ಮಂಗಳವಾರ, ಡಿಸೆಂಬರ್ 7, 2021
20 °C

T20 WC: ವಾರ್ನರ್ ಅಬ್ಬರ; ಲಂಕಾ ವಿರುದ್ಧ ಆಸೀಸ್‌ಗೆ 7 ವಿಕೆಟ್ ಗೆಲುವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ದುಬೈಯಲ್ಲಿ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. 

ಈ ಮೂಲಕ ಸತತ ಎರಡನೇ ಗೆಲುವು ದಾಖಲಿಸಿರುವ ಆಸೀಸ್, ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅತ್ತ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿಕೊಂಡಿದ್ದ ಲಂಕಾ ಈಗ, ಆಸೀಸ್ ಎದುರು ಸೋಲಿನ ಆಘಾತ ಎದುರಿಸಿದೆ. 

ಇದನ್ನೂ ಓದಿ: 

ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಆರು ವಿಕೆಟ್ ನಷ್ಟಕ್ಕೆ 154 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಡೇವಿಡ್ ವಾರ್ನರ್ (65) ಬಿರುಸಿನ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಇನ್ನು ಮೂರು ಓವರ್‌ಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಸವಾಲಿನ ಮೊತ್ತ ಬೆನ್ನತ್ತಿದ ಆಸೀಸ್‌ಗೆ ನಾಯಕ ಆ್ಯರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ 41 ಎಸೆತಗಳಲ್ಲೇ 70 ರನ್‌ಗಳ ಭರ್ಜರಿ ಜೊತೆಯಾಟ ಕಟ್ಟಿದರು. 23 ಎಸೆತಗಳನ್ನು ಎದುರಿಸಿದ ಫಿಂಚ್ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. 

ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸಿಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ (5) ಮಿಂಚಲಾಗಲಿಲ್ಲ. ಆದರೆ ಇನ್ನೊಂದೆಡೆ ನಿರಂತಕವಾಗಿ ಬ್ಯಾಟ್ ಬೀಸಿದ ವಾರ್ನರ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. 

ಅಲ್ಲದೆ ಲಯಕ್ಕೆ ಮರಳುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು. ಸ್ಟೀವ್ ಸ್ಮಿತ್ ಜೊತೆಗೂಡಿದ ವಾರ್ನರ್ ಮೂರನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದರು. 42 ಎಸೆತಗಳನ್ನು ಎದುರಿಸಿದ ವಾರ್ನರ್ 10 ಬೌಂಡರಿಗಳ ನೆರವಿನಿಂದ 65 ರನ್ ಗಳಿಸಿದರು. 

ಅಂತಿಮವಾಗಿ 17 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು. ಸ್ಟೀವ್ ಸ್ಮಿತ್ (28*) ಹಾಗೂ ಮಾರ್ಕಸ್ ಸ್ಟೋಯಿನಿಸ್ (16*) ಔಟಾಗದೆ ಉಳಿದರು. ಲಂಕಾ ಪರ  ವನಿಂದು ಹಸರಂಗ ಎರಡು ವಿಕೆಟ್ ಕಬಳಿಸಿದರು. 

ಈ ಮೊದಲು ಲಂಕಾ ಆರಂಭ ಉತ್ತಮವಾಗಿರಲಿಲ್ಲ. ಪಾತುಮ್ ನಿಸಂಕಾ (7) ಬೇಗನೇ ನಿರ್ಗಮಿಸಿದರು. ಆ ಹಂತದಲ್ಲಿ ಜೊತೆಗೂಡಿದ ಕುಶಲ್ ಪೆರೇರ (35) ಹಾಗೂ ಚರಿತ ಅಸಲಂಕಾ (35) ದ್ವಿತೀಯ ವಿಕೆಟ್‌ಗೆ ಮಹತ್ವದ 63 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 

ಆದರೆ ಈ ಜೋಡಿಯ ಪತನದ ಬೆನ್ನಲ್ಲೇ ಮಗದೊಮ್ಮೆ ಹಿನ್ನಡೆ ಅನುಭವಿಸಿತು. ಪರಿಣಾಮ 94 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು. 

ಆದರೆ ಕೊನೆಯ ಹಂತದಲ್ಲಿ ಅಜೇಯ 33 ರನ್ ಗಳಿಸಿದ ಭಾನುಕಾ ರಾಜಪಕ್ಷ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು. 26 ಎಸೆತಗಳನ್ನು ಎದುರಿಸಿದ ರಾಜಪಕ್ಷ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಇನ್ನುಳಿದಂತೆ ನಾಯಕ ದಸುನ್ ಶನಕ 12 ರನ್ ಗಳಿಸಿದರು. 

ಆಸೀಸ್ ಪರ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಆ್ಯಡಂ ಜಂಪಾ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. ಈ ಪೈಕಿ ಜಂಪಾ ಕೇವಲ 12 ರನ್ ಮಾತ್ರ ಬಿಟ್ಟುಕೊಟ್ಟರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು