ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಕೊಹ್ಲಿಗಿಂತ ಶರ್ಮಾ ಉತ್ತಮ ನಾಯಕರಾಗಬಲ್ಲರೇ?

ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ನಾಯಕತ್ವದ ಸುತ್ತ ಚರ್ಚೆ
Last Updated 1 ಡಿಸೆಂಬರ್ 2020, 7:38 IST
ಅಕ್ಷರ ಗಾತ್ರ

’ಗೆಲುವಿಗೆ ಹಲವು ವಾರಸುದಾರರು. ಸೋಲು ಅನಾಥ..‘

ಭಾರತ ಕ್ರಿಕೆಟ್ ತಂಡದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಈ ಮಾತಿಗೆ ಹತ್ತಾರು ಉದಾಹರಣೆಗಳು ಸಿಗುತ್ತವೆ. ತಂಡ ಜಯಿಸುತ್ತ ಹೋದಷ್ಟು ನಾಯಕನಿಗೆ ಉಳಿಗಾಲ. ಒಂದೆರಡು ಸೋಲುಗಳು ಎದುರಾದರೆ ಸಾಕು, ಟೀಕೆಗಳ ಸುರಿಮಳೆ ಶುರು. ಈಗ ವಿರಾಟ್ ಕೊಹ್ಲಿ ಕೂಡ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಭಾರತ ಸೋತಿದೆ. ಇದರಿಂದಾಗಿ ಮತ್ತೊಮ್ಮೆ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ನಾಯಕತ್ವ ಬದಲಾವಣೆ ಮಾಡಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಖ್ಯಾತನಾಮ ಕ್ರಿಕೆಟಿಗರು ಈ ದೊಡ್ಡ ಧ್ವನಿಯಲ್ಲಿಯೇ ಈ ಮಾತನ್ನು ಹೇಳುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಸಲ ಚಾಂಪಿಯನ್‌ ಪಟ್ಟಕ್ಕೇರಿಸಿದ ರೋಹಿತ್ ಶರ್ಮಾಗೆ ನಾಯಕತ್ವ ನೀಡಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಈಗಾಗಲೇ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡಗಳಿಗೆ ಬೇರೆ ಬೇರೆ ನಾಯಕರಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ತಂಡವನ್ನು ಟಿಮ್ ಪೇನ್ ಮತ್ತು ಏಕದಿನ ಕ್ರಿಕೆಟ್ ತಂಡವನ್ನು ಆ್ಯರನ್ ಫಿಂಚ್ ಮುನ್ನಡೆಸುತ್ತಾರೆ. ಇಂಗ್ಲೆಂಡ್‌ನಲ್ಲಿ ಸೀಮಿತ ಓವರ್‌ಗಳ ತಂಡಕ್ಕೆ ಏಯಾನ್ ಮಾರ್ಗನ್ ಮತ್ತು ಟೆಸ್ಟ್ ಬಳಗಕ್ಕೆ ಜೋ ರೂಟ್ ನಾಯಕರಾಗಿದ್ದಾರೆ. ಭಾರತದಲ್ಲಿಯೂ ಅಂತಹದೊಂದು ಪ್ರಯೋಗ ಏಕೆ ಮಾಡಬಾರದು?

ವಿರಾಟ್ ಕೊಹ್ಲಿ ಬ್ಯಾಟಿಂಗ್ ಮತ್ತು ಅವರ ಬ್ರ್ಯಾಂಡ್ ಮೌಲ್ಯದ ಕುರಿತು ಯಾರೂ ಚಕಾರವೆತ್ತಲು ಸಾಧ್ಯವಿಲ್ಲ. ಆದರೆ ನಾಯಕನಾಗಿ ಅವರು ವೈಫಲ್ಯ ಅನುಭವಿಸುತ್ತಿದ್ದಾರೆಂಬ ಟೀಕೆಗಳು ಈಗ ವ್ಯಕ್ತವಾಗುತ್ತಿವೆ. ಈಚೆಗೆ ಯುಎಇಯಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್‌ ಹಂತದಲ್ಲಿ ಸೋತಾಗಿನಿಂದಲೂ ಅವರ ವಿರುದ್ಧ ಗೌತಮ್ ಗಂಭೀರ್ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ.

2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಸೋತಾಗಲೂ ನಾಯಕತ್ವದ ವಿಭಜನೆಯ ಮಾತುಗಳು ಕೇಳಿಬಂದಿ್ದ್ದವು. ಆದರೆ, ನಂತರದ ದಿನಗಳಲ್ಲಿ ಅಷ್ಟೊಂದು ರಂಗು ಪಡೆದಿರಲಿಲ್ಲ. ಆದರೆ ಈಗ ಗಂಭೀರ ಚರ್ಚೆಗಳು ನಡೆಯುತ್ತಿವೆ. ಮಹೇಂದ್ರಸಿಂಗ್ ಧೋನಿ ಅವರು ಏಕದಿನ ಮತ್ತು ಟಿ20 ತಂಡದಲ್ಲಿ ಆಡುವಾಗ ಕೊಹ್ಲಿಗೆ ನಾಯಕತ್ವದ ಒತ್ತಡ ಹೆಚ್ಚಿರಲಿಲ್ಲ. ಏಕೆಂದರೆ, ಕೂಲ್ ಕ್ಯಾಪ್ಟನ್ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದರು. ಸ್ಟಂಪ್‌ಗಳ ಹಿಂದಿನಿಂದಲೇ ಬೌಲರ್‌ಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಡ್ರೆಸ್ಸಿಂಗ್ ರೂಮ್‌ನಲ್ಲಿ ಬ್ಯಾಟಿಂಗ್ ಕ್ರಮಾಂಕದ ಕುರಿತ ತಂತ್ರಗಳನ್ನು ಕೊಹ್ಲಿ ಕಿವಿಗೆ ಹಾಕುತ್ತಿದ್ದರು. ಆದರೆ, ಈಗ ಕೊಹ್ಲಿಗೆ ಅಂತಹ ಮಾರ್ಗದರ್ಶಕರ ಕೊರತೆ ಖಂಡಿತವಾಗಿಯೂ ಇದೆ. ಮುಖ್ಯ ಕೋಚ್ ರವಿಶಾಸ್ತ್ರಿ ಅವರೊಬ್ಬರೇ ತಂಡದಲ್ಲಿ ವಿರಾಟ್ ಗೆ ಸಲಹೆ ನೀಡಬಲ್ಲ ಏಕಮಾತ್ರ ಹಿರಿಯರು!

ಈ ಮಾತು ಹೋದ ಜನವರಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್‌ನಲ್ಲಿ ಸರಣಿ ಸೋತಾಗಲೇ ಅರಿವಿಗೆ ಬಂದಿದ್ದು ನಿಜ. ಆದರೆ ನಂತರದ ದಿನಗಳಲ್ಲಿ ಕೋವಿಡ್ –19, ಲಾಕ್‌ಡೌನ್‌ನಲ್ಲಿ ಕ್ರಿಕೆಟ್ ಸ್ಥಗಿತವಾಗಿತ್ತು. ಆದ್ದರಿಂದ ಚರ್ಚೆಗಳೂ ನೇಪಥ್ಯಕ್ಕೆ ಸರಿದಿದ್ದವು. ಕಿವೀಸ್‌ನಲ್ಲಿ ಮೂರು ಏಕದಿನ ಮತ್ತು ಈಗ ಎರಡು ಏಕದಿನ ಪಂದ್ಯಗಳಲ್ಲಿ ಸತತವಾಗಿ ತಂಡವು ಸೋತಿರುವುದು ಕೊಹ್ಲಿ ಮೇಲೆ ಒತ್ತಡ ಹೆಚ್ಚಿಸಿದೆ.

ತಂಡದಲ್ಲಿ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ, ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್, ರವೀಂದ್ರ ಜಡೇಜ ಅವರಂತಹ ಪ್ರತಿಭಾವಂತರಿದ್ದಾರೆ. ಆದರೆ ಅವರನ್ನು ಸರಿಯಾದ ಸಂದರ್ಭದಲ್ಲಿ ದುಡಿಸಿಕೊಳ್ಳುವಲ್ಲಿ ವಿರಾಟ್ ಎಡವುತ್ತಿರುವುದು ಸ್ಪಷ್ಟ.

’ಬೂಮ್ರಾ ಅವರಂತಹ ಸಮರ್ಥ ಬೌಲರ್‌ಗೆ ಕೇವಲ ಎರಡು ಓವರ್‌ ಬೌಲಿಂಗ್ ಕೊಟ್ಟಿದ್ದು ಕೊಹ್ಲಿಯ ಕೆಟ್ಟ ನಿರ್ಧಾರ. ಆ್ಯರನ್ ಫಿಂಚ್, ಡೇವಿಡ್ ವಾರ್ನರ್ ಮತ್ತು ಸ್ಮಿತ್ ಅವರನ್ನು ಔಟ್ ಮಡುವ ಸಾಮರ್ಥ್ಯ ಬೂಮ್ರಾಗೆ ಇತ್ತು. ಆದರೆ, ಅವರಿಗೆ ಕಡಿಮೆ ಅವಕಾಶ ಕೊಟ್ಟಿದ್ದು ಏಕೆ. ಇದು ನಾಯಕತ್ವವೇ‘ ಎಂದು ಗಂಭೀರ್ ಚಾಟಿ ಬೀಸಿದ್ದಾರೆ.

ಆದರೆ, ಕೋವಿಡ್ ಕಾಲದ ಒತ್ತಡದಲ್ಲಿ ಬೂಮ್ರಾ ಹಾಗೂ ಶಮಿ ಅವರನ್ನು ಟೆಸ್ಟ್‌ ಕ್ರಿಕೆಟ್ ಸರಣಿಗೂ ಫಿಟ್‌ ಆಗಿ ಸಂರಕ್ಷಿಸಿಕೊಳ್ಳುವ ಮಹತ್ವದ ಹೊಣೆ ಕೊಹ್ಲಿ ಮೇಲೆ ಇದೆ. ಅಲ್ಲದೇ ಸೀಮಿತ ಓವರ್‌ಗಳಲ್ಲಿಯೂ ಅವರಿಬ್ಬರ ಆಟ ಅಗತ್ಯವಾಗಿದೆ. ಈ ವಿಷಯದಲ್ಲಿ ಸಮತೋಲನ ಸಾಧಿಸಲು ಕೊಹ್ಲಿ ಹೆಣಗಾಡುತ್ತಿದ್ದಾರೆ. ಆದರೂ ಈ ಒತ್ತಡದ ನಡುವೆಯೂ ತಮ್ಮ ಅಮೋಘ ಬ್ಯಾಟಿಂಗ್ ಸಾಮರ್ಥ್ಯವನ್ನು ಮೆರೆದಿದ್ದನ್ನು ಮೆಚ್ಚಲೇಬೇಕು. ನಾಯಕತ್ವದ ಒತ್ತಡ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ ಎನ್ನುವುದು ಇದರಿಂದ ಸುಸ್ಪಷ್ಟ. ಅಲ್ಲದೇ ಇದು ಅವರ ಮನೋದೈಹಿಕ ಗಟ್ಟಿತನದ ಉದಾಹರಣೆಯೂ ಹೌದು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 22 ಸಾವಿರ ರನ್‌ ಗಳಿಸಿರುವ ವಿರಾಟ್, ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ಮೀರಿಸಬಲ್ಲ ಆಟಗಾರನೆಂಬ ನಿರೀಕ್ಷೆಯೂ ಅವರ ಮೇಲಿದೆ. ಆದರೆ ಟ್ರೋಫಿ ಗೆದ್ದು ಕೊಡುವ ನಾಯಕತ್ವದ ಗುಣ ಅವರಲ್ಲಿ ಇನ್ನೂ ಬೆಳೆಯಬೇಕಿದೆ. ಅದೇ ಧೋನಿಯಂತೆ ಶಾಂತಚಿತ್ತದ ನಾಯಕನಾಗಿ ಬೆಳೆಯುವ ಸಾಮರ್ಥ್ಯ ರೋಹಿತ್ ಶರ್ಮಾಗೆ ಇದೆ ಎಂದು ಹೇಳಲಾಗುತ್ತಿದೆ.

ರೋಹಿತ್ ಹಂಗಾಮಿ ನಾಯಕತ್ವ ವಹಿಸಿದ್ದ 10 ಏಕದಿನ ಪಂದ್ಯಗಳಲ್ಲಿ ಭಾರತವು ಎಂಟರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. ಟಿ20ಯಲ್ಲಿಯೂ 19 ಪಂದ್ಯಗಳಲ್ಲಿ 15ರಲ್ಲಿ ಜಯಿಸಿ, ನಾಲ್ಕರಲ್ಲಿ ಪರಾಭವಗೊಂಡಿರುವುದು ಉತ್ತಮ ಸಾಧನೆಯೇ. ಆದ್ದರಿಂದ ಬಿಳಿಚೆಂಡಿನ ಉಸಾಬರಿಯನ್ನು ಅವರಿಗೆ ಬಿಟ್ಟುಕೊಡುವುದು ಸೂಕ್ತ ಎನ್ನಲಾಗುತ್ತಿದೆ.

ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳ ದಾಖಲೆಯಿರುವ ಏಕೈಕ ಬ್ಯಾಟ್ಸ್‌ಮನ್ ಮುಂಬೈಕರ್ ರೋಹಿತ್ ಟಿ20 ಕ್ರಿಕೆಟ್‌ನಲ್ಲಿಯೂ ಚುರುಕಿನ ಆಟಗಾರ. ದೈಹಿಕವಾಗಿ ವಿರಾಟ್‌ ಅವರಷ್ಟು ಫಿಟ್‌ ಎನಿಸದಿದ್ದರೂ ವಿದೇಶಿ ನೆಲದಲ್ಲಿ ವೇಗಿಗಳಿಗೆ ಪುಲ್‌ ಶಾಟ್‌ಗಳ ಉತ್ತರ ನೀಡುವಲ್ಲಿ ರೋಹಿತ್ ಗಟ್ಟಿಗ. ಅದಲ್ಲದೇ ಏಕದಿನ ಮತ್ತು ಚುಟುಕು ಮಾದರಿಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಸಂಯೋಜನೆಗಳ ಕುರಿತು ತ್ವರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ರೋಹಿತ್ ಗೆ ಇದೆ ಎಂದು ಗಂಭೀರ್ ಪ್ರತಿಪಾದಿಸುತ್ತಾರೆ.

’ಕೊಹ್ಲಿ ಬ್ಯಾಟಿಂಗ್‌ ಮಾಡಲು ಕ್ರೀಸ್‌ಗೆ ಬಂದಾಗ ತನ್ನನ್ನು ನಿದ್ದೆಯಿಂದ ಎಬ್ಬಿಸು ಎಂದು ನನ್ನ ಮಗ ಹೇಳುತ್ತಾನೆ. ಆ ಮಟ್ಟಿಗೆ ನವಪೀಳಿಗೆಯನ್ನು ಪ್ರಭಾವಿಸಿರುವ ಬ್ಯಾಟ್ಸ್‌ಮನ್ ಕೊಹ್ಲಿ. ಅವರು ನಾಯಕರಾಗಿಯೂ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಅವರು ಕೆಟ್ಟ ನಾಯಕರೆಂದು ನಾನು ಹೇಳುವುದಿಲ್ಲ. ಆದರೆ ಆಟದ ಅಗತ್ಯಕ್ಕೆ ತಕ್ಕಂತೆ ಸೂಕ್ತ ವ್ಯಕ್ತಿಯ ಕುರಿತು ಹೇಳುವುದಾದರೆ ಭಾರತ ಸೀಮಿತ ಓವರ್‌ಗಳ ತಂಡಕ್ಕೆ ರೋಹಿತ್ ಅವರನ್ನು ನಾಯಕರನ್ನಾಗಿ ಮಾಡಬೇಕು. ಇದೊಂದು ಪ್ರಯೋಗ ಮಾಡಿ ನೋಡುವುದರಲ್ಲಿ ತಪ್ಪಿಲ್ಲ. ಭಾರತದ ಕ್ರಿಕೆಟ್‌ಗೆ ಇಬ್ಬರೂ ಮಹತ್ವದ ವ್ಯಕ್ತಿಗಳು‘ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಹೇಳುತ್ತಾರೆ.

ಸದ್ಯಕ್ಕಂತೂ ಏಕದಿನ ಸರಣಿ ಭಾರತದ ಕೈಜಾರಿದೆ. ಇನ್ನುಳಿದಿರುವು ಟಿ20 ಸರಣಿ. ಅದರಲ್ಲಿ ವಿರಾಟ್ ನಾಯಕತ್ವವು ನಿಕಷಕ್ಕೊಳಗಾಗಲಿದೆ. ನಂತರ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ; ಒಂದು ಪಂದ್ಯದಲ್ಲಿ ಮಾತ್ರ ವಿರಾಟ್ ಆಡಿ ’ಪಿತೃತ್ವ ರಜೆ‘ಗೆ ತೆರಳುವರು. ಇನ್ನೇನಿದ್ದರೂ ನಾಯಕತ್ವದ ಕುರಿತ ನಿರ್ಧಾರ ಮುಂದಿನ ವರ್ಷವೇ ನಡೆಯುತ್ತದೆ.

ಇದೆಲ್ಲದರ ನಡುವೆ ಅಭಿಮಾನಿಗಳ ವಲಯದಲ್ಲಿ ಮತ್ತೊಂದು ಕುತೂಹಲವೂ ಗರಿಗೆದರಿದೆ. ಅದೇನೆಂದರೆ, 2020ರಲ್ಲಿ ಕೊಹ್ಲಿ ಒಂದೂ ಶತಕ ಬಾರಿಸಿಲ್ಲ. ಬುಧವಾರ ನಡೆಯುವ ಏಕದಿನ ಪಂದ್ಯದಲ್ಲಿ ಅವರು ನೂರು ಗಳಿಸುವರೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.ಹೋದ ನವೆಂಬರ್‌ನಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅವರು ಶತಕ ಗಳಿಸಿದ್ದು ಕೊನೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಗಳಿಸಲೂ ಅವರಿಗೆ ಇನ್ನೂ 23 ರನ್‌ಗಳಷ್ಟೇ ಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT