ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20ಯಲ್ಲಿ ಅತಿ ಹೆಚ್ಚು ರನ್: ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿದ ಬಾಬರ್

Published 7 ಜೂನ್ 2024, 2:37 IST
Last Updated 7 ಜೂನ್ 2024, 2:37 IST
ಅಕ್ಷರ ಗಾತ್ರ

ಡಲ್ಲಾಸ್‌: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.

ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡದ ವಿರುದ್ಧ ಗುರುವಾರ 42 ರನ್ ಗಳಿಸುವ ಮೂಲಕ ಬಾಬರ್ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅವರು ಭಾರತದ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.

ಇದುವರೆಗೆ 120 ಪಂದ್ಯಗಳ 113 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಪಾಕ್ ನಾಯಕ, 36 ಅರ್ಧಶತಕ, 3 ಶತಕ ಸಹಿತ 4,067 ರನ್ ಗಳಿಸಿದ್ದಾರೆ. ಕೊಹ್ಲಿ 118 ಪಂದ್ಯಗಳ 110 ಇನಿಂಗ್ಸ್‌ಗಳಿಂದ 4,038 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ ಒಂದು ಶತಕ ಮತ್ತು 37 ಅರ್ಧಶತಕಗಳಿವೆ.

ಭಾರತದ ನಾಯಕ ರೋಹಿತ್ ಶರ್ಮಾ ಅವರೂ ಇವರಿಬ್ಬರ ಹಿಂದೆಯೇ ಇದ್ದಾರೆ. ಅತಿ ಹೆಚ್ಚು (152) ಟಿ20 ಪಂದ್ಯ ಆಡಿದ ಅನುಭವ ಹೊಂದಿರುವ ಅವರು 144- ಇನಿಂಗ್ಸ್‌ಗಳಲ್ಲಿ 4,026 ರನ್ ಗಳಿಸಿದ್ದಾರೆ. 5 ಶತಕ ಮತ್ತು 30 ಅರ್ಧಶತಕಗಳು ಅವರ ಬ್ಯಾಟ್‌ನಿಂದ ಬಂದಿವೆ.

ಸದ್ಯ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಲ್ಕು ಸಾವಿರ ರನ್‌ ಗಳಿಸಿದ ಬ್ಯಾಟರ್‌ಗಳೆನಿಸಿರುವ ಈ ಮೂವರ ನಡುವೆ, ಇದೀಗ ಪೈಪೋಟಿ ಏರ್ಪಟ್ಟಿದೆ. ಚುಟುಕು ವಿಶ್ವಕಪ್ ಮುಗಿಯುವುದರೊಳಗೆ ಯಾರು ಅಗ್ರಪಟ್ಟದಲ್ಲಿ ಉಳಿಯುವರು ಎಂಬುದನ್ನು ಕಾದು ನೋಡಬೇಕಿದೆ.

ಪಾಕ್ ಪಡೆಗೆ ಅಚ್ಚರಿಯ ಆಘಾತ

ಅಮೆರಿಕ ಎದುರಿನ ಪಂದ್ಯದ ಮೂಲಕ ನಾಯಕ ಬಾಬರ್‌ ದಾಖಲೆ ಬರೆದರಾದರೂ, ತಮ್ಮ ತಂಡಕ್ಕೆ ಅಚ್ಚರಿಯ ಆಘಾತ ತಪ್ಪಿಸಲು ಸಾಧ್ಯವಾಗಲಿಲ್ಲ.

ಇಲ್ಲಿನ ಗ್ರ್ಯಾಂಡ್ ಪ್ರಯರಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಅಮೆರಿಕವೂ ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಇಷ್ಟೇ ರನ್‌ ಗಳಿಸಿತು. ಹೀಗಾಗಿ ಪಂದ್ಯ ಸೂಪರ್‌ ಓವರ್‌ಗೆ ಸಾಗಿತು.

ಪಾಕ್‌ ಪರ ಸೂಪರ್‌ ಓವರ್‌ ಎಸೆದ ಅನುಭವಿ ವೇಗಿ ಮೊಹಮ್ಮದ್ ಅಮೀರ್‌, ಒಂದು ವಿಕೆಟ್‌ ಪಡೆದು 18 ರನ್ ಬಿಟ್ಟುಕೊಟ್ಟರು. ಇದಕ್ಕುತ್ತರವಾಗಿ ಸೌರಭ್ ನೇತ್ರವಾಲ್ಕರ್ ಮಾಡಿದ ಓವರ್‌ನಲ್ಲಿ ಪಾಕಿಸ್ತಾನ ತಂಡ 13 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಹೀಗಾಗಿ ಆಘಾತಕಾರಿ ಸೋಲು ಅನುಭವಿಸಬೇಕಾಯಿತು.

ಇದರೊಂದಿಗೆ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಅಮೆರಿಕ ತಂಡ ಟೂರ್ನಿಯ 'ಎ' ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲ ಪಂದ್ಯದಲ್ಲಿ ಕೆನಡಾ ಎದುರು 7 ವಿಕೆಟ್‌ಗಳಿಂದ ಗೆದ್ದಿತ್ತು.

ಐರ್ಲೆಂಡ್ ಎದುರು ಗೆದ್ದಿರುವ ಭಾರತ ಎರಡನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT