ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗನಾಗದಿದ್ದರೆ IITಗೆ ಹೋಗುತ್ತಿದ್ದ: ಪ್ರಜಾವಾಣಿ ಜೊತೆ ಪ್ರಖರ್ ತಂದೆ ಮಾತು

Published 16 ಜನವರಿ 2024, 4:26 IST
Last Updated 16 ಜನವರಿ 2024, 4:26 IST
ಅಕ್ಷರ ಗಾತ್ರ

ಬೆಂಗಳೂರು: ‘‍ನನ್ನ ಮಗ  ಓದಿನಲ್ಲಿ ತುಂಬಾ ಜಾಣ. ಶೇ 97ರಷ್ಟು ಅಂಕಗಳನ್ನು ಪಡೆಯುತ್ತಾನೆ. ಐಐಟಿಗೆ ಹೋಗುವ ಸಾಮರ್ಥ್ಯ ಮತ್ತು ಪ್ರತಿಭೆ ಇರುವ ಹುಡುಗ. ಆದರೆ ಕ್ರಿಕೆಟ್‌ ಆಟವನ್ನು ಆಯ್ಕೆ ಮಾಡಿಕೊಂಡು ದೊಡ್ಡ ಸಾಧನೆಯತ್ತ ಹೆಜ್ಜೆ ಇಟ್ಟಿದ್ದಾನೆ. ಆತನ ಬೆಳವಣಿಗೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ನಾವು ಬದ್ಧ‘–

ಶಿವಮೊಗ್ಗದಲ್ಲಿ ನಡೆದ ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಅಜೇಯ 404 ರನ್ ಹೊಡೆದು ದಾಖಲೆ ಬರೆದ ಪ್ರಖರ್ ಚತುರ್ವೇದಿಯ ತಂದೆ ಸಂಜಯಕುಮಾರ್ ಅವರ ಹೆಮ್ಮೆಯ ನುಡಿಗಳು ಇವು. ಮೂಲತಃ ಮಧ್ಯಪ್ರದೇಶದವರಾದ ಸಂಜಯಕುಮಾರ್  ಎಂಜಿನಿಯರ್ ಆಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿ ಸಾಫ್ಟ್‌ವೇರ್ ಉದ್ಯಮ ನಡೆಸುತ್ತಿದ್ದಾರೆ. ಅವರ ಪತ್ನಿ ರೂಪಾ ಅವರು ಡಿ.ಆರ್‌.ಡಿ.ಒ (ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ)ದಲ್ಲಿ ತಾಂತ್ರಿಕ ಅಧಿಕಾರಿಯಾಗಿದ್ದಾರೆ. 

ತಮ್ಮ ಪುತ್ರನ ಸಾಧನೆಯ ಕುರಿತು ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಸಂಜಯಕುಮಾರ್, ‘ಪ್ರಖರ್ ಎಂಟು ವರ್ಷದವನಿದ್ದಾಗಿನಿಂದಲೂ ಮನೆಯ ಹತ್ತಿರ ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ. ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದ ನನ್ನ ಸ್ನೇಹಿತರೊಬ್ಬರು ಪ್ರಖರ್ ಆಟವನ್ನು ನೋಡಿದ್ದರು. ಚೆಂಡಿನ ಚಲನೆಯನ್ನು ಚುರುಕಾಗಿ ಗುರುತಿಸಿ ಉತ್ತಮ ಹೊಡೆತಗಳನ್ನು ಪ್ರಯೋಗಿಸುವ ಕಲೆ ಇದೆ. ಉತ್ತಮ ಕೋಚ್‌ ಬಳಿ ತರಬೇತಿಗೆ ಹಾಕಿ ಎಂದು ಸಲಹೆ ನೀಡಿದ್ದರು. ನಾನು ಅದಕ್ಕೆ ಸ್ಪಂದಿಸಿದೆ’ ಎಂದರು.

‘ಪ್ರಕಾಶ್ ಪಡುಕೋಣೆ–ದ್ರಾವಿಡ್ ಸ್ಪೋರ್ಟ್ಸ್‌ ಎಕ್ಸಲೆನ್ಸಿಯಲ್ಲಿರುವ ಸಿಕ್ಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಪ್ರಖರ್ ತರಬೇತಿ ಪಡೆಯುತ್ತಿದ್ದಾನೆ. ಅಲ್ಲಿ ಕಾರ್ತಿಕ್ ಜೆಶ್ವಂತ್ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರಖರ್‌ಗೆ  ರಂಜನ್ ಅವರು ವೈಯಕ್ತಿಕ ಕೋಚ್ ಆಗಿದ್ದಾರೆ’ ಎಂದರು.

‘19 ವರ್ಷದೊಳಗಿನವರ ಏಷ್ಯಾ ಕಪ್ ಮತ್ತು ವಿಶ್ವಕಪ್ ಟೂರ್ನಿಗಳಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆಯಾಗಲಿಲ್ಲ. ಇದರಿಂದಾಗಿ ಮತ್ತಷ್ಟು ಕಠಿಣ ಅಭ್ಯಾಸ ಮಾಡಿ ಕೂಚ್‌ ಬಿಹಾರ್ ಟ್ರೋಫಿ ಟೂರ್ನಿಗೆ ಸಿದ್ಧತೆ ಮಾಡಿಕೊಂಡಿದ್ದ ಪ್ರಖರ್ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಎರಡು ಶತಕಗಳ ಸಹಿತ ಒಟ್ಟು 791 ರನ್‌ ಗಳಿಸಿದ್ದಾರೆ’ ಎಂದರು.

‘ಪ್ರತಿನಿತ್ಯ ಐದು ತಾಸು ಕ್ರಿಕೆಟ್‌, ವ್ಯಾಯಾಮಗಳಿಗೆ ಮೀಸಲಿಟ್ಟಿರುವ ಪ್ರಖರ್, ಓದಿನಲ್ಲಿಯೂ ಮುಂದು. ದ್ವಿತೀಯ ಪಿಯುಸಿ ಮುಗಿಸಿದ್ದಾನೆ. ಎಕನಾಮಿಕ್ಸ್‌ನಲ್ಲಿ ಪದವಿ ಕೋರ್ಸ್ ಮಾಡುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT