ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಗೆಲುವಿನ ‘ಹ್ಯಾಟ್ರಿಕ್‌’

ಮಿಂಚಿನ ಬೌಲಿಂಗ್‌; ಮಯಂಕ್ ಅರ್ಧಶತಕ
Last Updated 15 ನವೆಂಬರ್ 2022, 15:20 IST
ಅಕ್ಷರ ಗಾತ್ರ

ಕೋಲ್ಕತ್ತ: ವಾಸುಕಿ ಕೌಶಿಕ್‌ (18ಕ್ಕೆ 3) ಮತ್ತು ವಿದ್ವತ್‌ ಕಾವೇರಪ್ಪ (17ಕ್ಕೆ 2) ಅವರ ಅಮೋಘ ಬೌಲಿಂಗ್‌ ಹಾಗೂ ನಾಯಕ ಮಯಂಕ್ ಅಗರವಾಲ್ (53) ಅವರ ಅರ್ಧಶತಕ ಕರ್ನಾಟಕ ತಂಡಕ್ಕೆ ಜಯ ತಂದುಕೊಟ್ಟವು.

ಮಂಗಳವಾರಇಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಎಲೀಟ್‌ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಆರು ವಿಕೆಟ್‌ಗಳಿಂದ ಜಾರ್ಖಂಡ್‌ ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ‘ಹ್ಯಾಟ್ರಿಕ್’ ಜಯದ ಸಾಧನೆ ಮಾಡಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕುಕೊಂಡ ಜಾರ್ಖಂಡ್‌ ತಂಡ 40.4 ಓವರ್‌ಗಳಲ್ಲಿ ಕೇವಲ 107 ರನ್‌ಗಳಿಗೆ ಎಲ್ಲ ವಿಕೆಟ್‌ ಒಪ್ಪಿಸಿತು. ಕರ್ನಾಟಕ ಈ ಗುರಿಯನ್ನು 26.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ತಲುಪಿತು.

ಜಾರ್ಖಂಡ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. 10 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್‌ಗಳು ಪತನವಾಗಿದ್ದವು. ಮಧ್ಯಮ ಕ್ರಮಾಂಕದಲ್ಲಿ ಕುಮಾರ್ ಕುಶಾಗ್ರ (56) ಆಸರೆಯಾಗದಿದ್ದರೆ ತಂಡವು ಇನ್ನೂ ಕಳಪೆ ಮೊತ್ತಕ್ಕೆ ಕುಸಿಯುವ ಸಾಧ್ಯತೆಯಿತ್ತು. ಸೌರಭ್ ತಿವಾರಿ (11) ಎರಡಂಕಿ ದಾಟಿದ ಇನ್ನೊಬ್ಬ ಆಟಗಾರ. ಕರ್ನಾಟಕದ ಮನೋಜ್ ಭಾಂಡಗೆ (25ಕ್ಕೆ 2) ಕೂಡ ಬೌಲಿಂಗ್‌ನಲ್ಲಿ ಮಿಂಚಿದರು.

ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಈ ಮೊತ್ತ ಸವಾಲೆನಿಸಲೇ ಇಲ್ಲ. ಆರ್‌. ಸಮರ್ಥ್‌ (1) ಬೇಗನೇ ವಿಕೆಟ್‌ ಒಪ್ಪಿಸಿದರೂ ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಮಯಂಕ್‌ ಮತ್ತು ನಿಕಿನ್ ಜೋಸ್‌ (24) 63 ರನ್‌ ಸೇರಿಸಿ ಆಸರೆಯಾದರು. ಮನೀಷ್ ಪಾಂಡೆ (15) ಮತ್ತು ಮನೋಜ್‌ (ಔಟಾಗದೆ 13) ಗೆಲುವಿಗೆ ಕೊಡುಗೆ ನೀಡಿದರು.

ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಗುರುವಾರ ದೆಹಲಿ ಎದುರು ಆಡಲಿದೆ.

ಸಂಕ್ಷಿಪ್ತ ಸ್ಕೋರು: ಜಾರ್ಖಂಡ್‌: 40.4 ಓವರ್‌ಗಳಲ್ಲಿ 107 ( ಸೌರಭ್ ತಿವಾರಿ 11, ಕುಮಾರ್ ಕುಶಾಗ್ರ 56; ವಿದ್ವತ್ ಕಾವೇರಪ್ಪ 17ಕ್ಕೆ 2, ವಾಸುಕಿ ಕೌಶಿಕ್‌ 18ಕ್ಕೆ 3, ರೋನಿತ್ ಮೋರೆ 17ಕ್ಕೆ 1, ಮನೋಜ್ ಭಾಂಡಗೆ 25ಕ್ಕೆ 2, ಕೃಷ್ಣಪ್ಪ ಗೌತಮ್‌ 19ಕ್ಕೆ 1)

ಕರ್ನಾಟಕ: 26.3 ಓವರ್‌ಗಳಲ್ಲಿ 4 ವಿಕೆಟ್‌ಗೆ 108 (ಮಯಂಕ್ ಅಗರವಾಲ್‌ 53, ನಿಕಿನ್ ಜೋಸ್‌ 24, ಮನೀಷ್ ಪಾಂಡೆ 15, ಮನೋಜ್ ಭಾಂಡಗೆ ಔಟಾಗದೆ 13; ರಾಹುಲ್ ಶುಕ್ಲಾ 11ಕ್ಕೆ 1, ಶಹಬಾಜ್ ನದೀಂ 38ಕ್ಕೆ 2, ಅನುಕೂಲ್ ರಾಯ್‌ 19ಕ್ಕೆ 1). ಫಲಿತಾಂಶ: ಕರ್ನಾಟಕ ತಂಡಕ್ಕೆ 6 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT