ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chess World Cup 2023: ಟೈಬ್ರೇಕ್‌ ಪಂದ್ಯ ಆಡಲಿರುವ ಪ್ರಜ್ಞಾನಂದ– ಕಾರ್ಲ್‌ಸನ್‌

Published 23 ಆಗಸ್ಟ್ 2023, 23:30 IST
Last Updated 23 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಮನಿಷಾ ಮೋಹಿತೆ

ಕ್ಲಾಸಿಕಲ್‌ ಮಾದರಿಯ ಚೆಸ್‌ನಲ್ಲಿ ಬಿಳಿ ಕಾಯಿಗಳಲ್ಲಿ ಆಡುವಾಗ ಮ್ಯಾಗ್ನಸ್‌ ಕಾರ್ಲ್‌ಸನ್‌ ಅತ್ಯಂತ ಬಲಶಾಲಿ ಆಟಗಾರ. ಅಜರ್‌ಬೈಜಾನ್‌ನ ಬಾಕು ನಗರದಲ್ಲಿ ಬುಧವಾರ ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿ  ಫೈನಲ್‌ನ ಎರಡನೇ ಪಂದ್ಯದಲ್ಲಿ ನಾರ್ವೆಯ ಈ ಆಟಗಾರನ ಎದುರು ‘ಡ್ರಾ’ ಸಾಧಿಸಿದಾಗ ಪ್ರಜ್ಞಾನಂದ ಸಂತೃಪ್ತರಾದಂತೆ ಕಂಡುಬಂದರು. ಎರಡು ಪಂದ್ಯಗಳ ನಂತರ ಸ್ಕೋರ್ 1–1 ಆಗಿದ್ದು, ವಿಜೇತ ಆಟಗಾರನನ್ನು ನಿರ್ಧರಿಸಲು ಗುರುವಾರ ಟೈಬ್ರೇಕ್‌ (ಅಲ್ಪಾವಧಿಯ) ಪಂದ್ಯಗಳು ನಡೆಯಲಿವೆ.

ಬುಧವಾರದ ಎರಡನೇ ಪಂದ್ಯ ಬರೇ 30 ನಡೆಗಳ ನಂತರ ಆಯಿತು. ಹಾಲಿ ಟೂರ್ನಿಯಲ್ಲಿ ಕಾರ್ಲ್‌ಸನ್‌ ಆಗಲಿ, ‘ಪ್ರಗ್ಗು’ ಆಗಲಿ ಇಷ್ಟು ಬೇಗನೇ ‘ಡ್ರಾ’ಕ್ಕೆ ಸಹಿಹಾಕಿರಲಿಲ್ಲ.

ಎರಡು ದಿನ ಹಿಂದೆ ತಮಗೆ ಹೊಟ್ಟೆ ಕೆಟ್ಟಿತ್ತು ಎಂದು ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲ್‌ಸನ್‌ ಮಂಗಳವಾರ ನಡೆದ ಪಂದ್ಯದ ನಂತರ ಹೇಳಿದ್ದರು. ಸುಸ್ತಿನಿಂದ ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ಸಿಗುವ ಕಾರಣ ಬೇಗನೇ ‘ಡ್ರಾ’ಕ್ಕೆ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದರು. 32 ವರ್ಷದ ಕಾರ್ಲ್‌ಸನ್‌ ಮತ್ತು 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಇದುವರೆಗೆ ಮೂರು ದೀರ್ಘ ಅವಧಿಯ ಪಂದ್ಯಗಳನ್ನು ಆಡಿದ್ದು ಮೂರೂ ‘ಡ್ರಾ’ ಆಗಿವೆ.

ಪ್ರಗ್ಗು ಕೂಡ ಒಂದಿಷ್ಟು ಬಳಲಿದಂತೆ ಕಂಡುಬಂದರು. ಪಂದ್ಯದ ನಂತರ ಮಾತನಾಡಿದ ಅವರು ‘ನಾಳೆ ಹೊಸ ಉಲ್ಲಾಸದಿಂದ ಬರುತ್ತೇನೆ. ಇವತ್ತು ವಿಶ್ರಾಂತಿ ಪಡೆಯುತ್ತೇನೆ. ನನಗೆ ವಿಶ್ರಾಂತಿ ಅತಿ ಮುಖ್ಯ. ಇಲ್ಲಿ ಸಾಕಷ್ಟು ಟೈಬ್ರೇಕ್‌ ಪಂದ್ಯಗಳನ್ನಾಡಿದ್ದೇನೆ’ ಎಂದು ತಿಳಿಸಿದರು.

‘ಆಟವು ನಾಲ್ಕು ‘ನೈಟ್‌’ (ಕುದುರೆ)ಗಳ ಓಪನಿಂಗ್‌ ಕಂಡಿದ್ದು, 10ನೇ ನಡೆಯಲ್ಲಿ ಇಬ್ಬರೂ ‘ಕ್ವೀನ್‌’ ಕಳೆದುಕೊಂಡಾಗಲೇ ಮುಂದಿನ ದಾರಿ ಸ್ಪಷ್ಟವಾಗಿತ್ತು. (ಈ ಓಪನಿಂಗ್‌ನಲ್ಲಿ ಬಿಳಿ ಕಾಯಿಗಳಲ್ಲಿ ಆಡುವ ಆಟಗಾರ ಸಾಮಾನ್ಯವಾಗಿ ರಿಸ್ಕ್‌ ತೆಗೆದುಕೊಳ್ಳಲು ಹೋಗುವುದಿಲ್ಲ. ಎದುರಾಳಿ ಆಟಗಾರನಿಗೂ ರಕ್ಷಣೆಗೆ ಸಾಕಷ್ಟು ಅವಕಾಶವಿರುತ್ತದೆ). ನೋಡುಗರಿಗೂ ಎರಡನೇ ಪಂದ್ಯ ಬೋರು ಹೊಡೆಸುವ ರೀತಿಯಲ್ಲಿತ್ತು. ಮತ್ತೆ ಕೆಲವು ಎಕ್ಸ್‌ಚೇಂಜ್‌ಗಳ ನಂತರ (ಇಬ್ಬರೂ ಸಮಾನ ಪಡೆಗಳನ್ನು ಕಳೆದುಕೊಳ್ಳುವುದು) ಅಂತಿಮವಾಗಿ ಇಬ್ಬರ ಬಳಿಯೂ ಒಂದು ಬಿಷಪ್‌ ಮತ್ತು ಆರು ಪಾನ್ಸ್‌ (ಕಾಲಾಳುಗಳು) ಇದ್ದವು.

ಮೂರೂ ಮಾದರಿಯ ಆಟಗಳಲ್ಲಿ (ಕ್ಲಾಸಿಕಲ್‌, ರ‍್ಯಾಪಿಡ್‌, ಬ್ಲಿಟ್ಸ್‌) ಕಾರ್ಲ್‌ಸನ್‌ ವಿಶ್ವ ಚಾಂಪಿಯನ್ ಆಗಿರುವ ಆಟಗಾರನೇ. ಆದರೆ ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಪ್ರಜ್ಞಾನಂದ ಅವರ ಆಟದಲ್ಲೂ ಲೋಪಗಳನ್ನು ಕಂಡುಕೊಂಡಿದ್ದಿದೆ. ನಾರ್ವೆಯ ಆಟಗಾರನ ವಿರುದ್ಧ ಅಲ್ಪಾವಧಿಯ ಆಟಗಳಲ್ಲಿ ಐದು ಬಾರಿ ಚೆನ್ನೈನ ಚತುರ ಜಯಗಳಿದ್ದಾರೆ.

ಕಳೆದ ಐದು ದಿನಗಳಿಂದ ಸತತವಾಗಿ ಆಡುತ್ತಿರುವ ಪ್ರಜ್ಞಾನಂದ ಅವರಿಗೂ ವಿಶ್ರಾಂತಿ ಬೇಕಿದ್ದು, ಅವರೂ ಬುಧವಾರ ಕ್ಷಿಪ್ರ ‘ಡ್ರಾ’ಕ್ಕೆ ತಲೆಯಾಡಿಸಿದ್ದು ಇದನ್ನು ಸೂಚಿಸುವಂತಿತ್ತು.

ಫೈನಲ್ ತಲುಪುವ ಹಾದಿಯಲ್ಲಿ ಅವರು ಜಗತ್ತಿನ ಎರಡನೇ ಕ್ರಮಾಂಕದ ಹಿಕಾರು ನಕಾಮುರಾ ಮತ್ತು ಮೂರನೇ ಕ್ರಮಾಂಕದ ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸಿದ್ದಾರೆ. ಕ್ಯಾಂಡಿಡೇಟ್ಸ್‌ ಟೂರ್ನಿಗೂ ಅರ್ಹತೆ ಗಿಟ್ಟಿಸಿದ್ದಾರೆ. ವಿಶ್ವನಾಥನ್ ಆನಂದ್ ನಂತರ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರನೀತ.

ವಿಶ್ವನಾಥನ್ ಆನಂದ್ ಚೀನಾದಲ್ಲಿ 2000ನೇ ವರ್ಷದಲ್ಲಿ ನಡೆದ ಮೊಟ್ಟಮೊದಲ ವಿಶ್ವಕಪ್‌ನಲ್ಲಿ ಜಯಗಳಿಸಿದ್ದರು. 2002ರಲ್ಲಿ ಈ ಟೂರ್ನಿ ತವರಿನಲ್ಲಿ ನಡೆದಾಗಲೂ ಆನಂದ್‌ ಪ್ರಶಸ್ತಿ ಜಯಿಸಿದ್ದರು. 2005ರಲ್ಲಿ ವಿಶ್ವಕಪ್‌ಗೆ ಫಿಡೆ ಹೊಸ ಸ್ವರೂಪದಲ್ಲಿ ಮರುಚಾಲನೆ ನೀಡಿತು. ಗುರುವಾರ ಎಲ್ಲರ ಕಣ್ಣು ಯುವ ಆಟಗಾರ ಪ್ರಜ್ಞಾನಂದ ಮೇಲೆ ಇರಲಿದೆ. ಅವರು ಇತಿಹಾಸ ನಿರ್ಮಿಸುವ ಹಾದಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT