ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಅನುಷ್ಕಾ ಅವರನ್ನು ತೆಗಳಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ‘

ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್ ಸಮರ್ಥನೆ
Last Updated 25 ಸೆಪ್ಟೆಂಬರ್ 2020, 15:09 IST
ಅಕ್ಷರ ಗಾತ್ರ

ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದ ವಿರಾಟ್‌ ಕೊಹ್ಲಿ ಅವರ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್ ‌ ಅವರು ಟೀಕೆ ವ್ಯಕ್ತಪಡಿಸಿದ್ದರು. ಟೀಕಿಸುವ ಭರದಲ್ಲಿ ವಿರಾಟ್‌ ಪತ್ನಿ ಅನುಶ್ಕಾ ಶರ್ಮಾ ಅವರ ಹೆಸರನ್ನೂ ಎಳೆದು ತಂದಿದ್ದರಿಂದ ಗಾವಸ್ಕರ್ ‌ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ಆರ್‌ಸಿಬಿ ವಿರುದ್ಧ ಭರ್ಜರಿ ಶತಕ (132 ರನ್‌) ಸಿಡಿಸಿದ್ದ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್90 ರನ್‌ ಆಸುಪಾಸಿನಲ್ಲಿದ್ದಾಗ ನೀಡಿದ ಎರಡು ಕ್ಯಾಚ್‌ಗಳನ್ನು ವಿರಾಟ್‌ ನೆಲಕ್ಕೆ ಹಾಕಿದ್ದರು. ಇದರ ಪರಿಣಾಮವಾಗಿ ಪಂಜಾಬ್‌ ತಂಡ 206 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ ಕೇವಲ 109 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 107 ರನ್‌ಗಳ ಸೋಲು ಒಪ್ಪಿಕೊಂಡಿತ್ತು. ಕೊಹ್ಲಿ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದರು.

ಪಂದ್ಯದ ವೀಕ್ಷಕ ವಿವರಣೆ ವೇಳೆಗಾವಸ್ಕರ್ ‌, ‘ಲಾಕ್‌ಡೌನ್‌ ವೇಳೆ ಕೊಹ್ಲಿ ಕೇವಲ ಅನುಷ್ಕಾ ಅವರ ಬೌಲಿಂಗ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಇದಕ್ಕೂ ಮೀರಿ ಇನ್ನೇನೂ ಮಾಡಲಾಗದು’ ಎಂದು ಹೇಳಿದ್ದರು. ಹೀಗಾಗಿ ಗರಂ ಆಗಿರುವ ಕೊಹ್ಲಿ ಮತ್ತು ಅನುಷ್ಕಾ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಾವಸ್ಕರ್ ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸುನೀಲ್‌ ಗಾವಸ್ಕರ್ ‌ಅವರನ್ನು ಕಾಮೆಂಟರಿ ಬಾಕ್ಸ್‌ನಿಂದ ಹೊರಹಾಕಬೇಕು’ ಎಂದು ಕೆಲವರು ಬಿಸಿಸಿಐಗೆ ಒತ್ತಾಯಿಸಿದ್ದರೆ, ಇನ್ನೂ ಕೆಲವರು ‘ಬೇರೆ ಆಟಗಾರರು ವೈಫಲ್ಯ ಅನುಭವಿಸಿದಾಗ ಯಾರೊಬ್ಬರೂ ಅವರ ಪತ್ನಿಯರ ಬಗ್ಗೆ ಮಾತನಾಡುವುದಿಲ್ಲ. ಕೊಹ್ಲಿ ವಿಫಲರಾದಾಗ ಮಾತ್ರ ಅನುಷ್ಕಾ ಅವರನ್ನು ಎಳೆದು ತರಲಾಗುತ್ತದೆ. ಕೊಹ್ಲಿಯನ್ನು ಟಾರ್ಗೆಟ್‌ ಮಾಡುವುದೇಕೆ?’ ಎಂದು ಪ್ರಶ್ನಿಸಿದ್ದಾರೆ.

ಅನುಷ್ಕಾ ಶರ್ಮಾ ದೂಷಣೆಗೆ ಒಳಗಾಗುತ್ತಿರುವುದು ಇದೇ ಮೊದಲೇನೇಲ್ಲ. ಕೊಹ್ಲಿ ವೈಫಲ್ಯ ಅನುಭವಿಸಿದಾಗಲೆಲ್ಲಾ ಅನುಷ್ಕಾ ಅವರನ್ನು ದೂರುವ ಪ್ರಯತ್ನಗಳು ಈಗಾಗಲೇ ಸಾಕಷ್ಟು ಬಾರಿ ನಡೆದಿವೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಗಾವಸ್ಕರ್ ‌, ನನ್ನ ಹೇಳಿಕೆಯನ್ನು ತಿರುಚಲಾಗಿದೆ.ಜನರು ನನ್ನ ಹೇಳಿಕೆಯನ್ನು ಸಂಪೂರ್ಣ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊಹ್ಲಿ ಶತಕ ಗಳಿಸಿದಾಗ ಅದರ ಕ್ರೆಡಿಟ್‌ ಅನ್ನು ಯಾರೊಬ್ಬರೂ ಅನುಷ್ಕಾ ಶರ್ಮಾ ಅವರಿಗೆನೀಡುವುದಿಲ್ಲ. ಈ ವಿಚಾರವನ್ನು ಹೇಳಿದವರಲ್ಲಿ ಮೊದಲಿಗ ನಾನು ಎಂದು ಸಮರ್ಥಿಸಿಕೊಂಡಿದ್ದಾರೆ. ವಿದೇಶಿ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಪತ್ನಿಯರು ಮತ್ತು ಗೆಳತಿಯರು ಆಟಗಾರರೊಂದಿಗೆ ಪ್ರವಾಸ ಕೈಗೊಳ್ಳುವುದಕ್ಕೆ ಅವಕಾಶ ನೀಡಬೇಕು ಎಂಬುದನ್ನು ನಾನು ಯಾವಾಗಲೂ ಬೆಂಬಲಿಸಿದ್ದೇನೆ. ಏಕೆಂದರೆ ಕ್ರಿಕೆಟ್‌ ಕೂಡ ಬೇರೆ ವೃತ್ತಿಯಂತೆಯೇ ಎಂದು ಹೇಳಿದ್ದಾರೆ.

‘ನೀವು ವೀಕ್ಷಕವಿವರಣೆ ವೇಳೆ ಕೇಳಿದಂತೆ, ನಾನು ಮತ್ತು ಆಕಾಶ್ ಹಿಂದಿ ವಾಹಿನಿಗಾಗಿ ವೀಕ್ಷಕ ವಿವರಣೆ ನೀಡಿದ್ದೆವು. ಆಕಾಶ್‌ ಅವರು ಆಟಗಾರರು ಸೂಕ್ತ ರೀತಿಯ ಅಭ್ಯಾಸ ಮಾಡಲು ಸಾಕಷ್ಟು ಸಮಯ ದೊರೆತಿಲ್ಲ ಎಂದು ಹೇಳಿದರು. ಅದರಿಂದಾಗಿಯೇ ಕೆಲ ಆಟಗಾರರು ತಮ್ಮ ಮೊದಲ ಪಂದ್ಯದ ವೇಳೆ ಉತ್ಸಾಹದಿಂದ ಆಡದೆ ಇದ್ದದ್ದು ಕಂಡು ಬಂತು.ಮೊದಲ ಪಂದ್ಯದಲ್ಲಿ ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಅವರು ಸರಿಯಾಗಿ ಚೆಂಡನ್ನು ಬಾರಿಸುತ್ತಿರಲಿಲ್ಲ. ವಿರಾಟ್‌ ಕೂಡ ಅದೇ ರೀತಿ ಆಡಿದರು. ಅಭ್ಯಾಸದ ಕೊರತೆಯಿಂದಾಗಿಸಾಕಷ್ಟು ಬ್ಯಾಟ್ಸ್‌ಮನ್‌ಗಳು ಹೀಗೆಯೇ ಆಡಿದ್ದರು’

‘ಅದನ್ನು ಉದ್ದೇಶಿಸಿ ಮಾತನಾಡಿದ್ದೆ. ವಿರಾಟ್‌ ಕೂಡ ಸಾಕಷ್ಟು ಅಭ್ಯಾಸ ನಡೆಸಿಲ್ಲ ಎನ್ನುತ್ತಾ, ಅನುಷ್ಕಾ ಅವರ ಜೊತೆಗೆ ಕ್ರಿಕೆಟ್ ಆಡಿದ್ದ ಸಂದರ್ಭವನ್ನು ಕುರಿತು ಮಾತನಾಡಿದ್ದೆ. ವಿರಾಟ್‌ಗೆ ಅನುಷ್ಕಾ ಬೌಲಿಂಗ್‌ ಮಾಡಿದ್ದರು. ನಾನು ಕೇವಲ ಬೌಲಿಂಗ್‌ ಬಗ್ಗೆ ಹೇಳಿದ್ದೆ. ಬೇರೆ ಒಂದೇಒಂದು ಪದವನ್ನೂ ಮಾತನಾಡಿರಲಿಲ್ಲ. ನಾನು ಎಲ್ಲಿ ಅನುಷ್ಕಾರನ್ನು ತೆಗಳಿದೆ? ನಾನು ಸೆಕ್ಸಿಸ್ಟ್‌ ಹೇಳಿಕೆ ನೀಡಿದ್ದೆಲ್ಲಿ? ನಾನು ಕೇವಲ ವಿಡಿಯೊದಲ್ಲಿ ನೋಡಿದ್ದನ್ನಷ್ಟೇ ಹೇಳಿದ್ದೆ’ ಎಂದು ವಿವರಿಸಿದ್ದಾರೆ. ಅನುಷ್ಕಾ ಮತ್ತು ವಿರಾಟ್‌ ಕೊಹ್ಲಿ ಲಾಕ್‌ಡೌನ್ ವೇಳೆ ಕ್ರಿಕೆಟ್‌ ಆಡುವ ವಿಡಿಯೊವೊಂದು ವೈರಲ್‌ ಆಗಿತ್ತು.

‘ನಾನು ಮೊತ್ತೊಮ್ಮೆ ಕೇಳಲು ಬಯಸುತ್ತೇನೆ. ನಾನೆಲ್ಲಿ ಅವರನ್ನು ತೆಗಳಿದೆ? ನಾನು ಅವರನ್ನು ತೆಗಳಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT