ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌: ತವರಿನ ಅಂಗಳದಲ್ಲಿ ಚೆಟ್ರಿ ಚಮತ್ಕಾರ

ಗೋವಾ ತಂಡಕ್ಕೆ ಸೋಲಿನ ರುಚಿ ತೋರಿಸಿದ ಬೆಂಗಳೂರು ಎಫ್‌ಸಿ
Last Updated 3 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕ ಸುನಿಲ್‌ ಚೆಟ್ರಿ ಅವರ ಮಾಂತ್ರಿಕ ಆಟಕ್ಕೆ ಶುಕ್ರವಾರ ಕಂಠೀರವ ಮೈದಾನದಲ್ಲಿ ಹದಿಮೂರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಮನ ಸೋತರು.

ದ್ವಿತೀಯಾರ್ಧದಲ್ಲಿ ಚೆಟ್ರಿ ಮಾಡಿದ ಚಮತ್ಕಾರದಿಂದಾಗಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆರನೇ ಆವೃತ್ತಿಯ 50ನೇ ಪಂದ್ಯದಲ್ಲಿ 2–1 ಗೋಲುಗಳಿಂದ ಬಲಿಷ್ಠ ಎಫ್‌ಸಿ ಗೋವಾ ತಂಡವನ್ನು ಸೋಲಿಸಿತು. ಈ ಮೂಲಕ ಹೊಸ ವರ್ಷಾಚರಣೆಯ ಗುಂಗಿನಲ್ಲಿದ್ದ ‘ಸಿಲಿಕಾನ್‌ ಸಿಟಿ‘ಯ ಫುಟ್‌ಬಾಲ್‌ ಪ್ರಿಯರಿಗೆ ಭರ್ಜರಿ ಉಡುಗೊರೆ ನೀಡಿತು.

ಆರಂಭದಲ್ಲಿ ಎರಡು ತಂಡಗಳೂ ಚೆಂಡಿನ ಮೇಲೆ ಹಿಡಿತ ಸಾಧಿಸಲು ತುರುಸಿನ ಪೈಪೋಟಿ ನಡೆಸಿದವು. 11ನೇ ನಿಮಿಷದಲ್ಲಿ ಆತಿಥೇಯ ತಂಡಕ್ಕೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಗೋವಾ ತಂಡದ ಗೋಲುಪೆಟ್ಟಿಗೆಯ ಬಲಭಾಗದಿಂದ ರಾಹುಲ್‌ ಭೆಕೆ ಬಾರಿಸಿದ ಚೆಂಡನ್ನು ಪ್ರವಾಸಿ ಪಡೆಯ ಗೋಲ್‌ಕೀಪರ್‌ ಮಹಮ್ಮದ್ ನವಾಜ್‌ ತಡೆದರು.

ನಂತರ ಸಪ್ಪೆಯಾಗಿ ಸಾಗಿದ ಆಟ 30ನೇ ನಿಮಿಷದ ನಂತರ ರಂಗು ಪಡೆದುಕೊಂಡಿತು. ಬಿಎಫ್‌ಸಿ ಸತತವಾಗಿ ಎದುರಾಳಿಗಳ ರಕ್ಷಣಾ ವ್ಯೂಹ ಭೇದಿಸಲು ಪ್ರಯತ್ನಿಸಿದ್ದರಿಂದ, ಮೌನ ಮನೆಮಾಡಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ಮೊದಲಾರ್ಧದ ಆಟ ಮುಗಿಯಲು ಐದು ನಿಮಿಷಗಳು ಬಾಕಿ ಇದ್ದಾಗ ಗೋವಾ ತಂಡಕ್ಕೆ ಗೋಲು ಗಳಿಸುವ ಅವಕಾಶ ಲಭ್ಯವಾಗಿತ್ತು. ಇದನ್ನು ಪ್ರವಾಸಿ ಪಡೆ ಕೈಚೆಲ್ಲಿತು.

ಮೈಮರೆತ ಗೋವಾ: ಮೊದಲಾರ್ಧದಲ್ಲಿ ಚೆಟ್ರಿ ಬಳಿ ಚೆಂಡು ಸುಳಿಯದಂತೆ ಎಚ್ಚರವಹಿಸಿದ್ದ ಗೋವಾ ತಂಡ 59ನೇ ನಿಮಿಷದಲ್ಲಿ ಮೈಮರೆಯಿತು.

ಕಾರ್ನರ್‌ನಿಂದ ದಿಮಾಸ್‌ ಡೆಲ್ಗಾಡೊ, ಚೆಂಡು ಒದೆಯುವುದನ್ನೇ ಕಾಯುತ್ತಿದ ಚೆಟ್ರಿ, 18 ಗಜ ದೂರದಿಂದ ಮುಂದಕ್ಕೆ ಓಡಿಬಂದರು. ಅವರು ತಲೆತಾಗಿಸಿ (ಹೆಡರ್‌) ಕಳುಹಿಸಿದ ಚೆಂಡು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗೋವಾ ತಂಡದ ಗೋಲು ಬಲೆಗೆ ಮುತ್ತಿಕ್ಕಿತು. ಆಗ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತು. ಗ್ಯಾಲರಿಯಲ್ಲಿ ನೀಲಿ ಧ್ವಜಗಳು ರಾರಾಜಿಸಿದವು.

ಈ ಖುಷಿ ಆತಿಥೇಯರ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಹ್ಯೂಗೊ ಬೌಮಸ್‌ ಅವಕಾಶ ನೀಡಲಿಲ್ಲ. 61ನೇ ನಿಮಿಷದಲ್ಲಿ ಅವರು ಬಿಎಫ್‌ಸಿ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಕಣ್ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದಾಗ ಮೈದಾನದಲ್ಲಿ ಅರೆಕ್ಷಣ ಮೌನ ಆವರಿಸಿತು.

ಮತ್ತೆ ಚೆಟ್ರಿ ಮೋಡಿ: 80ನೇ ನಿಮಿಷದ ಆಟ ಮುಗಿದಾಗ ಎರಡು ತಂಡಗಳೂ 1–1 ಗೋಲುಗಳಿಂದ ಸಮಬಲ ಹೊಂದಿದ್ದವು. ಹೀಗಾಗಿ ಪಂದ್ಯ ಡ್ರಾ ಆಗಬಹುದೆಂದು ಊಹಿಸಿದವರಿಗೆ ಅಚ್ಚರಿ ಕಾದಿತ್ತು. 84ನೇ ನಿಮಿಷದಲ್ಲಿ ಚೆಟ್ರಿ ಮತ್ತೊಮ್ಮೆ ಕಾಲ್ಚಳಕ ತೋರಿದರು. ಆಶಿಕ್‌ ಕುರುಣಿಯನ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಅವರು ಅದನ್ನು ಸೊಗಸಾಗಿ ಡ್ರಿಬಲ್‌ ಮಾಡುತ್ತಾ ಮುನ್ನುಗ್ಗಿ ಚಾಕಚಕ್ಯತೆಯಿಂದ ಗುರಿ ತಲುಪಿಸಿಯೇ ಬಿಟ್ಟರು. ಆಗ ಉದ್ಯಾನನಗರಿಯ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅವರು ಬಿಎಫ್‌ಸಿ... ಬಿಎಫ್‌ಸಿ.. ಎಂದು ಹರ್ಷೋದ್ಗಾರ ಮೊಳಗಿಸಿದರು.

ಇಂದಿನ ಪಂದ್ಯ

ಮುಂಬೈ ಸಿಟಿ ಎಫ್‌ಸಿ–ಎಟಿಕೆ ಎಫ್‌ಸಿ
ಸ್ಥಳ: ಮುಂಬೈ ಫುಟ್‌ಬಾಲ್‌ ಅರೇನಾ, ಮುಂಬೈ
ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT