ಶುಕ್ರವಾರ, ನವೆಂಬರ್ 15, 2019
21 °C

ಮಹಿಳಾ ಕ್ರಿಕೆಟ್‌ | ಪೂನಮ್‌ ರಾವುತ್‌ ಅರ್ಧಶತಕ: ಭಾರತಕ್ಕೆ ಮಣಿದ ವಿಂಡೀಸ್‌

Published:
Updated:
Prajavani

ನಾರ್ತ್‌ ಸೌಂಡ್‌: ಪೂನಮ್‌ ರಾವುತ್‌ (77; 128ಎ, 4ಬೌಂ) ಅವರ ತಾಳ್ಮೆಯ ಅರ್ಧಶತಕ ಮತ್ತು ಸ್ಪಿನ್ನರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಐಸಿಸಿ ವಿಶ್ವ ಚಾಂಪಿಯನ್‌ಷಿಪ್‌ನ ಅಂಗವಾಗಿ ನಡೆಯುತ್ತಿರುವ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ 53ರನ್‌ಗಳಿಂದ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1–1 ಸಮಬಲ ಸಾಧಿಸಿದೆ.

ವಿವಿಯನ್ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 191ರನ್‌ ಪೇರಿಸಿತು.

ಸುಲಭ ಗುರಿ ಬೆನ್ನಟ್ಟಿದ ಆತಿಥೇಯರು, ರಾಜೇಶ್ವರಿ ಗಾಯಕವಾಡ (27ಕ್ಕೆ2), ಪೂನಮ್‌ ಯಾದವ್‌ (26ಕ್ಕೆ2) ಮತ್ತು ದೀಪ್ತಿ ಶರ್ಮಾ (25ಕ್ಕೆ2) ಅವರು ಬೀಸಿದ ಸ್ಪಿನ್‌ ಬಲೆಯೊಳಗೆ ಬಂದಿಯಾದರು. ಸ್ಟೆಫಾನಿ ಟೇಲರ್‌ ಬಳಗ 47.2 ಓವರ್‌ಗಳಲ್ಲಿ 138ರನ್‌ ಕಲೆಹಾಕಿ ಹೋರಾಟ ಮುಗಿಸಿತು.

ಶೆಮೈನ್‌ ಕ್ಯಾಂಪ್‌ಬೆಲ್‌ (39; 90ಎ, 2ಬೌಂ) ಮತ್ತು ನಾಯಕಿ ಸ್ಟೆಫಾನಿ (20; 31ಎ, 2ಬೌಂ) ಅವರನ್ನು ಬಿಟ್ಟು ಉಳಿದವರೆಲ್ಲಾ ಬೇಗನೆ ಪೆವಿಲಿಯನ್‌ ಸೇರಿಕೊಂಡರು.

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಪ್ರಿಯಾ ಪುನಿಯಾ (5) ಮತ್ತು ಜೆಮಿಮಾ ರಾಡ್ರಿಗಸ್ (0) ಬಂದಷ್ಟೇ ವೇಗವಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಪೂನಮ್‌ ಮತ್ತು ನಾಯಕಿ ಮಿಥಾಲಿ ರಾಜ್‌ (40; 67ಎ, 4ಬೌಂ) ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 66 ರನ್‌ ಸೇರಿಸಿ ತಂಡದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಸರಿಸಿದರು.

29ನೇ ಓವರ್‌ನಲ್ಲಿ ಮಿಥಾಲಿ ಔಟಾದರು. ನಂತರ ಉಪನಾಯಕಿ ಹರ್ಮನ್‌ಪ್ರೀತ್‌ ಕೌರ್‌ (46; 52ಎ, 4ಬೌಂ) ಮತ್ತು ಪೂನಮ್‌ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 93ರನ್‌ ಸೇರಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿತು. ಎರಡು ರನ್‌ಗಳ ಅಂತರದಲ್ಲಿ ಇವರಿಬ್ಬರೂ ಔಟಾದರು. ನಂತರ ತಂಡದ ರನ್‌ ವೇಗ ಕುಂಠಿತವಾಯಿತು.

ಉಭಯ ತಂಡಗಳ ನಡುವಣ ಮೂರನೇ ಏಕದಿನ ಪಂದ್ಯ ಬುಧವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌
ಭಾರತ;
50 ಓವರ್‌ಗಳಲ್ಲಿ 6 ವಿಕೆಟ್‌ಗೆ 191 (ಪೂನಮ್‌ ರಾವುತ್‌ 77, ಮಿಥಾಲಿ ರಾಜ್‌ 40, ಹರ್ಮನ್‌ಪ್ರೀತ್‌ ಕೌರ್‌ 46, ತಾನಿಯಾ ಭಾಟಿಯಾ ಔಟಾಗದೆ 9; ಆಲಿಯಾ ಅಲೆನ್‌ 38ಕ್ಕೆ2, ಶಬಿಕಾ 23ಕ್ಕೆ1, ಅಫಿ ಫ್ಲೆಚರ್‌ 32ಕ್ಕೆ2, ಶೆನೆಟಾ ಗ್ರಿಮ್ಮೊಂಡ್‌ 22ಕ್ಕೆ1).

ವೆಸ್ಟ್‌ ಇಂಡೀಸ್‌: 47.2 ಓವರ್‌ಗಳಲ್ಲಿ 138 (ನತಾಶಾ ಮೆಕ್‌ಲೀನ್‌ 15, ಶೆಮೈನ್‌ ಕ್ಯಾಂಪ್‌ಬೆಲ್‌ 39, ಸ್ಟೆಫಾನಿ ಟೇಲರ್‌ 20, ಆಲಿಯಾ ಅಲೆನ್‌ 16, ಅಫಿ ಪ್ಲೆಚರ್‌ 14; ಜೂಲನ್‌ ಗೋಸ್ವಾಮಿ 24ಕ್ಕೆ1, ಶಿಖಾ ಪಾಂಡೆ 19ಕ್ಕೆ1, ರಾಜೇಶ್ವರಿ ಗಾಯಕವಾಡ 27ಕ್ಕೆ2, ಪೂನಮ್‌ ಯಾದವ್‌ 26ಕ್ಕೆ2, ದೀಪ್ತಿ ಶರ್ಮಾ 25ಕ್ಕೆ2).

ಫಲಿತಾಂಶ: ಭಾರತಕ್ಕೆ 53ರನ್‌ ಗೆಲುವು. 3 ಪಂದ್ಯಗಳ ಸರಣಿ 1–1ರಲ್ಲಿ ಸಮಬಲ.

ಪಂದ್ಯಶ್ರೇಷ್ಠ: ಪೂನಮ್‌ ರಾವುತ್‌.

ಪ್ರತಿಕ್ರಿಯಿಸಿ (+)