ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕ್ರಿಕೆಟ್: ‘ಮಹಿಳಾ ಐಪಿಎಲ್‌’ನಲ್ಲಿ ಬಹುಮುಖಿ ‘ಚಾಲೆಂಜ್‌‘

ಚಾಮರಿ, ಸ್ಮೃತಿ ಬ್ಯಾಟಿಂಗ್ ಸೊಬಗು; ಸ್ಪಿನ್‌ ಮೋಡಿಗಾರ್ತಿ ರಾಧಾ ಯಾದವ್ ದಾಖಲೆ: ಜಾದೂ ಮಾಡಿದ ಚಂತಂ
Last Updated 15 ನವೆಂಬರ್ 2020, 6:08 IST
ಅಕ್ಷರ ಗಾತ್ರ

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೂರು ಅಂಗಣಗಳಲ್ಲಿ ನಡೆದ ‘ಮಿಲಿಯನ್ ಡಾಲರ್ ಬೇಬಿ‘ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯ ಒಂದೊಂದು ಎಸೆತದಲ್ಲೂ ಕ್ರಿಕೆಟ್ ಕ್ರೀಡೆಯ ರೋಮಾಂಚನವನ್ನು ‘ವೀಕ್ಷಕರು‘ ಸುಮಾರು ಒಂದೂ ಮುಕ್ಕಾಲು ತಿಂಗಳು ಅನುಭವಿಸಿದರು. ಇದರ ನಡುವೆ ಆರು ದಿನಗಳಲ್ಲಿ ನಾಲ್ಕೇ ಪಂದ್ಯಗಳ ಮೂಲಕ ಮಹಿಳೆಯರ ಟಿ20 ಚಾಲೆಂಜ್ ಟೂರ್ನಿ ಎಂದಿನಂತೆ ಯಾವುದೇ ಸಂಚಲನ ಉಂಟುಮಾಡದೆ ‘ಆಟಕ್ಕಿದ್ದು ಲೆಕ್ಕಕ್ಕಿಲ್ಲದಂತೆ‘ ಮುಗಿದು ಹೋಯಿತು. ಹೀಗಾಗಿ ಅಲ್ಲಿ ಕಂಡ ‘ಚಾಲೆಂಜ್‌‘ ಯಾರ ಗಮನಕ್ಕೂ ಬಾರದೆ ದಾಖಲೆ ಪುಸ್ತಕಗಳಲ್ಲಿ ಮಾತ್ರ ಉಳಿಯಿತು.

2008ರಲ್ಲಿ ಆರಂಭಗೊಂಡ ಐಪಿಎಲ್‌ ವರ್ಷ ಕಳೆದಂತೆ ಹೆಸರು ಗಳಿಸುತ್ತ ಸಾಗಿತು. ಇದೇ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್‌ ಮುನ್ನೆಲೆಗೆ ಬಂದಿತ್ತು. ವಿಶೇಷವಾಗಿ ಭಾರತದ ಮಹಿಳೆಯರು ಅತ್ಯುತ್ತಮ ಆಟದ ಮೂಲಕ ಹೆಸರು ಗಳಿಸಿತು. ಹೀಗಾಗಿ ಮಹಿಳೆಯರಿಗೂ ಐಪಿಎಲ್‌ನಂಥ ಟೂರ್ನಿ ಆಯೋಜಿಸಬೇಕು ಎಂಬ ಬೇಡಿಕೆ ಬರತೊಡಗಿತು. ಇತ್ತೀಚೆಗೆ ಆ ಧ್ವನಿ ಇನ್ನಷ್ಟು ಗಟ್ಟಿಯಾಗಿ ಮಹಿಳಾ ಐಪಿಎಲ್‌ ಟೂರ್ನಿಯನ್ನೇ ಆಯೋಜಿಸಬೇಕು ಎಂಬ ರೂಪ ಪಡೆದುಕೊಂಡಿತು. ಈ ನಡುವೆ ಎರಡು ವರ್ಷಗಳ ಹಿಂದೆ ಐಪಿಎಲ್ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಮಹಿಳೆಯರಿಗೂ ಪಂದ್ಯವೊಂದನ್ನು ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿತು.

2018ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದ ದಿನ, ಮಧ್ಯಾಹ್ನ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಅದು, ಪ್ರದರ್ಶನ ಪಂದ್ಯವಾಗಿತ್ತು. ಆದ್ದರಿಂದ ಎರಡೇ ತಂಡಗಳು (ಸೂಪರ್‌ನೋವಾಸ್–ಟ್ರೇಲ್‌ಬ್ಲೇಜರ್ಸ್‌) ಪಾಲ್ಗೊಂಡಿದ್ದವು. ಕಳೆದ ವರ್ಷ ಮತ್ತೊಂದು ತಂಡವನ್ನು (ವೆಲೋಸಿಟಿ) ಸೇರಿಸಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳನ್ನು ಆಡಿಸಲಾಯಿತು. ಈ ವರ್ಷ ಇನ್ನೇನು ಮಹಿಳಾ ಐಪಿಎಲ್‌ ನಡೆಯುವ ಎಲ್ಲ ಸಾದ್ಯತೆಗಳು ಇವೆ ಎಂದುಕೊಳ್ಳುತ್ತಿದ್ದಾಗಲೇ ಕೋವಿಡ್–19 ಕಾಡಿತು. ಹೀಗಾಗಿ ಮೂರು ತಂಡಗಳ ರೌಂಡ್ ರಾಬಿನ್ ಮಾದರಿಯ ಟೂರ್ನಿಯನ್ನೇ ಆಯೋಜಿಸಲು ನಿರ್ಧರಿಸಲಾಯಿತು.

ಕೋವಿಡ್ ಕಾಲದಲ್ಲಿ ಎಲ್ಲ ಕ್ರೀಡಾ ಚಟುವಟಿಕೆಯೂ ಸವಾಲಿನದ್ದೇ. ಐಪಿಎಲ್‌ನಲ್ಲಿ ಆಡಿದ ತಂಡಗಳು ಯುಎಇಯಲ್ಲಿ ಇಳಿದು ಎರಡು ತಿಂಗಳಿಗೂ ಹೆಚ್ಚು ಕಾಲ ಜೀವಸುರಕ್ಷಾ ವಲಯದಲ್ಲಿ (ಬಯೋ ಬಬಲ್‌) ಇದ್ದುಕೊಂಡು ಆಡಿದ್ದಾರೆ. ಮಹಿಳೆಯರು ಕೂಡ ಪಂದ್ಯಗಳು ನಡೆದ ದಿನಗಳಿಗಿಂತ ಎರಡು ಪಟ್ಟು ಹೆಚ್ಚು ಕಾಲ ಅಲ್ಲಿದ್ದು ಕಾದಾಡಿದ್ದಾರೆ. ಹೀಗಾಗಿ ಪಂದ್ಯಗಳಿಗಿಂತ ಇದೇ ದೊಡ್ಡ ‘ಚಾಲೆಂಜ್‌‘ ಆಗಿತ್ತು. ಮಹಿಳಾ ಚಾಲೆಂಜ್ ಟೂರ್ನಿಯಲ್ಲಿ ಈ ವರೆಗೆ ಯಾವ ತಂಡವೂ 150ರ ಮೊತ್ತದ ಗಡಿ ದಾಟಲಿಲ್ಲ. ಆದರೆ ಗರಿಷ್ಠ ಮೊತ್ತ 146 ಈ ಬಾರಿಯೇ ದಾಖಲಾಯಿತು. 19 ಸಿಕ್ಸರ್‌ಗಳು ಮತ್ತು 62 ಬೌಂಡರಿಗಳಿಗೆ ಶಾರ್ಜಾ ಕ್ರೀಡಾಂಗಣ (ಎಲ್ಲ ಪಂದ್ಯಗಳೂ ಒಂದೇ ಕ್ರೀಡಾಂಗಣದಲ್ಲಿ ನಡೆದಿದ್ದವು) ಸಾಕ್ಷಿಯಾದದ್ದು ಮಹಿಳೆಯರ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಿತು. ಶ್ರೀಲಂಕಾದ ಚಾಮರಿ ಅಟ್ಟಪಟ್ಟು ಸ್ಫೋಟಕ ಅರ್ಧಶತಕದೊಂದಿಗೆ ಮೂರು ಪಂದ್ಯಗಳಲ್ಲಿ ಒಟ್ಟು 117 ರನ್‌ ಗಳಿಸಿದ್ದರೆ, ಫೈನಲ್ ಪಂದ್ಯದಲ್ಲಿ ಗಳಿಸಿದ ಜವಾಬ್ದಾರಿಯುತ 68 ರನ್‌ಗಳೊಂದಿಗೆ ಸ್ಮೃತಿ ಮಂದಾನ ಒಟ್ಟು 107 ರನ್ ಕಲೆ ಹಾಕಿದ್ದಾರೆ. ಹರ್ಮನ್‌ಪ್ರೀತ್ ಕೌರ್‌, ಡಿಯಾಂಡ್ರ ದೊತಿನ್ ಮತ್ತು ದೀಪ್ತಿ ಶರ್ಮಾ ಅವರೂ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

ಎಕ್ಲೆಸ್ಟೋನ್‌, ರಾಧಾ ಯಾದವ್, ಸಲ್ಮಾ ಖಾತೂನ್ ಸ್ಪಿನ್ ಬಲೆ

ಟೂರ್ನಿಯಲ್ಲಿ ಒಟ್ಟು 43 ವಿಕೆಟ್‌ಗಳು ಉರುಳಿವೆ. ಈ ಪೈಕಿ ಸ್ಪಿನ್ನರ್‌ಗಳ ಜಾದೂ ಹೆಚ್ಚು ’ವರ್ಕೌಟ್‘ ಆಗಿದೆ. ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್‌, ಭಾರತದ ಎಡಗೈ ಸ್ಪಿನ್ನರ್ ರಾಧಾ ಯಾದವ್ ಮತ್ತು ಬಾಂಗ್ಲಾದೇಶದ ಆಫ್‌ ಸ್ಪಿನ್ನರ್ ಸಲ್ಮಾ ಖಾತೂನ್ ಸ್ಪಿನ್ ಮೋಡಿ ಮೂಲಕ ಗಮನ ಸೆಳೆದಿದ್ದಾರೆ. ಫೈನಲ್ ಪಂದ್ಯದಲ್ಲಿ ದಾಖಲೆಯ ಐದು ವಿಕೆಟ್ ಗೊಂಚಲು ಗಳಿಸಿ ರಾಧಾ ಯಾದವ್ ಅವರು ಟ್ರೇಲ್‌ಬ್ಲೇಜರ್ಸ್ ತಂಡವನ್ನು 118 ರನ್‌ಗಳಿಗೆ ನಿಯಂತ್ರಿಸಿದರೆ, ಬೌಲಿಂಗ್ ಮೂಲಕವೇ ತಿರುಗೇಟು ನೀಡಿದ ಟ್ರೇಲ್‌ಬ್ಲೇಜರ್ಸ್‌ 102 ರನ್‌ಗಳಿಗೆ ಸೂಪರ್‌ನೋವಾ ತಂಡವನ್ನು ಕಟ್ಟಿಹಾಕಿತ್ತು. ನಾಲ್ಕು ಓವರ್‌ಗಳಲ್ಲಿ 18 ರನ್‌ಗಳನ್ನು ಮಾತ್ರ ನೀಡಿ ಮೂರು ವಿಕೆಟ್ ಉರುಳಿಸಿದ ಸಲ್ಮಾ ಖಾತೂನ್ ಅವರು ಟ್ರೇಲ್‌ಬ್ಲೇಜರ್ಸ್‌ನ ಗೆಲುವಿಗೆ ಕಾರಣರಾಗಿದ್ದರು. ರಾಧಾ, ಎಕ್ಲೆಸ್ಟೋನ್ ಮತ್ತು ಸಲ್ಮಾ ಕ್ರಮವಾಗಿ ಎಂಟು, ಐದು ಮತ್ತು ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಏಕ್ತಾ ಬಿಷ್ಟ್‌, ದೀಪ್ತಿ ಶರ್ಮಾ, ಜೂಲನ್ ಗೋಸ್ವಾಮಿ ಅವರ ದಾಳಿಯೂ ಟೂರ್ನಿಯಲ್ಲಿ ಮಹತ್ವ ಗಳಿಸಿತ್ತು.

ಸಾಮಾಜಿಕ ತಾಣಗಳಲ್ಲಿ ‘ತಾರೆ‘ಯಾದ ಚಂತಂ

ಟೂರ್ನಿಯ ನಂತರ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸುದ್ದಿಯಾದವರು ಥಾಯ್ಲೆಂಡ್‌ನ 24ರ ಬೆಡಗಿ ನಾತಕನ್ ಚಂತಂ. ಫೈನಲ್‌ ಪಂದ್ಯದಲ್ಲಿ ಸೋಫಿ ಎಕ್ಲೆಸ್ಟೋನ್ ಅವರ ಎಸೆತವನ್ನು ಬ್ಯಾಟಿನ ಅಂಚಿಗೆ ತಾಗಿಸಿ ಥರ್ಡ್‌ ಮ್ಯಾನ್‌ ಮೂಲಕ ಬೌಂಡರಿಗೆ ಅಟ್ಟಲು ಸೂಪರ್‌ನೋವಾದ ಜೆಮಿಮಾ ರಾಡ್ರಿಗಸ್ ಪ್ರಯತ್ನಿಸಿದ್ದರು. ಆದರೆ ಚೆಂಡನ್ನು ಹಿಂಬಾಲಿಸಿದ ಚಂತಂ ಇನ್ನೇನು ಅದು ಬೌಂಡರಿ ಗೆರೆಗೆ ತಾಗುತ್ತದೆ ಎನ್ನುವಷ್ಟರಲ್ಲಿ ಜಿಮ್ನಾಸ್ಟ್‌ನಂತೆ ಮುಂದಕ್ಕೆ ಜಿಗಿದು ಎರಡೂ ಕೈಗಳಲ್ಲಿ ತಡೆದು ಹಿಂದಕ್ಕೆ ತಳ್ಳಿದರು. ಕೈಗಳಲ್ಲೇ ದೇಹದ ಸಮತೋಲನ ಕಾಯ್ದುಕೊಂಡು ಬೌಂಡರಿ ಗೆರೆಯ ಆಚೆ ಬಿದ್ದರು. ಪಂದ್ಯದ ನಂತರ ಟ್ರೇಲ್‌ಬ್ಲೇಜರ್ಸ್ ನಾಯಕಿ ಸ್ಮೃತಿ ಮಂದಾನ ‘ಹುಡುಗಿಯರು ಹೀಗೆ ಫೀಲ್ಡಿಂಗ್ ಮಾಡಿದ್ದನ್ನು ನಾನು ಹಿಂದೆಂದೂ ನೋಡಿಲ್ಲ‘ ಎಂದು ಹೇಳಿದರೆ, ಮರುದಿನ ಟ್ವಿಟರ್‌ನಲ್ಲಿ ವಿದೇಶದ ಮತ್ತು ದೇಶಿ ಮಹಿಳಾ ಕ್ರಿಕೆಟ್‌ನ ಆಟಗಾರ್ತಿಯರು ಚಂತಂ ಅವರನ್ನು ಕೊಂಡಾಡಿ ಪೋಸ್ಟ್‌ಗಳನ್ನು ಹಾಕಿದ್ದರು.

ಈ ಎಲ್ಲ ಸಾಧನೆಗಳಿಗೆ ಸಾಕ್ಷಿಯಾದ ಮಹಿಳಾ ಕ್ರಿಕೆಟ್ ಪ್ರಿಯರು ಮತ್ತು ಆಟಗಾರ್ತಿಯರ ಮುಂದೆ ಈಗ ಇರುವ ಪ್ರಶ್ನೆ ಒಂದೇ...ಮುಂದಿನ ವರ್ಷವಾದರೂ ಮಹಿಳಾ ಐಪಿಎಲ್‌ ನಡೆಯುವುದೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT