ಶುಕ್ರವಾರ, ಫೆಬ್ರವರಿ 28, 2020
19 °C

ಯುವ ವಿಶ್ವಕಪ್ | ಹೆಚ್ಚು ರನ್ ಗಳಿಸಿದ ಜೈಸ್ವಾಲ್, ಅಧಿಕ ವಿಕೆಟ್ ಪಡೆದ ಬಿಷ್ಣೋಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಷೆಸ್ಟ್ರೂಮ್: 2020ರ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಸೋಲು ಕಂಡರೂ, ಹೆಚ್ಚು ರನ್‌ ಗಳಿಸಿದ ಹಾಗೂ ಹೆಚ್ಚು ವಿಕೆಟ್‌ ಕಬಳಿಸಿದ ಸಾಧನೆ ಭಾರತೀಯರದ್ದೇ ಆಯಿತು.

ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ 400 ರನ್‌ ಗಳಿಸಿದರೆ, ಸ್ಪಿನ್ನರ್‌ ರವಿ ಬಿಷ್ಣೋಯಿ 18 ವಿಕೆಟ್‌ ಉರುಳಿಸಿದರು.

ಸರಣಿ ಶ್ರೇಷ್ಠ ಜೈಸ್ವಾಲ್
19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯೊಂದರಲ್ಲಿ ಭಾರತ ಪರ ಅತಿಹೆಚ್ಚು ರನ್‌ ಗಳಿಸಿದ 2ನೇ ಆಟಗಾರ ಎನಿಸಿದ ಎಡಗೈ ಬ್ಯಾಟ್ಸ್‌ಮನ್‌ ಜೈಸ್ವಾಲ್‌, ಈ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗಳಿಸಿಕೊಂಡರು.

ಭಾನುವಾರ ನಡೆದ ಫೈನಲ್‌ನಲ್ಲಿ ಜೈಸ್ವಾಲ್‌ ಗಳಿಸಿದ ಅರ್ಧಶತಕದ ಹೊರತಾಗಿಯೂ ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಭಾರತ 177ಕ್ಕೆ ಕುಸಿಯಿತು. ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾ, 42.1 ಓವರ್‌ಗಳಲ್ಲಿ 170 ರನ್‌ ಕಲೆ ಹಾಕಿದ್ದಾಗ ಮಳೆ ಸುರಿಯಿತು. ಹೀಗಾಗಿ ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ ಬಾಂಗ್ಲಾದೇಶಕ್ಕೆ 3 ವಿಕೆಟ್‌ ಜಯ ನೀಡಲಾಯಿತು.

ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೈಸ್ವಾಲ್‌, ‘ಇಂತಹ ಪಿಚ್‌ಗಳಲ್ಲಿ ಆಡುವುದು ಹೇಗೆ ಎಂಬುದಕ್ಕೆ ಸಂಬಂಧಿಸಿದ ಉತ್ತಮ ಅನುಭವ ಇಲ್ಲಿ ದೊರಕಿದೆ. ನಾನು ಅಚ್ಚುಕಟ್ಟಾಗಿ ಆಡಲೇಬೇಕು ಎಂಬುದು ಗೊತ್ತಿತ್ತು. ಸದ್ಯ ಮುಂದೆ ಹೇಗೆ ಆಡಲಿದ್ದೇನೆ ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ ಹಾಗೂ ಅದರಂತೆ ಮುಂದುವರಿಯಲು ಬಯಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

2004ರ ಟೂರ್ನಿಯಲ್ಲಿ 505ರನ್ ಗಳಿಸಿದ್ದ ಶಿಖರ್‌ ಧವನ್‌ ಒಂದೇ ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಅರ್ಧಶತಕದ ದಾಖಲೆ
ಜೈಸ್ವಾಲ್‌ ಈ ಬಾರಿ ಐದು ಸಲ 50ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಆ ಮೂಲಕ ಯುವ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿದರು. ಆಸ್ಟ್ರೇಲಿಯಾದ ಬ್ರೆಟ್‌ ವಿಲಿಯಮ್ಸ್‌ (1988) ಮತ್ತು ಭಾರತದ ಸರ್ಫರಾಜ್‌ ಖಾನ್‌ (2016) ಈ ಹಿಂದೆ ಈ ಸಾಧನೆ ಮಾಡಿದ್ದರು.

ಜೈಸ್ವಾಲ್‌ ಗುಂಪು ಹಂತದಲ್ಲಿ ಕ್ರಮವಾಗಿ ಶ್ರೀಲಂಕಾ ವಿರುದ್ಧ 59, ಜಪಾನ್‌ ವಿರುದ್ಧ ಅಜೇಯ 29, ನ್ಯೂಜಿಲೆಂಡ್‌ ವಿರುದ್ಧ ಅಜೇಯ 57 ರನ್‌ ಬಾರಿಸಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 62 ಮತ್ತು ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ ಅಜೇಯ 105 ರನ್‌ ಹೊಡೆದಿದ್ದರು. ಫೈನಲ್‌ ಪಂದ್ಯದಲ್ಲಿ 88 ರನ್‌ ಗಳಿಸಿದ್ದರು.

ಬಿಷ್ಣೋಯಿಗೆ ಹೆಚ್ಚು ವಿಕೆಟ್‌
ಮಣಿಕಟ್ಟಿನ ಸ್ಪಿನ್ನರ್‌ ರವಿ ಬಿಷ್ಣೋಯಿ ಈ ಬಾರಿ ಆಡಿದ 6 ಪಂದ್ಯಗಳಿಂದ 17 ವಿಕೆಟ್‌ ವಿಕೆಟ್‌ ಪಡೆದದರು. 

ಬಿಷ್ಣೋಯಿ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 2, ಜಪಾನ್‌ ವಿರುದ್ಧ 4, ನ್ಯೂಜಿಲೆಂಡ್‌ ವಿರುದ್ಧ 4, ಆಸ್ಟ್ರೇಲಿಯಾ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 1 ಮತ್ತು ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ 2 ವಿಕೆಟ್‌ ಗಳಿಸಿದ್ದರು.

ಫೈನಲ್‌ ಪಂದ್ಯದಲ್ಲಿ 4 ವಿಕೆಟ್‌ ಉರುಳಿಸುವ ಮೂಲಕ ಈ ಬಾರಿ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎನಿಸಿಕೊಂಡರು. ಅಫ್ಗಾನಿಸ್ಥಾನ ತಂಡದ ಶಫಿವುಲ್ಲಾ ಗಫಾರಿ ಹಾಗೂ ಕೆನಡಾದ ಅಖಿಲ್‌ ಕುಮಾರ್‌ ತಲಾ 16 ವಿಕೆಟ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಆಟಗಾರರು
ವಿಶ್ವಕಪ್‌ ಗೆಲುವನ್ನು ಸಂಭ್ರಮಿಸುವ ಭರದಲ್ಲಿ ಬಾಂಗ್ಲಾ ಆಟಗಾರರು ಉದ್ಧಟತನ ತೋರಿದರು. ಫೈನಲ್‌ ಗೆದ್ದ ಬಳಿಕ ಅಂಗಳದಲ್ಲಿ ಬಾಂಗ್ಲಾ ಆಟಗಾರ ಆಡಿದ ಮಾತೊಂದು ಭಾರತದ ಆಟಗಾರರನ್ನು ಕೆರಳಿಸಿತ್ತು. ಈ ವೇಳೆ ಮಾತಿನ ಚಕಮಕಿ ನಡೆದು, ಉಭಯ ಆಟಗಾರರು ಕೈಕೈ ಮಿಲಾಯಿಸುವ ಹಂತಕ್ಕೆ ತೆರಳಿದ್ದರು.

ಆಗ ಮಧ್ಯಪ್ರವೇಶಿಸಿದ ಭಾರತ ತಂಡದ ನಾಯಕ ಪ್ರಿಯಂ ಗರ್ಗ್‌, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.

ಬಳಿಕ ಮಾತನಾಡಿದ ಗರ್ಗ್‌, ‘ಬಾಂಗ್ಲಾ ಆಟಗಾರರ ವರ್ತನೆ ಅಸಹ್ಯ ಎನಿಸುವಂತಿತ್ತು. ಇಂಥ ಘಟನೆ ನಡೆಯಬಾರದಿತ್ತು ಎಂದು ಭಾವಿಸುತ್ತೇನೆ. ಆದರೂ ಪರವಾಗಿಲ್ಲ. ನಾವು ಸಾವಧಾನದಿಂದಲೇ ವರ್ತಿಸಿದ್ದೇವೆ. ಇದೆಲ್ಲವೂ ಆಟದ ಭಾಗ ಎಂದು ನಮ್ಮ ತಂಡ ಭಾವಿಸಿದೆ’ ಎಂದು ಹೇಳಿದ್ದಾರೆ. 

ಅಲ್ಲದೆ, ‘ನಾವು ಒಂದನ್ನು ಗೆದ್ದು ಕೊಂಡರೆ, ಮತ್ತೊಂದನ್ನು ಕಳೆದುಕೊಂಡಿರುತ್ತೇವೆ’ ಎನ್ನವ ಮೂಲಕ ಬಾಂಗ್ಲಾ ತಂಡವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)