ಬುಧವಾರ, ಮಾರ್ಚ್ 3, 2021
18 °C
ಟಿಮ್ ಪೇನ್ ಅರ್ಧಶತಕ; ರೋಹಿತ್ ಶರ್ಮಾ 44

ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್: ಗಾಬಾದಲ್ಲಿ ಮಿಂಚಿದ ವಾಷಿಂಗ್ಟನ್–ಶಾರ್ದೂಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಬೇನ್: ಗಾಬಾ ಕ್ರೀಡಾಂಗಣದಲ್ಲಿ ಶನಿವಾರ  ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೆಟ್ಟ ಹೊಡೆತಕ್ಕೆ ಯತ್ನಿಸಿ ಔಟಾಗಿದ್ದು ಬಿಟ್ಟರೆ ಶನಿವಾರ ಭಾರತದ ಆಟ ಸಮಾಧಾನಕರವಾಗಿಯೇ ಇತ್ತು.

ಬಾರ್ಡರ್–ಗಾವಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ನ ಎರಡನೇ ದಿನ ತಂಡದ ಯುವ ಬೌಲರ್‌ಗಳು  ಎದುರಾಳಿ ಬ್ಯಾಟಿಂಗ್‌ ಪಡೆಗೆ ಅಚ್ಚರಿ–ಆಘಾತ ಎರಡನ್ನೂ ಕೊಟ್ಟರು.  ಟೆಸ್ಟ್ ಕ್ರಿಕೆಟ್‌ನ ಅನುಭವ ಹೆಚ್ಚಿಲ್ಲದ ಬೌಲಿಂಗ್ ಪಡೆಯು ಆತಿಥೇಯ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 369 ರನ್‌ಗಳಿಗೆ ಕಟ್ಟಿಹಾಕಿತು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಮಳೆಯಿಂದಾಗಿ ಆಟ ನಿಲ್ಲುವ ಮುನ್ನ 26 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 62 ರನ್ ಗಳಿಸಿತು. ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 8; 49ಎಸೆತ) ಮತ್ತು ಹಂಗಾಮಿ ನಾಯಕ ಅಜಿಂಕ್ಯ ರಹಾನೆ (ಬ್ಯಾಟಿಂಗ್ 2, 19ಎಸೆತ) ಕ್ರೀಸ್‌ನಲ್ಲಿದ್ದಾರೆ.

ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್‌ ಎಸೆತದಲ್ಲಿ ಶುಭಮನ್ ಗಿಲ್ (7. 15ಎ) ಔಟಾದರು. ಇನ್ನೊದು ಬದಿಯಲ್ಲಿ ರೋಹಿತ್ ಶರ್ಮಾ (44; 74ಎ, 6ಬೌಂಡರಿ) ಚೆನ್ನಾಗಿ ಆಡುತ್ತಿದ್ದರು.  ಅವರ ಜೊತೆಗೂಡಿದ್ದ ಪೂಜಾರ ನಿಧಾನವಾಗಿ ಆಟಕ್ಕೆ ಕುದುರಿಕೊಂಡಿದ್ದರು.

ಆದರೆ, 20 ಓವರ್‌ನಲ್ಲಿ ನೇಥನ್ ಲಯನ್ ಎಸೆತದಲ್ಲಿ ದುಡುಕಿದರು. ಮುನ್ನುಗ್ಗಿ ದೊ್ಡ ಹೊಡೆತವಾಡಿದರು. ಆದರೆ, ಗಾಳಿಯಲ್ಲಿ ತೇಲಿದ ಚೆಂಡನ್ನು  ಮಿಡ್‌ ಆನ್‌ನತ್ತ ಓಡಿ ಬಂದ ಮಿಚೆಲ್ ಸ್ಟಾರ್ಕ್ ಕ್ಯಾಚ್ ಮಾಡಿದರು.  ರೋಹಿತ್ ತಮ್ಮ ತಪ್ಪಿಗೆ ಪರಿತಪಿಸುತ್ತ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರನ್ನು ಬಹಳಷ್ಟು ಇದಕ್ಕಾಗಿ ಟೀಕಿಸಿದ್ದಾರೆ.

ನವಪ್ರತಿಭೆಗಳ ಬೌಲಿಂಗ್: ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಮಾರ್ನಸ್ ಲಾಬುಷೇನ್ ಶತಕದ ಬಲದಿಂದ 87 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 275 ರನ್ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಭಾರತದ ಬೌಲಿಂಗ್ ಪಡೆಯು ಆಸ್ಟ್ರೇಲಿಯಾ ತಂಡಕ್ಕೆ 94 ರನ್‌ಗಳನ್ನು ಕೊಟ್ಟು ಐದು ವಿಕೆಟ್‌ಗಳನ್ನು ಕಬಳಿಸಿತು. 

ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ವಾಷಿಂಗ್ಟನ್ ಸುಂದರ್ (89ಕ್ಕೆ3), ಮಧ್ಯಮವೇಗಿ ಟಿ. ನಟರಾಜನ್ (78ಕ್ಕೆ3) ಮತ್ತು ವೃತ್ತಿಜೀವನದ ಎರಡನೇ ಟೆಸ್ಟ್ ಆಡುತ್ತಿರುವ ಶಾರ್ದೂಲ್ ಠಾಕೂರ್ (94ಕ್ಕೆ3) ಮಿಂಚಿದರು. 

ಇವರ ಶಿಸ್ತಿನ ಬೌಲಿಂಗ್‌ ಎದುರಿಸಿ ನಿಂತ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ (50; 104ಎ) ಅರ್ಧಶತಕ ಗಳಿಸಿದರು. ಲಭಿಸಿದ ಒಂದು ಜೀವದಾನದ ಲಾಭ ಪಡೆದ ಕ್ಯಾಮರಾನ್ ಗ್ರೀನ್ 47 ರನ್ ಗಳಿಸಿದರು.

ಶುಕ್ರವಾರ ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದ ಭಾರತದ ಮಧ್ಯಮವೇಗಿ ನವದೀಪ್ ಸೈನಿ ವಿಶ್ರಾಂತಿ ಪಡೆದ ಕಾರಣ ನಾಲ್ವರು ಬೌಲಿಂಗ್ ಹೊಣೆ ನಿಭಾಯಿಸಿದರು. ಇನಿಂಗ್ಸ್‌ನಲ್ಲಿ ಒಟ್ಟು 107.2 ಓವರ್‌ಗಳನ್ನು ಇವರೇ ಬೌಲಿಂಗ್ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು