ಶನಿವಾರ, ಜನವರಿ 25, 2020
22 °C
ಭಾರತ–ವಿಂಡೀಸ್ ಸರಣಿ ಗೆದ್ದ ಭಾರತ ತಂಡವನ್ನು ಹೊಗಳಿದ ರವಿಶಾಸ್ತ್ರಿ

‘ಟಿ20 ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ತಂಡದ ಎದುರು ಹುಲಿಗಳಂತೆ ಆಡಿದ್ದೀರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ  ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡವು 2–1 ಅಂತರದಿಂದ ಗೆದ್ದು ಬೀಗಿತ್ತು. ಈ ಸರಣಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಆಕ್ರಮಣಕಾರಿ ಆಟವಾಡಿದ ಭಾರತ ತಂಡವನ್ನು ಮುಖ್ಯ ಕೋಚ್‌ ರವಿಶಾಸ್ತ್ರಿ ಹಾಡಿ ಹೊಗಳಿದ್ದಾರೆ. ಟಿ20 ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ತಂಡ ಎನಿಸಿರುವ ವಿಂಡೀಸ್‌ ಎದುರು ಹುಲಿಗಳಂತೆ ಆಡಿದ್ದೀರಿ ಎಂದು ಬರೆದುಕೊಳ್ಳುವ ಮೂಲಕ ಟ್ವೀಟರ್‌ನಲ್ಲಿ ಕೊಹ್ಲಿ ಪಡೆಯ ಬೆನ್ನು ತಟ್ಟಿದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ ಭಾರತವು 208 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿ ಗೆದ್ದಿತ್ತು. ಹೈದರಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ನಾಯಕ ವಿರಾಟ್‌ ಕೇವಲ 50 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ಔಟಾಗದೆ 94 ರನ್‌ ಗಳಿಸಿದ್ದರು. ಹೀಗಾಗಿ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳ ಗೆಲುವು ಸಾಧ್ಯವಾಗಿತ್ತು.

ಇದನ್ನೂ ಓದಿ: 

ಫೀಲ್ಡಿಂಗ್‌ ವೇಳೆ ಮಾಡಿದ ಎಡವಟ್ಟುಗಳಿಂದಾಗಿ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಸೋಲು ಕಂಡಿತ್ತು. ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕೊಹ್ಲಿ ಪಡೆ, 170 ರನ್‌ ಕಲೆ ಹಾಕಿತ್ತು. ಈ ಮೊತ್ತವನ್ನು ನಿರಾಯಾಸವಾಗಿ ಬೆನ್ನಟ್ಟಿದ ವಿಂಡೀಸ್‌ 9 ಎಸೆತಗಳು ಬಾಕಿ ಇರುವಂತೆಯೇ ತಲುಪಿ ತಿರುಗೇಟು ನೀಡಿತ್ತು.

ಸರಣಿಯ ಫೈನಲ್ ಎನಿಸಿದ್ದ ಮೂರನೇ ಪಂದ್ಯದಲ್ಲಿ ಕೊಹ್ಲಿ ಪಡೆ ಅಕ್ಷರಶಃ ಅಬ್ಬರದ ಆಟವಾಡಿತ್ತು. ಆಕ್ರಮಣಕಾರಿಯಾಗಿ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಮೊದಲ ವಿಕೆಟ್‌ಗೆ 11.4 ಓವರ್‌ಗಳಲ್ಲಿ 135 ರನ್‌ ಪೇರಿಸಿದರು. ಬಳಿಕ ವಿರಾಟ್‌ ಕೊಹ್ಲಿಯೂ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದರು. ಹೀಗಾಗಿ ತಂಡದ ಮೊತ್ತು ಮೊತ್ತ 240ಕ್ಕೆ ಏರಿತ್ತು. ರೋಹಿತ್‌ 34 ಎಸೆತಗಳಲ್ಲಿ 71 ರನ್‌, ರಾಹುಲ್‌ 56 ಎಸೆತಗಳಲ್ಲಿ 91 ರನ್‌ ಬಾರಿಸಿದರೆ, ನಾಯಕ ಕೊಹ್ಲಿ 29 ಎಸೆತಗಳಲ್ಲಿ 70 ರನ್‌ ಸಿಡಿಸಿದರು.

ಇದನ್ನೂ ಓದಿ:  IND vs WI | ವೆಸ್ಟ್ ಇಂಡೀಸ್ ಜಯಭೇರಿ

ಬೃಹತ್‌ ಗುರಿಯೆದುರು ನಿಗದಿತ 20 ಓವರ್‌ಗಳಲ್ಲಿ 173 ರನ್‌ ಗಳಿಸಲಷ್ಟೇ ಶಕ್ತವಾದ ವಿಂಡೀಸ್‌, 67 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು. ವಿಂಡೀಸ್‌ ಪರ ನಾಯಕ ಕೀರನ್‌ ಪೊಲಾರ್ಡ್‌ 68 ರನ್‌ ಗಳಿಸಿ ಹೋರಾಟ ನಡೆಸಿದ್ದರು. ಈ ಪಂದ್ಯದಲ್ಲಿ ಒಟ್ಟು 28 ಸಿಕ್ಸರ್‌ಗಳು ದಾಖಲಾದವು.

ಹೀಗಾಗಿ ತಂಡವನ್ನು ಅಭಿನಂದಿಸಿರುವ ಶಾಸ್ತ್ರಿ, ‘ಚೆನ್ನಾಗಿ ಆಡಿದ್ದೀರಿ. ಕ್ರಿಕೆಟ್‌ನ ಚುಟುಕು ಮಾದರಿಯಲ್ಲಿ ಅತ್ಯಂತ ಅಪಾಯಕಾರಿ ಎನಿಸಿರುವ ತಂಡದ ವಿರುದ್ಧ ಹುಲಿಗಳಂತೆ ‌ಆಡಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: INDvsWI | ಸಿಕ್ಸರ್‌ಗಳ ಮಳೆ; ರನ್ ಹೊಳೆ; ರಾಹುಲ್, ರೋಹಿತ್, ವಿರಾಟ್ ಸೂಪರ್ ಹಿಟ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು