ಬುಧವಾರ, ಜನವರಿ 22, 2020
25 °C

ಮಾದರಿಯಿಂದ ಮಾದರಿಗೆ ಹೊಂದಿಕೊಳ್ಳುವ ಸವಾಲು: ಯರೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೋದ ಭಾನುವಾರ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟ್ರೋಫಿ, ಅದಕ್ಕಿಂತ ಕೆಲವು ದಿನಗಳ ಮುನ್ನ ವಿಜಯ್ ಹಜಾರೆ ಟ್ರೋಫಿ ಏಕದಿನ ಮಾದರಿಯಲ್ಲಿ ಪ್ರಶಸ್ತಿ ಗೆದ್ದು ಬೀಗಿರುವ ಕರ್ನಾಟಕಕ್ಕೆ ಈಗ ಹೊಸ ಸವಾಲು ಎದುರಾಗಿದೆ.

ಏಕದಿನ ಮತ್ತು ಟಿ20 ಮಾದರಿಯಿಂದ ದೀರ್ಘ ಮಾದರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಬೇಕಿದೆ. ಅದೂ ಯುವ ಬೌಲರ್‌ಗಳ ಪಡೆಯೊಂದಿಗೆ ಕಣಕ್ಕಿಳಿಯಬೇಕಿದೆ.  ಈ ಸವಾಲಿಗಾಗಿ ಬುಧವಾರದಿಂದ ಕರ್ನಾಟಕ ತಂಡವು ಅಭ್ಯಾಸ ಆರಂಭಿಸಿದೆ. ಗುರುವಾರವೂ ಆಟಗಾರರು ಕಠಿಣ ತಾಲೀಮು ನಡೆಸಿದರು.

‘ಈ ಋತುವಿನಲ್ಲಿ ಎರಡು ಪ್ರಮುಖ ಪ್ರಶಸ್ರಿಗಳನ್ನು ಜಯಿಸಿರುವ ತಂಡದ ಆಟಗಾರರು ಆತ್ಮವಿಶ್ವಾಸದ ಉತ್ತುಂಗದಲ್ಲಿದ್ದಾರೆ. ಆದರೆ, ಮಾದರಿಯಿಂದ ಮಾದರಿಗೆ ಹೊಂದಿಕೊಳ್ಳುವ ಸವಾಲು ಇದೆ. ಕೆಂಪು ಚೆಂಡಿನಲ್ಲಿ ಆಡುವುದನ್ನು ರೂಢಿಗೆ ಮರಳಬೇಕಿದೆ. ಬುಧವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ ಕೆಲವರು ಬಿರುಸಾದ ಹೊಡೆತಗಳನ್ನು ಆಡಿದರು. ಕೂಡಲೇ ಅವರನ್ನು ಕರೆದು ನಾವೀಗ ಸಿದ್ಧವಾಗುತ್ತಿರುವುದು ನಾಲ್ಕು ದಿನಗಳು ನಡೆಯುವ ಪಂದ್ಯಗಳಿಗೆ. ಅಲ್ಲದೇ ಇದೊಂದು ದೀರ್ಘ ಸಮಯ ನಡೆಯುವ ಟೂರ್ನಿಯಾಗಿದೆ.ಅದಕ್ಕೆ ಸರಿಹೊಂದುವ ಕೌಶಲ್ಯಗಳನ್ನು ಅಭ್ಯಾಸ ಮಾಡಲು ತಿಳಿಸಲಾಯಿತು. ಅದರ ಫಲವಾಗಿ ಎರಡನೇ ದಿನ ಎಲ್ಲರೂ ಲಯಕ್ಕೆ ಮರಳುತ್ತಿದ್ದಾರೆ’ ಎಂದು ಕರ್ನಾಟಕ ತಂಡದ ಕೋಚ್ ಯರೇಗೌಡ ಹೇಳಿದರು.

‘ಅನುಭವಿ ಬೌಲರ್‌ ಅಭಿಮನ್ಯು ಮಿಥುನ್ ಮತ್ತು ಪ್ರಸಿದ್ಧ ಕೃಷ್ಣ ಅವರು ಗಾಯಗೊಂಡಿರುವುದರಿಂದ ಆಡುತ್ತಿಲ್ಲ. ಆದ್ದರಿಂದ ಯುವ ಬೌಲರ್‌ಗಳಾದ ಡೇವಿಡ್ ಮಥಾಯಿಸ್ ಮತ್ತು ದೇವಯ್ಯ ಅವರಿಗೆ ಅವಕಾಶ ಲಭಿಸಿದೆ. ಅವರು ತಮ್ಮ ಪ್ರತಿಭೆ ಅನಾವರಣಗೊಳಿಸಲು ಶ್ರಮಿಸುತ್ತಾರೆಂಬ ವಿಶ್ವಾಸವಿದೆ. ಹೋದ ವರ್ಷ ಹೆಚ್ಚು ರನ್‌ಗಳನ್ನು ಗಳಿಸಿದ್ದ ಕೆ.ವಿ. ಸಿದ್ಧಾರ್ಥ್ ಇನ್ನೂ ತಮ್ಮ ಗಾಯದಿಂದ ಚೇತರಿಸಿಕೊಂಡಿಲ್ಲ. ಅವರು ಈ ಟೂರ್ನಿಯಲ್ಲಿ ಯಾವಾಗ ಮರಳುವರೆಂಬುದು ಖಚಿತವಿಲ್ಲ. ಅದನ್ನು ವೈದ್ಯರೇ ಸ್ಪಷ್ಟಪಡಿಸಬೇಕು’ ಎಂದರು.

‘ದೇವದತ್ತ ಪಡಿಕ್ಕಲ್ ಅಮೋಘ ಆಟವಾಡುತ್ತಿದ್ದಾರೆ. ಅವರಿಂದಾಗಿ ಬ್ಯಾಟಿಂಗ್ ವಿಭಾಗ ಸದೃಢವಾಗಿದೆ. ಅನುಭವಿ ಮಯಂಕ್ ಅಗರವಾಲ್ ಕೂಡ ಇದ್ದಾರೆ. ಇಬ್ಬರು ವಿಕೆಟ್‌ಕೀಪರ್‌ಗಳಿಗೆ ಅವಕಾಶ ನೀಡಲಾಗಿದೆ.  ಅವರು ತಂಡದೊಂದಿಗೆ ಹೊಂದಿಕೊಳ್ಳಲು ಒಳ್ಳೆಯ ಅವಕಾಶ ಇದಾಗಿದೆ. ಜೊತೆಗೆ ಒಬ್ಬರು ಗಾಯಗೊಂಡರೆ ಮತ್ತೊಬ್ಬರನ್ನು ಸಿದ್ಧ ಮಾಡಲು ಕೂಡ ಇದರಿಂದ ಅನುಕೂಲವಾಗಲಿದೆ’ ಎಂದರು.

ಅಭ್ಯಾಸದ ಸಂದರ್ಭದಲ್ಲಿ ನಾಯಕ ಕರುಣ್ ನಾಯರ್ ಇರಲಿಲ್ಲ. 

ಬುಧವಾರದಿಂದ ಅಭ್ಯಾಸ ಆರಂಭಿಸಿರುವ ಕರ್ನಾಟಕ ತಂಡ

ಕರ್ನಾಟಕ ತಂಡದ ನಾಯಕತ್ವ ವಹಿಸಲಿರುವ ಕರುಣ್ ನಾಯರ್

ಗಾಯಗೊಂಡಿರುವ ಮಿಥುನ್, ಪ್ರಸಿದ್ಧ, ಸಿದ್ಧಾರ್ಥ್ ಅಲಭ್ಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು