ಭಾನುವಾರ, ಅಕ್ಟೋಬರ್ 17, 2021
23 °C
ಪಂಜಾಬ್ ಕಿಂಗ್ಸ್ ಸಹಮಾಲೀಕ ನೆಸ್ ವಾಡಿಯಾ ನಿರೀಕ್ಷೆ

IPL Cricket: ಹೊಸ ತಂಡಗಳಿಗೆ ಮೂಲಬೆಲೆಯ ಮೌಲ್ಯವರ್ಧನೆ ಖಚಿತ - ನೆಸ್ ವಾಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದಿನ ಬಾರಿಯ ಐಪಿಎಲ್ ಟೂರ್ನಿಗೆ ಸೇರ್ಪಡೆಗೊಳ್ಳಲಿರುವ ಎರಡು ಹೊಸ ತಂಡಗಳು ನಿಗದಿಯಾಗಿರುವ ಮೂಲಬೆಲೆಗಿಂತ ದುಪ್ಪಟ್ಟು ಮೌಲ್ಯಕ್ಕೆ ಹರಾಜಾಗುವ ಸಾಧ್ಯತೆ ಇದೆ ಎಂದು  ಪಂಜಾಬ್ ಕಿಂಗ್ಸ್‌ ಫ್ರ್ಯಾಂಚೈಸಿಯ ಸಹಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.

ಮುಂದಿನ ವರ್ಷದ ಐಪಿಎಲ್‌ನಲ್ಲಿ 10 ತಂಡಗಳು ಕಣಕ್ಕಿಳಿಯಲಿವೆ. ಹೊಸ ಎರಡು ತಂಡಗಳನ್ನು ಇದೇ 25ರಂದು ಪ್ರಕಟಿಸಲಾಗುತ್ತಿದೆ. ತಂಡದ ಮೂಲಬೆಲೆಯನ್ನು ಎರಡು ಸಾವಿರ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಫ್ರ್ಯಾಂಚೈಸಿಗಳ ಖರೀದಿಗಾಗಿ ಬಿಡ್ ನಡೆಯಲಿದೆ.

ಈ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ವಾಡಿಯಾ, ‘ಸದ್ಯ ಫ್ರ್ಯಾಂಚೈಸಿಯ ಮೂಲಬೆಲೆಯನ್ನು ಎರಡು ಸಾವಿರ ಕೋಟಿ ರೂಪಾಯಿ  ಇದೆ. ಇದು ಸಾಂಪ್ರದಾಯಿಕವಾಗಿ ಇಟ್ಟಿರುವುದಾಗಿದೆ. ಆದರೆ, ಈ ಬೆಲೆಯು ಶೇ 50ರಿಂದ 100ರವರೆಗೂ ಬಿಡ್‌ನಲ್ಲಿ ಏರಿಕೆಯಾಗಬಹುದು. ಕನಿಷ್ಟ ಮೂರು ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯಕ್ಕೆ ಏರಬಹುದು’ ಎಂದಿದ್ದಾರೆ.

‘ಎರಡು ಹೊಸ ತಂಡಗಳ ಸೇರ್ಪಡೆಯಿಂದ ಯಾವುದೇ ತೊಂದರೆಯಿಲ್ಲ. ಒಳ್ಳೆಯ ಬೆಳವಣಿಗೆ ಇದು.  ಐಪಿಎಲ್ ಎಂಬುದು ಅತ್ಯುತ್ಕ್ರಷ್ಠ ಮತ್ತು ಪ್ರತಿಷ್ಠಿತ ಉತ್ಪನ್ನವಾಗಿದೆ. ತಂಡಗಳ ಸಂಖ್ಯೆ ಹೆಚ್ಚುವುದರಿಂದ ಇಡೀ ಟೂರ್ನಿಯ ಮೌಲ್ಯವು ಏರಲಿದೆ. ಅಧಿಕೃತ ಪ್ರಸಾರಕರಿಗೆ ಇದರಿಂದ ಬಹಳ ಪ್ರಯೋಜನವಾಗಲಿದೆ’ ಎಂದು ವಾಡಿಯಾ ಅಭಿಪ್ರಾಯಪಟ್ಟಿದ್ಧಾರೆ.

‘ಬಿಸಿಸಿಐಗೆ ಐಪಿಎಲ್‌ ಆಭರಣವಿದ್ದಂತೆ.  ಆದ್ದರಿಂದ ಅದರ ಮೌಲ್ಯ ಹೆಚ್ಚುತ್ತಲೇ ಇರುತ್ತದೆ. ಈ ಟೂರ್ನಿಯು ಕ್ರಿಕೆಟ್‌ನ ಸ್ಥಿರಾಸ್ತಿಯಾಗಿದ್ದು, ದಿನದಿಂದ ದಿನಕ್ಕೆ ಮೌಲ್ಯವರ್ಧನೆಯಾಗುತ್ತಿದೆ. ಅಷ್ಟೇ ಅಲ್ಲ. ಪ್ರತಿವರ್ಷ 250ರಿಂದ 300 ಕೋಟಿ ರೂಪಾಯಿ ಆದಾಯವೂ ಹರಿದು ಬರುತ್ತಿರುವುದು ಲಾಭದಾಯಕ’ ಎಂದಿದ್ದಾರೆ.

‘ಐಪಿಎಲ್ ನಲ್ಲಿರುವ ಫ್ರ್ಯಾಂಚೈಸಿಗಳ ಕೆಲವು ಮಾಲೀಕರು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿರುವ ಸೇಟ್ ಲೂಸಿಯಾ, ಟ್ರಿನಿಡಾಡ್, ಟೊಬ್ಯಾಗೊ ಮತ್ತು ಬಾರ್ಬಡಿಸ್ ತಂಡಗಳಲ್ಲಿ  ಐಪಿ ಎಲ್‌ ತಂಡಗಳ ಮಾಲೀಕರ ಒಡೆತನದ್ದಾಗಿವೆ’ ಎಂದಿದ್ದಾರೆ. ಸೇಂಟ್ ಲೂಸಿಯಾ ತಂಡದ  ಮಾಲೀಕತ್ವವನ್ನು ವಾಡಿಯಾ ಅವರ ಪಂಜಾಬ್ ಕಿಂಗ್ಸ್‌ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು