ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಜ್‌ ಲೋಕದಲ್ಲಿ ಗುರುವಿನ ‘ಪರಿಮಳ’

ಹೊಸಬರ ನಿರಾಸಕ್ತಿಯಿಂದ ಆಟಗಾರರ ಸಂಖ್ಯೆ ಕಡಿಮೆ
Published 6 ಜೂನ್ 2024, 6:23 IST
Last Updated 6 ಜೂನ್ 2024, 6:23 IST
ಅಕ್ಷರ ಗಾತ್ರ

ಮಂಗಳೂರು: ಕಳೆದ ತಿಂಗಳ ಕೊನೆಯ ವಾರದಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಜೂನಿಯರ್ ಮತ್ತು ಸಬ್‌ ಜೂನಿಯರ್ ಬ್ರಿಜ್ ಚಾಂಪಿಯನ್‌ಷಿಪ್‌ನ ಒಟ್ಟು 17 ಬಹುಮಾನಗಳು ಒಬ್ಬರೇ ಕೋಚ್ ಬಳಿ ತರಬೇತಿ ಪಡೆದವರಿಗೆ ಲಭಿಸಿದವು. ಭಾರತದಲ್ಲಿ ಬ್ರಿಜ್ ಕ್ರೀಡೆಯನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಒಬ್ಬರಾಗಿರುವ ಆ ಕೋಚ್ ಈಗ ಮಂಗಳೂರಿನಲ್ಲಿದ್ದಾರೆ.

ಗುಜರಾತ್‌ನ ಅಹಮದಾಬಾದ್ ನಗರದ ಪರಿಮಳ್ ವಹಾಲಿಯ, ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಶಿಷ್ಯರೊಂದಿಗೆ ಬಂದಿದ್ದಾರೆ. ವಿವಿಧ ವಿಭಾಗಗಳಲ್ಲಿ ಪಾಲ್ಗೊಳ್ಳುತ್ತಿರುವ ಶಿಷ್ಯರನ್ನು ಹುರಿದುಂಬಿಸುತ್ತಿರುವ ಅವರು 7ರಂದು ಆರಂಭವಾಗಲಿರುವ ಮಿಶ್ರ ವಿಭಾಗದಲ್ಲಿ ಶಿಷ್ಯೆಯ ಜೊತೆಯಲ್ಲೇ ಸ್ಪರ್ಧೆಗೂ ಇಳಿಯಲಿದ್ದಾರೆ.

‘ಬ್ರಿಜ್ ಗುರು’ ಎಂದೇ ಕರೆಸಿಕೊಂಡಿರುವ ಪರಿಮಳ್‌ ವಹಾಲಿಯ, ವಿವಿಧ ಕಾರಣಗಳಿಂದ ದೇಶದಲ್ಲಿ ಬ್ರಿಜ್ ಆಟಗಾರರ ಸಂಖ್ಯೆ ಕುಸಿಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬುಧವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ವಯಸ್ಸಾಗಿ ಅಥವಾ ಅನಾರೋಗ್ಯ ಕಾಡಿ ಒಂದು ತಲೆಮಾರಿನ ಬ್ರಿಜ್ ಪಟುಗಳು ದೂರ ಆಗುತ್ತಿದ್ದಾರೆ. ಆ ಜಾಗ ತುಂಬಲು ಹೊಸತಲೆಮಾರಿನವರು ಬರುತ್ತಿಲ್ಲ. ಆದ್ದರಿಂದ ಭಾರತದಲ್ಲಿ ಈ ಕ್ರೀಡೆಯನ್ನು ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ಐಐಟಿ ಖರಗಪುರದಲ್ಲಿ ತಾಂತ್ರಿಕ ಶಿಕ್ಷಣ ಪಡೆದಿರುವ ಪರಿಮಳ್‌ ಏಳು ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನೂ ಗಳಿಸಿದ್ದರು. ಮಧ್ಯಪ್ರದೇಶದ ಇಂದೋರ್‌ ನಿವಾಸಿಗಳಾದ ಕಲ್ಪನಾ ಗುಜ್ಜರ್ ಮತ್ತು ವಿದ್ಯಾ ಪಟೇಲ್ ಅವರನ್ನು ಗುರುತಿಸಿ ತರಬೇತಿ ನೀಡಿದ ಅವರು 2022ರ ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವಂತೆ ಮಾಡಿದರು. ಇಟಲಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಪೇರ್ ವಿಭಾಗದಲ್ಲಿ ಈ ಜೋಡಿ ಬೆಳ್ಳಿ ಗೆದ್ದುಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ಕಲ್ಪನಾ ಚಿನ್ನದ ಪದಕ ಗಳಿಸಿದ್ದರು.

2018ರಲ್ಲಿ ಅಹಮದಾಬಾದ್ ವಿಶ್ವವಿದ್ಯಾಲಯ ಸೇರಿದ ಕಲ್ಪನಾ ಮತ್ತು ವಿದ್ಯಾ ಅವರನ್ನು ಬ್ರಿಜ್‌ಗೆ ಸಿದ್ಧಗೊಳಿಸಿದ ಪರಿಮಳ್‌ ಅವರು ಇಟಲಿಯಲ್ಲಿ ಸಾಮರ್ಥ್ಯ ಪ್ರದರ್ಶಿಸುವ ಮುನ್ನ ಮೂರು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಒದಗಿಸಿದ್ದರು.

‘ರಾಷ್ಟ್ರೀಯ ಜೂನಿಯರ್ ತಂಡದ ಜೊತೆ ಕೆಲವು ವರ್ಷ ಕಾರ್ಯನಿರ್ವಹಿಸಿದ್ದೇನೆ. ಜೂನಿಯರ್ ವಿಭಾಗದವರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದೇನೆ. ಶಿಕ್ಷಣ, ಉದ್ಯೋಗದ ಹುಡುಕಾಟ ಇತ್ಯಾದಿಗಳಿಂದಾಗಿ ಯುವಜನರು ಈ ಕ್ರೀಡೆಯತ್ತ ಬರುತ್ತಿಲ್ಲ. ಸರ್ಕಾರವು ಬ್ರಿಜ್‌ಗೆ ಮಾನ್ಯತೆ ನೀಡಿದ ನಂತರ ಸ್ವಲ್ಪ ಚೇತರಿಸಿಕೊಂಡಿದೆ. ಈ ಕ್ರೀಡೆ ಈಗ ಏಷ್ಯನ್ ಗೇಮ್ಸ್‌ನಲ್ಲಿ ಇದೆ. ಸಾಧನೆ ಮಾಡಿದವರಿಗೆ ಉದ್ಯೋಗವೂ ಸಿಗುತ್ತಿದೆ. ಆದ್ದರಿಂದ ಯುವಜನರು ಇದರತ್ತ ಆಕರ್ಷಿತರಾಗುವ ನಿರೀಕ್ಷೆ ಇದೆ. ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

3000 ಮಂದಿ ಸಕ್ರಿಯ

‘ಭಾರತದಲ್ಲಿ 3000ಕ್ಕೂ ಹೆಚ್ಚು ಮಂದಿ ಬ್ರಿಜ್‌ ಕ್ರೀಡೆಯಲ್ಲಿ ಸಕ್ರಿಯರಾಗಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಬ್ರಿಜ್ ಸಂಸ್ಥೆ ಇದೆ. ಪ್ರತಿ ರಾಜ್ಯಗಳಿಗೆ ಕೋಟಾ ಇದ್ದು ಮಹಾರಾಷ್ಟ್ರದಲ್ಲಿ ಮೂರು ಸಂಸ್ಥೆಗಳು ಇವೆ. ಬೇಸಿಗೆ ಕಾಲದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಚಳಿಗಾಲದ ಚಾಂಪಿಯನ್‌ಷಿಪ್ ಮತ್ತು ಅಂತರರಾಜ್ಯ ಚಾಂಪಿಯನ್‌ಷಿಪ್‌ ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಚಳಿಗಾಲದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಈಚೆಗೆ 600ಕ್ಕೆ ಇಳಿದಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಸದ್ಯ ಬ್ರಿಜ್‌ನಲ್ಲಿ ಮುಂಪಕ್ತಿಯಲ್ಲಿ ಇರುವ ರಾಜ್ಯಗಳು’ ಎಂದು ಪರಿಮಳ್ ತಿಳಿಸಿದರು.

ಮುಂಬೈನ ಜಗ್ಗಿ ಶಿವದಾಸ್‌, ಅಹಮದಾಬಾದ್‌ನ ಸುನಿತ್ ಚೋಪ್ಸಿ ಅಹಮದಾಬಾದ್, ತಮಿಳುನಾಡಿನ ವೆಂಕಟರಾಮನ್, ಕಿರಣ್ ನಾದರ್ ಮತ್ತು ನವದೆಹಲಿಯ ಸತ್ಯ, ಜೂನಿಯರ್ ವಿಭಾಗದಲ್ಲಿ ಸಾಗರಿಕ್ ರಾಯ್ ಮತ್ತು ಸಾಯಂತ್‌ ಭರವಸೆ ಮೂಡಿಸಿದ್ದಾರೆ. 8ನೇ ವಯಸ್ಸಿನಿಂದ 80ರ ಹರೆಯದ ವರೆಗೂ ಆಡಲು ಅವಕಾಶ ಇರುವ ಅಪರೂಪದ ಕ್ರೀಡೆ ಬ್ರಿಜ್‌. ಆದ್ದರಿಂದ ಪಾಲಕರು ಮಕ್ಕಳಿಗೆ ಬ್ರಿಜ್ ಕಲಿಸಲು ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT