ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್‌ ಕನಸು ಕಮರಿದ್ದೇಕೆ?

Last Updated 9 ನವೆಂಬರ್ 2020, 11:09 IST
ಅಕ್ಷರ ಗಾತ್ರ
ADVERTISEMENT
""
"ಸಹ ಆಟಗಾರರೊಂದಿಗೆ ಕ್ರಿಸ್‌ ಮಾರಿಸ್‌ (ಮಧ್ಯ) –ಪಿಟಿಐ ಚಿತ್ರ"
"ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಆ್ಯರನ್‌ ಫಿಂಚ್‌ ಬೌಲ್ಡ್‌ ಆಗಿದ್ದ ರೀತಿ –ಪಿಟಿಐ ಚಿತ್ರ"
"ಡೇಲ್‌ ಸ್ಟೇಯ್ನ್‌ –ಎಎಫ್‌ಪಿ ಚಿತ್ರ"

ಕರ್ನಾಟಕದ ಕ್ರಿಕೆಟ್‌ ಪ್ರಿಯರು ಆ ಒಂದು ಕ್ಷಣವನ್ನು ಕಣ್ತುಂಬಿಕೊಳ್ಳಲು ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ ಶುರುವಾದಾಗಲೆಲ್ಲಾ ‘ಈ ಸಲ ಕಪ್‌ ನಮ್ದೆ’ ಎನ್ನುವ ಘೋಷವಾಕ್ಯದೊಂದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವನ್ನು ಹುರಿದುಂಬಿಸುತ್ತಲೇ ಇದ್ದಾರೆ. ತಾವು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ತಂಡವು ಐಪಿಎಲ್‌ ಟ್ರೋಫಿಯೊಂದಿಗೆ ವಿಜಯ ವೇದಿಕೆಯಲ್ಲಿ ಸಂಭ್ರಮಿಸುವ ಅಪೂರ್ವ ಗಳಿಗೆಯನ್ನು ಕಣ್ತುಂಬಿಕೊಳ್ಳಬೇಕೆಂಬುದು ಅವರೆಲ್ಲರ ಬಯಕೆ. ಅರಬ್ಬರ ನಾಡಿನಲ್ಲಿ ನಡೆದ ಈ ಸಲದ ಟೂರ್ನಿಯಲ್ಲಿಆ ಕನಸು ಕೈಗೂಡಬಹುದೆಂಬ ನಿರೀಕ್ಷೆ ಗರಿಗೆದರಿತ್ತು. ಅದೂ ಹುಸಿಯಾಗಿದೆ. ವಿರಾಟ್‌ ಕೊಹ್ಲಿ ಬಳಗ ಮೊದಲ ಎಲಿಮಿನೇಟರ್‌ ಹೋರಾಟದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ.

‘ಮಿಲಿಯನ್‌ ಡಾಲರ್‌ ಬೇಬಿ’ ಎಂದೇ ಕರೆಯಲ್ಪಡುವ ಐಪಿಎಲ್‌ಗೆ ಈಗ 13ರ ಹರೆಯ. ಅಂದರೆ ಲೀಗ್‌ ಶುರುವಾಗಿ 13ವರ್ಷಗಳಾಗಿವೆ. ಈ ಅವಧಿಯಲ್ಲಿ ಆರ್‌ಸಿಬಿ ಮೂರು ಸಲ (2009, 2011 ಮತ್ತು 2016) ಫೈನಲ್‌ ಪ್ರವೇಶಿಸಿದೆ. ಹೀಗಿದ್ದರೂ ಪ್ರಶಸ್ತಿ ಮಾತ್ರ ಕೈಗೆಟುಕಿಲ್ಲ.

ಈ ಬಾರಿ ತಂಡದ ಆರಂಭ ಅಮೋಘವಾಗಿಯೇ ಇತ್ತು. ಮೊದಲ ಏಳು ಪಂದ್ಯಗಳ ಪೈಕಿ ಐದರಲ್ಲಿ ಕೊಹ್ಲಿ ಪಡೆ ಗೆದ್ದಿದ್ದರಿಂದ ಅಭಿಮಾನಿಗಳ ಮನದಲ್ಲಿ ಭರವಸೆಯ ಅಲೆಯೊಂದು ಎದ್ದಿತ್ತು. ನಂತರದ ಮೂರು ಪಂದ್ಯಗಳಲ್ಲೂ ತಂಡ ಚೆನ್ನಾಗಿಯೇ ಆಡಿ 14 ಪಾಯಿಂಟ್ಸ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿತ್ತು.

ಲೀಗ್‌ ಹಂತದ ಕೊನೆಯ ನಾಲ್ಕು ಪಂದ್ಯಗಳಲ್ಲಿ ತಂಡದ ನಿಜ ಬಣ್ಣ ಬಯಲಾಗಿತ್ತು. ಎಲ್ಲಾ ಹಣಾಹಣಿಗಳಲ್ಲೂ ಕೊಹ್ಲಿ ಬಳಗಕ್ಕೆ ಸೋಲು ಎದುರಾಗಿತ್ತು. ಹೀಗಿದ್ದರೂ ಉತ್ತಮ ರನ್‌ ರೇಟ್‌ ಆಧಾರದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಹಿಂದಿಕ್ಕಿ ನಾಲ್ಕು ವರ್ಷಗಳ ಬಳಿಕ ‘ಪ್ಲೇ ಆಫ್‌’ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿತ್ತು. ಕೊನೆಯ ನಾಲ್ಕು ಸೋಲುಗಳು ತಂಡಕ್ಕೆ ಪಾಠವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಸನ್‌ರೈಸರ್ಸ್‌ ಎದುರಿನ ಎಲಿಮಿನೇಟರ್‌ನಲ್ಲೂ ಮತ್ತದೇ ತಪ್ಪುಗಳನ್ನು ಮಾಡಿದ ಕೊಹ್ಲಿ ಪಡೆ ಕೈಸುಟ್ಟುಕೊಂಡಿತು.

ಈ ಬಾರಿ ಆರ್‌ಸಿಬಿ ಪ್ರಶಸ್ತಿ ಕನಸು ಕಮರಲು ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದ ಅಂಶಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

1) ಎದುರಾಳಿ ಬೌಲರ್‌ಗಳಿಗೆ ‘ಪಂಚ್‌’ ನೀಡದ ಫಿಂಚ್‌..

ಈ ಹಿಂದೆ ಆರ್‌ಸಿಬಿಗೆ ಅಬ್ಬರದ ಆರಂಭ ನೀಡುತ್ತಿದ್ದವರು ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌. 2018ರಲ್ಲಿ ಗೇಲ್‌ ಅವರನ್ನು ತಂಡದಿಂದ ಕೈಬಿಡಲಾಯಿತು. ಅವರ ಸ್ಥಾನ ತುಂಬಬಲ್ಲ ಸ್ಫೋಟಕ ಬ್ಯಾಟ್ಸ್‌ಮನ್‌ನ ಹುಡುಕಾಟದಲ್ಲಿದ್ದ ಆರ್‌ಸಿಬಿ ಫ್ರಾಂಚೈಸ್‌ ಕಣ್ಣಿಗೆ ಬಿದ್ದಿದ್ದು ಆಸ್ಟ್ರೇಲಿಯಾದ ಆ್ಯರನ್‌ ಫಿಂಚ್. ಟ್ವೆಂಟಿ–20 ಮಾದರಿಯಲ್ಲಿ 154.65 ಸ್ಟ್ರೈಕ್‌ರೇಟ್‌ ಹೊಂದಿರುವ ಫಿಂಚ್‌, ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಬಹುದೆಂದು ಅಂದಾಜಿಸಲಾಗಿತ್ತು. ಆ ನಿರೀಕ್ಷೆ ತಲೆ ಕೆಳಗಾಯಿತು.

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಆ್ಯರನ್‌ ಫಿಂಚ್‌ ಬೌಲ್ಡ್‌ ಆಗಿದ್ದ ರೀತಿ –ಪಿಟಿಐ ಚಿತ್ರ

ಐಪಿಎಲ್‌ನಲ್ಲಿ ಫಿಂಚ್,‌ ರನ್‌ ಗಳಿಸಲು ಪರದಾಡುತ್ತಾರೆ ಎಂಬ ಮಾತಿತ್ತು. ಅದು ಹಿಂದಿನ ಆವೃತ್ತಿಗಳಲ್ಲಿ ಸಾಬೀತಾಗಿತ್ತು. ಈ ಅಪವಾದವನ್ನು ಕಳಚಲು ಫಿಂಚ್‌ ಮತ್ತೆ ವಿಫಲರಾದರು. ಈ ಬಾರಿ 12 ಪಂದ್ಯಗಳನ್ನು ಆಡಿದ್ದ ಅವರು 22.33ರ ಸರಾಸರಿಯಲ್ಲಿ 268 ರನ್‌ ಕಲೆಹಾಕಲಷ್ಟೇ ಶಕ್ತರಾದರು. ಅವರು ಗಳಿಸಿದ್ದು ಒಂದೇ ಅರ್ಧಶತಕ. ಈ ಬಾರಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅವರದ್ದು 30ನೇ ಸ್ಥಾನ (ನ.9ರ ಅಂತ್ಯಕ್ಕೆ).

ಕನ್ನಡಿಗ ದೇವದತ್ತ ಪಡಿಕ್ಕಲ್‌ ತಮ್ಮ ಪಾಲಿನ ಚೊಚ್ಚಲ ಐಪಿಎಲ್‌ನಲ್ಲೇ ಮಿಂಚಿದರು. ಅವರ ಜೊತೆ ಸೇರಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಲೂ ಫಿಂಚ್‌ ವಿಫಲರಾದರು.

2) ಕೊಹ್ಲಿ–ಡಿವಿಲಿಯರ್ಸ್‌ ಅವರನ್ನೇ ಅತಿಯಾಗಿ ನೆಚ್ಚಿಕೊಂಡಿದ್ದು..

ಆರ್‌ಸಿಬಿಯ ಪ್ರಮುಖ ಆಕರ್ಷಣೆಯಾಗಿರುವುದು ನಾಯಕ ವಿರಾಟ್‌ ಕೊಹ್ಲಿ ಮತ್ತು ಕ್ರಿಕೆಟ್‌ ಲೋಕದ ‘ಸೂಪರ್‌ ಮ್ಯಾನ್‌’ ಎಬಿ ಡಿವಿಲಿಯರ್ಸ್‌. ಇವರಿಬ್ಬರು ವಿಶ್ವ ಶ್ರೇಷ್ಠರ ಸಾಲಿಗೆ ಸೇರುವವರು. ತಂಡವು ಇವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇವರಿಬ್ಬರೂ ಬೇಗ ಔಟಾದರೆ ಆರ್‌ಸಿಬಿ ಕಥೆ ಮುಗಿಯಿತೆಂದೇ ಅರ್ಥ. ಇದುವರೆಗಿನ ಎಲ್ಲಾ ಪಂದ್ಯಗಳ ಫಲಿತಾಂಶಗಳ ಮೇಲೆ ಕಣ್ಣಾಡಿಸಿದರೆ ಇದು ಮನದಟ್ಟಾಗುತ್ತದೆ.

ಎಬಿ ಡಿವಿಲಿಯರ್ಸ್‌ (ಎಡ) ಮತ್ತು ವಿರಾಟ್‌ ಕೊಹ್ಲಿ –ಎಎಫ್‌ಪಿ ಚಿತ್ರ

ಅಂದಹಾಗೆ ವಿರಾಟ್‌, ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಅವರ ಖಾತೆಯಲ್ಲಿ 5,673ರನ್‌ಗಳಿವೆ. ಆದರೆ ಈ ಬಾರಿ ಅವರು ತುಸು ಮಂಕಾದಂತೆ ಕಂಡರು. ಆರಂಭದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 1 ಮತ್ತು 3 ರನ್‌ಗಳಷ್ಟೇ ಕಲೆಹಾಕಿದ್ದ ಅವರು ನಂತರ ಲಯ ಕಂಡುಕೊಂಡಿದ್ದರು. ಆದರೆ ಲೀಗ್‌ ಹಂತದ ಕೊನೆಯ ನಾಲ್ಕು ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಸಿಡಿದಿದ್ದು ಕ್ರಮವಾಗಿ 9, 7, 29 ಮತ್ತು 6ರನ್‌ಗಳಷ್ಟೇ. ಒಟ್ಟಾರೆ ಈ ಬಾರಿ ಅವರ ಖಾತೆಗೆ ಸೇರಿದ್ದು 466ರನ್‌ಗಳು. ಎಬಿಡಿ 15 ಪಂದ್ಯಗಳಿಂದ 454ರನ್‌ ಕಲೆಹಾಕಿದರು.

3) ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ..

ಈ ಬಾರಿ ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ. ಗುರುಕೀರತ್‌ ಸಿಂಗ್‌ ಮಾನ್‌, ಶಿವಂ ದುಬೆ ಮತ್ತು ವಾಷಿಂಗ್ಟನ್‌ ಸುಂದರ್‌ ಅವರು ಜವಾಬ್ದಾರಿ ಅರಿತು ಆಡಲು ವಿಫಲರಾದರು. ಹೀಗಾಗಿ ಈ ಬಾರಿಯ ಐಪಿಎಲ್‌ನ ‘ಮಿಡಲ್‌ ಓವರ್‌’ಗಳಲ್ಲಿ ಅತಿ ಕಡಿಮೆ ರನ್‌ ರೇಟ್‌ ಹೊಂದಿದ್ದ ತಂಡ ಎಂಬ ಅಪವಾದ ಆರ್‌ಸಿಬಿಗೆ ಮೆತ್ತಿಕೊಂಡಿತು.

4) ಮಾರಿಸ್‌ ಗಾಯಗೊಂಡಿದ್ದು..

ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಗಾಯಗೊಂಡಿದ್ದು ಕೂಡ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಈ ಬಾರಿಯ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸ್‌ ₹10 ಕೋಟಿ ನೀಡಿ ಮಾರಿಸ್‌ ಅವರನ್ನು ಸೆಳೆದುಕೊಂಡಿತ್ತು. ಗಾಯದಿಂದಾಗಿ ಮೊದಲ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದ ಅವರು ನಂತರ ಕಣಕ್ಕಿಳಿದು ಬೌಲಿಂಗ್‌ನಲ್ಲಿ ಮಿಂಚಿದ್ದರು. ಮತ್ತೆ ಗಾಯಗೊಂಡ ಮಾರಿಸ್‌, ಎಲಿಮಿನೇಟರ್‌ ಪಂದ್ಯದಿಂದ ಹಿಂದೆ ಸರಿದಿದ್ದರು. ಇದರಿಂದಾಗಿ ತಂಡವು ಮೊಹಮ್ಮದ್‌ ಸಿರಾಜ್‌ ಮತ್ತು ನವದೀಪ್‌ ಸೈನಿ ಅವರ ಮೇಲೆ ಹೆಚ್ಚು ಅವಲಂಬಿತವಾಗಬೇಕಾಯಿತು. ಇವರು ಡೆತ್‌ ಓವರ್‌ಗಳಲ್ಲಿ ಅಷ್ಟೇನೂ ಪರಿಣಾಮಕಾಯಾಗಲಿಲ್ಲ. ಉಮೇಶ್‌ ಯಾದವ್‌, ಮೋಯಿನ್‌ ಅಲಿ ಅವರ ಜಾದೂ ಕೂಡ ಈ ಬಾರಿ ನಡೆಯಲಿಲ್ಲ. ಹೀಗಾಗಿ ಇವರು ‘ಬೆಂಚ್‌’ ಕಾಯುವುದು ಅನಿವಾರ್ಯವಾಯಿತು.

ಸಹ ಆಟಗಾರರೊಂದಿಗೆ ಕ್ರಿಸ್‌ ಮಾರಿಸ್‌ (ಮಧ್ಯ) –ಪಿಟಿಐ ಚಿತ್ರ

5) ಫೈರ್‌ ಆಗದ ಸ್ಟೇನ್‌ ‘ಗನ್‌’

ಡೇಲ್‌ ಸ್ಟೇಯ್ನ್‌ –ಎಎಫ್‌ಪಿ ಚಿತ್ರ

ಒಂದು ಕಾಲದಲ್ಲಿ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇಯ್ನ್‌ ಹೆಸರು ಕೇಳಿದೊಡನೆಯೇ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಶುರುವಾಗುತ್ತಿತ್ತು. ಅವರು ಬುಲೆಟ್‌ ವೇಗದಲ್ಲಿ ಎಸೆಯುತ್ತಿದ್ದ ಚೆಂಡನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದರು. ವಯಸ್ಸಿನ ಕಾರಣವೋ ಏನೊ ಈಗ ಸ್ಟೇನ್ ಅವರಲ್ಲಿ ಆ ಕಸುವು ಕಡಿಮೆಯಾದಂತಿದೆ. ಅದಕ್ಕೆ ಈ ಬಾರಿಯ ಐಪಿಎಲ್‌ ಸಾಕ್ಷಿ. ಈ ಸಲ ಮೂರು ಪಂದ್ಯಗಳಲ್ಲಿ ಮೈದಾನಕ್ಕಿಳಿದಿದ್ದ ಅವರು 11.4 ಓವರ್‌ ಬೌಲ್‌ ಮಾಡಿ133 ರನ್‌ ಕೊಟ್ಟಿದ್ದರು. ಗಳಿಸಿದ್ದು ಒಂದೇ ವಿಕೆಟ್‌. ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಅವರ ಸ್ಥಾನ 74.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT