ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ಅಮೆರಿಕಕ್ಕೆ 5 ರನ್ ಪೆನಾಲ್ಟಿ, ಅರ್ಷದೀಪ್ ದಾಖಲೆ, ಕೊಹ್ಲಿ ಗೋಲ್ಡನ್ ಡಕ್

Published 13 ಜೂನ್ 2024, 9:43 IST
Last Updated 13 ಜೂನ್ 2024, 9:43 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ವಿರುದ್ಧ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿದೆ. ಅರ್ಷದೀಪ್ ಸಿಂಗ್ (9ಕ್ಕೆ 4 ವಿಕೆಟ್) ದಾಳಿಗೆ ಸಿಲುಕಿದ ಅಮೆರಿಕ ಎಂಟು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಗುರಿ ಬೆನ್ನಟ್ಟಿದ್ದ ಭಾರತ ಇನ್ನೂ 10 ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸೂರ್ಯಕುಮಾರ್ ಯಾದವ್ ಅಜೇಯ 50 ರನ್ ಗಳಿಸಿದರು.

ಸತತ 3ನೇ ಗೆಲುವು, ಭಾರತ ಸೂಪರ್ 8ಕ್ಕೆ ಲಗ್ಗೆ

'ಎ' ಗುಂಪಿನಲ್ಲಿ ಸತತ ಮೂರನೇ ಗೆಲುವು ದಾಖಲಿಸಿರುವ ರೋಹಿತ್ ಶರ್ಮಾ ಬಳಗವು ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿದೆ. ಗುಂಪು ಹಂತದಲ್ಲಿ ಭಾರತ ತನ್ನ ಕೊನೆಯ ಪಂದ್ಯದಲ್ಲಿ ಶನಿವಾರ ಕೆನಡಾ ವಿರುದ್ಧ ಆಡಲಿದೆ.

  • ಮೊದಲ ಪಂದ್ಯ: ಐರ್ಲೆಂಡ್ ವಿರುದ್ಧ 8 ವಿಕೆಟ್ ಜಯ

  • 2ನೇ ಪಂದ್ಯ: ಪಾಕಿಸ್ತಾನ ವಿರುದ್ಧ 6 ರನ್ ಜಯ

  • 3ನೇ ಪಂದ್ಯ: ಅಮೆರಿಕ ವಿರುದ್ಧ ಏಳು ವಿಕೆಟ್ ಜಯ

ಅರ್ಷದೀಪ್ ದಾಖಲೆ...

ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಅಮೆರಿಕದ ಬ್ಯಾಟರ್ ಜಹಾಂಗೀರ್ ಅವರನ್ನು ಅರ್ಷದೀಪ್ ಹೊರದಬ್ಬಿದರು. ಆ ಮೂಲಕ ಟ್ವೆಂಟಿ-20 ವಿಶ್ವಕಪ್ ಪಂದ್ಯವೊಂದರ ಪ್ರಥಮ ಎಸೆತದಲ್ಲೇ ವಿಕೆಟ್ ಗಳಿಸಿದ ಭಾರತದ ಮೊದಲ ಬೌಲರ್ ಎನಿಸಿದರು.

ಅಲ್ಲದೆ ಮೊದಲ ಓವರ್‌ನಲ್ಲಿ ಅರ್ಷದೀಪ್ ಎರಡು ವಿಕೆಟ್‌ಗಳ ಸಾಧನೆ ಮಾಡಿದರು. ಅಷ್ಟೇ ಯಾಕೆ ನಿಖರ ದಾಳಿ ಸಂಘಟಿಸಿದ ಅರ್ಷದೀಪ್ ನಾಲ್ಕು ಓವರ್‌ಗಳಲ್ಲಿ ಒಂಬತ್ತು ರನ್ ಮಾತ್ರ ಬಿಟ್ಟುಕೊಟ್ಟು ನಾಲ್ಕು ವಿಕೆಟ್ ಕಬಳಿಸಿದರು.

ಇದು ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಬೌಲರ್‌ನ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಈ ಹಿಂದೆ 2014ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರವಿಚಂದ್ರನ್ ಅಶ್ವಿನ್ 11 ರನ್‌ಗೆ ನಾಲ್ಕು ವಿಕೆಟ್ ಕಬಳಿಸಿದ್ದರು.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಷದೀಪ್ ಅವರ ಶ್ರೇಷ್ಠ ಬೌಲಿಂಗ್ ಸಾಧನೆ ಕೂಡ ಇದಾಗಿದೆ. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಅರ್ಷದೀಪ್ ಸಿಂಗ್

ಅರ್ಷದೀಪ್ ಸಿಂಗ್

(ಪಿಟಿಐ ಚಿತ್ರ)

ನ್ಯೂಯಾರ್ಕ್‌ನಲ್ಲಿ ಗರಿಷ್ಠ ರನ್ ಚೇಸಿಂಗ್...

ನ್ಯೂಯಾರ್ಕ್ ಮೈದಾನದಲ್ಲಿ ಗರಿಷ್ಠ ರನ್ ಚೇಸಿಂಗ್ ಮಾಡಿದ ಹಿರಿಮೆಗೆ ಟೀಮ್ ಇಂಡಿಯಾ ಪಾತ್ರವಾಯಿತು. ಇಲ್ಲಿನ ಡ್ರಾಪ್ ಇನ್ ಪಿಚ್‌ನಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದು, ಬ್ಯಾಟರ್‌ಗಳಿಗೆ ರನ್ ಗಳಿಸುವುದು ಕಷ್ಟಕರವೆನಿಸಿತ್ತು. ಅಮೆರಿಕ ವಿರುದ್ಧ ಭಾರತ ಪ್ರಯಾಸದ ಗೆಲುವು ದಾಖಲಿಸಿತು.

ಅಮೆರಿಕಕ್ಕೆ 5 ರನ್ ಪೆನಾಲ್ಟಿ...

ಫೀಲ್ಡಿಂಗ್ ವೇಳೆ ಓವರ್‌ಗಳ ನಡುವೆ ಮೂರು ಸಲ ನೂತನ ಓವರ್ ಆರಂಭಿಸಲು 60 ಸೆಕೆಂಡಿಗೂ ಹೆಚ್ಚು ಸಮಯ ವ್ಯಯ ಮಾಡಿದ ಅಮೆರಿಕಕ್ಕೆ ಅಂಪೈರ್‌, ಐದು ರನ್‌ಗಳ ಪೆನಾಲ್ಟಿ (ದಂಡ) ವಿಧಿಸಿದರು. ಇದರ ಲಾಭ ಪಡೆದ ಭಾರತ ಐದು ರನ್ ಗಳಿಸಿತು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಟದ ವೇಗವನ್ನು ಹೆಚ್ಚಿಸಲು ಐಸಿಸಿ ಹೊಸತಾದ 'ಸ್ಟಾಪ್-ಕ್ಲಾಕ್' ನಿಯಮವನ್ನು ಪರಿಚಯಿಸಿತ್ತು. ಅಲ್ಲದೆ ಈ ನಿಯಮದ ಅಡಿಯಲ್ಲಿ ದಂಡನೆಗೆ ಒಳಗಾದ ಮೊದಲ ತಂಡವೆಂಬ ಅಪಖ್ಯಾತಿಗೆ ಅಮೆರಿಕ ಒಳಗಾಯಿತು.

16ನೇ ಓವರ್ ಆರಂಭದ ವೇಳೆ ಅಂಪೈರ್, ಅಮೆರಿಕಕ್ಕೆ ದಂಡ ವಿಧಿಸಿದರು. ಈ ವೇಳೆ ಭಾರತದ ಗೆಲುವಿಗೆ 35 ರನ್‌ಗಳ ಅವಶ್ಯಕತೆಯಿತ್ತು. ಪೆನಾಲ್ಟಿ ರೂಪದಲ್ಲಿ ಐದು ರನ್ ಪಡೆದ ಭಾರತದ ಗುರಿ 30ಕ್ಕೆ ಇಳಿಕೆಯಾಯಿತು.

ಅಮೆರಿಕ ವಿರುದ್ಧ ಭಾರತಕ್ಕೆ ಗೆಲುವು

ಅಮೆರಿಕ ವಿರುದ್ಧ ಭಾರತಕ್ಕೆ ಗೆಲುವು

(ಪಿಟಿಐ ಚಿತ್ರ)

ಕೊಹ್ಲಿ 'ಗೋಲ್ಡನ್ ಡಕ್'...

ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಮಗದೊಮ್ಮೆ ನಿರಾಸೆ ಮೂಡಿಸಿದರು. ಐರ್ಲೆಂಡ್ ವಿರುದ್ಧ ಒಂದು ರನ್ ಹಾಗೂ ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿ ಔಟ್ ಆಗಿದ್ದ ಕೊಹ್ಲಿ ನಿರಾಸೆ ಮೂಡಿಸಿದ್ದರು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಕೊಹ್ಲಿ ಕಳಪೆ ಪ್ರದರ್ಶನ ಮುಂದುವರಿದಿದೆ.

ರೋಹಿತ್, ಕೊಹ್ಲಿ ವಿಕೆಟ್ ಗಳಿಸಿದ ನೇತ್ರವಾಲ್ಕರ್

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್ ಗಳಿಸುವ ಮೂಲಕ ಅಮೆರಿಕ ತಂಡದಲ್ಲಿ ಭಾರತ ಮೂಲದ ವೇಗದ ಬೌಲರ್ ಸೌರಭ್ ನೇತ್ರವಾಲ್ಕರ್ ಮಗದೊಮ್ಮೆ ಗಮನ ಸೆಳೆದಿದ್ದಾರೆ. ಪಾಕಿಸ್ತಾನ ವಿರುದ್ಧ 'ಸೂಪರ್ ಓವರ್' ಗೆಲುವಿನಲ್ಲೂ ನೇತ್ರವಾಲ್ಕರ್ ಮಹತ್ವದ ಪಾತ್ರ ವಹಿಸಿದ್ದರು. ನೇತ್ರವಾಲ್ಕರ್ 2010ರಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು.

ಸೂರ್ಯಕುಮಾರ್ ಫಿಫ್ಟಿ ಸಾಧನೆ...

ಸಮಯೋಚಿತ ಅರ್ಧಶತಕ ಗಳಿಸಿದ ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಲ್ಲದೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 50ನೇ ಸಲ ಅರ್ಧಶತಕದ ಸಾಧನೆ ಮಾಡಿದ್ದಾರೆ.

ಸೂರ್ಯಕುಮಾರ್ 49 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ನಿಧಾನಗತಿಯ ಅರ್ಧಶತಕವಾಗಿದೆ.

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್

(ಪಿಟಿಐ ಚಿತ್ರ)

ಪಂದ್ಯದ ಹೈಲೈಟ್ಸ್ ವೀಕ್ಷಿಸಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT