ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಎಸ್‌ಎಲ್‌: ಫೈನಲ್‌ ಕನಸಲ್ಲಿ ಬಿಎಫ್‌ಸಿ, ಸೆಮಿಯಲ್ಲಿ ಮುಂಬೈ ವಿರುದ್ಧ ಸೆಣಸು

Last Updated 11 ಮಾರ್ಚ್ 2023, 19:32 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಎಫ್‌ಸಿ ತಂಡ, ಭಾನುವಾರ ನಡೆಯಲಿರುವ ಎರಡನೇ ಲೆಗ್‌ ಸೆಮಿಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಪೈಪೋಟಿ ನಡೆಸಲಿದೆ.

ಮಾರ್ಚ್‌ 7 ರಂದು ಮುಂಬೈನಲ್ಲಿ ನಡೆದಿದ್ದ ಮೊದಲ ಲೆಗ್‌ ಪಂದ್ಯವನ್ನು 1–0 ರಲ್ಲಿ ಗೆದ್ದಿರುವ ಬಿಎಫ್‌ಸಿ, ಆತ್ಮವಿಶ್ವಾಸದೊಂದಿಗೆ ಕಂಠೀರವ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ. ಒಂದು ಗೋಲಿನಿಂದ ಹಿನ್ನಡೆಯಲ್ಲಿರುವ ಮುಂಬೈ ತಂಡ ಒತ್ತಡದಲ್ಲಿದೆ.

ಬೆಂಗಳೂರಿನ ತಂಡ ಸತತ 10 ಗೆಲುವು ಸಾಧಿಸಿದ್ದು, ತವರು ಅಂಗಳದಲ್ಲಿ ಪಾರಮ್ಯ ಮೆರೆಯುವ ನಿರೀಕ್ಷೆ ಹೊಂದಿದೆ. ಬಿಎಫ್‌ಸಿ 2018–19ರ ಋತುವಿನಲ್ಲಿ ಕೊನೆಯದಾಗಿ ಫೈನಲ್ ಪ್ರವೇಶಿಸಿತ್ತು. ನಾಲ್ಕು ವರ್ಷಗಳ ಬಿಡುವಿನ ಬಳಿಕ ಪ್ರಶಸ್ತಿ ಸುತ್ತು ತಲುಪಲು ಪ್ರಯತ್ನಿಸಲಿದೆ.

‘ಒಂದು ಗೋಲಿನ ಮುನ್ನಡೆ ಯೊಂದಿಗೆ ಈ ಪಂದ್ಯ ಆಡಲಿರುವುದು ನಿಜ. ಆದರೂ ನಾವು ಸಕಲ ರೀತಿಯಲ್ಲಿ ಸಜ್ಜಾಗಿದ್ದೇವೆ. ಮುಂಬೈ ಎಫ್‌ಸಿ ಶ್ರೇಷ್ಠ ತಂಡವಾಗಿರುವುದರಿಂದ ಕಠಿಣ ಸವಾಲು ಎದುರಾಗುವುದು ಖಚಿತ. ಯೋಜನೆಗಳನ್ನು ಯಾವ ರೀತಿ ಕಾರ್ಯರೂಪಕ್ಕಿಳಿಸಬೇಕು ಎಂಬುದು ಆಟಗಾರರಿಗೆ ತಿಳಿದಿದ್ದು, ಗೆಲುವನ್ನು ಎದುರುನೋಡುತ್ತಿದ್ದೇವೆ’ ಎಂದು ಬಿಎಫ್‌ಸಿ ಕೋಚ್‌ ಸೈಮನ್‌ ಗ್ರೇಸನ್‌ ಹೇಳಿದ್ದಾರೆ.

ಶಿವಶಕ್ತಿ ನಾರಾಯಣ್‌, ರಾಯ್‌ ಕೃಷ್ಣ, ಜಾವಿ ಹೆರ್ನಾಂಡೆಜ್‌ ಮತ್ತು ಸಂದೇಶ್‌ ಜಿಂಗಾನ್ ಅವರು ಬಿಎಫ್‌ಸಿಯ ಶಕ್ತಿ ಎನಿಸಿಕೊಂಡಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಗೋಲುಗಳನ್ನು ಹೊಡೆದಿರುವ ಸುನಿಲ್‌ ಚೆಟ್ರಿ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಚೆಟ್ರಿ ಅವರು ಪ್ಲೇ ಆಫ್‌ ಪಂದ್ಯ ಮತ್ತು ಮೊದಲ ಲೆಗ್‌ ಸೆಮಿಫೈನಲ್‌ನಲ್ಲಿ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ಸುರೇಶ್‌ ಸಿಂಗ್‌, ಪ್ರಬೀರ್‌ ದಾಸ್, ನೊರೆಮ್‌ ರೋಶನ್‌ ಸಿಂಗ್‌ ಹಾಗೂ ರೋಹಿತ್‌ ಕುಮಾರ್‌ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.

ಮತ್ತೊಂದೆಡೆ ಹಾಲಿ ಋತುವಿನಲ್ಲಿ ಅತ್ಯಧಿಕ ಗೋಲು (54) ಗಳಿಸಿರುವ ಮುಂಬೈ ತಂಡ ಪುಟಿದೆದ್ದು ನಿಲ್ಲಲು ಪ್ರಯತ್ನಿಸಲಿದೆ. ಜಾರ್ಜ್‌ ಪೆರೇರಾ ಡಯಾಜ್, ಲಾಲ್‌ಲಿಯಾನ್‌ಜುವಾಲ ಚಾಂಗ್ಟೆ, ಗ್ರೆಗ್ ಸ್ಟಿವರ್ಟ್‌ ಮತ್ತು ಮೊರ್ತದಾ ಫಲ್ ಅವರನ್ನೊಳಗೊಂಡ ಎದುರಾಳಿ ತಂಡವನ್ನು ಕಟ್ಟಿಹಾಕಲು ಬಿಎಫ್‌ಸಿ ರಕ್ಷಣಾ ವಿಭಾಗಕ್ಕೆ ಭಾರೀ ಪರಿಶ್ರಮ ನಡೆಸಬೇಕಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT