿಗದ ತಕ್ಕ ಫಲ; ಯಶ್ ಅಮೋಘ ಬ್ಯಾಟಿಂಗ್
Published 23 ಫೆಬ್ರುವರಿ 2024, 12:27 IST
Last Updated 23 ಫೆಬ್ರುವರಿ 2024, 12:27 IST
ಅಕ್ಷರ ಗಾತ್ರ

ನಾಗ್ಪುರ: ಶತಕ ಗಳಿಸಿದ ಅಥರ್ವ ತೈಡೆ ಮತ್ತು ಏಳು ರನ್‌ಗಳ ಅಂತರದಿಂದ ಮೂರಂಕಿ ಸಾಧನೆಯ ಕೈತಪ್ಪಿಸಿಕೊಂಡ ಯಶ್ ರಾಥೋಡ್ ಅವರ  ಬ್ಯಾಟಿಂಗ್‌ ಬಲದಿಂದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದ ಮೊದಲ ದಿನದ ಗೌರವ ಗಳಿಸಿತು.

ಕರ್ನಾಟಕದ ಬೌಲರ್‌ಗಳ ಕೌಶಲಗಳಿಗೆ ತಾಳ್ಮೆಯ ಪ್ರತ್ಯುತ್ತರ ಕೊಟ್ಟ ಆತಿಥೇಯ ಬಳಗವು ಉತ್ತಮ ಮೊತ್ತದತ್ತ ಹೆಜ್ಜೆ ಇಟ್ಟಿದೆ.  ಸಿವಿಲ್ ಲೈನ್ಸ್‌ನಲ್ಲಿರುವ ವಿಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಧ್ರುವ ಶೋರೆ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಕೌಶಿಕ್ ಉತ್ತಮ ಆರಂಭ ನೀಡಿದರು. ಆದರೆ,  ಕ್ರೀಸ್‌ನಲ್ಲಿದ್ದ ಅಥರ್ವ ತೈಡೆ ಅವರೊಂದಿಗೆ ಸೇರಿಕೊಂಡ ಯಶ್ ರಾಥೋಡ್  ಇನಿಂಗ್ಸ್‌ಗೆ ಬಲ ತುಂಬಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ ಸೇರಿಸಿದ 184 ರನ್‌ಗಳ ಬಲದಿಂದ ತಂಡವು ದಿನದಾಟದ ಮುಕ್ತಾಯಕ್ಕೆ 86 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 261 ರನ್ ಗಳಿಸಿತು.

ಕರ್ನಾಟಕದಿಂದ ವಿದರ್ಭಕ್ಕೆ ವಲಸೆ ಹೋಗಿರುವ ಕರುಣ್ ನಾಯರ್ (ಬ್ಯಾಟಿಂಗ್ 30, 78ಎ) ಮತ್ತು ನಾಯಕ ಅಕ್ಷಯ್ ವಾಡಕರ್ (ಬ್ಯಾಟಿಂಗ್ 2) ಕ್ರೀಸ್‌ನಲ್ಲಿದ್ದಾರೆ.

ತೈಡೆ ಶತಕ:

ಎಡಗೈ ಬ್ಯಾಟರ್ ಅಥರ್ವ್ ತೈಡೆ (109; 244ಎ, 4X16, 6X1) ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರನೇ ಶತಕ ದಾಖಲಿಸಿದರು. 

ಕರ್ನಾಟಕದ ಮೂವರು ವೇಗಿಗಳಾದ ವಿದ್ವತ್, ವೈಶಾಖ ಹಾಗೂ  ಕೌಶಿಕ್ ಅವರು ಹೆಚ್ಚು ರನ್‌ಗಳನ್ನು ಕೊಡಲಿಲ್ಲ. ಆದರೆ  ಬಹಳ ಹೊತ್ತಿನವರೆಗೆ ವಿಕೆಟ್ ಕೂಡ ಒಲಿಯಲಿಲ್ಲ. ಸರಣಿಯಲ್ಲಿ ಕರ್ನಾಟಕದ ಪರ ಹೆಚ್ಚು ವಿಕೆಟ್ ಪಡೆದಿರುವ ವೈಶಾಖ ಅವರಿಗೆ ದಿನದಾಟದಲ್ಲಿ ಒಂದೂ ವಿಕೆಟ್ ಒಲಿಯಲಿಲ್ಲ. ಅಥರ್ವ್ ಮತ್ತು ಯಶ್ ಅವರ ತಾಳ್ಮೆಯ ಆಟದಿಂದಾಗಿ ಬೌಲರ್‌ಗಳು ಬೆವರು ಹರಿಸಬೇಕಾಯಿತು. ಇಬ್ಬರೂ ಸೇರಿ 316  ಎಸೆತಗಳನ್ನು ಎದುರಿಸಿದರು.

ಅಂತೂ ಇಂತೂ ಈ ಜೊತೆಯಾಟವನ್ನು 61ನೇ ಓವರ್‌ನಲ್ಲಿ ಮುರಿಯುವಲ್ಲಿ ವಿದ್ವತ್ ಯಶಸ್ವಿಯಾದರು. ಶತಕದತ್ತ ಹೆಜ್ಜೆ ಇಟ್ಟಿದ್ದ ಯಶ್ ರಾಥೋಡ್ (93; 157ಎ, 4X12) ಅವರ ವಿಕೆಟ್ ಗಳಿಸಿದ ವಿದ್ವತ್ ಸಂಭ್ರಮಿಸಿದರು.

ಇನ್ನೊಂದು ಬದಿಯಲ್ಲಿದ್ದ ಅಥರ್ವ್ ಅವರು ಕರುಣ್ ಜೊತೆಗೆ ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 45 (124ಎ) ರನ್ ಗಳಿಸಿದರು.

ಸ್ಪಿನ್ನರ್ ಹಾರ್ದಿಕ್ ರಾಜ್ ಅವರು ಇನಿಂಗ್ಸ್‌ ಮುಕ್ತಾಯಕ್ಕೆ ಸ್ವಲ್ಪ ಹೊತ್ತಿಗೆ ಮುಂದೆ ಅಥರ್ವ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಸಂಕ್ಷಿಪ್ತ ಸ್ಕೋರು: 86 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 261 (ಅಥರ್ವ್ ತೈಡೆ 109, ಯಶ್ ರಾಥೋಡ್ 93, ಕರುಣ್ ನಾಯರ್ ಬ್ಯಾಟಿಂಗ್ 30, ವಿದ್ವತ್ ಕಾವೇರಪ್ಪ 67ಕ್ಕೆ1, ವಿ. ಕೌಶಿಕ್ 31ಕ್ಕೆ1, ಹಾರ್ದಿಕ್ ರಾಜ್ 39ಕ್ಕೆ1)

ಧೀರಜ್‌ ಗೌಡ ಪದಾರ್ಪಣೆ

ಕರ್ನಾಟಕ ತಂಡದಲ್ಲಿ ಸ್ಪಿನ್ ಆಲ್‌ರೌಂಡರ್ ಧೀರಜ್ ಗೌಡ ಅವರು ಪದಾರ್ಪಣೆ ಮಾಡಿದರು. ಈಚೆಗೆ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕ ತಂಡದ ನಾಯಕತ್ವ ವಹಿಸಿದ್ದವರು ಧೀರಜ್. ಅವರ ತಂಡದಲ್ಲಿದ್ದ ಹಾರ್ದಿಕ್ ರಾಜ್ ಕೂಡ  ಇದೇ ಋತುವಿನಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ಧಾರೆ.  ಈ ಟೂರ್ನಿಯಲ್ಲಿ ತಂಡಕ್ಕೆ ಕಾಲಿಟ್ಟ ಏಳನೇ ಆಟಗಾರ ಧೀರಜ್ ಗೌಡ ಆಗಿದ್ದಾರೆ. ಅವರು 13 ಓವರ್‌ ಬೌಲಿಂಗ್ ಮಾಡಿ 51 ರನ್‌ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT