ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | 52 ವರ್ಷಗಳ ಬಳಿಕ ಸತತ ಕಂಚು; ಶ್ರೀಜೇಶ್‌ಗೆ ಗೆಲುವಿನ ವಿದಾಯ

ಎರಡು ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್
Published 8 ಆಗಸ್ಟ್ 2024, 13:47 IST
Last Updated 8 ಆಗಸ್ಟ್ 2024, 13:47 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತ ಪುರುಷರ ತಂಡ ಒಲಿಂಪಿಕ್‌ ಕ್ರೀಡೆಗಳ ಹಾಕಿಯಲ್ಲಿ ಸತತ ಎರಡನೇ ಬಾರಿ ಕಂಚಿನ ಪದಕ ಗೆದ್ದುಕೊಂಡಿತು. ಗುರುವಾರ ಮೂರನೇ ಸ್ಥಾನಕ್ಕಾಗಿ ನಡೆದ ‘ಪ್ಲೇ ಆಫ್‌’ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2–1 ಗೋಲುಗಳಿಂದ ಸೋಲಿಸಿದ ಹರ್ಮನ್‌ಪ್ರೀತ್ ಬಳಗ, ಗೋಲ್‌ಕೀಪರ್‌ ಪಿ.ಆರ್.ಶ್ರೀಜೇಶ್ ಅವರಿಗೆ ಅರ್ಹ ರೀತಿಯಲ್ಲೇ ವಿದಾಯದ ಉಡುಗೋರೆ ನೀಡಿತು.

ಸ್ಕೋರ್‌ ಸಮ ಮಾಡಲು ಸ್ಪೇನ್‌ ತಂಡ ಕೊನೆಯ ಕೆಲವು ನಿಮಿಷ ಭಾರತದ ಗೋಲಿನ ಆವರಣದಲ್ಲಿ  ಸತತ ದಾಳಿಗಳನ್ನು ನಡೆಸಿ ಒತ್ತಡ ಹೇರಿತು. ಪೆನಾಲ್ಟಿ ಕಾರ್ನರ್‌ಗಳನ್ನೂ ಪಡೆಯಿತು. ಆದರೆ ಭಾರತದ ರಕ್ಷಣಾ ಪಡೆ ಕಂಗೆಡದೇ ಅವುಗಳನ್ನು ತಡೆದು ಆತಂಕ ನಿವಾರಿಸಿತು.

ಭಾರತ 41 ವರ್ಷಗಳ ನಂತರ, 2020ರ ಟೋಕಿಯೊ ಕ್ರೀಡೆಗಳಲ್ಲಿ ಕಂಚಿನ ಪದಕ ಗಳಿಸಿತ್ತು. ಕ್ರೀಡೆಗಳಿಗೆ ಹೋಗುವ ಮೊದಲು ಅಂಥ ಲಯದಲ್ಲಿ ಇಲ್ಲದಿದ್ದರೂ ಪ್ಯಾರಿಸ್‌ನಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿತು.

ಭಾರತ 52 ವರ್ಷಗಳ ನಂತರ ಸತತ ಕ್ರೀಡೆಗಳಲ್ಲಿ ಕಂಚಿನ ಪದಕ ಪಡೆದಿದೆ. ಈ ಹಿಂದೆ 1968ರ ಮೆಕ್ಸಿಕೊ ಮತ್ತು 1972ರ ಮ್ಯೂನಿಕ್‌ ಕ್ರೀಡೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.

ಈ ಪದಕಕ್ಕಾಗಿ ಭಾರತ ಕಾತರದಿಂದ ಕಾದಿತ್ತು. ವಿನೇಶ್‌ ಫೋಗಟ್ ಬುಧವಾರ ಚಿನ್ನಕ್ಕಾಗಿ ಸೆಣಸಾಡುವ ಮೊದಲು ಅನರ್ಹಗೊಂಡಿದ್ದರು. ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಒಟ್ಟಾರೆ ಆರು ಸ್ಪರ್ಧೆಗಳಲ್ಲಿ ಕಂಚು ಕೈತಪ್ಪಿದ್ದವು. ಪದಕಕ್ಕೆ ಹಾತೊರೆಯುವ ಪರಿಸ್ಥಿತಿ ಎದುರಾಗಿತ್ತು.

ಭಾರತ ಪುರುಷರ ಹಾಕಿ ತಂಡದ ಗೆಲುವಿನ ಸಂಭ್ರಮ

ಭಾರತ ಪುರುಷರ ಹಾಕಿ ತಂಡದ ಗೆಲುವಿನ ಸಂಭ್ರಮ

(ರಾಯಿಟರ್ಸ್ ಚಿತ್ರ)

ಹಿನ್ನಡೆಯಿಂದ ಚೇತರಿಕೆ

ಸ್ಪೇನ್‌ ತಂಡ ಪಂದ್ಯದ 18ನೇ ನಿಮಿಷ ಮಾರ್ಕ್‌ ಮಿರಾಲಸ್‌ ಮೂಲಕ ಮುನ್ನಡೆಯಿತು. ಅವರು ಪೆನಾಲ್ಟಿ ಸ್ಟ್ರೋಕ್‌ ಅನ್ನು ಗೋಲಾಗಿ ಪರಿವರ್ತಿಸಿದರು. ಭಾರತದ ನಾಯಕ ಹರ್ಮನ್‌ಪ್ರೀತ್‌ 30 ಮತ್ತು 33ನೇ ನಿಮಿಷ ಗೋಲುಗಳನ್ನು ಗಳಿಸಿ ಗಮನಸೆಳೆದರು.

ಜರ್ಮನಿ ವಿರುದ್ಧ ಸೆಮಿಫೈನಲ್‌ನಲ್ಲಿ 2–3ರಲ್ಲಿ ಸೋತು ನಿರಾಶೆ ಅನುಭವಿಸಿದ್ದ ಭಾರತ ಈ ಪಂದ್ಯದಲ್ಲಿ ಆರಂಭದಿಂದಲೇ ಹಿಡಿತಕ್ಕೆ ಮುಂದಾಯಿತು. ಮೊದಲ 15 ನಿಮಿಷ ಭಾರತ ಚೆಂಡಿನ ಮೇಲೆ ನಿಯಂತ್ರಣವಿರಿಸಿತ್ತು.

ಆರನೇ ನಿಮಿಷ ಉಪನಾಯಕ ಹಾರ್ದಿಕ್‌ ಸಿಂಗ್ ಅವರು ಬಲಭಾಗದಿಂದ ಚೆಂಡನ್ನು ‘ಡಿ’ ಆವರಣದಲ್ಲಿದ್ದ ಸುಖಜೀತ್ ಅವರಿಗೆ ಪಾಸ್‌ ಮಾಡಿದರು. ಆದರೆ ಅವರ ಯತ್ನದಲ್ಲಿ ಚೆಂಡು ಗೋಲುಪೆಟ್ಟಿಗೆಯ ಎಡಬದಿಯಿಂದ ಹೋಯಿತು.

ಸ್ಪೇನ್ ನಂತರ ಪ್ರತಿದಾಳಿಗೆ ಮುಂದಾಯಿತು. 18ನೇ ನಿಮಿಷ ಮಿರಾಲಸ್‌ ಅವರನ್ನು ಮನ್‌ಪ್ರೀತ್ ಸಿಂಗ್ ‘ಡಿ’ ಆವರಣದಲ್ಲಿ ಒರಟಾಗಿ ತಡೆದರು. ಪರಿಣಾಮವಾಗಿ ದೊರೆತ ‘ಪೆನಾಲ್ಟಿ’ ಅವಕಾಶದಲ್ಲಿ ಮಿರಾಲಸ್‌ ಗುರಿತಪ್ಪಲಿಲ್ಲ.

ಮುನ್ನಡೆ ಪಡೆದ ಸ್ಪೇನ್ ಒತ್ತಡ ಹೇರಿತು. ವಿರಾಮಕ್ಕೆ ಮೊದಲು ಮೂರು ಪೆನಾಲ್ಟಿ ಕಾರ್ನರ್‌ಗಳು ದೊರೆತವು. ಇಂಥ ಒಂದು ಯತ್ನದಲ್ಲಿ ಬೊರ್ಜಾ ಲಾಕಾಲೆ ಅವರು ಚೆಂಡನ್ನು ಪೋಸ್ಟ್‌ಗೆ ಹೊಡೆದರು. ಉಳಿದಂತೆ ಅಪಾಯ ಎದುರಾಗಲಿಲ್ಲ.

ಈ ಹಿನ್ನಡೆಯಿಂದ ಚೇತರಿಸಲು ಭಾರತ ಎಲ್ಲ ಯತ್ನಗಳನ್ನು ನಡೆಸಿತು. ವಿರಾಮಕ್ಕೆ 21 ಸೆಕೆಂಡುಗಳಿರುವಾಗ ಮನ್‌ಪ್ರೀತ್ ತಮ್ಮ ಹಿಂದಿನ ತಪ್ಪನ್ನು ತಿದ್ದಿಕೊಳ್ಳುವಂತೆ ಪೆನಾಲ್ಟಿ ಕಾರ್ನರ್‌ಗೆ ಕಾರಣರಾದರು. ಈ ಅವಕಾಶದಲ್ಲಿ ಹರ್ಮನ್‌ಪ್ರೀತ್ ಚೆಂಡನ್ನು ಗುರಿಮುಟ್ಟಿಸಿದರು.

ವಿರಾಮದ ನಂತರ ಎರಡನೇ ನಿಮಿಷವೇ ಭಾರತ ಮುನ್ನಡೆ ಪಡೆಯಿತು. ತಂಡಕ್ಕೆ ದೊರೆತ ಮತ್ತೊಂದು ಕಾರ್ನರ್‌ನಲ್ಲಿ ಅವರು ನಿಖರ ಮತ್ತು ಕರಾರುವಾಕ್‌ ‘ಫ್ಲಿಕ್‌’ನೊಡನೆ ಚೆಂಡನ್ನು ಗೋಲಿನೊಳಗೆ ಕಳಿಸಿದರು. ಅದನ್ನು ತಡೆಯುವ ಅವಕಾಶವೇ ಸ್ಪೇನ್ ರಕ್ಷಣೆ ಆಟಗಾರರಿಗೆ ಇರಲಿಲ್ಲ.

35ನೇ ನಿಮಿಷ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ದೊರೆತರೂ ಹರ್ಮನ್‌ಪ್ರೀತ್ ಅವರ ಬೀಸುಹೊಡೆತವನ್ನು ಸ್ಪೇನ್‌ ಕೀಪರ್‌ ಲೂಯಿಸ್‌ ಕಾಲ್ಜಾದೊ ತಡೆದರು.

ಮೂರನೇ ಕ್ವಾರ್ಟರ್‌ ಅಂತ್ಯಕ್ಕೆ ಸ್ಕೋರ್‌ 2–1 ಆಗಿತ್ತು. ಐದು ನಿಮಿಷಗಳ ನಂತರ ಹಾರ್ದಿಕ್‌, ಎದುರಾಳಿ ಆಟಗಾರನಿಗೆ ಡಿಕ್ಕಿಯಾದ ಪರಿಣಾಮ ಗಾಯಾಳಾಗಿ ನಿರ್ಗಮಿಸಬೇಕಾಯಿತು. ಪಂದ್ಯ ಮುಗಿಯಲು ಮೂರು ನಿಮಿಷಗಳಿರುವಾಗ ಸ್ಪೇನ್‌ಗೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ದೊರೆತರೂ ಆ ಅವಕಾಶವನ್ನು ಭಾರತ ಸುರಕ್ಷಿತವಾಗಿ ತಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT