ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿ: ಒಡಿಶಾ ವಿರುದ್ಧ BFC ಜಯಭೇರಿ

Last Updated 14 ಜನವರಿ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ಚುರುಕು ಮತ್ತು ಚಾಕಚಕ್ಯತೆಯ ಸಮ್ಮಿಳಿತದ ಆಟ ಪ್ರದರ್ಶಿಸಿದ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡದವರು ಗೆಲುವಿನ ನಗು ಚೆಲ್ಲಿದರು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಪಂದ್ಯದಲ್ಲಿ ಬಿಎಫ್‌ಸಿ 3–1ರಿಂದ ಒಡಿಶಾ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಟೂರ್ನಿಯಲ್ಲಿ ಸತತ ಎರಡನೇ ಜಯ ಸಂಪಾದಿಸಿತು. ಇದರೊಂದಿಗೆ ಪ್ಲೇ ಆಫ್ ಹಂತದ ಸ್ಪರ್ಧೆಗೆ ಇನ್ನಷ್ಟು ಮೆರುಗು ಬಂದಿತು.

ಈ ಋತುವಿನಲ್ಲಿ ಬಿಎಫ್‌ಸಿ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಎರಡಕ್ಕಿಂತ ಹೆಚ್ಚು ಗೋಲು ಗಳಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲೇ ಉಳಿದಿದೆ. ಆದರೆ ಏಳನೇ ಸ್ಥಾನದಲ್ಲಿರುವ ಚೆನ್ನೈಯಿನ್ ಎಫ್‌ಸಿ ಮತ್ತು ಬಿಎಫ್‌ಸಿ ಬಳಿ ತಲಾ 16 ಪಾಯಿಂಟ್‌ಗಳಿವೆ. ಬೆಂಗಳೂರು ಇನ್ನೂ ಆರು ಪಂದ್ಯಗಳನ್ನು ಆಡಬೇಕಿರುವುದರಿಂದ ಪ್ಲೇ ಆಫ್‌ ಅರ್ಹತೆಯ ಆಸೆಗೆ ಗರಿ ಮೂಡಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಒಡಿಶಾ ಐದನೇ ಸ್ಥಾನದಲ್ಲಿದೆ.

ನಿಧಾನಗತಿಯಲ್ಲಿ ಆರಂಭಗೊಂಡ ಹಣಾಹಣಿಯಲ್ಲಿ ಬಿಎಫ್‌ಸಿ ಪರ ರೋಹಿತ್‌ ಕುಮಾರ್ ಮೊದಲ ಗೋಲು ದಾಖಲಿಸಿದರು. 25ನೇ ನಿಮಿಷದಲ್ಲಿ ಜೆವಿ ಹೆರ್ನಾಂಡೆಜ್‌ ಬಲಭಾಗದಿಂದ ನೀಡಿದ ಕ್ರಾಸ್‌ನಲ್ಲಿ ಅಲನ್‌ ಕೋಸ್ಟಾ ಚೆಂಡನ್ನು ರೋಹಿತ್ ಕುಮಾರ್ ಅವರತ್ತ ತಳ್ಳಿದರು. ಅತ್ಯಂತ ಸುಲಭದಲ್ಲಿ ಚೆಂಡನ್ನು ಗುರಿ ಸೇರಿಸಿದ ರೋಹಿತ್‌ ಅವರು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಅಭಿಮಾನಿಗಳನ್ನು ಸಂಭ್ರಮದಲ್ಲಿ ಕುಣಿಸಿದರು.

ಇದೇ ಉತ್ಸಾಹದಿಂದ ಮುನ್ನುಗ್ಗಿದ ಬಿಎಫ್‌ಸಿ 28ನೇ ನಿಮಿಷದಲ್ಲೇ ಮತ್ತೊಂದು ಅವಕಾಶ ಸೃಷ್ಟಿಸಿಕೊಂಡಿತು. ಶಿವಶಕ್ತಿ ನಾರಾಯಣನ್‌ ಡ್ರಿಬಲ್ ಮಾಡುತ್ತ ತಂದ ಚೆಂಡನ್ನು ರಾಯ್‌ಕೃಷ್ಣ ಸೊಗಸಾಗಿ ಗೋಲ್‌ಪೋಸ್ಟ್‌ಗೆ ಸೇರಿಸಿದರು. ಇದರೊಂದಿಗೆ ಫಿಜಿ ದೇಶದ ಆಟಗಾರ 10 ಪಂದ್ಯಗಳ ಗೋಲು ಬರವನ್ನು ನೀಗಿಸಿಕೊಂಡರು.

ಮೊದಲಾರ್ಧವನ್ನು ಬಿಎಫ್‌ಸಿ 2–0 ಗೋಲುಗಳ ಮುನ್ನಡೆಯೊಂದಿಗೆ ಕೊನೆಗೊಳಿಸಿತು. 48ನೇ ನಿಮಿಷದಲ್ಲಿ ಒಡಿಶಾದ ಡಿಗೊ ಮೌರಿಸಿಯೊ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿ ತಮ್ಮ ತಂಡದ ಹಿನ್ನಡೆ ತಗ್ಗಿಸಿದರು. ಗುರುಪ್ರೀತ್‌ ಸಿಂಗ್‌ ಅವರಿಗೆ ಡಿಕ್ಕಿ ಹೊಡೆದು ಮೌರಿಸಿಯೊ ಕೆಳಗೆ ಬಿದ್ದರು. ಇದರಿಂದ ರೆಫರಿ ಪೆನಾಲ್ಟಿ ನೀಡಿದ್ದರು.

ಬದಲಿ ಆಟಗಾರನಾಗಿ ಬಂದ ಉದಾಂತ ಸಿಂಗ್‌, ಇಂಜುರಿ ಅವಧಿಯಲ್ಲಿ ಪ್ಯಾಬ್ಲೊ ಪೆರೆಜ್ ಅವರಿಗೆ ಪಾಸ್‌ ನೀಡಿ ಗೋಲು ಗಳಿಸುವಂತೆ ಮಾಡಿದರು. ತವರು ತಂಡದ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತು.

ಬಿಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿ ಜನವರಿ 18ರಂದು ಜಮ್ಶೆಡ್‌ಪುರ ತಂಡವನ್ನು ಎದುರಿಸಲಿದೆ.

ಗುರುಪ್ರೀತ್ ನಾಯಕ: ಬಿಎಫ್‌ಸಿಯು ಆಡುವ ಆರಂಭದ 11ರ ಬಳಗದಲ್ಲಿ ನಾಯಕ ಸುನಿಲ್ ಚೆಟ್ರಿ ಅವರಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಗೋಲ್‌ಕೀಪರ್ ಗುರುಪ್ರೀತ್ ಹಂಗಾಮಿಯಾಗಿ ನಾಯಕತ್ವ ನಿಭಾಯಿಸಿದರು. 73ನೇ ನಿಮಿಷದಲ್ಲಿ ಶಿವಶಕ್ತಿ ಸ್ಥಾನದಲ್ಲಿ ಚೆಟ್ರಿ ಅವರು ಬದಲಿ ಆಟಗಾರನಾಗಿ ಕಣಕ್ಕಿಳಿದರು.

ಪಂದ್ಯದಲ್ಲಿ ಬಿಎಫ್‌ಸಿಯ ಪರಾಗ್ ಶ್ರೀವಾಸ್‌ ಹಳದಿ ಕಾರ್ಡ್‌ ದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT