ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಟೆಸ್ಟ್ ಪಂದ್ಯ ಗೆದ್ದ ಕಿರಿಯ ನಾಯಕ ರಶೀದ್: ಹಿರಿಯ ಆಟಗಾರ ನಬಿಗೆ ಪ್ರಶಸ್ತಿ ಅರ್ಪಣೆ

Published:
Updated:

ಚಿತ್ತಗಾಂಗ್: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅಫ್ಗಾನಿಸ್ತಾನ ತಂಡದ ನಾಯಕ ರಶೀದ್‌ ಖಾನ್‌, ಪ್ರಶಸ್ತಿಯನ್ನು ಹಿರಿಯ ಆಟಗಾರ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮೊಹಮದ್‌ ನಬಿ ಅವರಿಗೆ ಅರ್ಪಿಸಿದ್ದಾರೆ. ಈ ಪಂದ್ಯದಲ್ಲಿ ಅಫ್ಗಾನ್‌ ಪಡೆ 224 ರನ್ ಅಂತರದ ಅಮೋಘ ಜಯ ಸಾಧಿಸಿತು.

ಇದೇ ಪಂದ್ಯದ ಮೂಲಕ ಟೆಸ್ಟ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದ ರಶೀದ್‌ ಖಾನ್‌, ಆಲ್ರೌಂಡ್‌ ಪ್ರದರ್ಶನದ ಮೂಲಕ ಮಿಂಚಿದ್ದರು. ಮೊದಲ ಇನಿಂಗ್ಸ್‌ನಲ್ಲಿ 51ರನ್‌ ಹಾಗೂ ಐದು ವಿಕೆಟ್‌ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 24ರನ್‌ ಹಾಗೂ ಆರು ವಿಕೆಟ್‌ ಪಡೆದು ಜೀವನ ಶ್ರೇಷ್ಠ ನಿರ್ವಹಣೆ ತೋರಿದ್ದರು.

ಪಂದ್ಯದ ಬಳಿಕ ಮಾತನಾಡಿದ್ದ ರಶೀದ್‌, ‘ನಾನು ಮತ್ತು ನನ್ನಂತಹ ಹಲವು ಯುವ ಸ್ಪಿನ್ನರ್‌ಗಳಿಗೆ ನೆರವಾದ ಮೊಹಮದ್‌ ನಬಿ ಅವರು ಇಂದು ಕೊನೆಯ ಪಂದ್ಯ ಆಡಿದ್ದಾರೆ. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ಹಿರಿಯ ಆಟಗಾರ ನಬಿಗೆ ಇದು ಕೊನೆಯ ಪಂದ್ಯ.

ಪ್ರಶಸ್ತಿ ಸ್ವೀಕಾರ ಸಂದರ್ಭದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನಬಿ, ನಾಯಕ ರಶೀದ್‌ ಖಾನ್‌, ಸಹ ಆಟಗಾರರು ಹಾಗೂ ಅಫ್ಗಾನ್‌ ಕ್ರಿಕೆಟ್‌ ಮಂಡಳಿಗೆ ಧನ್ಯಾವಾದ ಹೇಳಿದ್ದಾರೆ.

ಏಕೈಕ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಗಾನ್‌ ನಾಯಕ ರಶೀದ್‌ ಬ್ಯಾಟಿಂಗ್‌ ಆರಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ರಹಮತ್‌ ಶಾ ಶತಕ ಹಾಗೂ ಆಸ್ಗರ್‌ ಅಫ್ಗಾನ್‌, ರಶೀದ್‌ ಗಳಿಸಿದ ಅರ್ಧಶತಕಗಳ ನೆರವಿನಿಂದ 342ರನ್‌ ಕಲೆ ಹಾಕಿತ್ತು. ಬಳಿಕ ಬಾಂಗ್ಲಾ ಹುಲಿಗಳನ್ನು 210ರನ್‌ಗೆ ಕಟ್ಟಿ ಹಾಕಿದ ಅಫ್ಗಾನ್‌ ಬೌಲರ್‌ಗಳು 137ರನ್‌ಗಳ ಮುನ್ನಡೆ ಕಾಯ್ದುಕೊಳ್ಳಲು ತಮ್ಮ ತಂಡಕ್ಕೆ ನೆರವಾದರು.

ಎರಡನೇ ಇನಿಂಗ್ಸ್‌ನಲ್ಲಿ 260ಗಳಿಸಿ 398ರನ್‌ಗಳ ಗೆಲುವಿನ ಗುರಿ ನೀಡಿದ ಪ್ರವಾಸಿ ಪಡೆ, ಆತಿಥೇಯರನ್ನು ಕೇವಲ 173ರನ್‌ಗಳಿಗೆ ನಿಯಂತ್ರಿಸಿ ಗೆಲುವಿನ ನಗೆ ಬೀರಿತು.

ಈ ಪಂದ್ಯದ ನಂತರ ನಿರ್ಮಾಣವಾದ ದಾಖಲೆಗಳು
* ಕೇವಲ ಮೂರು ಪಂದ್ಯಗಳಲ್ಲೇ ಎರಡು ಗೆಲುವು ದಾಖಲಿಸಿದ ತಂಡ ಎರಡನೇ ತಂಡ ಎಂಬ ಶ್ರೇಯ ಅಫ್ಗಾನಿಸ್ತಾನ ತಂಡಕ್ಕೆ ಲಭಿಸಿತು. ಈ ಹಿಂದೆ 1879ರಲ್ಲಿ ಆಸ್ಟ್ರೇಲಿಯಾ ಈ ದಾಖಲೆ ಮಾಡಿದ್ದು ಬಿಟ್ಟರೆ ಉಳಿದ ತಂಡಗಳಿಗೆ ಇದು ಸಾಧ್ಯವಾಗಿಲ್ಲ.
* ಮೊದಲ ಟೆಸ್ಟ್‌ನಲ್ಲಿಯೇ ಗೆಲುವು ದಾಖಲಿಸಿದ ಅತಿ ಕಿರಿಯ ನಾಯಕ ರಶೀದ್‌ ಖಾನ್‌
* ನಾಯಕನಾಗಿ ಹತ್ತಕ್ಕೂ ಹೆಚ್ಚು ವಿಕೆಟ್‌ ಹಾಗೂ ಅರ್ಧಶತಕ ಬಾರಿಸಿದ ಮೊದಲ ಆಟಗಾರ ರಶೀದ್‌ ಖಾನ್
* ಟೆಸ್ಟ್‌ ಆಡುವ ಹತ್ತು ರಾಷ್ಟ್ರಗಳ ವಿರುದ್ಧ ಸೋಲು ಕಂಡ ಬಾಂಗ್ಲಾದೇಶ

Post Comments (+)