ಶನಿವಾರ, ಅಕ್ಟೋಬರ್ 31, 2020
21 °C
ವಿರುಷ್ಕಾ ವಿವಾದ

‘ನಾವು ಭಾರತೀಯರಿಗೆ ಹಾಸ್ಯಪ್ರಜ್ಞೆ ಇಲ್ಲ’: ಗಾವಸ್ಕರ್ ಬೆಂಬಲಕ್ಕೆ ನಿಂತ ಫಾರೂಕ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಕಿಂಗ್ಸ್‌ ಇಲವೆನ್ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಅವರು ವಿರಾಟ್‌ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಹೆಸರನ್ನೂ ಎಳೆದು ತಂದಿದ್ದರು. ಇದು ವಿವಾದ ಸೃಷ್ಟಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಗಾವಸ್ಕರ್ ಹೇಳಿಕೆಯ ಪರ ಮತ್ತು ವಿರೋಧದ ಟ್ವೀಟ್‌ಗಳು ಹರಿದಾಡಿದ್ದವು.

ಪಂಜಾಬ್‌ ಹಾಗೂ ಬೆಂಗಳೂರು ತಂಡಗಳು ಕಳೆದ ಗುರುವಾರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್ 90 ರನ್‌ ಆಸುಪಾಸಿನಲ್ಲಿದ್ದಾಗ ನೀಡಿದ್ದ ಎರಡು ಕ್ಯಾಚ್‌ಗಳನ್ನು ವಿರಾಟ್‌ ನೆಲಕ್ಕೆ ಕೈಚೆಲ್ಲಿದ್ದರು. ಬಳಿಕ ಅವರು ಅಜೇಯ 132ರನ್‌ ಸಿಡಿಸಿದ್ದರು. ಇದರ ಪರಿಣಾಮವಾಗಿ ಪಂಜಾಬ್‌ ತಂಡ 206 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ್ದ ಆರ್‌ಸಿಬಿ ಕೇವಲ 109 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 97 ರನ್‌ಗಳ ಸೋಲು ಒಪ್ಪಿಕೊಂಡಿತ್ತು. ಕೊಹ್ಲಿ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದರು.

ಇದನ್ನೂ ಓದಿ: ‘ನಾನು ಅನುಷ್ಕಾ ಅವರನ್ನು ತೆಗಳಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’

ಪಂದ್ಯದ ವೀಕ್ಷಕ ವಿವರಣೆ ನೀಡುವ ವೇಳೆ ಸುನೀಲ್‌ ಗಾವಸ್ಕರ್ ಅವರು‌, ‘ಲಾಕ್‌ಡೌನ್‌ ವೇಳೆ ಕೊಹ್ಲಿ ಕೇವಲ ಅನುಷ್ಕಾ ಅವರ ಬೌಲಿಂಗ್‌ನಲ್ಲಿ ಅಭ್ಯಾಸ ಮಾಡಿದ್ದಾರೆ’ ಎಂದಿದ್ದರು. ವಿವಾದ ಸೃಷ್ಟಿಯಾದ ಬಳಿಕ ಸ್ಪಷ್ಟನೆ ನೀಡಿದ್ದ ಅವರು ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದು ಹೇಳಿದ್ದರು.

ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಫಾರೂಕ್‌ ಇಂಜಿನಿಯರ್, ‘ನಾವು ಭಾರತೀಯರಿಗೆ ಹಾಸ್ಯ ಪ್ರಜ್ಞೆ ಇಲ್ಲ. ಸುನೀಲ್‌, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬಗ್ಗೆ ನಿಜಕ್ಕೂ ಹಾಗೆ ಹೇಳಿದ್ದರೆ, ಅದು ಹಾಸ್ಯಮಯವಾಗಿ ಹೇಳಿರಬೇಕು. ಕೆಟ್ಟ ಅಥವಾ ಅವಹೇಳನಕಾರಿ ಅಭಿರುಚಿಯಲ್ಲಿ ಅಲ್ಲ’ ಎಂದು ಹೇಳಿರುವುದಾಗಿ ಪಾಕಿಸ್ತಾನ ಅಬ್ಸರ್ವರ್‌ ಪತ್ರಿಕೆ ವರದಿ ಮಾಡಿದೆ.

‘ಸುನೀಲ್‌ ಅವರನ್ನು ಚೆನ್ನಾಗಿ ಬಲ್ಲೆ. ಅವರು ಇದನ್ನು ತಮಾಷೆಯಾಗಿ ಹೇಳಿರಬಹುದು. ನಾನು ಅನುಷ್ಕಾ ಬಗ್ಗೆ ಮಾತನಾಡಿದ್ದಾಗಲೂ ಜನರು ತುಂಬಾ ಗಂಭೀರವಾಗಿ ವರ್ತಿಸಿದ್ದರು’ ಎಂದು ಸೇರಿಸಿದ್ದಾರೆ.

ಇದನ್ನೂ ಓದಿ: ‘ಚಾಲೊಕೇಟ್’‌ ಎಂದು ಬರೆದು ಇನ್ನೊಮ್ಮೆ ಓದಿ ಎಂದ ರೋಹನ್ ಗಾವಸ್ಕರ್

ಇಂಗ್ಲೆಂಡ್‌ನಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಫಾರೂಕ್‌ ಅವರು ವಿರಾಟ್‌ ಕೊಹ್ಲಿ ಮತ್ತು ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದರು.

‘ಇಂಗ್ಲೆಂಡ್‌ನಲ್ಲಿ ಈಚೆಗೆ ನಡೆದಿದ್ದ ಕ್ರಿಕೆಟ್‌ ಪಂದ್ಯವೊಂದರಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಚಹಾ ಸರಬರಾಜು ಮಾಡುತ್ತಿದ್ದರು. ಅದೊಂದು ಮಿಕ್ಕಿ ಮೌಸ್‌ ಆಯ್ಕೆ ಸಮಿತಿ’ ಎಂದು ಕಿಡಿ ಕಾರಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಅನುಷ್ಕಾ, ‘ವಿಶ್ವಕಪ್ ಟೂರ್ನಿಯಲ್ಲಿ ನಾನು ಬಂದಿದ್ದು ಒಂದೇ ಪಂದ್ಯಕ್ಕೆ. ಅದೂ ಕುಟುಂಬಕ್ಕೆ ಮೀಸಲಾದ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದೆ. ಆಯ್ಕೆ ಸಮಿತಿಯ ಗ್ಯಾಲರಿಯಲ್ಲಿ ಕುಳಿತಿರಲಿಲ್ಲ. ನಿಮಗೆ (ಫಾರೂಕ್) ಆಯ್ಕೆ ಸಮಿತಿಯ ಅರ್ಹತೆ ಕುರಿತು ಹೇಳಿಕೆ ನೀಡುವುದಿದ್ದರೆ ನೀಡಿ. ನನ್ನ ಹೆಸರು ಎಳೆದು ವಿಷಯವನ್ನು ಅತಿರಂಜಿತಗೊಳಿಸುವುದು ನಿಮಗೆ ಶೋಭೆ ತರುವುದಿಲ್ಲ’ ಎಂದು ತಿರುಗೇಟು ನೀಡಿದ್ದರು.

ಇದನ್ನೂ ಓದಿ: ‘ಮಿಕ್ಕಿ ಮೌಸ್ ಆಯ್ಕೆ ಸಮಿತಿ’: ಫಾರೂಕ್ ವ್ಯಂಗ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು