ಸೋಮವಾರ, ಜೂನ್ 14, 2021
26 °C
2011ರ ವಿಶ್ವಕಪ್ ಟೂರ್ನಿಯ ಪಂದ್ಯದ ವೇಳೆ ಮೈದಾನದಲ್ಲೇ ವಾಂತಿಮಾಡಿಕೊಂಡಿದ್ದ ಸಿಕ್ಸರ್ ಸಿಂಗ್

ನಾನು ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ: ಕ್ಯಾನ್ಸರ್ ನಡುವೆಯೂ ಮಿಂಚಿದ್ದ ಯುವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಂದು 2011ರ ಮಾರ್ಚ್‌ 20. ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್‌ ತಂಡದ ಆಲ್ರೌಂಡರ್‌ ಯುವರಾಜ್‌ ಸಿಂಗ್‌, 2011ರ ವಿಶ್ವಕಪ್‌ ಟೂರ್ನಿಯ ಗುಂಪು ಹಂತದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿ ಮಿಂಚಿದ್ದರು.

ಲೀಗ್‌ ಹಂತದಲ್ಲಿ ಆಡಿದ್ದ ಆರು ಪಂದ್ಯಗಳಿಂದ ಐದರಲ್ಲಿ ಗೆಲುವು ಕಂಡಿದ್ದ ದಕ್ಷಿಣ ಆಫ್ರಿಕಾ ಬಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಹೀಗಾಗಿ ಕ್ವಾರ್ಟರ್ ಫೈನಲ್‌ ಹಾದಿ ಖಚಿತಪಡಿಸಿಕೊಂಡಿತ್ತು. ಆದರೆ, ತಲಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್‌, ಬಾಂಗ್ಲಾದೇಶ, ವಿಂಡೀಸ್‌ ಹಾಗೂ ಭಾರತ ತಂಡಗಳ ನಡುವೆ ಕ್ವಾರ್ಟರ್ ಫೈನಲ್‌ ಪ್ರವೇಶಕ್ಕಾಗಿ ಪೈಪೋಟಿ ಆರಂಭವಾಗಿತ್ತು.

ಹೀಗಾಗಿ ಲೀಗ್‌ ಹಂತದ ಕೊನೆಯ ಪಂದ್ಯವು ಭಾರತಕ್ಕೆ ನಿರ್ಣಾಯಕವಾಗಿತ್ತು.

ಆ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡಿತ್ತು. ಇನಿಂಗ್ಸ್‌ ಆರಂಭಿಸಿದ ವೀರೇಂದ್ರ ಸೆಹ್ವಾಗ್‌ (22) ಮತ್ತು ಸಚಿನ್‌ ತೆಂಡೂಲ್ಕರ್‌ (2) ಇಬ್ಬರೂ ತಂಡದ ಮೊತ್ತ 51 ರನ್‌ ಆಗುವಷ್ಟರಲ್ಲಿ ವಿಕೆಟ್‌ ಒಪ್ಪಿಸಿದ್ದರು. ಬಳಿಕ ಈಗಿನ ನಾಯಕ ವಿರಾಟ್‌ ಕೊಹ್ಲಿ (59) ಜೊತೆಗೂಡಿದ ಯುವರಾಜ್‌ ಸಿಂಗ್ ತಂಡವನ್ನು ಆಧರಿಸಿದ್ದರು. ಈ ಜೋಡಿ ಮೂರನೇ ವಿಕೆಟ್‌ಗೆ 122 ರನ್‌ ಜೊತೆಯಾಟವಾಡಿತ್ತು.

ಇದನ್ನೂ ಓದಿ: ತಂಡದಿಂದ ಕೈಬಿಟ್ಟಾಗ ‘ನಿಮ್ಮ ಕೆಲಸ ಮುಗಿದಿದೆ, ಹೊರಡಿ’ ಎಂದಂತಾಗಿತ್ತು: ಹರ್ಭಜನ್

123 ಎಸೆತಗಳನ್ನು ಎದುರಿಸಿದ್ದ ಯುವಿ 113 ರನ್ ಗಳಸಿದ್ದರು. ಅವರ ಆಟದ ಬಲದಿಂದ ಎಂಎಸ್‌ ಧೋನಿ ಪಡೆ 49.1 ಓವರ್‌ಗಳಲ್ಲಿ 268ರನ್ ಗಳಿಸಿತ್ತು. ಬಳಿಕ ಬೌಲಿಂಗ್‌ನಲ್ಲಿಯೂ ಮಿಂಚಿದ್ದ ಯುವರಾಜ್‌, ಕೇವಲ 18 ರನ್ ನೀಡಿ 2 ವಿಕೆಟ್‌ ಉರುಳಿಸಿದ್ದರು. ಜಹೀರ್‌ ಖಾನ್‌ ಹಾಗೂ ಆರ್‌.ಅಶ್ವಿನ್‌ ಅವರು ಕ್ರಮವಾಗಿ 3 ಮತ್ತು 2 ವಿಕೆಟ್‌ ಪಡೆದಿದ್ದರು. ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ತಲಾ ಒಂದೊಂದು ವಿಕೆಟ್ ಹಂಚಿಕೊಂಡಿದ್ದರು. ಹೀಗಾಗಿ ವಿಂಡೀಸ್‌ ಕೇವಲ 188 ರನ್ ಗಳಿಗೆ ಆಲೌಟ್‌ ಆಗಿತ್ತು. ಭಾರತಕ್ಕೆ 80 ರನ್‌ಗಳ ಗೆಲುವು ಲಭಿಸಿತ್ತು.

ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದಿದ್ದ ಯುವರಾಜ್‌ ಸಿಂಗ್‌ ಪಂದ್ಯ ಶ್ರೇಷ್ಠ ಎನಿಸಿದ್ದರು. ಆ ಪಂದ್ಯದ ವೇಳೆ ಅನಾರೋಗ್ಯದಿಂದ ಬಳಲಿದ್ದ ಯುವಿ ಅಂಗಳದಲ್ಲಿಯೇ ವಾಂತಿ ಮಾಡಿಕೊಂಡಿದ್ದರು. ಆ ಪಂದ್ಯ ಮುಗಿದು ಇಂದಿಗೆ ಒಂಬತ್ತು ವರ್ಷ ಉರುಳಿದ್ದರೂ, ಯುವಿ ಆಟದ ನೆನಪು ಮಾತ್ರ ಹಾಗೆಯೇ ಉಳಿದಿವೆ.

2014ರಲ್ಲಿ ಖಾಸಗಿ ವಾಹಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಆ ಪಂದ್ಯದ ಕುರಿತು ಮಾತನಾಡಿದ್ದ ಯುವಿ, ‘ಚೆನ್ನೈನಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಹೀಗಾಗಿರಬಹುದು ಎಂದು ಮೊದಲು ಭಾವಿಸಿದ್ದೆ. ವಿಶ್ವಕಪ್‌ನಲ್ಲಿ ಶತಕ ಬಾರಿಸಬೇಕೆಂದು ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಆದರೆ, ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರಿಂದ ಅದುವರೆಗೆ ಶತಕ ಸಾಧ್ಯವಾಗಿರಲಿಲ್ಲ. ಏನುಬೇಕಾದರೂ ಆಗಲಿ, ಟೂರ್ನಿ ಬಳಿಕ ನಾನು ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ‌’ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ಕೆಚ್ಚೆದೆಯ ಮಹಾರಾಜ ಈ ‘ಯುವರಾಜ’

2011ರ ವಿಶ್ವಕಪ್ ಟೂರ್ನಿಯ ನಂತರ ಸಿಂಗ್‌ಗೆ ಕ್ಯಾನ್ಸರ್‌ ಇರುವುದು ಗೊತ್ತಾಗಿತ್ತು. ವಿದಾಯ ಸಂದರ್ಭದಲ್ಲಿ ಕ್ಯಾನ್ಸರ್ ಬಗ್ಗೆ ಮಾತನಾಡಿದ್ದ ಅವರು, ‘ಕ್ಯಾನ್ಸರ್ ನನ್ನನ್ನು ಸೋಲಿಸಲು ಬಿಡುವುದಿಲ್ಲ ಎಂದು ಅಂದೇ (ಕ್ಯಾನ್ಸರ್‌ ಇರುವುದು ಗೊತ್ತಾದಾಗಲೇ) ಪಣ ತೊಟ್ಟಿದ್ದೆ. ಅದನ್ನು ಸಾಧಿಸಿಯೂ ಬಿಟ್ಟೆ’ ಎಂದಿದ್ದರು.

ಆ ವಿಶ್ವಕಪ್‌ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಮಿಂಚಿದ್ದ ಯುವಿ. 362ರನ್‌ ಹಾಗೂ 15 ವಿಕೆಟ್ ಪಡೆದು ಟೂರ್ನಿ ಶ್ರೇಷ್ಠ ಎನಿಸಿದ್ದರು. ಬ್ಯಾಟಿಂಗ್ – ಬೌಲಿಂಗ್‌ನಲ್ಲಿ ಮಾತ್ರವಲ್ಲ ಫೀಲ್ಡಿಂಗ್‌ ಸ್ಟೈಲಿಷ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ಯುವಿ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲತುಂಬಿದ ಆಟಗಾರ. 2015ರ ವಿಶ್ವಕಪ್‌ ಬಳಿಕ ಸ್ಥಿರ ಪ್ರದರ್ಶನ ತೋರಲು ವಿಫಲರಾಗಿದ್ದರು.

2017ರಲ್ಲಿ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು.

17 ವರ್ಷಗಳ ಕಾಲ ಭಾರತ ಕ್ರಿಕೆಟ್‌ ತಂಡದ ಭಾಗವಾಗಿದ್ದ ಅವರು, ಭಾರತ ಪರ 40 ಟೆಸ್ಟ್‌ ಪಂದ್ಯಗಳಲ್ಲಿ ಕಣಕ್ಕಿಳಿದು 1,900 ರನ್‌ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 304 ಪಂದ್ಯಗಳಿಂದ (278 ಇನಿಂಗ್ಸ್‌) 8,701 ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 58 ಪಂದ್ಯಗಳ 51 ಇನಿಂಗ್ಸ್‌ಗಳಿಂದ 1,117 ರನ್‌ ಬಾರಿಸಿದ್ದಾರೆ. ಈ ಮೂರೂ ಮಾದರಿಯಲ್ಲಿ ಕ್ರಮವಾಗಿ 9 ವಿಕೆಟ್‌, 111 ವಿಕೆಟ್‌ ಮತ್ತು 28 ವಿಕೆಟ್‌ ಉರುಳಿಸಿದ್ದಾರೆ.

ಇದನ್ನೂ ಓದಿ: 2019 ಹಿನ್ನೋಟ | ಯುವರಾಜ್, ಸಾರಾ, ಮಾಲಿಂಗ, ಆಮ್ಲಾಗೆ ವಿದಾಯದ ವರ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು