ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್ ಟೂರ್ನಿ: ಶರಣ್‌ ರಾವ್‌ಗೆ ಕುದುರೆಮುಖ ಟ್ರೋಫಿ

Published 7 ಜನವರಿ 2024, 15:45 IST
Last Updated 7 ಜನವರಿ 2024, 15:45 IST
ಅಕ್ಷರ ಗಾತ್ರ

ಮಂಗಳೂರು: ಅಮೋಘ ಆಟವಾಡಿ ಒಂದು ಸುತ್ತಿನಲ್ಲಿ ಮಾತ್ರ ಡ್ರಾ ಮಾಡಿಕೊಂಡ ನಗರದ ಶರಣ್ ರಾವ್‌, ಭಾನುವಾರ ಮುಕ್ತಾಯಗೊಂಡ ಕುದುರೆಮುಖ ಕಬ್ಬಿಣ ಅದಿರು ಕಂಪನಿ ನಿಯಮಿತ (ಕೆಐಒಸಿಎಲ್‌) ಆಶ್ರಯದ ಫಿಡೆ ರೇಟಿಂಗ್ ಅಖಿಲ ಭಾರತ ಮುಕ್ತ ರ‍್ಯಾಪಿಡ್ ಚೆಸ್ ಟೂರ್ನಿಯ ಕುದುರೆಮುಖ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದರು. ಅವರಿಗೆ ₹ 30 ಸಾವಿರ ನಗದು ಬಹುಮಾನವೂ ಲಭಿಸಿತು. 

ಕಾವೂರಿನಲ್ಲಿರುವ ಕೆಐಒಸಿಎಲ್ ಟೌನ್‌ಷಿಪ್‌ನ ನೆಹರು ಭವನದಲ್ಲಿ ನಡೆದ ಒಂಬತ್ತು ಸುತ್ತುಗಳ ಟೂರ್ನಿಯಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಶರಣ್ 8.5 ಪಾಯಿಂಟ್ ಕಲೆ ಹಾಕಿದರು. ಕೆನಡಾದಲ್ಲಿ ನೆಲೆಸಿರುವ ಭಾರತೀಯ, 12 ವರ್ಷದೊಳಗಿನ ಪೋರ ಫಿಡೆ ಮಾಸ್ಟರ್‌ ಆ್ಯರನ್ ರೀವ್‌ ಮೆಂಡಿಸ್‌ ರನ್ನರ್ ಅಪ್ ಸ್ಥಾನ ಗಳಿಸಿದರು. ಗೋವಾದ ಮಂದಾರ್ ಪ್ರದೀಪ್ ಲಾಡ್ ಮತ್ತು ಕರ್ನಾಟಕದ ಆಗಸ್ಟಿನ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿದರು. ಆ್ಯರನ್‌, ಮಂದಾರ್‌ಮತ್ತು ಆಗಸ್ಟಿನ್‌ ತಲಾ 8 ಪಾಯಿಂಟ್ ಗಳಿಸಿದ್ದರು.

2150 ರೇಟಿಂಗ್ ಪಾಯಿಂಟ್ ಹೊಂದಿದ್ದ ಶರಣ್‌ ತಮಗಿಂತ ಹೆಚ್ಚು ರೇಟಿಂಗ್ ಪಾಯಿಂಟ್ (2286) ಹೊಂದಿರುವ ತಮಿಳುನಾಡಿನ ಪ್ರದೀಪ್ ಕುಮಾರ್ ವಿರುದ್ಧ  ಕೊನೆಯ ಸುತ್ತಿನಲ್ಲಿ ಜಯ ಗಳಿಸಿದರು. ಏಳನೇ ಸುತ್ತಿನಲ್ಲಿ ಗೋವಾದ ಋತ್ವಿಜ್ ಪರಬ್ ಎದುರು ಡ್ರಾ ಮಾಡಿಕೊಂಡಿದ್ದರು. ಇಂಟರ್‌ನ್ಯಾಷನಲ್ ಮಾಸ್ಟರ್‌ ಋತ್ವಿಜ್ 2133 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.

ಆ್ಯರನ್‌ ಕೊನೆಯ ಸುತ್ತಿನಲ್ಲಿ ಋತ್ವಿಜ್ ಋತ್ವಿಜ್ ವಿರುದ್ಧ ಗೆದ್ದರು. ಈ ಮೂಲಕ ₹ 20 ಸಾವಿರ ನಗದು ಗಳಿಸಿದರು. 3ನೇ ಸ್ಥಾನ ಗಳಿಸಿದವರಿಗೆ ₹ 10 ಸಾವಿರ ಮತ್ತು ನಾಲ್ಕನೇ ಸ್ಥಾನ ಗಳಿಸಿದವರಿಗೆ ₹ 8 ಸಾವಿರ ನೀಡಲಾಯಿತು. ಒಟ್ಟು ₹ 3 ಲಕ್ಷ ಬಹುಮಾನ ಮೊತ್ತ ವಿತರಿಸಲಾಯಿತು.

ಕೊನೆಯ ಸುತ್ತಿನಲ್ಲಿ ಆಗಸ್ಟಿನ್, ಫಿಡೆ ಮಾಸ್ಟರ್ ದಕ್ಷಿಣ ಕನ್ನಡದ ಗಹನ್ ಎಂ.ಜಿ ವಿರುದ್ಧ, ಮಂದಾರ್ ಪ್ರದೀಪ್ ದಕ್ಷಿಣ ಕನ್ನಡದ ಧನುಷ್‌ ರಾಮ್ ವಿರುದ್ಧ, ಫಿಡೆ ಮಾಸ್ಟರ್ ತಮಿಳುನಾಡಿನ ಸೆಂಥಿಲ್ ಮಾರನ್ ಗೋವಾದ ಅನಿಕೇತ್ ಎದುರು, ತಮಿಳುನಾಡಿನ ಮಣಿಕಂಠನ್‌ ಇಂಟರ್‌ನ್ಯಾಷನಲ್ ಮಾಸ್ಟರ್ ಕರ್ನಾಟಕದ ರವಿ ಗೋಪಾಲ್ ಹೆಗ್ಡೆ ಎದುರು, ಎಜಿಎಂ ದಕ್ಷಿಣ ಕನ್ನಡದ ಲಕ್ಷಿತ್ ಸಾಲಿಯಾನ್ ದಕ್ಷಿಣ ಕನ್ನಡದ ಸಿದ್ಧಾರ್ಥ್ ಪ್ರಭು ವಿರುದ್ಧ ಗೆಲುವು ಸಾಧಿಸಿದರು. ಫಿಡೆ ಮಾಸ್ಟರ್‌ ಕರ್ನಾಟಕದ ಪ್ರೀತಂ ಶರ್ಮಾ ತಮಿಳುನಾಡಿನ ಸೈಯದ್ ಅನ್ವರ್ ಜೊತೆ ಡ್ರಾ ಮಾಡಿಕೊಂಡರು. ಶರಣ್ ರಾವ್‌, ಧನುಷ್ ರಾಮ್, ಸೆಂಥಿಲ್ ಮಾರನ್‌, ಮಂದಾರ್ ಪ್ರದೀಪ್ ಲಾಡ್‌, ಪ್ರೀಥಂ ಶರ್ಮಾ, ಋತ್ವಿಜ್ ಮತ್ತು ಸೈಯದ್ ಅನ್ವರ್ 5 ಪಾಯಿಂಟ್‌ಗಳೊಂದಿಗೆ ಶನಿವಾರ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT