ಶನಿವಾರ, ಜನವರಿ 25, 2020
22 °C

Video | ವಿಕೆಟ್ ಪಡೆದು ಅಂಗಳದಲ್ಲೇ ಜಾದೂ ಮಾಡಿ ಸಂಭ್ರಮಿಸಿದ ಆಫ್ರಿಕಾ ಬೌಲರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾರ್ಲ್‌(ದಕ್ಷಿಣ ಆಫ್ರಿಕಾ): ಅಂಗಳದಲ್ಲಿ ಎದುರಾಳಿ ತಂಡದ ವಿಕೆಟ್‌ ಪಡೆದು ಬೌಲರ್‌ಗಳು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಬ್ಯಾಟ್ಸ್‌ಮನ್‌ಗಳನ್ನೇ ನುಂಗುವಂತೆ ನೋಡುವ ಬಹುತೇಕ ಬೌಲರ್‌ಗಳ ನಡುವೆ ಅಂಗಳದುದ್ದಕ್ಕೂ ಓಡುವ ಇಮ್ರಾನ್‌ ತಾಹಿರ್‌, ಎರಡೂ ಕೈಗಳನ್ನು ಅಗಲಿಸಿ ಆಕಾಶದತ್ತ ಮುಖಮಾಡುತ್ತಿದ್ದ ಶಾಹಿದ್‌ ಅಫ್ರಿದಿ, ಮುಷ್ಠಿ ಬಿಗಿ ಹಿಡಿದು ಗಾಳಿಯಲ್ಲಿ ಗುದ್ದು ನೀಡುವ ಬ್ರೆಟ್‌ ಲೀ, ನೆಲಕ್ಕೆ ಬಡಿದು ಸಂಭ್ರಮಿಸುತ್ತಿದ್ದ ಶ್ರೀಶಾಂತ್‌, ಸೆಲ್ಯೂಟ್‌ ಹೊಡೆದು ಗೌರವಿಸುವ ಶೆಲ್ಡನ್‌ ಕಾರ್ಟ್ರೆಲ್‌, ಇಬಾದತ್‌ ಹೊಸೈನ್‌ ಅವರಂತಹವರು ಮಾತ್ರ ಗಮನ ಸೆಳೆಯುತ್ತಾರೆ. ಆ ಪಟ್ಟಿಗೆ ಹೊಸ ಸೇರ್ಪಡೆ ದಕ್ಷಿಣ ಆಫ್ರಿಕಾದ ಲೆಗ್‌ ಸ್ಪಿನ್ನರ್‌ ತಬ್ರೇಜ್‌ ಶಮ್ಸಿ.

ದಕ್ಷಿಣ ಆಫ್ರಿಕಾ ಟಿ20 ಟೂರ್ನಿ ಎಂಝಾಂಸಿ ಸೂಪರ್‌ ಲೀಗ್‌ನಲ್ಲಿ (ಎಂಎಸ್‌ಎಲ್‌) ಪಾರ್ಲ್‌ ರಾಕ್ಸ್‌ ಪರ ಆಡುವ ತಬ್ರೇಜ್‌, ಡರ್ಬನ್‌ ಹೀಟ್‌ ಎದುರಿನ ಪಂದ್ಯದಲ್ಲಿ ವಿಕೆಟ್‌ ಪಡೆದು ಅಂಗಳದಲ್ಲೇ ಜಾದೂ ಮಾಡಿದ್ದಾರೆ. ಆಮೂಲಕ ಈ ಪಂದ್ಯದಲ್ಲಿ ತಮ್ಮ ತಂಡ ಸೋತರೂ ತಬ್ರೇಜ್‌ ಅಭಿಮಾನಿಗಳ ಮನ ಗೆದ್ದರು.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾರ್ಲ್‌ ತಂಡ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 195 ರನ್‌ ಕಲೆಹಾಕಿತ್ತು. ಈ ಸವಾಲಿನ ಮೊತ್ತವನ್ನು ಬೆನ್ನುಹತ್ತಿದ್ದ ಡರ್ಬನ್‌ 18.5 ಓವರ್‌ಗಳಲ್ಲಿ 197 ರನ್‌ ಗಳಿಸಿ ಆರು ವಿಕೆಟ್‌ಗಳಿಂದ ಪಂದ್ಯ ಗೆದ್ದು ಸಂಭ್ರಮಿಸಿತು.

ಡರ್ಬನ್‌ ಇನಿಂಗ್ಸ್‌ನ ಎಂಟನೇ ಓವರ್‌ ಬೌಲ್‌ ಮಾಡಿದ ತಬ್ರೇಜ್‌, ವಿಹಾಬ್‌ ಲುಬ್ಬೆ ವಿಕೆಟ್ ಪಡೆದರು. ಲಾಂಗ್‌ ಆಫ್‌ನತ್ತ ಬೌಂಡರಿ ಬಾರಿಸಲು ಮುಂದಾದ ಲುಬ್ಬೆ, ಹರ್ಡಸ್‌ ವಿಜಿಯಾನ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಈ ವೇಳೆ ಕೈಯಲ್ಲಿ ಕೆಂಪು ವಸ್ತ್ರ ಹಿಡಿದು ಅದರಿಂದ ಬಿಳಿ ಬಣ್ಣದ ದಂಡವನ್ನು ಹೊರತಂದ ತಬ್ರೇಜ್‌ ಮ್ಯಾಜಿಕ್‌ ಮಾಡುವ ಮೂಲಕ ವಿಕೆಟ್‌ ಸಂಭ್ರಮ ಆಚರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು