ಸೋಮವಾರ, ಮಾರ್ಚ್ 1, 2021
26 °C
ಜನಾಂಗೀಯ ನಿಂದನೆಯ ಘಟನೆಯ ಕುರಿತು ಸಿರಾಜ್

ಜನಾಂಗೀಯ ನಿಂದನೆ ಆದಾಗ ಅಂಪೈರ್‌ಗಳು ಪಂದ್ಯ ಬಿಡುವ ಆಯ್ಕೆ ಕೊಟ್ಟಿದ್ದರು: ಸಿರಾಜ್ 

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ಸಿಡ್ನಿಯಲ್ಲಿ ಈಚೆಗೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್‌ ಪಂದ್ಯದಲ್ಲಿ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದಾಗ, ಪಂದ್ಯದ ಹಿಂದೆ ಸರಿಯುವ ಆಯ್ಕೆ ಇದೆ ಎಂದು ಫೀಲ್ಡ್‌ ಅಂಪೈರ್‌ಗಳು ಸಲಹೆ ನೀಡಿದ್ದರೆಂದು ಮಧ್ಯಮವೇಗಿ ಮೊಹಮ್ಮದ್ ಸಿರಾಜ್  ಹೇಳಿದರು.

ಗುರುವಾರ ಅವರು ತಮ್ಮ ತವರೂರಿಗೆ ಮರಳಿದ ಸಂದರ್ಭದಲ್ಲಿ ಸುದ್ದಿಗಾರರ ಮುಂದೆ ಈ ವಿಷಯವನ್ನು ಬಹಿರಂಗಪಡಿಸಿದರು.

ಸಿಡ್ನಿ ಕ್ರೀಡಾಂಗಣದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಬಗ್ಗೆ ಜನಾಂಗೀಯ ನಿಂದನೆ ಮಾಡಲಾಗಿತ್ತು.  ಆಗ ಸಿರಾಜ್ ತಂಡದ ನಾಯಕ ಅಜಿಂಕ್ಯ ರಹಾನೆ ಮತ್ತು ಅಂಪೈರ್‌ಗಳಿಗೆ ದೂರು ನೀಡಿದ್ದರು. ಸಿರಾಜ್ ಅವರನ್ನು ’ಕಂದು ನಾಯಿ‘ ಮತ್ತು ’ದೊಡ್ಡ ಕೋತಿ‘ ಎಂದು ಹೀಯಾಳಿಸಿದ್ದ  ಆರು ಮಂದಿಯನ್ನು ಕ್ರೀಡಾಂಗಣದಿಂದ ಹೊರದಬ್ಬಲಾಗಿತ್ತು. ಆಗ ಪಂದ್ಯವು ಸುಮಾರು ಹತ್ತು ನಿಮಿಷ ಸ್ಥಗಿತವಾಗಿತ್ತು.

’ನನ್ನನ್ನು ಕೆಲವು ಪ್ರೇಕ್ಷಕರು ನಿಂದಿಸಿದ್ದು ನಿಜ. ಆಗ ಅಂಪೈರ್‌ಗಳು ಪಂದ್ಯದ ಹಿಂದೆ ಸರಿಯುವ ಆಯ್ಕೆಯನ್ನು ತಂಡಕ್ಕೆ ನೀಡಿದರು.  ಆದರೆ, ನಾಯಕ ಅಜಿಂಕ್ಯ ರಹಾನೆ ಒಪ್ಪಲಿಲ್ಲ. ನಮ್ಮದೇನೂ ತಪ್ಪಿಲ್ಲ. ನಾವು ಹಿಂದೆ ಸರಿಯುವುದಿಲ್ಲ.  ಆಡುತ್ತೇವೆಂದು ದಿಟ್ಟ ಉತ್ತರ ಕೊಟ್ಟಿದ್ದರು‘ ಎಂದು ಸಿರಾಜ್ ವಿವರಿಸಿದರು.  ಆ ಪಂದ್ಯವು ರೋಚಕ ಡ್ರಾದಲ್ಲಿ ಅಂತ್ಯವಾಗಿತ್ತು.

’ಆಸ್ಟ್ರೇಲಿಯಾದಲ್ಲಿ ಎದುರಿಸಿದ ನಿಂದನೆಗಳಿಂದಾಗಿ ನಾನು ಮಾನಸಿಕವಾಗಿ ಮತ್ತಷ್ಟು ಗಟ್ಟಿಯಾದೆ. ಆಟದ ಮೇಲೆ ಯಾವುದೇ ದುಷ್ಟರಿಣಾಮವಾಗದಂತೆ ನೋಡಿಕೊಂಡೆ‘ ಎಂದು ಹೇಳಿದರು.

’ಐಪಿಎಲ್‌ನಲ್ಲಿ ಫಾರ್ಮ್‌ ಕಳೆದುಕೊಂಡಾಗ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ನೀಡಿದ ಬೆಂಬಲದಿಂದ ಆತ್ಮವಿಶ್ವಾಸ ಮೂಡಿತು. ಆಸ್ಟ್ರೇಲಿಯಾದಲ್ಲಿ ಅಜಿಂಕ್ಯ ರಹಾನೆ ಮತ್ತು ಜಸ್‌ಪ್ರೀತ್ ಬೂಮ್ರಾ, ಕೋಚ್ ರವಿಶಾಸ್ತ್ರಿ ಸೇರಿದಂತೆ ಎಲ್ಲ ಆಟಗಾರರ ಪ್ರೋತ್ಸಾಹದಿಂದ ಉತ್ತಮವಾಗಿ ಆಡಲು ಸಾಧ್ಯವಾಯಿತು.  ಕೊಹ್ಲಿ ಮತ್ತು ರಹಾನೆ ಇಬ್ಬರೂ ಒಳ್ಳೆಯ ನಾಯಕತ್ವ ಗುಣ ಹೊಂದಿದ್ದಾರೆ‘ ಎಂದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು