ಕೊಲಂಬೊ: ಜೆಫ್ರೀ ವಂಡರ್ಸೇ ಹಾಗೂ ಚರಿತ ಅಸಲಂಕ ಅವರ ಕೈಚಳಕದ ಬಲದಿಂದ ಶ್ರೀಲಂಕಾ ತಂಡ ಭಾರತಕ್ಕೆ 32 ರನ್ ಅಂತರದ ಸೋಲುಣಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿತು.
ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 241 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ತಂಡದ ಮೊತ್ತ 75 ರನ್ ಆಗುವ ಮೊದಲೇ ಅರ್ಧಶತಕ ಬಾರಿಸಿದ ಅವರು ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದರು. ಶುಭಮನ್ ಗಿಲ್ ಜೊತೆಗೂಡಿ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 97 ರನ್ ಕಲೆಹಾಕಿದರು. ಆದರೂ, ಟೀಂ ಇಂಡಿಯಾಗೆ ಗೆಲುವು ದಕ್ಕಲಿಲ್ಲ.
44 ಎಸೆತಗಳಲ್ಲಿ 64 ರನ್ ಗಳಿಸಿದ್ದ ಟೀಂ ಇಂಡಿಯಾ ನಾಯಕನನ್ನು ಎಲ್‌ಬಿ ಬಲೆಗೆ ಬೀಳಿಸಿದ ವಂಡರ್ಸೇ, ಪಂದ್ಯದ ಗತಿ ಬದಲಿಸಿದರು. ರೋಹಿತ್ ಔಟಾಗುತ್ತಿದ್ದಂತೆ, 35 ರನ್ ಗಳಿಸಿದ್ದ ಗಿಲ್, ವಿರಾಟ್ ಕೊಹ್ಲಿ (14), ಶಿವಂ ದುಬೆ (0), ಶ್ರೇಯಸ್ ಅಯ್ಯರ್ (7), ಕೆ.ಎಲ್. ರಾಹುಲ್ (0) ಅವರೂ ವಂಡರ್ಸೇ ಸ್ಪಿನ್ ಖೆಡ್ಡಾದಲ್ಲಿ ಬಿದ್ದರು.
ಕಳೆದ ಪಂದ್ಯದಲ್ಲಿ 24 ರನ್ ಗಳಿಸಿ ಔಟಾಗಿದ್ದ ಕೊಹ್ಲಿ, ದೊಡ್ಡ ಮೊತ್ತ ಪೇರಿಸಲು ಈ ಬಾರಿಯೂ ವಿಫಲರಾದರು.
ಪ್ರವಾಸಿ ಪಡೆಯ ಮೊದಲ ಆರು ವಿಕೆಟ್‌ಗಳನ್ನು ಕಬಳಿಸಿದ ವಂಡರ್ಸೇಗೆ ಮತ್ತೊಂದು ತುದಿಯಲ್ಲಿ ನಾಯಕ ಚರಿತ ಅಸಲಂಕ ಉತ್ತಮ ಸಹಕಾರ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಪ್ರತಿರೋಧ ತೋರಿದ ಅಕ್ಷರ್ ಪಟೇಲ್ (44 ರನ್) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ವಾಷಿಂಗ್ಟನ್ ಸುಂದರ್ (15) ಹಾಗೂ ಮೊಹಮ್ಮದ್ ಸಿರಾಜ್ (4) ಅವರೂ ಅಸಲಂಕಗೆ ವಿಕೆಟ್ ಒಪ್ಪಿಸಿದರು.
42.2 ಓವರ್ ಆಗಿದ್ದಾಗ ಅರ್ಶದೀಪ್ ಸಿಂಗ್ (3) ರನೌಟ್ ಆಗುವುದರೊಂದಿಗೆ ಟೀಂ ಇಂಡಿಯಾ ಇನಿಂಗ್ಸ್ 208 ರನ್‌ಗಳಿಗೆ ಕೊನೆಗೊಂಡಿತು. ರೋಹಿತ್ ಪಡೆಯ 9 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು.
ಲಂಕನ್ನರ ಚೇತರಿಕೆ ಆಟ
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಲಂಕನ್ನರಿಗೆ ವೇಗಿ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ಆರಂಭಿಕ ಬ್ಯಾಟರ್ ಪಾಥುಮ್ ನಿಸ್ಸಾಂಕ (0) ಅವರನ್ನು ಮೊದಲ ಎಸೆತದಲ್ಲೇ ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ಜೊತೆಯಾದ ಅವಿಷ್ಕ ಫರ್ನಾಂಡೊ (40) ಹಾಗೂ ಕುಶಾಲ್ ಮೆಂಡೀಸ್ (30) 2ನೇ ವಿಕೆಟ್ ಪಾಲುದಾರಿಕೆಯಲ್ಲಿ 74 ರನ್ ಗಳಿಸಿ ಆತಂಕದಿಂದ ಪಾರು ಮಾಡಿದರು. ಆದರೆ, 5 ರನ್ ಅಂತರದಲ್ಲಿ ಇವರಿಬ್ಬರೂ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಕಾಡಿದರು. ಬೆನ್ನುಬೆನ್ನಿಗೆ ವಿಕೆಟ್ ಪಡೆದು ಪೆಟ್ಟು ಕೊಟ್ಟರು. ಹೀಗಾಗಿ, ಆತಿಥೇಯರು 200ರ ಗಡಿ ದಾಟುವುದು ಅನುಮಾನವಾಗಿತ್ತು. ಆದರೆ, ಕೆಳಕ್ರಮಾಂಕದಲ್ಲಿ ದುನಿತ್ ವೆಲ್ಲಾಳಗೆ (39) ಹಾಗೂ ಕಮಿಂದು ಮೆಂಡಿಸ್ (40) ಉಪಯುಕ್ತ ಆಟವಾಡಿದರು. ಸ್ಪರ್ಧಾತ್ಮಕ ಮೊತ್ತ ಪೇರಿಸಿ ಚೇತರಿಸಿಕೊಳ್ಳಲು ನೆರವಾದರು.
ಒಟ್ಟು 31 ಓವರ್ ಬೌಲಿಂಗ್ ಮಾಡಿದ ಭಾರತದ ಸ್ಪಿನ್ನರ್‌ಗಳು 112 ರನ್ ನೀಡಿ 6 ವಿಕೆಟ್ ಉರುಳಿಸಿದರು. ಇದರಲ್ಲಿ ಸುಂದರ್ ಮೂರು, ಯಾದವ್ ಎರಡು ಹಾಗೂ ಅಕ್ಷರ್ ಒಂದು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಸಿರಾಜ್ ಪಾಲಾಯಿತು.
ಹನ್ನೊಂದರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್
ಶ್ರೀಲಂಕಾ: ಚರಿತ ಅಸಲಂಕಾ (ನಾಯಕ), ಪಾಥುಮ್ ನಿಸ್ಸಾಂಕ, ಅವಿಷ್ಕ ಫರ್ನಾಂಡೊ, ಕುಶಾಲ್ ಮೆಂಡೀಸ್, ಸದೀರ ಸಮರವಿಕ್ರಮ, ಕಮಿಂದು ಮೆಂಡಿಸ್, ಜನಿತ್ ಲಿಯನಗೆ, ದುನಿತ್ ವೆಲ್ಲಾಳಗೆ, ಅಖಿಲ ಧನಂಜಯ, ಅಶಿತ ಫರ್ನಾಂಡೊ, ಜೆಫ್ರೀ ವಂಡರ್ಸೇ
2nd ODI: Charith Asalanka won the toss and elected to bat first! #SLvIND pic.twitter.com/zlq9TC6iOE
— Sri Lanka Cricket 🇱🇰 (@OfficialSLC) August 4, 2024
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 240 (ಅವಿಷ್ಕಾ ಫರ್ನಾಂಡೊ 40, ಕುಶಾಲ ಮೆಂಡಿಸ್ 30, ಚರಿತ ಅಸಲಂಕಾ 25, ದುನಿತ್ ವೆಲಾಳಗೆ 39, ಕಮಿಂದು ಮೆಂಡಿಸ್ 40, ವಾಷಿಂಗ್ಟನ್ ಸುಂದರ್ 30ಕ್ಕೆ3, ಕುಲದೀಪ್ ಯಾದವ್ 33ಕ್ಕೆ2) ಭಾರತ: 42.2 ಓವರ್‌ಗಳಲ್ಲಿ 208 (ರೋಹಿತ್ ಶರ್ಮಾ 64, ಶುಭಮನ್ ಗಿಲ್ 35, ಅಕ್ಷರ್ ಪಟೇಲ್ 44, ಜೆಫ್ರಿ ವಾಂಡರ್ಸೆ 33ಕ್ಕೆ6, ಚರಿತ ಅಸಲಂಕಾ 20ಕ್ಕೆ3) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 32 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.