ಪ್ಯಾರಿಸ್: ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಕಳೆದ ವರ್ಷ ನಡೆಸಿದ್ದ ಇಬ್ಬರು ಬಾಕ್ಸರ್‌ಗಳ ಡಿಎನ್‌ಎ ಪರೀಕ್ಷೆ ದೋಷಪೂರಿತವಾಗಿತ್ತು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಭಾನುವಾರ ಹೇಳಿದೆ.
ಅಲ್ಜೀರಿಯಾದ ಇಮಾನೆ ಖೆಲಿಫ್ ಮತ್ತು ತೈವಾನ್‌ನ ಲಿನ್ ಯು–ಟಿಂಗ್ ಅವರ ಡಿಎನ್‌ಎ ಪರೀಕ್ಷೆ ವೇಳೆ ಪುರುಷರ ಕ್ರೋಮೋಸೋಮ್ ಅಂಶಗಳು ಕಂಡುಬಂದಿದ್ದವು. ಹೀಗಾಗಿ ಈ ಇಬ್ಬರನ್ನೂ ವಿಶ್ವ ಚಾಂಪಿಯನ್‌ಷಿಪ್‌ಗೆ ಅನರ್ಹಗೊಳಿಸಲಾಗಿತ್ತು. ಆದಾಗ್ಯೂ ಇವರಿಬ್ಬರೂ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಮ್ಮತಿಸಿತ್ತು.
ಈ ಬಗ್ಗೆ ಬಾಕ್ಸಿಂಗ್ ವಲಯದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು.
66 ಕೆ.ಜಿ. ವಿಭಾಗದ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ಏಂಜೆಲಾ ಕ್ಯಾರಿನಿ ಅವರು ಖೆಲಿಫ್ ಪ್ರಹಾರ ತಾಳಲಾರದೇ ಕೇವಲ 46 ಸೆಕೆಂಡುಗಳಲ್ಲಿ ಸೆಣಸಾಟ ತ್ಯಜಿಸಿದ್ದರು. ಇದು ವಿವಾದ ಸೃಷ್ಟಿಸಿದೆ.
ಖೆಲಿಫ್ ಹಾಗೂ ಲಿನ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾ ಪ್ರಹಾರ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಐಒಸಿ, ಐಬಿಎ ನಡೆಸಿದ ಡಿಎನ್‌ಎ ಪರೀಕ್ಷೆಯು ದೋಷದಿಂದ ಕೂಡಿತ್ತು. ಅದರ ಪ್ರಕ್ರಿಯೆಯು ಕಾನೂನಾತ್ಮಕವಾಗಿ ಇರಲಿಲ್ಲ. ಪರೀಕ್ಷೆಯ ವರದಿಯನ್ನು ಪರಿಗಣಿಸಿ ವಿಶ್ವ ಚಾಂಪಿಯನ್‌ಷಿಪ್‌ನಿಂದ ಬಾಕ್ಸರ್‌ಗಳನ್ನು ಅನರ್ಹಗೊಳಿಸಿದ್ದು ನ್ಯಾಯಸಮ್ಮತವಲ್ಲ ಎಂದು ಹೇಳಿದೆ.