ಅಹಮದಾಬಾದ್: ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಅಮೋಘ ಶತಕದ (135*) ನೆರವಿನಿಂದ ಟೀಮ್ ಇಂಡಿಯಾ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಉತ್ತರ ನೀಡಿದೆ.
ನಾಲ್ಕನೇ ದಿನದ ಟೀ ವಿರಾಮದ ಹೊತ್ತಿಗೆ ಭಾರತ 158 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 472 ರನ್ ಗಳಿಸಿದೆ. ಈ ಮೂಲಕ ಇನಿಂಗ್ಸ್ ಮುನ್ನಡೆಯತ್ತ ಮುನ್ನಡೆದಿದೆ.
ಟೆಸ್ಟ್‌ನಲ್ಲಿ ಕೊಹ್ಲಿ 28ನೇ ಶತಕ...
ಸಮಯೋಚಿತ ಬ್ಯಾಟಿಂಗ್ ಮಾಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 28ನೇ ಶತಕ ಸಾಧನೆ ಮಾಡಿದರು.
ಹಾಗೆಯೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 75ನೇ ಶತಕ ಗಳಿಸಿದರು. 2019 ನವೆಂಬರ್‌ನಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯದಾಗಿ ಶತಕ ಗಳಿಸಿದ್ದರು.
ಆಸೀಸ್ ಬೌಲರ್‌ಗಳನ್ನು ಕಾಡಿದ ಕೊಹ್ಲಿ, 291 ಎಸೆತಗಳಲ್ಲಿ 135 ರನ್ (10 ಬೌಂಡರಿ) ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಈ ದಿನದಲ್ಲಿ ಭಾರತಕ್ಕೆ ರವೀಂದ್ರ ಜಡೇಜ (28) ವಿಕೆಟ್ ನಷ್ಟವಾಗಿದೆ. ಶ್ರೀಕರ್ ಭರತ್ 44 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಅಕ್ಷರ್ ಪಟೇಲ್ 38 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುವುದು ಅನುಮಾನವೆನಿಸಿದೆ.
ಆಸ್ಟ್ರೇಲಿಯಾದ ಪರ ನೇಥನ್ ಲಯನ್ ಹಾಗೂ ಟಾಡ್ ಮರ್ಫಿ ತಲಾ ಎರಡು ವಿಕೆಟ್ ಕಬಳಿಸಿದರು.
ಈ ಮೊದಲು ಅತಿಥೇಯರ ಪರ ಶುಭಮನ್ ಗಿಲ್ (128) ಆಕರ್ಷಕ ಶತಕ ಗಳಿಸಿದ್ದರು.
ಉಸ್ಮಾನ್ ಖ್ವಾಜಾ (180) ಹಾಗೂ ಕ್ಯಾಮರೂನ್ ಗ್ರೀನ್ (114) ಶತಕಗಳ ಬೆಂಬಲದಿಂದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 480 ರನ್ ಗಳಿಸಿತ್ತು. ಭಾರತದ ಪರ ಆರ್. ಅಶ್ವಿನ್ ಆರು ವಿಕೆಟ್ ಗಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.