ಶುಕ್ರವಾರ, ಜನವರಿ 24, 2020
16 °C

ಗೋಲ್‌ ಕೀಪಿಂಗ್‌ನಲ್ಲಿ ಭಾರತೀಯರೇ ಕಿಂಗ್‌

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಐಎಸ್‌ಎಲ್‌ನಲ್ಲಿ ವಿದೇಶಿ ಆಟಗಾರರಿಗೆ ಬೇಡಿಕೆ ಹೆಚ್ಚು. ಆದರೆ ಗೋಲ್‌ಕೀಪಿಂಗ್ ವಿಷಯದಲ್ಲಿ ಮಾತ್ರ ಭಾರತದವರದೇ ಮೇಲುಗೈ. ಆರಂಭದ ಕೆಲವು ಆವೃತ್ತಿಗಳಲ್ಲಿ ವಿದೇಶಿ ಗೋಲ್‌ಕೀಪರ್‌ಗಳ ಮೊರೆ ಹೋಗಿದ್ದ ತಂಡಗಳು ಈಗ ಸಂಪೂರ್ಣವಾಗಿ ದೇಶಿ ಕೀಪರ್‌ಗಳನ್ನು ನೆಚ್ಚಿಕೊಂಡಿವೆ.

‘ಭಾರತದ ಫುಟ್‌ಬಾಲ್ ಮೇಲೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಬೀರಿರುವ ಪ್ರಭಾವ ಅಪಾರ. ಯುವ ಆಟಗಾರರು ಮತ್ತು ಮಹಿಳಾ ತಂಡದ ಬೆಳವಣಿಗೆಯಲ್ಲಿ ಈ ಟೂರ್ನಿಯ ಪಾತ್ರ ದೊಡ್ಡದು’ ಎಂದು ಭಾರತ ಮಹಿಳಾ ಫುಟ್‌ಬಾಲ್ ತಂಡದ ಗೋಲ್‌ಕೀಪರ್ ಅದಿತಿ ಚೌಹಾಣ್ ಇತ್ತೀಚೆಗೆ ಅಭಿಪ್ರಾಯಟ್ಟಿದ್ದರು. ಕೊಚ್ಚಿಯಲ್ಲಿ ನಡೆದಿದ್ದ ಕೇರಳ ಬ್ಲಾಸ್ಟರ್ಸ್ ಮತ್ತು ಹೈದರಾಬಾದ್ ಎಫ್‌ಸಿ ನಡುವಿನ ಪಂದ್ಯ ವೀಕ್ಷಿಸಿದ ನಂತರ ಅವರು ಈ ಮಾತು ಹೇಳಿದ್ದರು.

ಭಾರತದ ಫುಟ್‌ಬಾಲ್‌ ಕ್ಷೇತ್ರಕ್ಕೆ ಐಎಸ್‌ಎಲ್ ಟೂರ್ನಿ ರಂಗು ತುಂಬಿದೆ ನಿಜ. ಗೋಲ್‌ಕೀಪಿಂಗ್‌ಗೆ ಹೊಸ ಆಯಾಮ ನೀಡಿರುವುದು ಈ ಪ್ರಭಾವದ ಮತ್ತೊಂದು ಮಗ್ಗುಲು. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗೋಲ್‌ಕೀಪಿಂಗ್ ಕೋಚ್‌ಗಳ ತರಬೇತಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದ್ದು ಇದೇ ಕಾರಣದಿಂದ ಇರಬಹುದು. ಐಎಸ್‌ಎಲ್‌ನಲ್ಲಿ ಭಾರತದ ಗೋಲ್‌ಕೀಪರ್‌ಗಳು ತೋರುತ್ತಿರುವ ಸಾಮರ್ಥ್ಯವು ಭವಿಷ್ಯದಲ್ಲಿ ಗೋಲ್‌ಕೀಪಿಂಗ್‌ ತರಬೇತಿಗೆ ಬೇಡಿಕೆ ಹೆಚ್ಚಲು ಕಾರಣವಾಗಬಹುದು. ಹಿರಿಯರ ಆಟಕ್ಕೆ ಮಾರು ಹೋಗಿರುವ ಯುವ ಆಟಗಾರರು ಐಎಸ್‌ಎಲ್‌ನಲ್ಲಿ ಗೋಲ್‌ಕೀಪಿಂಗ್‌ ಮಾಡುವ ಕನಸು ಕಂಡಿರುವುದು ಕೂಡ ಭಾರತದ ಫುಟ್‌ಬಾಲ್‌ನಲ್ಲಿ ಹೊಸ ಭರವಸೆ ಮೂಡಿಸಿದೆ.

17 ವರ್ಷದೊಳಗಿನವರ ತಂಡದ ಗೋಲ್‌ಕೀಪರ್‌ ಆಗಿದ್ದ ಮೊಹಮ್ಮದ್ ನವಾಜ್‌ಗೆ ಕಳೆದ ಬಾರಿ ಎಫ್‌ಸಿ ಗೋವಾ ತಂಡ ಕರೆ ನೀಡಿದಾಗ ಸಂಭ್ರಮಪಟ್ಟಿದ್ದರು. ‘ಸೀನಿಯರ್ ತಂಡದಿಂದ ಕರೆ ಬಂದಾಗ, ಅವರೊಂದಿಗೆ ಅಭ್ಯಾಸಕ್ಕೆ ಮಾತ್ರ ಅವಕಾಶ ಸಿಗಬಹುದು ಎಂದುಕೊಂಡಿದ್ದೆ. ಆದರೆ ಐಎಸ್‌ಎಲ್‌ನಲ್ಲಿ ಗೋಲ್‌ಕೀಪಿಂಗ್ ಮಾಡಲು ಹೇಳಿದಾಗ ಅನುಭವಿಸಿದ ಆನಂದವನ್ನು ಮಾತುಗಳಲ್ಲಿ ವರ್ಣಿಸಲಾರೆ’ ಎಂದು ಅವರು ಆಗ ಹೇಳಿದ್ದರು. 

ಮೊದಲು ವಿದೇಶಿಯರಿಗೆ ಮಣೆ; ನಂತರ ಭಾರತದವರಿಗೆ ಹೊಣೆ
ಐಎಸ್‌ಎಲ್‌ನ ಆರಂಭದ ಆವೃತ್ತಿಗಳಲ್ಲಿ ಬಹುತೇಕ ಎಲ್ಲ ತಂಡಗಳೂ ವಿದೇಶಿ ಗೋಲ್‌ಕೀಪರ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದವು. ವಿದೇಶಿ ಆಟಗಾರರ ಕೋಟಾದಲ್ಲಿ ಗೋಲ್‌ಕೀಪರ್‌ಗಳಿಗೂ ಆದ್ಯತೆ ನೀಡುತ್ತಿದ್ದವು. ಆದರೆ ಕ್ರಮೇಣ ಈ ‘ಟ್ರೆಂಡ್‌’ ಬದಲಾಯಿತು. ಮೊದಲ ಆವೃತ್ತಿಯಲ್ಲಿ ಕ್ರಿಸ್ಟೋಫ್ ವ್ಯಾನ್ ಮತ್ತು ಮೂರನೇ ಆವೃತ್ತಿಯಲ್ಲಿ ಅಪೋಲಾ ಎಡೆಲ್ ಉತ್ತಮ ಸಾಧನೆ ಮಾಡಿದ ಗೋಲ್‌ಕೀಪರ್‌ಗಳ ಪಟ್ಟಿಯ ಅಗ್ರಪಂಕ್ತಿಯಲ್ಲಿದ್ದರು. ಈ ನಡುವೆ ಟಿ.ಪಿ.ರೆಹನೇಶ್‌, ಲಕ್ಷ್ಮಿಕಾಂತ್ ಕಟ್ಟೀಮನಿ, ಸುಬ್ರತಾ ಪಾಲ್, ಅಮರಿಂದರ್ ಸಿಂಗ್, ಸುಭಾಷಿಷ್ ರಾಯ್, ಕರಣ್‌ಜೀತ್ ಸಿಂಗ್ ಮುಂತಾದವರು ‘ಕೈಚಳಕ’ ತೋರಿಸಿದರು. ಹೀಗಾಗಿ ತಂಡಗಳ ಮಾಲೀಕರು ದೇಶಿ ಗೋಲ್‌ಕೀಪರ್‌ಗಳ ಕಡೆಗೆ ವಾಲಿದರು. ನಾಲ್ಕನೇ ಆವೃತ್ತಿಯಲ್ಲಿ ಗುರುಪ್ರೀತ್‌ ಸಿಂಗ್ ಸಂಧು ಕಣಕ್ಕೆ ಇಳಿಯುವುದರೊಂದಿಗೆ ಟೂರ್ನಿಯ ಗೋಲ್‌ಕೀಪಿಂಗ್‌ ಹೊಸ ರೂಪು ಪಡೆದುಕೊಂಡಿತು.

ಪದಾರ್ಪಣೆ ಮಾಡಿದ ಆವೃತ್ತಿಯಲ್ಲೇ ಸಾಧಕರ ಪಟ್ಟಿಯಲ್ಲಿ ಸಂಧು ಮೂರನೇ ಸ್ಥಾನ ಗಳಿಸಿದರು. ಪಟ್ಟಿಯಲ್ಲಿ ವಿದೇಶಿ ಆಟಗಾರರ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲದಾಯಿತು. ನಂತರ ತಂಡಗಳಿಂದಲೇ ಹೆಸರು ಇಲ್ಲದಾಯಿತು. ಈ ಬಾರಿ ಹೊಸ ತಂಡ ಒಡಿಶಾ ಎಫ್‌ಸಿ ಬಿಟ್ಟರೆ ಉಳಿದ ಯಾವ ತಂಡದಲ್ಲೂ ವಿದೇಶಿ ಗೋಲ್‌ಕೀಪರ್‌ ಇಲ್ಲ. ಹೀಗಾಗಿ ಐಎಸ್‌ಎಲ್‌ನಲ್ಲಿ ಒಟ್ಟಾರೆ ಸಾಧನೆ ಮಾಡಿದವರ ಪಟ್ಟಿಯಲ್ಲಿ ಈಗ ಭಾರತದವರದೇ ಪಾರಮ್ಯ.

ಒಟ್ಟು 81 ಪಂದ್ಯಗಳನ್ನು ಆಡಿರುವ ಸುಬ್ರತಾ ಪಾಲ್ (ಜೆಮ್‌ಶೆಡ್‌ಪುರ ಎಫ್‌ಸಿ) 236 ಸೇವ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಗೋಲು ಬಿಟ್ಟುಕೊಟ್ಟಿರುವವರ ಪಟ್ಟಿಯಲ್ಲೂ ಅವರಿಗೇ ಅಗ್ರಪಟ್ಟ‍! ಐಎಸ್‌ಎಲ್‌ನಲ್ಲಿ 100 ಗೋಲು ಬಿಟ್ಟುಕೊಟ್ಟ ಏಕೈಕ ಆಟಗಾರ ಸುಬ್ರತಾ ಪಾಲ್! ಅಮರಿಂದರ್ ಸಿಂಗ್, ಟಿ.ಪಿ.ರೆಹನೇಶ್‌, ಲಕ್ಷ್ಮಿಕಾಂತ್ ಕಟ್ಟೀಮನಿ, ಗುರುಪ್ರೀತ್ ಸಿಂಗ್ ಸಂಧು ಮುಂತಾದವರು ಸಾಧಕರ ಪಟ್ಟಿಗೆ ಮೆರುಗು ತುಂಬಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು