ಶನಿವಾರ, ಫೆಬ್ರವರಿ 29, 2020
19 °C

‘ಕೊಹ್ಲಿ ಫಿಟ್‌ನೆಸ್ ಸಲಹೆ ನೀಡಿದ್ದರು; ಆರ್‌ಸಿಬಿಯಿಂದ ಕೈಬಿಟ್ಟಾಗ ನೋವಾಗಿತ್ತು’

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮೊನ್ನೆ ಉತ್ತರ ಪ್ರದೇಶ ವಿರುದ್ಧ ನಡೆದ ರಣಜಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಅಮೋಘ ತ್ರಿಶತಕ ಗಳಿಸಿ ತಮ್ಮ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟಿದ್ದ ಮುಂಬೈ ಆಟಗಾರ ಸರ್ಫರಾಜ್‌ ಖಾನ್‌, ಸಾಧನೆ ಬಳಿಕ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಪರ 2015 ಹಾಗೂ 2016ರಲ್ಲಿ ಆಡಿದ್ದ ಅವರನ್ನು ಬಳಿಕ ತಂಡದಿಂದ ಕೈಬಿಡಲಾಗಿತ್ತು. ಇದರಿಂದ ತಮಗೆ ನೋವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಕ್ರಿಕ್‌ಇನ್ಫೋ ಕ್ರಿಡಾ ವೆಬ್‌ಸೈಟ್‌ನೊಂದಿಗೆ ಮಾತನಾಡಿರುವ 21 ವರ್ಷ ಆಟಗಾರ ಸರ್ಫರಾಜ್‌, ಆರ್‌ಸಿಬಿಯಿಂದ ಹೊರಬೀಳುವುದಕ್ಕೂ ಮೊದಲು ಫಿಟ್‌ನೆಸ್‌ ಕಡೆಗೆ ಗಮನಹರಿಸುವಂತೆ ವಿರಾಟ್‌ ಕೊಹ್ಲಿ ನನಗೆ ಸಲಹೆ ನೀಡಿದ್ದರು. ಅದರ ಫಲವಾಗಿ ನನ್ನ ಆಟದಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ ಎಂದು ತಿಳಿಸಿದ್ದಾರೆ.

‘ಫಿಟ್‌ನೆಸ್‌ ಕಾರಣದಿಂದಾಗಿ ನನ್ನನ್ನು 2016ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ಕೈಬಿಡಲಾಗಿತ್ತು. ‘ನಿನ್ನ ಬ್ಯಾಟಿಂಗ್‌ ಕೌಶಲದ ವಿಚಾರದಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ, ನೀನು ಆಟದ ಮುಂದಿನ ಹಂತವನ್ನು ತಲುಪಲು ನಿನ್ನ ಫಿಟ್‌ನೆಸ್‌ ಅವಕಾಶ ನೀಡುವುದಿಲ್ಲ. ಫಿಟ್‌ನೆಸ್‌ನತ್ತ ಗಮನಹರಿಸು’ ಎಂದು ವಿರಾಟ್‌ ಕೊಹ್ಲಿ ಪ್ರಾಮಾಣಿಕವಾಗಿ ಮತ್ತು ನೇರವಾಗಿ ಹೇಳಿದ್ದರು’ ಎಂದು ತಿಳಿಸಿದ್ದಾರೆ.

‘ಹೀಗಾಗಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ನಿರ್ಧರಿಸಿದೆ. ವರ್ಕೌಟ್‌, ರನ್ನಿಂಗ್‌ ಆರಂಭಿಸಿದೆ. ಸಿಹಿಯನ್ನು ತ್ಯಜಿಸಿದೆ. ನನ್ನ ತಿನ್ನುವ ಅಭ್ಯಾಸ ಸುಧಾರಿಸಿಕೊಂಡೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಪರಿಶ್ರಮಪಟ್ಟೆ ಎಂದು ಹೇಳಲಾರೆ. ಆದರೆ, ನನ್ನ ಆಹಾರಕ್ರಮದಲ್ಲಿ ಚೂರು ಬದಲಾವಣೆ ಮಾಡಿಕೊಂಡೆ. ಯಾವುದೇ ಆಹಾರವನ್ನು ಇರುವುದರಲ್ಲಿ ಅರ್ಧದಷ್ಷು ತಿನ್ನುವುದನ್ನು ರೂಢಿಸಿಕೊಂಡೆ. ಜಂಕ್‌ಫುಡ್ ಅನ್ನು ಕ್ರಮೇಣ ಕಡಿಮೆ ಮಾಡಿದೆ’ ಎಂದಿದ್ದಾರೆ.

‘ಸದ್ಯ ಫಿಟ್‌ನೆಸ್‌ ಸುಧಾರಿಸಿರುವುದಕ್ಕೆ ಮಾತ್ರವೇ ನಾನು ಸಂತಸಗೊಂಡಿಲ್ಲ. ಅದರೊಟ್ಟಿಗೆ ಆಟವೂ ಉತ್ತಮಗೊಂಡಿರುವುದರಿಂದ ಸಂತಸಗೊಂಡಿದ್ದೇನೆ. ಹಿಂದೆ ನಾನು ತಿನ್ನುವುದನ್ನು ನೋಡಿ ನನ್ನ ತಂಡದ ಸಹ ಆಟಗಾರರೆಲ್ಲ ‘ಪಾಂಡಾ’ ಎನ್ನುತ್ತಿದ್ದರು. ಆದರೆ, ಈಗ ಅವರೆಲ್ಲ ‘ಮೆಚೊ’ (ತನ್ನ ದೇಹದಾರ್ಢ್ಯತೆ ಬಗ್ಗೆ ಹೆಮ್ಮೆ ಇರುವವ) ಎನ್ನಲು ಶುರುಮಾಡಿದ್ದಾರೆ. ಇದು(ಪಾಂಡಾ) ನನ್ನ ಅಡ್ಡ ಹೆಸರೆಂದು ಕೆಲವರಿಗಷ್ಟೇ ಗೊತ್ತು’ ಹೇಳಿಕೊಂಡಿದ್ದಾರೆ.

‘ಆರ್‌ಸಿಬಿಯಿಂದ ನನ್ನನ್ನು ಕೈಬಿಟ್ಟದ್ದು ತುಂಬಾ ನೋವು ನೀಡಿತ್ತು. ಆದರೆ, ಅದರ ಬಗ್ಗೆಯೇ ಹೆಚ್ಚು ಚಿಂತಿಸಲಿಲ್ಲ. ಕಳೆದ ವರ್ಷ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ಪರ ಉತ್ತಮವಾಗಿ ಆಡಿದ್ದು, ನನ್ನ ವೃತ್ತಿ ಬದುಕಿನ ಅತ್ಯುತ್ತಮ ಪ್ರದರ್ಶನವಾಗಿದೆ’ ಎಂದಿರುವ ಖಾನ್‌, ಎಲ್ಲರನ್ನು ಸೆಳೆಯಲು ಇರುವ ಒಂದೇ ಅವಕಾಶವೆಂದರೆ ಉತ್ತಮ ಪ್ರದರ್ಶನ ಮಾತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, ‘ರಣಜಿ ತಂಡಕ್ಕೆ ಮರಳಿರುವುದಕ್ಕೆ ಮತ್ತು ಸಚಿನ್‌ ತೆಂಡೂಲ್ಕರ್‌, ಸುನೀಲ್‌ ಗವಾಸ್ಕರ್‌, ವಾಸೀಂ ಜಾಫರ್‌ ಮತ್ತು ರೋಹಿತ್‌ ಶರ್ಮಾ ಅವರಂತೆ ಮುಂಬೈ ಪರ ತ್ರಿಶತಕ ಬಾರಿಸಿದವರ ಪಟ್ಟಿಗೆ ಸೇರ್ಪಡೆಗೊಂಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.

ಇನಿಂಗ್ಸ್‌ ಹಿನ್ನಡೆ ತಪ್ಪಿಸಿದ್ದ ಸರ್ಫರಾಜ್ ಇನಿಂಗ್ಸ್‌
ಜನವರಿ 19 ರಿಂದ 22ರ ವರೆಗೆ ಉತ್ತರ ಪ್ರದೇಶ ತಂಡದ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ರಣಜಿ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರ ಪ್ರದೇಶ ಎಂಟು ವಿಕೆಟ್‌ ನಷ್ಟಕ್ಕೆ 625 ರನ್‌ ಗಳಿಸಿತ್ತು.

ಬಳಿಕ ಬ್ಯಾಟಿಂಗ್‌ ನಡೆಸಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 16 ರನ್‌ ಗಳಿಸುವಷ್ಟರಲ್ಲಿ 2 ವಿಕೆಟ್‌ ಪತನವಾಗಿದ್ದವು.

ಒಂದು ಹಂತದಲ್ಲಿ 124 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಮುಂಬೈ, ಫಾಲೋಆನ್‌ ಭೀತಿಗೊಳಗಾಗಿತ್ತು. ಈ ವೇಳೆ ಕ್ರೀಸ್‌ಗಿಳಿದ ಸರ್ಫರಾಜ್‌ ಖಾನ್‌ ಮೂರು ಚೆಂದದ ಜೊತೆಯಾಟಗಳಲ್ಲಿ ಭಾಗಿಯಾಗಿದ್ದರು. ಸಿದ್ದೇಶ್ ಲಾಡ್‌ (98) ಜೊತೆ ಸೇರಿ ಐದನೇ ವಿಕೆಟ್‌ಗೆ 210 ರನ್‌ ಕೂಡಿಸಿದ ಅವರು, ನಾಯಕ ಆದಿತ್ಯ ತಾರೆ (97) ಜೊತೆ ಆರನೇ ವಿಕೆಟ್‌ಗೆ 179 ರನ್‌ ಮತ್ತು ಶ್ಯಾಮ್ಸ್‌ ಮಲಾನಿ (65) ಜೊತೆ ಏಳನೇ ವಿಕೆಟ್‌ಗೆ 150 ರನ್‌ ಕೂಡಿಸಿದ್ದರು.

ಹೀಗಾಗಿ ಮುಂಬೈ 7 ವಿಕೆಟ್‌ ನಷ್ಟಕ್ಕೆ 688 ರನ್‌ ಗಳಿಸಿ ಇನಿಂಗ್ಸ್‌ ಮುನ್ನಡೆ ಸಾಧಿಸಿ ಮೂರು ಅಂಕ ಸಂಪಾದಿಸಿತ್ತು.

ಒಟ್ಟು 391 ಎಸೆತಗಳನ್ನು ಎದುರಿದ ಸರ್ಫರಾಜ್‌, 30 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಹಿತ 301 ರನ್‌ ಗಳಿಸಿ ಆಜೇಯರಾಗಿ ಉಳಿದಿದ್ದರು. ಮುಂಬೈ ಪರ ಆಡುವ ಮೊದಲು ಸರ್ಫರಾಜ್‌ ಉತ್ತರ ಪ್ರದೇಶ ತಂಡಕ್ಕೆ ಆಡುತ್ತಿದ್ದರು ಎಂಬುದು ವಿಶೇಷ. 2015ರಲ್ಲಿ ಮುಂಬೈ ವಿರುದ್ಧ 44 ರನ್‌ ಗಳಿಸಿದ್ದರು.

ಮುಂಬೈ ಪರ ಇದುವರೆಗೆ ಒಟ್ಟು ಎಂಟು ತ್ರಿಶತಕಗಳು ದಾಖಲಾಗಿವೆ. ಈ ಹಿಂದೆ ವಾಸೀಂ ಜಾಫರ್‌ (ಎರಡು ಬಾರಿ), ಸುನೀಲ್‌ ಗವಾಸ್ಕರ್‌, ಸಂಜಯ್‌ ಮಂಜ್ರೇಕರ್‌, ರೋಹಿತ್‌ ಶರ್ಮಾ, ವಿಜಯ್‌ ಮರ್ಚೆಂಟ್‌ ಹಾಗೂ ಅಜಿತ್‌ ವಾಡೇಕರ್‌ ಈ ಸಾಧನೆ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು