ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ವಿಶ್ವಕಪ್: ಪಾಪುವಾ ನ್ಯೂಗಿನಿ ವಿರುದ್ಧ ವಿಂಡೀಸ್‌ಗೆ ಪ್ರಯಾಸದ ಜಯ

Published 2 ಜೂನ್ 2024, 14:17 IST
Last Updated 2 ಜೂನ್ 2024, 14:17 IST
ಅಕ್ಷರ ಗಾತ್ರ

ಗಯಾನ: ಎರಡು ಬಾರಿಯ ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ‌ತಂಡವು ಭಾನುವಾರ ಪಾಪುವಾ ನ್ಯೂಗಿನಿ ಎದುರಿನ ಪಂದ್ಯದಲ್ಲಿ ಪ್ರಯಾಸದ ಜಯ ಸಾಧಿಸಿತು.

ಆ್ಯಂಡ್ರೆ ರಸೆಲ್ (19ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ರಾಸ್ಟನ್ ಚೇಸ್ (ಅಜೇಯ 42, 27ಎ, 4X4, 6X2) ಅವರ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಪುವಾ ನ್ಯೂಗಿನಿ ತಂಡದ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತು.

ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಸೆಸೆ ಬಾವ್ (50; 43ಎ, 4X6, 6X1) ಅವರ ದಿಟ್ಟ ಆಟದಿಂದ ನ್ಯೂಗಿನಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 136 ರನ್‌ ಗಳಿಸಿತು. 

ಈ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ್ದ ವಿಂಡೀಸ್ ತಂಡವು ಬ್ರೆಂಡನ್ ಕಿಂಗ್‌ (34, 29ಎ) ಹಾಗೂ ರಾಸ್ಟನ್ ಚೇಸ್‌ ಅವರ ತಾಳ್ಮೆಯ ಆಟದ ನೆರವಿನಿಂದ ಇನ್ನೂ ಆರು ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್‌ಗೆ 137 ರನ್‌ ಗಳಿಸಿ ಜಯ ಸಾಧಿಸಿತು.

ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿರುವ ವಿಂಡೀಸ್ ತಂಡವು ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ನ್ಯೂಗಿನಿ ತಂಡದ ವೇಗಿ ಅಲೀ ನಾವೋ ಅವರು ಆರಂಭಿಕ ಆಟಗಾರ ಜಾನ್ಸನ್‌ ಚಾರ್ಲ್ಸ್ ಅವರಿಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ.

ಬ್ರೆಂಡನ್ ಕಿಂಗ್ ಮತ್ತು ನಿಕೂಲಸ್ ಪೂರನ್ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 50 ರನ್ ಸೇರಿಸಿದರು. ನಾಯಕ ಅಸಾದ್ ವಾಲಾ ಅವರು ಕಿಂಗ್ ಹಾಗೂ ಶರ್ಫೆನ್ ರುದರ್‌ಫೋರ್ಡ್‌ ಅವರ ವಿಕೆಟ್ ಪಡೆದರು. 

ಒಂದು ಹಂತದಲ್ಲಿ 97 ರನ್‌ಗೆ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.  ಮಧ್ಯಮ ಕ್ರಮಾಂಕದ ರಾಸ್ಟನ್ ಚೇಸ್‌ ಅವರು ತಾಳ್ಮೆಯ ಆಟವಾಡಿ  27 ಎಸೆತಗಳಲ್ಲಿ 42 ರನ್‌ ಗಳಿಸಿ ಗೆಲುವಿಗೆ ಕಾಣಿಕೆ ನೀಡಿದರು. ಅಲ್‌ರೌಂಡರ್ ಆ್ಯಂಡ್ರೆ ರಸೆಲ್ (ಅಜೇಯ 15, 9ಎ)  ಮಿಂಚಿದರು. 

ಮೊದಲು ಬ್ಯಾಟಿಂಗ್ ಮಾಡಿದ ಕ್ರಿಕೆಟ್‌ ಲೋಕದ ‘ಕೂಸು‘ ಪಾಪುವಾ ನ್ಯೂಗಿನಿ ತಂಡವು 50 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಸೆಸೆ ಬಾವ್ ಚೆಂದದ ಅರ್ಧಶತಕ ಗಳಿಸಿ, ವೆಸ್ಟ್‌ ಇಂಡೀಸ್ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. 

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಸೆಸೆ ತಂಡಕ್ಕೆ ಆಸರೆಯಾದರು. 31 ವರ್ಷದ ಸೆಸೆ ಅವರ ಆಟದಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದು ತಪ್ಪಿತು. 

17ನೇ ಓವರ್‌ನಲ್ಲಿ ಅಲ್ಝರಿ ಜೋಸೆಫ್ ಎಸೆತದಲ್ಲಿ ಅವರು ಕ್ಲೀನ್‌ ಬೌಲ್ಡ್ ಆದರು. ಕೊನೆಯ ಹಂತದ ಓವರ್‌ಗಳಲ್ಲಿ ಕಿಪ್ಲಿನ್ ಡೊರಿಗಾ (ಔಟಾಗದೆ 27; 18ಎ, 4X3) ಮಿಂಚಿದರು. 

ಆರಂಭಿಕ ಬ್ಯಾಟರ್ ಮತ್ತು ನಾಯಕ ಅಸದ್ ವಾಲಾ (21; 22ಎ) ಕೂಡ ಅಲ್ಪಕಾಣಿಕೆ ನೀಡಿದರು. ನ್ಯೂಗಿನಿ ತಂಡದ ಇನಿಂಗ್ಸ್‌ನಲ್ಲಿ ಒಟ್ಟು 2 ಸಿಕ್ಸರ್ ದಾಖಲಾದವು. 

ಸಂಕ್ಷಿಪ್ತ ಸ್ಕೋರು: ಪಾಪುವಾ ನ್ಯೂಗಿನಿ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 136 (ಅಸಾದ್ ವಾಲಾ 21, ಸೆಸೆ ಬಾವ್ 50, ಕಿಪ್ಲಿನ್ ಡೊರಿಗಾ 27, ಆ್ಯಂಡ್ರೆ ರಸೆಲ್ 19ಕ್ಕೆ2, ಅಲ್ಝರಿ ಜೋಸೆಫ್ 34ಕ್ಕೆ2) 

ವೆಸ್ಟ್‌ಇಂಡೀಸ್: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 137 (ಬ್ರೆಂಡನ್ ಕಿಂಗ್ 34, ನಿಕೊಲಸ್‌ ಪೂರನ್ 27, ರಾಸ್ಟನ್ ಚೇಸ್ ಅಜೇಯ 42, ಅಸಾದ್‌ ವಾಲಾ 28ಕ್ಕೆ2, ಜಾನ್ ಕಾರಿಕೊ 17ಕ್ಕೆ1) ಪಂದ್ಯ ಶ್ರೇಷ್ಠ: ರಾಸ್ಟನ್ ಚೇಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT