ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಸ್ಪೈಡರ್‌ಕ್ಯಾಮ್ ಬಳಕೆಯ ಅಗತ್ಯವಿದೆಯೇ?

ಮೆಲ್ಬರ್ನ್: ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಳೆ ಸ್ಪೈಡರ್‌ಕ್ಯಾಮ್ ಬಳಕೆಯ ಅಗತ್ಯವಿದೆಯೇ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಭಾರತ– ಪಾಕಿಸ್ತಾನ ನಡುವಣ ಭಾನುವಾರ ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದ ವೇಳೆ ಚೆಂಡು ಸ್ಪೈಡರ್‌ಕ್ಯಾಮ್‌ನ ಕೇಬಲ್‌ಗೆ ಬಡಿದದ್ದು ಈ ಕುರಿತು ಚರ್ಚೆ ಶುರುವಾಗಲು ಕಾರಣ.
ಪಾಕಿಸ್ತಾನದ ಬ್ಯಾಟರ್ ಶಾನ್ ಮಸೂದ್ ಅವರು ಮುಗಿಲೆತ್ತರಕ್ಕೆ ಹೊಡೆದ ಚೆಂಡು ಸ್ಪೈಡರ್‌ಕ್ಯಾಮ್‌ನ ಕೇಬಲ್‌ಗೆ ಬಡಿದು ದಿಕ್ಕು ಬದಲಿಸಿತ್ತು. ಇಲ್ಲದಿದ್ದರೆ ವಿರಾಟ್ ಕೊಹ್ಲಿಗೆ ಸುಲಭ ಕ್ಯಾಚ್ ಆಗುವ ಸಾಧ್ಯತೆಯಿತ್ತು. ಚೆಂಡು ಕೇಬಲ್‌ಗೆ ಬಡಿದ ಕಾರಣ ಮಸೂದ್‌ಗೆ ಒಂದು ರೀತಿಯಲ್ಲಿ ಜೀವದಾನ ಲಭಿಸಿತ್ತು. ಅಂಪೈರ್ ಆ ಎಸೆತವನ್ನು ‘ಡೆಡ್‌ಬಾಲ್’ ಎಂದು ಘೋಷಿಸಿದ್ದರು.
ಆಟದ ದೃಶ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಟಿ.ವಿ ವೀಕ್ಷಕರ ಮುಂದಿಡುವ ಉದ್ದೇಶದಿಂದ 10 ವರ್ಷಗಳ ಹಿಂದೆ ಸ್ಪೈಡರ್‌ಕ್ಯಾಮ್ ಬಳಕೆ ಆರಂಭವಾಗಿತ್ತು. 2007 ರಲ್ಲಿ ರೆಬೆಲ್ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ ಮೊದಲ ಬಾರಿ ಇದರ ಬಳಕೆ ನಡೆದರೆ, 2010 ರಿಂದ ಐಪಿಎಲ್‌ನಲ್ಲೂ ಬಳಕೆ ಶುರುವಾಯಿತು. ಆ ಬಳಿಕ ಐಸಿಸಿ ಟೂರ್ನಿಗಳಲ್ಲೂ ಇದರ ಬಳಕೆ ಆರಂಭವಾಯಿತು.
ಈ ತಂತ್ರಜ್ಞಾನದ ಬಳಕೆಯ ಬಗ್ಗೆ ಹಿಂದೆಯೂ ಹಲವು ಸಲ ಪರ–ವಿರೋಧ ಚರ್ಚೆ ನಡೆದಿತ್ತು. 2014–15 ರಲ್ಲಿ ಭಾರತ– ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಪಂದ್ಯದಲ್ಲಿ ಕ್ಯಾಮರಾ ಕೇಬಲ್ ಅಡ್ಡಬಂದ ಕಾರಣ ಸ್ಟೀವ್ ಸ್ಮಿತ್ ಕ್ಯಾಚ್ ಕೈಚೆಲ್ಲಿದ ಘಟನೆ ನಡೆದಿತ್ತು.
‘ಅದೃಷ್ಟವು ಶಾನ್ ಮಸೂದ್ ಜತೆಗಿತ್ತು. ಆರಂಭದಲ್ಲಿ ರನೌಟ್‌ನಿಂದ ಬಚಾವಾಗಿದ್ದರು. ಆ ಬಳಿಕ ಕ್ಯಾಚ್ ಔಟ್ ಆಗುವುದರಿಂದ ಅಲ್ಪದರದಲ್ಲೇ ಪಾರಾಗಿದ್ದರು. ಅಷ್ಟು ಮಾತ್ರವಲ್ಲದೆ, ಸ್ಪೈಡರ್‌ಕ್ಯಾಮ್ ಕೂಡಾ ಅವರ ನೆರವಿಗೆ ನಿಂತಿತು’ ಎಂದು ಕ್ರಿಕೆಟ್ ಪ್ರೇಮಿಯೊಬ್ಬರು ‘ಟ್ವೀಟ್’ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮಸೂದ್ ಅವರು 42 ಎಸೆತಗಳಲ್ಲಿ 52 ರನ್ ಗಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.