ಮಂಗಳವಾರ, ಮಾರ್ಚ್ 28, 2023
26 °C

FIFA World Cup | ಸಂಕಷ್ಟ ಮರೆತು ಸಂಭ್ರಮಿಸಿದ ಅರ್ಜೆಂಟೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯೂನಸ್‌ ಐರಿಸ್‌: ದೋಹಾದ ಲುಸೈಲ್‌ ಕ್ರೀಡಾಂಗಣದಲ್ಲಿ ಲಯೊನೆಲ್‌ ಮೆಸ್ಸಿ ಬಳಗ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ಗೆದ್ದು ಟ್ರೋಫಿ ಎತ್ತಿಹಿಡಿದಾಗ, ಅತ್ತ ಅರ್ಜೆಂಟೀನಾದಲ್ಲಿ ಜನರು ಸಂಕಷ್ಟ ಮರೆತು ಸಂಭ್ರಮಿಸಿದ್ದಾರೆ. 

ದಕ್ಷಿಣ ಅಮೆರಿಕದ ಈ ದೇಶ ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ಅರ್ಜೆಂಟೀನಾದ ಪ್ರತಿ 10 ಮಂದಿಯಲ್ಲಿ ನಾಲ್ವರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಜನರಲ್ಲಿ ಒಗ್ಗಟ್ಟು ಉಂಟುಮಾಡುವ ಕೆಲಸವನ್ನು ಮೆಸ್ಸಿ ಬಳಗ ಮಾಡಿದೆ.

1986ರ ಬಳಿಕ ಮೊದಲ ಬಾರಿ ತಮ್ಮ ದೇಶ ವಿಶ್ವಕಪ್‌ ಜಯಿಸಿದ ಐತಿಹಾಸಿಕ ಸಾಧನೆಯನ್ನು ಇಲ್ಲಿನ ಜನರು ರಾತ್ರಿಯಿಡೀ ಆಚರಿಸಿದ್ದಾರೆ. ಬ್ಯೂನಸ್‌ ಐರಿಸ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ರಸ್ತೆಗಳಲ್ಲಿ ಹಾಡು, ನೃತ್ಯದ ಮೂಲಕ ಸಂಭ್ರಮದಲ್ಲಿ ಮಿಂದೆದ್ದರು. ಸ್ಟಾರ್‌ ಆಟಗಾರ ಮೆಸ್ಸಿ ಗುಣಗಾನ ಮಾಡಿದರು.

ವಿಶ್ವಕಪ್‌ ಗೆದ್ದ ಹೀರೋಗಳಿಗೆ ಭರ್ಜರಿ ಸ್ವಾಗತ ನೀಡಲು ಬ್ಯೂನಸ್‌ ಐರಿಸ್‌ನ ಜನರು ಸಿದ್ಧತೆ ನಡೆಸಿದ್ದಾರೆ. ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ.

‘ನೀವು ಹಲವು ವರ್ಷಗಳಿಂದ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾಗ ಇಂತಹ ಕ್ಷಣಗಳು ಮನಸ್ಸಿಗೆ ನೀಡುವ ಸಮಾಧಾನ ಅಪಾರ’ ಎಂದು ಇಲ್ಲಿನ ಫ್ಯಾಬಿಯೊ ವಿಲಾನಿ ಹೇಳಿದರು.

‘ಈ ಕ್ಷಣಕ್ಕಾಗಿ ನಾವೆಲ್ಲರೂ ಕಾಯುತ್ತಿದ್ದೆವು’ ಎಂದು ಸಂತಸದಿಂದ ಬೀಗುತ್ತಿದ್ದ ವೆರೊನಿಕಾ ಸಿಲ್ವಾ ಪ್ರತಿಕ್ರಿಯಿಸಿದರು.

ಲುಸೈಲ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ರೋಚಕ ಫೈನಲ್‌ನ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4–2
ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಮಣಿಸಿ ಮೂರನೇ ಕಿರೀಟ ಮುಡಿಗೇರಿಸಿಕೊಂಡಿತ್ತು.

ಪ್ರಬಲ ಪೈಪೋಟಿ ನಡೆದ ಫೈನಲ್‌ನ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2–2 ರಲ್ಲಿ ಹಾಗೂ ಹೆಚ್ಚುವರಿ ಅವಧಿಯ ಬಳಿಕ 3–3 ಗೋಲುಗಳಿಂದ ಸಮಬಲ ಸಾಧಿಸಿದ್ದವು.  ಅರ್ಜೆಂಟೀನಾ ಪರ ಮೆಸ್ಸಿ ಎರಡು ಹಾಗೂ ಏಂಜೆಲ್‌ ಡಿ ಮರಿಯಾ ಒಂದು ಗೋಲು ಗಳಿಸಿದ್ದರು. ಫ್ರಾನ್ಸ್‌ ತಂಡದ ಮೂರೂ ಗೋಲುಗಳನ್ನು ಕಿಲಿಯನ್‌ ಎಂಬಾಪೆ ತಂದಿತ್ತಿದ್ದರು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಅದೃಷ್ಟ ಅರ್ಜೆಂಟೀನಾಕ್ಕೆ ಒಲಿದಿತ್ತು.

‘ಫುಟ್‌ಬಾಲ್‌ ಕ್ರೇಜ್‌’ ದೇಶ ಅರ್ಜೆಂಟೀನಾ, 36 ವರ್ಷಗಳ ಬಿಡುವಿನ ಬಳಿಕ ವಿಶ್ವಕಪ್‌ ಜಯಿಸಿದೆ. ಈ ತಂಡ 1978 ರಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿತ್ತು. 1930, 1990 ಮತ್ತು 2014 ರಲ್ಲಿ ರನ್ನರ್ಸ್‌ ಅಪ್‌ ಆಗಿತ್ತು.

ರೊಸಾರಿಯೊದಲ್ಲಿ ಸಂಭ್ರಮ: ಮೆಸ್ಸಿ ಹುಟ್ಟೂರು ರೊಸಾರಿಯೊದಲ್ಲೂ ಸಾವಿರಾರು ಮಂದಿ ಬೀದಿಗಿಳಿದು ಸಂಭ್ರಮಿಸಿದರು. ದೋಹಾದಲ್ಲಿ ಫೈನಲ್‌ ಪಂದ್ಯಕ್ಕೆ ತೆರೆಬೀಳುವಾಗ ಇಲ್ಲಿ ಸಂಜೆ ಆಗಿತ್ತು. ಮೆಸ್ಸಿ ಅಭಿಮಾನಿಗಳು ತಡರಾತ್ರಿಯವರೆಗೂ ಸಂಭ್ರಮದಲ್ಲಿ ಭಾಗಿಯಾದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು