T20 WC: ಗೆದ್ದು ಸೋತ ದ.ಆಫ್ರಿಕಾ; ಇಂಗ್ಲೆಂಡ್, ಆಸೀಸ್ ಸೆಮಿಫೈನಲ್‌ಗೆ ಲಗ್ಗೆ

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 10 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಹೊರತಾಗಿಯೂ ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ.
ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಸಮಾನ ಎಂಟು ಅಂಕಗಳನ್ನು ಕಲೆ ಹಾಕಿದೆ. ಆದರೆ ದಕ್ಷಿಣ ಆಫ್ರಿಕಾಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಂಡಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿವೆ.
ಇದನ್ನೂ ಓದಿ: ಬ್ರಾವೊಗೆ ವಿದಾಯ; ವಿಕೆಟ್ ಪಡೆದ ಖುಷಿಯಲ್ಲಿ ಮಾರ್ಶ್ರನ್ನು ತಬ್ಬಿಕೊಂಡ ಗೇಲ್
ಇದರೊಂದಿಗೆ ದಕ್ಷಿಣ ಆಫ್ರಿಕಾದ ವಿಶ್ವಕಪ್ ಅಭಿಯಾನವು ಕೊನೆಗೊಂಡಿದೆ. ಅಲ್ಲದೆ ರಸ್ಸಿ ವ್ಯಾನ್ ಡೆರ್ ಡುಸೆನ್ ಹಾಗೂ 'ಹ್ಯಾಟ್ರಿಕ್' ವೀರ ಕಗಿಸೊ ರಬಾಡ ಹೋರಾಟವು ವ್ಯರ್ಥವೆನಿಸಿದೆ.
South Africa fail to qualify for the semis but end their campaign on a high 🙌#T20WorldCup | #ENGvSA | https://t.co/5QisNAvEL6 pic.twitter.com/VPgBs6u2cJ
— T20 World Cup (@T20WorldCup) November 6, 2021
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ರಸ್ಸಿ ವ್ಯಾನ್ ಡೆರ್ ಡುಸೆನ್ (94*) ಹಾಗೂ ಏಡೆನ್ ಮಾರ್ಕರಮ್ (52*) ಬಿರುಸಿನ ಅರ್ಧಶತಕಗಳ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 189 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಅಲ್ಲದೆ ಸೆಮಿಫೈನಲ್ ಪ್ರವೇಶಿಸಲು ಎದುರಾಳಿ ಇಂಗ್ಲೆಂಡ್ ತಂಡವನ್ನು ಗರಿಷ್ಠ 131 ರನ್‌ಗಳಿಗೆ ನಿಯಂತ್ರಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಇನ್ನೊಂದೆಡೆ ಸೆಮಿಫೈನಲ್ ತಲುಪಲು ಇಂಗ್ಲೆಂಡ್ 87 ರನ್ ಗಳಿಸಬೇಕಿತ್ತು. ಅಂತಿಮವಾಗಿ ಇಂಗ್ಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು. ಇದರಿಂದಾಗಿ ಪಂದ್ಯ ಗೆದ್ದರೂ ದಕ್ಷಿಣ ಆಫ್ರಿಕಾದ ವಿಶ್ವಕಪ್ ಕನಸು ನೂಚ್ಚುನೂರುಗೊಂಡಿದೆ.
ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ಎದುರಾದ ಮೊದಲ ಸೋಲು ಇದಾಗಿದೆ. ಅಲ್ಲದೆ +2.464 ರನ್ ರೇಟ್‌ನೊಂದಿಗೆ ಗ್ರೂಪ್ 1ರ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಅತ್ತ ಆಸ್ಟ್ರೇಲಿಯಾ +1.216 ರನ್ ರೇಟ್‌ನೊಂದಿಗೆ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ರನ್ ರೇಟ್ (+0.739) ಆಗಿದ್ದು, ಸೆಮಿಫೈನಲ್ ರೇಸ್‌ನಲ್ಲಿ ಹಿಂದೆ ಬಿದ್ದಿದೆ.
☝️ Woakes
☝️ Morgan
☝️ JordanA hat-trick for Kagiso Rabada 👏#T20WorldCup | #ENGvSA | https://t.co/5QisNAvEL6 pic.twitter.com/5e0r6lIqpN
— T20 World Cup (@T20WorldCup) November 6, 2021
ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ಗೆ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‌ಗೆ ಅರ್ಧಶತಕದ (58) ಜೊತೆಯಾಟ ನೀಡಿದರು. ಈ ಹಂತದಲ್ಲಿ 20 ರನ್ ಗಳಿಸಿದ ರಾಯ್ ಗಾಯದಿಂದಾಗಿ ನಿವೃತ್ತಿ ಹೊಂದಿದರು. ಬೆನ್ನಲ್ಲೇ ಬಟ್ಲರ್ (26 ರನ್) ಹಾಗೂ ಜಾನಿ ಬೆಸ್ಟೊ (1) ವಿಕೆಟ್ ನಷ್ಟವಾಯಿತು.
ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ (37) ಹಾಗೂ ಡೇವಿಡ್ ಮಲಾನ್ (33) ರನ್ ಗತಿ ಕುಸಿಯದಂತೆ ನೋಡಿಕೊಂಡರು. ಕೊನೆಯ ಹಂತದಲ್ಲಿ ಲಯಮ್ ಲಿವಿಂಗ್‌ಸ್ಟೋನ್ (28) ಹಾಗೂ ನಾಯಕ ಏಯಾನ್ ಮಾರ್ಗನ್ (17) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.
ಆದರೆ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಕಗಿಸೊ ರಬಾಡ ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಇನ್ನುಳಿದಂತೆ ಡ್ವೇಯ್ನ್ ಪ್ರೆಟೋರಿಯಸ್ ಹಾಗೂ ತಬ್ರೈಜ್ ಶಮ್ಸಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಈ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ದಕ್ಷಿಣ ಆಫ್ರಿಕಾಗೆ ಆರಂಭದಲ್ಲೇ ರೀಜಾ ಹೆಂಡ್ರಿಕ್ಸ್ (2) ವಿಕೆಟ್ ನಷ್ಟವಾಯಿತು. ಈ ಹಂತದಲ್ಲಿ ಜೊತೆಗೂಡಿದ ಕ್ವಿಂಟನ್ ಡಿ ಕಾಕ್ (34) ಹಾಗೂ ಡುಸೆನ್ ಎರಡನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಕ್ವಿಂಟನ್ ವಿಕೆಟ್ ಪತನದ ಬಳಿಕ ಮಾರ್ಕರಮ್ ಜೊತೆಗೂಡಿದ ಡುಸೆನ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಆಂಗ್ಲರ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಸ್ಫೋಟಕ ಆಟವಾಡುವ ಮೂಲಕ ಮನರಂಜಿಸಿದರು.
ಅಲ್ಲದೆ ಮುರಿಯದ ಮೂರನೇ ವಿಕೆಟ್‌ಗೆ ಶತಕದ (103*)ಜೊತೆಯಾಟವನ್ನು ನೀಡಿದರು. 60 ಎಸೆತಗಳನ್ನು ಎದುರಿಸಿದ ಡುಸನ್ ಆರು ಭರ್ಜರಿ ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದ 94 ರನ್ ಗಳಿಸಿ ಔಟಾಗದೆ ಉಳಿದರು.
ಡುಸೆನ್‌ಗೆ ತಕ್ಕ ಸಾಥ್ ನೀಡಿದ ಮಾರ್ಕರಮ್ 25 ಎಸೆತಗಳಲ್ಲಿ 52 ರನ್ ಗಳಿಸಿ (4 ಸಿಕ್ಸರ್, 2 ಬೌಂಡರಿ) ಅಜೇಯರಾಗುಳಿದರು. ಅಂತಿಮವಾಗಿ ಎರಡು ವಿಕೆಟ್ ನಷ್ಟಕ್ಕೆ 189 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.