ಬುಧವಾರ, ಜನವರಿ 22, 2020
25 °C
ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್‌ ಸರಣಿಗಳಿಗೆ ಭಾರತ ತಂಡ: ಮರಳಿದ ಬೂಮ್ರಾ

ಲಂಕಾ ವಿರುದ್ಧ ರೋಹಿತ್‌ಗೆ ವಿಶ್ರಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ಜಸ್‌ಪ್ರೀತ್ ಬೂಮ್ರಾ ಅವರು ಮುಂದಿನ ತಿಂಗಳು  ಶ್ರೀಲಂಕಾ (ಟಿ–20) ಮತ್ತು ಆಸ್ಟ್ರೇಲಿಯಾ (ಏಕದಿನ ಸರಣಿ) ವಿರುದ್ಧ ನಡೆಯಲಿರುವ ಸೀಮಿತ ಓವರುಗಳ ಸರಣಿಗೆ ಭಾರತ ತಂಡದ ವೇಗದ ದಾಳಿಯ ನೇತೃತ್ವ ವಹಿಸಲಿದ್ದಾರೆ.

ಯಶಸ್ಸಿನ ಅಲೆಯಲ್ಲಿರುವ ಆರಂಭ ಆಟಗಾರ ರೋಹಿತ್‌ ಶರ್ಮಾ ಅವರಿಗೆ ಶ್ರೀಲಂಕಾ ವಿರುದ್ಧ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಅವರಿಗೂ ವಿರಾಮ ನೀಡಲಾಗಿದೆ.

ಬೂಮ್ರಾ ಅವರಿಗೆ ಭಾರತ ತಂಡದ ಫಿಸಿಯೊ ನಿತಿನ್‌ ಪಟೇಲ್‌ ಅವರು ಆಡಲು ಹಸಿರು ನಿಶಾನೆ ತೋರಿದ್ದು, ಅವರು ಸೂರತ್‌ನಲ್ಲಿ ಗುಜರಾತ್ ತಂಡದ ಪರ ರಣಜಿ ಪಂದ್ಯದಲ್ಲಿ ಆಡಲಿದ್ದಾರೆ. ಅನುಭವಿ ಓಪನರ್‌ ಶಿಖರ್‌ ಧವನ್‌ ಸಹ ಎರಡೂ ಸರಣಿಗಳಿಗೆ ಆಯ್ಕೆಯಾಗಿದ್ದಾರೆ.

‘ಬೂಮ್ರಾ ಎರಡೂ ತಂಡಗಳ ವಿರುದ್ಧ ಆಡಲಿದ್ದಾರೆ. ನಾವು ರೋಹಿತ್‌ ಮತ್ತು ಶಮಿ ಅವರಿಗೆ ಟಿ–20 ಸರಣಿಗೆ (ಶ್ರೀಲಂಕಾ ವಿರುದ್ಧ) ವಿಶ್ರಾಂತಿ ನೀಡಿದ್ದೇವೆ. ಶಿಖರ್‌ ಧವನ್‌ ಪುನರಾಗಮನ ಮಾಡಿದ್ದಾರೆ. ಟಿ–20 ಸರಣಿಗೆ ಸಂಜು ಸ್ಯಾಮ್ಸನ್‌ ಬ್ಯಾಕಪ್‌ ಓಪನರ್‌ ಆಗಿದ್ದಾರೆ’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಅವರು ಸೋಮವಾರ ತಂಡ ಪ್ರಕಟಿಸಿದ ನಂತರ ಮಾಧ್ಯಮದವರಿಗೆ ತಿಳಿಸಿದರು.

ಇತ್ತೀಚೆಗೆ ತಂಡದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೀಪಕ್‌ ಚಾಹರ್‌ ಅವರಿಗೆ ಬೆನ್ನು ನೋವು ಉಲ್ಬಣಿಸಿದ್ದು, ಅವರು ಐಪಿಎಲ್‌ವರೆಗೆ ವಿಶ್ರಾಂತಿಯಲ್ಲಿ ಇರಲಿದ್ದಾರೆ. ಹೀಗಾಗಿ ವೇಗಿ ನವದೀಪ್‌ ಸೈನಿ ತಂಡದಲ್ಲಿ ಮುಂದುವರಿಯಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಎಲ್ಲ ಮೂರೂ ಪ್ರಮುಖ ಆರಂಭ ಆಟಗಾರರು– ಶಿಖರ್‌, ರೋಹಿತ್‌ ಮತ್ತು ಕೆ.ಎಲ್‌.ರಾಹುಲ್‌ ಲಭ್ಯರಿರುವರು ಎಂದು ಪ್ರಸಾದ್‌ ತಿಳಿಸಿದರು. ರೋಹಿತ್‌ ಈ ವರ್ಷ ಮೂರೂ ಮಾದರಿಗಳಲ್ಲಿ 47 ಪಂದ್ಯಗಳನ್ನು ಆಡಿದ್ದು, ಅವರಿಗೆ ವಿಶ್ರಾಂತಿ ನೀಡುವ ಮಾತುಗಳು ಕೇಳಿಬಂದಿದ್ದವು. ನಾಯಕ ವಿರಾಟ್‌ ಕೊಹ್ಲಿ ಇದೇ ಅವಧಿಯಲ್ಲಿ 44 ಪಂದ್ಯ ಆಡಿದ್ದಾರೆ.

ಡೋಪಿಂಗ್‌ನಿಂದ ನಿಷೇಧ ಅನುಭವಿಸಿದ್ದ ಪ್ರತಿಭಾನ್ವಿತ ಆರಂಭ ಆಟಗಾರ ಪ್ರಥ್ವಿ ಶಾ, ಭಾರತ ‘ಎ’ ತಂಡದೊಂದಿಗೆ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. 

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬೆನ್ನುನೋವಿನ ಶಸ್ತ್ರಚಿಕಿತ್ಸೆಯಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಜನವರಿ ಮೂರನೇ ವಾರ ಅವರನ್ನು ತಂಡಕ್ಕೆ ಸೇರ್ಪಡೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು