ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ ಬಲ ನ್ಯೂಜಿಲೆಂಡ್ ಛಲ

Last Updated 21 ಜುಲೈ 2019, 19:30 IST
ಅಕ್ಷರ ಗಾತ್ರ

ಈ ಬಾರಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಬೌಲ್ ಮಾಡಿದವರು ಯಾರು? ಉತ್ತರ: ಇಂಗ್ಲೆಂಡ್‌ನ ಜೋಫ್ರಾ ಆರ್ಚರ್. ಅವರು 371 ಡಾಟ್ ಬಾಲ್ ಗಳನ್ನು ಹಾಕಿದ್ದರು. ಅವರ ನಂತರದ ಸ್ಥಾನ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌ಗೆ. ಇಬ್ಬರ ನಡುವೆ 20 ಡಾಟ್ ಬಾಲ್‌ಗಳ ಅಂತರ.

ವಿಶ್ವಕಪ್ ಪ್ರಾರಂಭವಾಗುವ ಮೊದಲು ಭೂಮಿಕೆ ಎನ್ನುವಂತೆ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತನ್ನ ತವರಿನಲ್ಲಿ ಸರಣಿ ಆಡಿತ್ತು. ಅಲ್ಲಿನ ಪಿಚ್‌ಗಳಲ್ಲಿ 500 ರನ್ ಗಳಿಕೆಯೂ ಕಷ್ಟವೇನಲ್ಲ ಎನ್ನುವ ಅಭಿಪ್ರಾಯ ಆಗ ಕೇಳಿಬಂದಿತ್ತು. ಆದರೆ, ವಿಶ್ವಕಪ್‌ನ ಉತ್ತರಾರ್ಧ ಬೌಲರ್‌ಗಳ ಪಾಲಿಗೂ ಸ್ವರ್ಗಸದೃಶವಾದದ್ದು ಕ್ರಿಕೆಟ್‌ನ ಅನಿಶ್ಚಿತತೆಗೆ ಉದಾಹರಣೆ. ಆರ್ಚರ್, ಬೌಲ್ಟ್ ಇಬ್ಬರೂ ಕ್ರಿಕೆಟ್ ಇತಿಹಾಸದಲ್ಲೇ ಅತಿ ರೋಚಕವಾದ ಫೈನಲ್ ಪಂದ್ಯದ ಸೂಪರ್ ಓವರ್‌ಗಳನ್ನು ಜುಲೈ 14ರಂದು ಬೌಲ್ ಮಾಡಿದರು. ಇಬ್ಬರೂ ತಲಾ 15 ರನ್‌ಗಳಿಗೆ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದು ಪಿಚ್‌ನಲ್ಲಿ ಕ್ರೀಡಾತ್ಮಕ ಹೋರಾಟಕ್ಕೆ ಅವಕಾಶ ಇತ್ತೆನ್ನುವುದಕ್ಕೆ ಸಾಕ್ಷಿ.

ಇಂಗ್ಲೆಂಡ್ 2015ರ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಹೀಗಾಗಿ ಅದು ತನ್ನ ತವರಿನಲ್ಲಿ ನಡೆಯುವ ವಿಶ್ವಕಪ್ ಅನ್ನು ಪ್ರತಿಷ್ಠೆಯಾಗೇ ಸ್ವೀಕರಿಸಿತ್ತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ಉಳಿದೆಲ್ಲ ತಂಡಗಳಿಗಿಂತಲೂ ಅತಿ ಹೆಚ್ಚು ಸಲ 300ಕ್ಕೂ ಹೆಚ್ಚು ರನ್‌ಗಳನ್ನು ತಾನು ಆಡಿದ ಪಂದ್ಯಗಳಲ್ಲಿ ಗಳಿಸಿದೆ. ಜೇಸನ್ ರಾಯ್, ಜಾನಿ ಬೇಸ್ಟೊ ಇಬ್ಬರೂ ಕಳೆದ ಮೂವತ್ತು ನಲವತ್ತು ಪಂದ್ಯಗಳಲ್ಲಿ ಕೊಟ್ಟ ಕಾಣಿಕೆ ಗಮನಿಸಿದರೆ, ವಿಶ್ವದಲ್ಲೇ ಇವರದ್ದು ಶ್ರೇಷ್ಠ ಆರಂಭಿಕ ಜೋಡಿ ಎನ್ನುವುದು ಸ್ಪಷ್ಟ. ಸರಾಸರಿ ಸುಮಾರು 70 ರನ್‌ಗಳಷ್ಟು ಜತೆಯಾಟ ಈ ಆರಂಭಿಕ ಜೋಡಿಯಿಂದ ಹೊಮ್ಮುತ್ತಾ ಬಂದಿದೆ. ಅವರಿಬ್ಬರು ಹಾಕಿಕೊಡುವ ಭದ್ರ ಬುನಾದಿಯ ಮೇಲೆ ಜೋ ರೂಟ್ ರನ್‌ಗಳ ಸೌಧ ಕಟ್ಟುವುದು ವಿಶ್ವಕ್ಕೇ ಕ್ರಿಕೆಟ್ ಹರಡಿದ ಇಂಗ್ಲೆಂಡ್‌ನವರ ಸಫಲ ತಂತ್ರ.

ಜೋ ರೂಟ್ 11 ಇನಿಂಗ್ಸ್ ಗಳಲ್ಲಿ 89.53ರ ಸರಾಸರಿಯಲ್ಲಿ 556 ರನ್ ಕಲೆಹಾಕಿದ್ದು ಶ್ರಮದ ದ್ಯೋತಕ. ಬರೀ 48 ಬೌಂಡರಿ, 2 ಸಿಕ್ಸರ್‌ಗಳ, ಬೆವರ ಹನಿಗಳೇ ಹೆಚ್ಚಾಗಿದ್ದ ಆಟ ಅವರದ್ದು, ಅವರಿಗಿಂತ 24 ರನ್ ಕಡಿಮೆ ಗಳಿಸಿದರೂ 67 ಬೌಂಡರಿ, 11 ಸಿಕ್ಸರ್‌ಗಳ ಸರದಾರನಾಗಿ ಮೆರೆದದ್ದು ಬೇಸ್ಟೊ. ಬ್ಯಾಟಿಂಗ್‌ನ ಸಂಯಮ, ಆಕ್ರಮಣದ ಕಾಂಬಿನೇಷನ್‌ಗೆ ಇದೇ ಕನ್ನಡಿ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರೂಟ್ ಹಾಗೂ ಬೇಸ್ಟೊ ಕ್ರಮವಾಗಿ ಐದು ಹಾಗೂ ಆರನೇ ಸ್ಥಾನದಲ್ಲಿದ್ದಾರೆ.

‘ಎಂಎನ್‌ಸಿ’ ತಂಡ
ಇಂಗ್ಲೆಂಡ್ ತಂಡದ ಸಂಯೋಜನೆಯನ್ನು ವಿಭಜಿಸಿ ನೋಡಿದರೆ ಬಗೆ ಬಗೆಯ ದೇಶಗಳ ರಕ್ತಗಳು ಅಲ್ಲಿ ಹರಿದಿರುವುದು ಗೊತ್ತಾಗುತ್ತದೆ. ಫೈನಲ್ ಗೆಲುವಿನ ರೂವಾರಿ ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚನಲ್ಲಿ ಹುಟ್ಟಿದವರು. ಜೋಫ್ರಾ ಆರ್ಚರ್ ಹುಟ್ಟಿದ್ದು ಬಾರ್ಬಡೋಸ್‌ನಲ್ಲಿ. ಆದಿಲ್ ರಷೀದ್ ಹಾಗೂ ಮೊಯಿನ್ ಅಲಿ ಪಾಕಿಸ್ತಾನದ ಗಲ್ಲಿಗಳಿಂದ ಬಂದ ಹುಡುಗರು. ನಾಯಕ ಇಯಾನ್ ಮಾರ್ಗನ್ ಐರ್ಲೆಂಡ್ ಕ್ರಿಕೆಟ್‌ನಲ್ಲಿ ಪಳಗಿದ ಮೇಲಷ್ಟೇ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದು.

ವಿಶ್ವಕಪ್ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಬಗ್ಗೆ ವಿಶೇಷವಾಗಿ ತಯಾರಾದ ಬಗೆಯ ಎರಡು ನಿಮಿಷದ ವಿಡಿಯೊ ಹರಿದಾಡಿತ್ತು. ಅದರಲ್ಲಿ ಬೆನ್ ಸ್ಟೋಕ್ಸ್ ಎಲ್ಲಿಂದಲೋ ಬರುವ ಚೆಂಡುಗಳನ್ನು ಕ್ಯಾಚ್ ಹಿಡಿಯುತ್ತಾ ಸಾಗಿ, ಮೊದಲೇ ಇಟ್ಟ ಬ್ಯಾಟ್ ಎತ್ತಿಕೊಂಡು ಯಂತ್ರದಿಂದ ಹೊಮ್ಮುವ ಚೆಂಡನ್ನು ಜೋರಾಗಿ ಹೊಡೆದು, ಮತ್ತೆಲ್ಲೋ ಓಡಿ, ಒಂದು ಎಸೆತವನ್ನು ಬೌಲ್ ಮಾಡಿ ಸಾಗುವ ದೃಶ್ಯಗಳಿದ್ದವು. ಕೇವಲ ಎರಡು ನಿಮಿಷಗಳಲ್ಲಿ ಎಷ್ಟು ಕಠಿಣವಾದ, ಅನಿಶ್ಚಿತವಾದ ಸವಾಲು ಆರ್‌ರೌಂಡರ್‌ಗೆ ಎದುರಾಗುತ್ತದೆ ಎನ್ನುವುದರ ಸಂಕೇತ ಆ ವಿಡಿಯೊ. ಟೂರ್ನಿಯಲ್ಲಿ ಐದು ಅರ್ಧಶತಕಗಳೂ ಸೇರಿದ 465 ರನ್ ಗಳಿಸಿದ ಸ್ಟೋಕ್ಸ್ ಅಂತಿಮ ಪಂದ್ಯದಲ್ಲಿ ಒತ್ತಡದ ನೊಗವನ್ನು ಕೊನೆಯವರೆಗೂ ಹೊರಲು ಆ ತಾಲೀಮೂ ಕಾರಣವಾಗಿರಬೇಕು.

ಫೈನಲ್ ಪಂದ್ಯ ಟೈ ಆದಮೇಲೆ ಸೂಪರ್ ಓವರ್‌ಗೆ ಮೊದಲು ಸ್ಟೋಕ್ಸ್‌ಗೆ ಕ್ಷಣಕಾಲ ಷವರ್ ಅಡಿಯಲ್ಲಿ ನಿಲ್ಲಬೇಕೆನಿಸಿತ್ತಂತೆ. ಈ ಹಿಂದೆ ಬ್ರಿಸ್ಟಲ್‌ನ ನೈಟ್ ಕ್ಲಬ್‌ನಲ್ಲಿ ರಾದ್ಧಾಂತ ಮಾಡಿಕೊಂಡು ಜೈಲು ಸೇರಿ, ಅಲ್ಲಿಂದ ಹೊರಬಂದ ಮೇಲೆ ಸ್ಟೋಕ್ಸ್ ತಮ್ಮನ್ನು ತಾವೇ ಸಾಕಷ್ಟು ತಿದ್ದಿಕೊಂಡರು. ಅವರ ಪರಿವರ್ತನೆ, ಅಭ್ಯಾಸವನ್ನು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ತುಂಬಾ ಹತ್ತಿರದಿಂದ ನೋಡಿದ್ದಾರೆ. ಆ ಪ್ರಕರಣವೇ ಈತನ ವೃತ್ತಿಬದುಕನ್ನು ಬದಲಿಸಿತು ಎನ್ನುವುದು ಅವರ ವಿಶ್ಲೇಷಣೆ. ಆರ್ಚರ್, ಕ್ರಿಸ್ ವೋಕ್ಸ್ ವೇಗದ ಜುಗಲ್‌ಬಂದಿ ಇಂಗ್ಲೆಂಡ್‌ ತಂಡದ ಮೊದಲ ಸ್ಪೆಲ್‌ನ ಬಲ. ನಡುಘಟ್ಟದಲ್ಲಿ ಪ್ಲಂಕೆಟ್ ಕ್ರಾಸ್ ಸೀಮ್ ‘ಮ್ಯಾಜಿಕ್’. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಹಾಷೀಮ್ ಆಮ್ಲ ವಿಕೆಟ್‌ಗಳನ್ನು ಲೀಗ್ ಪಂದ್ಯಗಳಲ್ಲಿ ಪಡೆದಿದ್ದ ಪ್ಲಂಕೆಟ್, ಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್ ವಿಕೆಟ್ ಪಡೆದದ್ದು ಗಮನಾರ್ಹ.

ವಿಶ್ವಕಪ್ ಪ್ರಶಸ್ತಿಯೊಂದಿಗೆ ಜೊಫ್ರಾ ಆರ್ಚರ್
ವಿಶ್ವಕಪ್ ಪ್ರಶಸ್ತಿಯೊಂದಿಗೆ ಜೊಫ್ರಾ ಆರ್ಚರ್

ನ್ಯೂಜಿಲೆಂಡ್ ಪಡೆಯತ್ತ ನೋಡಿದರೆ ನಾಯಕ ವಿಲಿಯಮ್ಸನ್ ಹರಿಸಿದ ಒಂದೊಂದೂ ಬೆವರ ಹನಿ ಕಣ್ಣಿಗೆ ಕಟ್ಟುತ್ತದೆ. ನಾಯಕರ ಪೈಕಿ ಅತಿ ಹೆಚ್ಚು (578, ಸರಾಸರಿ 82.57) ರನ್ ಗಳಿಸಿದವರು ಅವರೇ. 50 ಬೌಂಡರಿ, 3 ಸಿಕ್ಸರ್‌ಗಳನ್ನು ಅದರಲ್ಲಿ ಕಳೆದರೆ, ಅವರು ಓಡಿರುವ ರನ್‌ಗಳ ಲೆಕ್ಕ ಸಿಗುತ್ತದೆ. ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್ ಮಹತ್ವದ ಘಟ್ಟದಲ್ಲಿ ಬೌಲಿಂಗ್ ಹೇಗಿರಬೇಕು ಎನ್ನುವುದನ್ನು ಸಾಬೀತುಪಡಿಸಿದರು. ನ್ಯೂಜಿಲೆಂಡ್ ತನ್ನ ಫೀಲ್ಡಿಂಗ್‌ನಿಂದ ಹೆಚ್ಚು ಗಮನ ಸೆಳೆದದ್ದು ವಿಶ್ವಕಪ್‌ನ ವಿಶೇಷ.

ಉಸಿರು ಬಿಗಿಯಾಗುವಂತೆ ಮಾಡಿದ್ದ ಕೊನೆಯ ಪಂದ್ಯದಲ್ಲಿ ಅದೃಷ್ಟ ಲಕ್ಷ್ಮಿ ಇಂಗ್ಲೆಂಡ್‌ಗೆ ಒಲಿದಿದ್ದೇನೋ ನಿಜ. ಆದರೆ, ಎರಡು ಸಲ ಸತತವಾಗಿ ನ್ಯೂಜಿಲೆಂಡ್‌ ಅಂತಿಮ ಹಂತಕ್ಕೆ ಬಂದೂ ಕಪ್‌ ಹಿಡಿಯಲಾಗದ್ದು ಕ್ರಿಕೆಟ್ ಅಭಿಮಾನಿಗಳಿಗೆ ನಿಜಕ್ಕೂ ಬೇಸರವೇ.

ಇದ್ಯಾವ ಲೆಕ್ಕಾಚಾರ?
ಸೂಪರ್ ಓವರ್‌ನಲ್ಲೂ ಪಂದ್ಯ ಟೈ ಆದರೆ ಯಾವ ತಂಡ ಅತಿ ಹೆಚ್ಚು ಸಲ ಚೆಂಡನ್ನು ಬೌಂಡರಿ ಗಡಿ ದಾಟಿಸಿತು ಎನ್ನುವ ಲೆಕ್ಕಾಚಾರದಲ್ಲಿ ವಿಜೇತ ತಂಡವನ್ನು ನಿರ್ಧರಿಸಿದ್ದಕ್ಕೆ ಹಿರಿಯ, ನಿವೃತ್ತ ಕ್ರಿಕೆಟಿಗರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಒಂದು ವೇಳೆ ಬೌಂಡರಿ ಗಡಿ ದಾಟಿಸಿದ ವಿಷಯದಲ್ಲೂ ಟೈ ಆದರೆ? ಆಗ ಸೂಪರ್ ಓವರ್‌ನಿಂದ ಹಿಮ್ಮುಖವಾಗಿ ಎಣಿಸಿ, ಎಷ್ಟನೇ ಎಸೆತದಲ್ಲಿ ತಂಡ ಬೌಂಡರಿ ಗಳಿಸಿದೆ ಎಂದು ಲೆಕ್ಕ ಹಾಕಲಾಗುತ್ತದೆ. ಆ ಲೆಕ್ಕದಲ್ಲಿ ಕೊನೆಯ ಓವರ್‌ಗಳಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದವರೇ ವಿಜಯಿ. ಈ ಲೆಕ್ಕಾಚಾರವನ್ನೂ ಕ್ರೀಡಾಪ್ರೇಮಿಗಳು ವಿರೋಧಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಬಹುಶಃ ಈ ವಿಷಯದಲ್ಲಿ ಚರ್ಚೆಸಬೇಕೇನೋ?

ಮೀಮ್‌ಗಳು ಸಾರ್ ಮೀಮ್‌ಗಳು...
‘ಗೆದ್ದ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿದ್ದು 69 ಕೋಟಿ ರೂಪಾಯಿ ಅಷ್ಟೇ. ಕರ್ನಾಟಕದಲ್ಲಿ ಈ ಹಣಕ್ಕೆ ಎರಡು ಶಾಸಕರು ಕೂಡ ಸಿಗಲ್ಲ’, ‘ಒಂದು ವೇಳೆ ಮದುವಿದಾಗ ಮಳಿ ಏನರೇ ಬಂತ ಅಂದ್ರ... ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ 7 ಸುತ್ತ ಹಾಕು ಬದಲಿ, 4 ಸುತ್ತ ಹಾಕಿದ್ರ ನಡಿತದ ಏನ’, ‘ನಾವು ವರ್ಲ್ಡ್‌ ಕಪ್‌ ಮುಟ್ಟಲಾಕ ಇಷ್ಟೇ ಡಿಸ್ಟೆನ್ಸ್‌ ಇತ್ತ ನೋಡ್ರಿ’ (ಸೆಮಿಫೈನಲ್‌ನಲ್ಲಿ ದೋನಿ ರನ್‌ಔಟ್‌ ಆದ ಫೋಟೊ ಜತೆಗಿನ ಬರಹ) ಇಂತಹ ಹತ್ತು ಹಲವು ದೇಸಿ ಮೀಮ್‌ಗಳು ವಿಶ್ವಕಪ್‌ ನಂತರವೂ ಹರಿದಾಡುತ್ತಿವೆ.

ಟ್ರೆಂಟ್ ಬೌಲ್ಟ್‌ –ಎಎಫ್‌ಪಿ ಚಿತ್ರ
ಟ್ರೆಂಟ್ ಬೌಲ್ಟ್‌ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT