ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ: ರೋಹಿತ್, ರಾಹುಲ್ ಚಮಕ್; ಭಾರತಕ್ಕೆ ಸರಣಿ ಜಯದ ರಂಗು

Last Updated 19 ನವೆಂಬರ್ 2021, 17:25 IST
ಅಕ್ಷರ ಗಾತ್ರ

ರಾಂಚಿ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲೂ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಇನ್ನೊಂದೆಡೆ ಇತ್ತೀಚೆಗಷ್ಟೇ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ 'ರನ್ನರ್-ಅಪ್' ಆಗಿರುವ ನ್ಯೂಜಿಲೆಂಡ್, ಭಾರತ ನೆಲದಲ್ಲಿ ಸೋಲಿನ ಮುಖಭಂಗಕ್ಕೊಳಗಾಗಿದೆ. ಟಿ20 ಸರಣಿಯ ಅಂತಿಮ ಪಂದ್ಯವು ಭಾನುವಾರ ಕೋಲ್ಕತದಲ್ಲಿ ನಡೆಯಲಿದೆ.

ಇಲ್ಲಿನ ಜೆಎಸ್‌ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಜಿಲೆಂಡ್ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ಗುರಿ ಬೆನ್ನತ್ತಿದ ಭಾರತ, ನಾಯಕ ರೋಹಿತ್ ಶರ್ಮಾ (55) ಹಾಗೂ ಕೆ.ಎಲ್. ರಾಹುಲ್ (65) ಆಕರ್ಷಕ ಅರ್ಧಶತಕಗಳ ನೆರವಿನಿಂದ 17.2 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನತ್ತಿದ್ದ ಭಾರತಕ್ಕೆ ರೋಹಿತ್ ಹಾಗೂ ರಾಹುಲ್ ಬಿರುಸಿನ ಆರಂಭವೊದಗಿಸಿದರು. ರೋಹಿತ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ ರಾಹುಲ್ ಆಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು. ಅಲ್ಲದೆ ಸತತ ಐದನೇ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ಕಟ್ಟಿದರು.

10 ಓವರ್ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 79 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ75 ರನ್ ಅಗತ್ಯವಿತ್ತು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಾಹುಲ್, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16ನೇ ಅರ್ಧಶತಕ ಸಾಧನೆ ಮಾಡಿದರು.

ಕಿವೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 70 ಎಸೆತಗಳಲ್ಲಿ ಶತಕದ ಜೊತೆಯಾಟ ಕಟ್ಟಿದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ರಾಹುಲ್ ವಿಕೆಟ್ ನಷ್ಟವಾಯಿತು. ಆಗಲೇ ರೋಹಿತ್ ಜೊತೆ ಸೇರಿ ಮೊದಲ ವಿಕೆಟ್‌ಗೆ 80 ಎಸೆತಗಳಲ್ಲಿ 117 ರನ್‌ಗಳ ಜೊತೆಯಾಟ ನೀಡಿದರು. 49 ಎಸೆತಗಳನ್ನು ಎದುರಿಸಿದ ರಾಹುಲ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 65 ರನ್ ಗಳಿಸಿದರು.

ಅತ್ತ ನಾಯಕನ ಆಟವಾಡಿದ ರೋಹಿತ್ 35 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಇದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಬ್ಯಾಟ್‌ನಿಂದ ಸಿಡಿದ 25ನೇ ಅರ್ಧಶತಕವಾಗಿದೆ.

ಆದರೆ ಗೆಲುವಿನ ಅಂಚಿನಲ್ಲಿ ರೋಹಿತ್ ವಿಕೆಟ್ ಪತನವಾಯಿತು. 36 ಎಸೆತಗಳನ್ನು ಎದುರಿಸಿದ ರೋಹಿತ್ ಐದು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 55 ರನ್ ಗಳಿಸಿದರು.

ಅಂತಿಮವಾಗಿ ವೆಂಕಟೇಶ್ ಅಯ್ಯರ್ (12*) ಹಾಗೂ ರಿಷಭ್ ಪಂತ್ (12*) ನೆರವಿನಿಂದ ಭಾರತ, ಇನ್ನೂ 16 ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತು. ಕಿವೀಸ್ ಪರ ನಾಯಕ ಟಿಮ್ ಸೌಥಿ ಮೂರು ವಿಕೆಟ್ ಕಬಳಿಸಿದರು.

ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಹರ್ಷಲ್ ಪಟೇಲ್; ನ್ಯೂಜಿಲೆಂಡ್ 153/6
ಈ ಮೊದಲು ಕಿವೀಸ್ ತಂಡಕ್ಕೆ ಮಾರ್ಟಿನ್ ಗಪ್ಟಿಲ್ ಹಾಗೂ ಡೆರಿಲ್ ಮಿಚೆಲ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 26 ಎಸೆತಗಳಲ್ಲಿ 48 ರನ್‌ಗಳ ಜೊತೆಯಾಟ ನೀಡಿದರು. ಕೇವಲ 15 ಎಸೆತಗಳನ್ನು ಎದುರಿಸಿದ ಗಪ್ಟಿಲ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು.

ಬಳಿಕ ಮಿಚೆಲ್ ಜೊತೆಗೂಡಿದ ಮಾರ್ಕ್ ಚಾಪ್‌ಮನ್ (21) ಮಗದೊಂದು ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇದಾದ ಬೆನ್ನಲ್ಲೇ ಡೆರಿಲ್ ಮಿಚೆಲ್ (31) ಅವರನ್ನು ಹೊರದಬ್ಬಿದ ಹರ್ಷಲ್ ಪಟೇಲ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಕೆಟ್ ಕಬಳಿಸಿದರು.

ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್ (15) ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಈ ನಡುವೆ 21 ಎಸೆತಗಳಲ್ಲಿ 34 (3 ಸಿಕ್ಸರ್, 1 ಬೌಂಡರಿ) ರನ್ ಗಳಿಸಿದ ಗ್ಲೆನ್ ಫಿಲಿಪ್ಸ್ ಭಾರತದ ಪಾಳಯದಲ್ಲಿ ಆತಂಕವನ್ನು ಸೃಷ್ಟಿಸಿದರು. ಆದರೆ ಫಿಲಿಪ್ಸ್ ಅವರಿಗೂ ಹರ್ಷಲ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದರು.

ಅಂತಿಮ ಹಂತದಲ್ಲಿ ಕಿವೀಸ್ ಓಟಕ್ಕೆ ಕಡಿವಾಣ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರು. ಪರಿಣಾಮ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನುಳಿದಂತೆ ಜೇಮ್ಸ್ ನಿಶಾಮ್ (3), ಮಿಚೆಲ್ ಸ್ಯಾಂಟ್ನರ್ (8*) ಹಾಗೂ ಆ್ಯಡಂ ಮಿಲ್ನೆ (5*) ರನ್ ಗಳಿಸಿದರು.

ಭಾರತದ ಪರ ಪದಾರ್ಪಣೆ ಮಾಡಿರುವ ಹರ್ಷಲ್ ಪಟೇಲ್ ಎರಡು ವಿಕೆಟ್ ಕಿತ್ತು ಮಿಂಚಿದರು. ಆರ್. ಅಶ್ವಿನ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಾಹರ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT