ಮಂಗಳವಾರ, ನವೆಂಬರ್ 30, 2021
21 °C

ಫುಟ್‌ಬಾಲ್: ರೊನಾಲ್ಡೊ ಕಾಲ್ಚಳಕದಲ್ಲಿ ಪೋರ್ಚುಗಲ್‌‌ಗೆ ಗೆಲುವು

ಎಪಿ Updated:

ಅಕ್ಷರ ಗಾತ್ರ : | |

Prajavani

ಸ್ಟಾಕ್‌ಹಾಮ್, ಸ್ವೀಡನ್: ಪಂದ್ಯದ ಎರಡೂ ಅವಧಿಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡ ಮಂಗಳವಾರ ರಾತ್ರಿ ಇಲ್ಲಿ ನಡೆದ ನೇಷನ್ಸ್ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಸ್ವೀಡನ್ ವಿರುದ್ಧ 2–0 ಅಂತರದ ಗೆಲುವು ಸಾಧಿಸಿತು. 

45ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲಿ 25 ಮೀಟರ್ ದೂರದಿಂದ ಮೋಹಕ ಗೋಲು ಗಳಿಸಿದ ರೊನಾಲ್ಡೊ 72ನೇ ನಿಮಿಷದಲ್ಲಿ ಮತ್ತೊಮ್ಮೆ ಚೆಂಡನ್ನು ಗುರಿ ಸೇರಿಸಿದರು. ಪಂದ್ಯದ ಮೊದಲ ಗೋಲು ಗಳಿಸುವ ಮೂಲಕ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 100 ಗೋಲು ಗಳಿಸಿದ ಸಾಧನೆ ಮಾಡಿದರು. ಅವರು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೋಲುಗಳ ಶತಕ ಗಳಿಸಿದ ಎರಡನೇ ವ್ಯಕ್ತಿ. ಇರಾನ್‌ನ ಮಾಜಿ ಆಟಗಾರ ಅಲಿ ದಾಯಿ ಅವರು ಮೊದಲಿಗ.

ಮುಂಗಾಲಿನಲ್ಲಿ ಸೋಂಕು ಕಾಣಿಸಿಕೊಂಡಿದ್ದ ಕಾರಣ ರೊನಾಲ್ಡೊ ಪೋರ್ಚುಗಲ್‌ನ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿದಿರಲಿಲ್ಲ. ಆ ಪಂದ್ಯದಲ್ಲಿ ತಂಡ ಕ್ರೊಯೇಷ್ಯಾವನ್ನು 4–1ರಲ್ಲಿ ಮಣಿಸಿತ್ತು. ಗುಂಪು ಹಂತದ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಪೋರ್ಚುಗಲ್ ’ಎ‘ ಲೀಗ್‌ನ ಮೂರನೇ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿದೆ. ಬೆಲ್ಜಿಯಂ ಮತ್ತು ಫ್ರಾನ್ಸ್ ತಂಡಗಳು ತಮ್ಮ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿವೆ.

ಮಂಗಳವಾರ ನಡೆದ ಪಂದ್ಯಗಳಲ್ಲಿ ಬೆಲ್ಜಿಯಂ 5–1ರಲ್ಲಿ ಐಸ್‌ಲ್ಯಾಂಡ್‌ ವಿರುದ್ಧ ಗೆದ್ದರೆ, ಫ್ರಾನ್ಸ್‌ 4–2ರಲ್ಲಿ ಕ್ರೊಯೇಷ್ಯಾವನ್ನು ಮಣಿಸಿತು. ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಮುಕ್ತಾಯ ಕಂಡಿತು.

ಗಿರೌಡ್‌ ದಾಖಲೆಯ ಸನಿಹ 
ಕ್ರೊಯೇಷ್ಯಾ ಎದುರಿನ ಪಂದ್ಯದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿದ ಫ್ರಾನ್ಸ್‌ನ ಒಲಿವರ್ ಗಿರಾಡ್ ರಾಷ್ಟ್ರೀಯ ತಂಡಕ್ಕಾಗಿ ಅತಿ ಹೆಚ್ಚು ಗೋಲು ಗಳಿಸಿರುವ ಮೈಕೆಲ್ ಪ್ಲಾಟಿನಿ ಅವರ ದಾಖಲೆಯ ಸನಿಹ ತಲುಪಿದರು. ಅವರಿಗೆ ದಾಖಲೆ ಸಮಗಟ್ಟಲು ಇನ್ನು ಒಂದು ಗೋಲು ಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು