ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ | ‘ತಾರತಮ್ಯ‘ ಆಕ್ರೋಶ: ಕ್ಷಮೆ ಯಾಚಿಸಿದ ಹೋಟೆಲ್‌

ಲಿಫ್ಟ್‌ಗಳ ಬಳಿ ‘ಜಪಾನೀಯರಿಗೆ ಮಾತ್ರ‘, ‘ವಿದೇಶಿಯರಿಗೆ ಮಾತ್ರ’ ಫಲಕ
Last Updated 12 ಜುಲೈ 2021, 6:01 IST
ಅಕ್ಷರ ಗಾತ್ರ

ಟೋಕಿಯೊ (ರಾಯಿಟರ್ಸ್): ಲಿಫ್ಟ್‌ಗಳ ಮುಂದೆ ‘ಜಪಾನೀಯರಿಗೆ ಮಾತ್ರ’ ಮತ್ತು ‘ವಿದೇಶಿಯರಿಗೆ ಮಾತ್ರ’ ಎಂದು ಫಲಕ ಹಾಕಿದ್ದ ಟೋಕಿಯೊ ಹೋಟೆಲ್‌ ಈ ಕ್ರಮಕ್ಕೆ ಆಕ್ರೋಶ ಎದುರಾದ ಕಾರಣ ಕ್ಷಮೆ ಯಾಚಿಸಿದ್ದು, ಅವುಗಳನ್ನು ಭಾನುವಾರ ತೆರವುಗೊಳಿಸಿದೆ. ಒಲಿಂಪಿಕ್ಸ್‌ಗೆ ಪೂರ್ವಭಾವಿಯಾಗಿ ಕೋವಿಡ್‌ ನಿಯಂತ್ರಣಕ್ಕೆ ಈ ಮುನ್ನೆಚ್ಚರಿಕೆ ಕ್ರಮ ತಾರತಮ್ಯದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ

ಕೋವಿಡ್‌ ಪ್ರಕರಣಗಳು ಏರುತ್ತಿರುವ ಕಾರಣ ಜಪಾನ್‌ ರಾಜಧಾನಿಯಲ್ಲಿ ಈಗ ‘ತುರ್ತುಪರಿಸ್ಥಿತಿ’ ರೀತಿಯ ನಿರ್ಬಂಧ ಇದೆ. ಜುಲೈ 23 ರಿಂದ ಆಗಸ್ಟ್‌ 8ರವರೆಗೆ ಒಲಿಂಪಿಕ್ಸ್‌ ನಿಗದಿಯಾಗಿದ್ದು, ಸಾವಿರಾರು ಕ್ರೀಡಾಪಟುಗಳು, ತರಬೇತಿದಾರರು, ಅಧಿಕಾರಿಗಳು ಇಲ್ಲಿಗೆ ಬರತೊಡಗಿದ್ದಾರೆ. ಇದು ಸೋಂಕು ಹೆಚ್ಚಿಸಲು ಕಾರಣವಾಗಬಹುದು ಎಂಬ ತಳಮಳ ಮೂಡಿಸಿದೆ.

ಟೋಕಿಯೊ ನಗರದ ಅಂಚಿನಲ್ಲಿರುವ ‘ಅಕಸಾಕಾ ಹೋಟೆಲ್‌ ಟೊಕ್ಯು’ನಲ್ಲಿ ಒಲಿಂಪಿಕ್‌ ಸಂಘಟಕರ ಮಾರ್ಗಸೂಚಿಯಂತೆ ಶುಕ್ರವಾರ ಈ ಫಲಕಗಳನ್ನು ಅಳವಡಿಸಿತ್ತು. ಹೋಟೆಲ್‌ನಲ್ಲಿ ಒಲಿಂಪಿಕ್ಸ್‌ ಉದ್ದೇಶದಿಂದ ವಾಸ್ತವ್ಯವಿರುವ ಅತಿಥಿಗಳು, ಇತರೆ ಕಾರಣಗಳಿಗೆ ಬಂದಿರುವ ಅತಿಥಿಗಳಿಂದ ಪ್ರತ್ಯೇಕವಾಗಿರುವುದನ್ನು ಖಚಿತಪಡಿಸಲು ಈ ಕ್ರಮಕ್ಕೆ ಮುಂದಾಗಿತ್ತು.

ವಿದೇಶಿಯರ ವಿರುದ್ಧ ಭೇದ ಮಾಡುವ ಯಾವುದೇ ಉದ್ದೇಶ ಇರಲಿಲ್ಲ ಎಂದು ವಿಷಯ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅರ್ಥ– ಅಪಾರ್ಥ:

‘ನಾವು ಎಲ್ಲರಿಗೆ ಸುಲಭವಾಗಿ ಅರ್ಥವಾಗಲಿ ಎನ್ನುವ ಉದ್ದೇಶ ಹೊಂದಿದ್ದೆವು. ಆದರೆ ಇದು ಅಪಾರ್ಥಕ್ಕೆ ಎಡೆಯಾಗಿದೆ’ ಎಂದಿದ್ದಾರೆ. ಇದರ ಬದಲು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಮುಖ್ಯ ಕಚೇರಿ ಜೊತೆ ಚರ್ಚೆ ನಡೆಸುತ್ತೇವೆ ಎಂದೂ ಅವರು ಹೇಳಿದ್ದಾರೆ.

ಹೋಟೆಲ್‌ನ ಕ್ರಮ, ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಟೀಕೆಗಳಿಗೆ ಕಾರಣವಾಗಿದೆ. ‘ಜಪಾನ್‌ನಲ್ಲಿ ಜನಾಂಗೀಯ ಭೇದ ಮರುಕಳಿಸಿದೆ’ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ವೈರಸ್‌ ರಾಷ್ಟ್ರಗಳನ್ನು ನೋಡಿ ಹಬ್ಬುವುದಿಲ್ಲ ಎಂದು ಅನ್ನಾ ಎಂಬವರು ಟ್ವೀಟ್‌ ಮಾಡಿದ್ದಾರೆ.

ಇತರ ರಾಷ್ಟ್ರಗಳ ರೀತಿ ಜಪಾನ್‌ನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಸ್ಪೋಟದ ರೀತಿ ಏರಿಕೆಯಾಗಿಲ್ಲ. ಆದರೆ ಈ ದೇಶದಲ್ಲೂ ಎಂಟು ಲಕ್ಷಕ್ಕೂ ಅಧಿಕ ಸೋಂಕಿತರಿದ್ದು, 15,000 ಮಂದಿ ಈ ಸಾಂಕ್ರಾಮಿಕದಿಂದ ಮೃತರಾಗಿದ್ದಾರೆ. ಭಾನುವಾರ ಟೋಕಿಯೊದಲ್ಲಿ 614 ಹೊಸ ಪ್ರಕರಣಗಳು ಕಂಡುಬಂದಿವೆ.

ಲಸಿಕೆ ಹಾಕುವ ಪ್ರಮಾಣ ಆರಂಭದಲ್ಲಿ ಮಂದಗತಿಯಲ್ಲಿದ್ದರೂ, ಜೂನ್‌ ಕೊನೆಯಿಂದ ವೇಗ ವರ್ಧಿಸಿಕೊಂಡಿದೆ. ಪೂರೈಕೆ ಸಮಸ್ಯೆಯೂ ಇದೆ. ಶೇ 28ರಷ್ಟು ಜನ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT