ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟಿಂಗ್‌ ಮಾಡುವಾಗ ಊಟವೂ ಬೇಡವೆನಿಸುತ್ತಿತ್ತು: ಸಚಿನ್ ತೆಂಡೂಲ್ಕರ್ ನೆನಪು

Published 8 ಆಗಸ್ಟ್ 2023, 13:54 IST
Last Updated 8 ಆಗಸ್ಟ್ 2023, 13:54 IST
ಅಕ್ಷರ ಗಾತ್ರ

ಕೊಲಂಬೊ: ‘ಶಾಲಾ ದಿನಗಳಲ್ಲಿ ಆಡುತ್ತಿದ್ದ ಪಂದ್ಯಗಳಲ್ಲಿ ಮಧ್ಯಾಹ್ನದ ಕಳೆದರೂ ನನ್ನ ಬ್ಯಾಟಿಂಗ್ ದಾಹ ತಣಿಯುತ್ತಿರಲಿಲ್ಲ. ಒಂದಷ್ಟು ತಂಪು ಪಾನೀಯ ಕುಡಿಯುತ್ತಿದ್ದೆ. ಬ್ಯಾಟಿಂಗ್ ಮಜವನ್ನು ಸವಿಯುತ್ತಿದ್ದೆ’ ಎಂದು ಮಾಸ್ಟರ್‌ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದಾರೆ.

ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ರಾಯಭಾರಿಯಾದ ಸಚಿನ್ ತೆಂಡೂಲ್ಕರ್‌ ಅವರು ಮಕ್ಕಳ ರಕ್ಷಣೆ, ಹಕ್ಕುಗಳು ಹಾಗೂ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲ್ಲಿನ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ತಮ್ಮ ಬಾಲ್ಯದ ದಿನಗಳ ರಸಗಳಿಗೆಗಳನ್ನು ಹಂಚಿಕೊಂಡರು.

‘ನನ್ನ ಆಟದ ಗುಣಮಟ್ಟ ಹೆಚ್ಚುತ್ತಾ ಹೋದಂತೆ ನನ್ನ ತಯಾರಿಯೂ ಬೇರೆ ರೀತಿಯೇ ಆಗಿರುತ್ತಿತ್ತು. ಒಂದು ಪಂದ್ಯದಲ್ಲಿ ನಾನು ಊಟದ ಸಮಯಕ್ಕಿಂತ ಮೊದಲೇ ಔಟ್‌ ಆದೆ. ಆಗ ನಾನು ಮಾಡಿದ ಮೊದಲ ಕೆಲಸವೇ ಊಟ. ಪೌಷ್ಟಿಕಾಂಶದ ದೊಡ್ಡ ಪಾಠ ನನಗೆ ಅರಿವಾಗಿದ್ದೇ ಅಲ್ಲಿ’ ಎಂದರು.

‘ಮಕ್ಕಳಿಗೆ ಪೋಷಕಾಂಶ ಭರಿತ ಹಾಗೂ ಗುಣಮಟ್ಟದ ಆಹಾರ ನೀಡಬೇಕಾದ್ದು ಪ್ರಥಮ ಕರ್ತವ್ಯ. ಮಕ್ಕಳ ಶಿಕ್ಷಣ ಮತ್ತು ಆಹಾರಕ್ಕೆ ನೀಡುವ ಕಾಳಜಿ, ಮುಂದೊಂದು ದಿನ ಅವರ ಹಾಗೂ ದೇಶದ ಭವಿಷ್ಯಕ್ಕೆ ಬುನಾದಿಯಾಗಲಿದೆ’ ಎಂದು ಸಚಿನ್ ಅಭಿಪ್ರಾಯಪಟ್ಟರು.

‘ಮಕ್ಕಳು ಅತ್ಯುತ್ತಮ ಗುರುಗಳು. ಅತಿ ಸಣ್ಣ ವಿಷಯಗಳಲ್ಲೂ ದೊಡ್ಡ ಸಂಗತಿಯನ್ನು ಅವರು ತೋರಿಸಬಲ್ಲರು. ಶಾಲಾ ದಿನಗಳಲ್ಲಿ ಎಲ್ಲರೂ ತರುತ್ತಿದ್ದ ಊಟದ ಒಂದು ಪಾಲನ್ನು ಎತ್ತಿಡುತ್ತಿದ್ದರು. ಅದನ್ನು ನಂತರ ಪಕ್ಷಿಗಳಿಗೆ ನೀಡುತ್ತಿದ್ದ ಸಂಗತಿಯಂತೂ ದೊಡ್ಡ ಪಾಠ’ ಎಂದು ಸಚಿನ್ ಹೇಳಿದ್ದಾರೆ.

‘ಶ್ರೀಲಂಕಾದ ಹಲವು ಮನೆಗಳಲ್ಲಿ ಇಂದಿಗೂ ಕುಟುಂಬಕ್ಕೆ ಅಗತ್ಯವಿರುವ ಗುಣಮಟ್ಟದ ಹಾಗೂ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತಿಲ್ಲ ಎಂದು ಕೇಳಿ ಬೇಸರವೆನಿಸುತ್ತದೆ’ ಎಂದು ಆಘಾತ ವ್ಯಕ್ತಪಡಿಸಿದರು.

ನಂತರ ಮಕ್ಕಳೊಂದಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT