ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್‌: ಬೆಲ್ಜಿಯಂ ಜಯಕ್ಕೆ ಮಿಚಿ ನೆರವು, ಕೆನಡಾ ವಿರುದ್ಧ ಗೆಲುವು

Last Updated 24 ನವೆಂಬರ್ 2022, 14:12 IST
ಅಕ್ಷರ ಗಾತ್ರ

ಅಲ್‌ ರಯ್ಯಾನ್‌, ಕತಾರ್‌: ಮಿಚಿ ಬಾಟ್‌ಶುವಾಯಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬೆಲ್ಜಿಯಂ ತಂಡ, ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಅಹಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ, 36 ವರ್ಷಗಳ ಬಿಡುವಿನ ಬಳಿಕ ವಿಶ್ವಕಪ್‌ ಆಡುತ್ತಿರುವ ಕೆನಡಾ ತಂಡವನ್ನು ಮಣಿಸಿತು.

ಫಿಫಾ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಬೆಲ್ಜಿಯಂಗೆ ತಕ್ಕ ಪೈಪೋಟಿ ನೀಡಿದ ಕೆನಡಾ ಆಟಗಾರರು ಸೋಲಿನ ನಡುವೆಯೂ ಪ್ರಶಂಸೆಗೆ ಪಾತ್ರರಾದರು.

ಮಿಚಿ ಅವರು 44ನೇ ನಿಮಿಷದಲ್ಲಿ ಗೆಲುವು ಗೋಲು ತಂದಿತ್ತರು. ಟೋಬಿ ಅಲ್ಡೆವೆರೆಲ್ಡ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡು ಎದುರಾಳಿ ಗೋಲ್‌ಕೀಪರ್‌ ಮಿಲಾನ್ ಬೋರ್ಜಾನ್‌ ಅವರನ್ನು ತಪ್ಪಿಸಿ ಗುರಿ ಸೇರಿಸಿದರು. ಪ್ರಮುಖ ಆಟಗಾರ ರೊಮೆಲು ಲುಕಾಕು ಅವರು ಗಾಯದ ಕಾರಣ ಈ ಪಂದ್ಯದಲ್ಲಿ ಆಡದೇ ಇದ್ದುದರಿಂದ ಮಿಚಿ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು.

ಈ ಗೆಲುವಿನ ಮೂಲಕ ಬೆಲ್ಜಿಯಂ ತಂಡ ‘ಎಫ್‌’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ಇದೇ ಗುಂಪಿನಲ್ಲಿ ಮೊರೊಕ್ಕೊ– ಕ್ರೊವೇಷ್ಯಾ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತ್ತು.

ಈ ಗೆಲುವು ಪೂರ್ಣ ತೃಪ್ತಿ ನೀಡಿಲ್ಲ ಎಂದು ಬೆಲ್ಜಿಯಂ ಕೋಚ್‌ ರಾಬರ್ಟೊ ಮಾರ್ಟಿನೆಜ್‌ ಹೇಳಿದರು. ‘ಮುಂದಿನ ಪಂದ್ಯಗಳಲ್ಲಿ ಪ್ರದರ್ಶನವನ್ನು ಉತ್ತಮಪಡಿಸಬೇಕು. ಕೆಲವು ಪ್ರಮುಖ ತಂಡಗಳು ಈ ಟೂರ್ನಿಯಲ್ಲಿ ಈಗಾಗಲೇ ಸೋತಿವೆ. ಆದ್ದರಿಂದ ಗೆಲುವು ಪಡೆಯುವುದು ಮುಖ್ಯ ಎನಿಸುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪೆನಾಲ್ಟಿ ಮಿಸ್‌: ಕೆನಡಾ ಈ ಹಿಂದೆ ಒಮ್ಮೆ ಮಾತ್ರ ವಿಶ್ವಕಪ್‌ನಲ್ಲಿ ಆಡಿತ್ತು. 1986ರಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಗುಂಪು ಹಂತದ ಎಲ್ಲ ಮೂರೂ ಪಂದ್ಯಗಳನ್ನು ಸೋತಿತ್ತಲ್ಲದೆ, ಗೋಲು ಗಳಿಸಲು ವಿಫಲವಾಗಿತ್ತು.

ವಿಶ್ವಕಪ್‌ನಲ್ಲಿ ಮೊದಲ ಗೋಲು ಗಳಿಸುವ ಅತ್ಯುತ್ತಮ ಅವಕಾಶ ಕೆನಡಾ ತಂಡಕ್ಕೆ ಈ ಪಂದ್ಯದಲ್ಲಿ ಲಭಿಸಿತ್ತು. ಆದರೆ 11ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಿಕ್‌ ಅವಕಾಶವನ್ನು ಅಲ್ಫೋನ್ಸೊ ಡೇವಿಸ್‌ ಹಾಳುಮಾಡಿಕೊಂಡರು.

ಬೆಲ್ಜಿಯಂ ಆಟಗಾರ ಯಾನಿಕ್‌ ಕರಾಸ್ಕೊ ‘ಹ್ಯಾಂಡ್‌ಬಾಲ್‌’ ಮಾಡಿದ್ದಕ್ಕೆ ರೆಫರಿ ಪೆನಾಲ್ಟಿ ಕಿಕ್‌ ನೀಡಿದರು. ಡೇವಿಸ್‌ ಅವರ ದುರ್ಬಲ ಸ್ಪಾಟ್‌ ಕಿಕ್‌ಅನ್ನು ಬೆಲ್ಜಿಯಂ ಗೋಲ್‌ಕೀಪರ್‌ ತಿಬೊ ಕೋರ್ತುವಾ ಯಶಸ್ವಿಯಾಗಿ ತಡೆದರು.

‘ವಿಶ್ವಕಪ್‌ ಟೂರ್ನಿಯಲ್ಲಿ ಗೋಲು ಗಳಿಸುವುದು ಸುಲಭವಲ್ಲ. ನಾವು ಹಲವು ಉತ್ತಮ ಅವಕಾಶಗಳನ್ನು ಕಳೆದುಕೊಂಡೆವು. ಮುಂದಿನ ಪಂದ್ಯದ ವೇಳೆಗೆ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ’ ಎಂದು ಕೆನಡಾ ಕೋಚ್‌ ಹೆರ್ಡ್‌ಮನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT