ಬುಧವಾರ, ಮೇ 25, 2022
24 °C

ಕೊಹ್ಲಿಗೆ ರವಿ ಬೆಂಬಲ: ಶಾಸ್ತ್ರಿ 2.0 ಬಗ್ಗೆ ನನಗೆ ಅರ್ಥವಾಗುತ್ತಿಲ್ಲ ಎಂದ ಸಂಜಯ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ವಿರಾಟ್‌ ಕೊಹ್ಲಿ ಅವರ ಸಾಧನೆಯನ್ನು ಬಹಳಷ್ಟು ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’ ಎಂಬ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರ ಹೇಳಿಕೆಗೆ ಹಿರಿಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಿರುಗೇಟು ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸುವ ಸುವರ್ಣಾವಕಾಶವನ್ನು ಕಳೆದುಕೊಂಡ ಬಳಿಕ ವಿರಾಟ್ ಕೊಹ್ಲಿ ಅವರು ಜ.15ರಂದು ನಾಯಕತ್ವ ತ್ಯಜಿಸುವುದಾಗಿ ಪ್ರಕಟಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ರವಿ ಶಾಸ್ತ್ರಿ, ‘ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಮುಂದುವರಿಯಬೇಕಿತ್ತು. ಮುಂದಿನ ಎರಡು ವರ್ಷ ಭಾರತವು ತನಗಿಂತ ರ್‍ಯಾಂಕಿಂಗ್‌ನಲ್ಲಿ ಕೆಳಗಿರುವ ತಂಡಗಳ ಜೊತೆ ತವರಿನಲ್ಲಿ ಆಡಲಿದೆ. ಹಾಗಾಗಿ, ಕೊಹ್ಲಿ ಅವರು ತಮ್ಮ ನಾಯಕತ್ವದಲ್ಲಿ 50-60 ಗೆಲುವನ್ನು ಗಳಿಸುತ್ತಿದ್ದರು. ಅದು ಬಹಳಷ್ಟು ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದ್ದರು.

‘ಇನ್ನೆರಡು ವರ್ಷ ನಾಯಕರಾಗಿ ಮುಂದುವರಿದಿದ್ದರೆ ಕೊಹ್ಲಿ ಅವರು ಭಾರತದ ಟೆಸ್ಟ್ ನಾಯಕರಾಗಿ ತಮ್ಮ ಪರಂಪರೆಯನ್ನು ಇನ್ನಷ್ಟು ಉತ್ತಮಗೊಳಿಸಬಹುದಿತ್ತು’ ಎಂದು ರವಿ ಶಾಸ್ತ್ರಿ ಹೇಳಿಕೆ ನೀಡಿದ್ದರು.

ಇದೀಗ ರವಿಶಾಸ್ತ್ರಿ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಮಂಜ್ರೇಕರ್, ‘ನಾನು ರವಿ ಶಾಸ್ತ್ರಿಯವರ ದೊಡ್ಡ ಅಭಿಮಾನಿ. ಆಗಿದ್ದರೂ, ಅವರ ಹೇಳಿಕೆಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಇದನ್ನು ‘ಶಾಸ್ತ್ರಿ 2.0’ ಎಂದು ಕರೆಯಬಹುದು’ ಎಂದಿದ್ದಾರೆ.

‘ನಾನು, ರವಿ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಆಡಿದ್ದೇನೆ. ಅವರು ಆಟಗಾರರಿಗೆ ಹೆಚ್ಚು ಬೆಂಬಲ ನೀಡಿದ್ದಾರೆ. ನಾನು ಅವರಿಗೆ ಅಗೌರವ ತೋರಲು ಬಯಸುವುದಿಲ್ಲ. ಆದರೆ, ಇತ್ತೀಚಿಗಿನ ಅವರ ಹೇಳಿಕೆಗಳು ನನಗೆ ಅರ್ಥವಾಗುತ್ತಿಲ್ಲ’ ಎಂದು ಹೇಳಿದ್ದಾರೆ.  

ವಿರಾಟ್‌ ಕೊಹ್ಲಿ ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. 40 ಪಂದ್ಯಗಳಲ್ಲಿ ಭಾರತ ತಂಡವು ಗೆಲುವು ಸಾಧಿಸಿತ್ತು. 17 ಟೆಸ್ಟ್‌ಗಳಲ್ಲಿ ಪರಾಭವಗೊಂಡಿದ್ದು, 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದ್ದವು.

33 ವರ್ಷದ ವಿರಾಟ್‌ ಕೊಹ್ಲಿ ಎರಡು ತಿಂಗಳ ಹಿಂದೆ ಟಿ–20 ನಾಯಕತ್ವ ತ್ಯಜಿಸಿದ್ದರು. ಇದಾದ ಬಳಿಕ ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಅವರನ್ನು ಕೆಳಗಿಳಿಸಿತ್ತು.

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಫೆಬ್ರುವರಿಯಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ–20 ಸರಣಿಯನ್ನು ಆಡಲಿದೆ.

ಓದಿ...

ಕೊಹ್ಲಿ ಇನ್ನೆರಡು ವರ್ಷ ಟೆಸ್ಟ್ ತಂಡದ ನಾಯಕರಾಗಿರಬೇಕಿತ್ತು: ಶಾಸ್ತ್ರಿ

ಟೆಸ್ಟ್​ ನಾಯಕತ್ವ ತ್ಯಜಿಸಿದ ಕೊಹ್ಲಿ ಕುರಿತು ಪತ್ನಿ ಅನುಷ್ಕಾ ಶರ್ಮಾ ಹೇಳಿದ್ದೇನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು